-->
ಪೂರ್ಣಗೊಳಿಸಿದ ಕಥೆಗಳ ಸಂಚಿಕೆ - 2

ಪೂರ್ಣಗೊಳಿಸಿದ ಕಥೆಗಳ ಸಂಚಿಕೆ - 2


          ಪೂರ್ಣಗೊಳಿಸಿದ ಕಥೆಗಳ ಸಂಚಿಕೆ - 2
******************************************
            ಚೇಟಾಳ ಹಾವು ಪುರಾಣ (ಭಾಗ 1) ಇಲ್ಲಿಯವರೆಗೆ......... 
             ಬೇಲಿಯ ಕೆಲಸ ಮಾಡುತ್ತಿದ್ದಾಗ ಪಕ್ಕ ಹರಿದ ನಾಗರ ಹಾವಿನಿಂದ ಭಯ ಪಟ್ಟಿದ್ದರು ಕೃಷ್ಣಣ್ಣ. ಅವರ ಸದ್ದು ಕೇಳಿ ಬಂದ ಪಕ್ಕದ ಮನೆ ಚೇಟಾ, ಹಾವನ್ನು ಕಂಡು ಚಂದ ಇದೆ ಅನ್ನುತ್ತಾ ಹಿಡಿಯಲು ಹೋಗುತ್ತಾಳೆ. ಅದು ಕಚ್ಚುತ್ತದೆ ಎಂದು ಬೈದ ಕೃಷ್ಣಣ್ಣನ ಬೈಗುಳ ಕೇಳಿ ಬೇಸರಿಸಿಕೊ0ಡು ಬಸುರಿ ಹಾವು ಬೇಲಿಯ ಆಚೆ ಹೋಗುತ್ತದೆ. ಅಲ್ಲಿ ತಾಯಿ ಕೋಳಿ ಮಕ್ಕಳ ಜೊತೆ ಗುಪ್ತ ಸಭೆ ನಡೆಸಿ ಹಾವಿನಿಂದ ಮತ್ತು ಗರುಡದಿಂದ ಬದುಕುವುದು ಹೇಗೆ ಎಂದು ಎಚ್ಚರ ಹೇಳುತ್ತಿತ್ತು. ಆಗಲೇ ಅತ್ತ ಬಂದ ಹಾವು ಮೇಲೆ ಹಾರುತಿದ್ದ ಗರುಡದಿಂದ ಬದುಕಿಕೊಳ್ಳಲು, ತನ್ನ ಹಸಿವೆಯನ್ನು ಕಟ್ಟಿಕೊಂಡು ಹುತ್ತದಲ್ಲಿ ಅವಿತುಕೊಂಡಿತು.
                        ಈ ಮೊದಲ ಭಾಗವನ್ನು ಮುಂದುವರಿಸಿಕೊಂಡು ಈವರೆಗೆ ಹಲವು ಮಕ್ಕಳು ಕಥೆಗಳನ್ನು ಕಳಿಸಿದ್ದಾರೆ. ಅದರಲ್ಲಿ ಕೆಲವು ಮಕ್ಕಳ ಮುಗ್ಧ ಕಲ್ಪನೆಗಳು ಕಾಣಿಸುತ್ತಿವೆ, ಇನ್ನು ಕೆಲವು ಕಡೆ ಪೋಷಕರ ಹಸ್ತಕ್ಷೇಪ ಕಾಣಿಸುತ್ತಿದೆ, ಇನ್ನು ಕೆಲವು ಕಡೆ ದೊಡ್ಡವರ ನಂಬಿಕೆಗಳ ಛಾಯೆ ದಟ್ಟವಾಗಿವೆ. ಮಕ್ಕಳು ಕಥೆ ಹೇಳೋಕೆ ಶುರು ಮಾಡಿದರೆ ಅಲ್ಲಿ ಕಥೆ ಬಿಟ್ಟು ವಿಮರ್ಶೆ ಇರೋದಿಲ್ಲ. ವಿಮರ್ಶೆ ಶುರು ಆದರೆ ದೊಡ್ಡವರ ನೆರಳು ಇವರನ್ನು ಮರೆ ಮಾಡಿದೆ ಅಂತಲೇ ಅರ್ಥ. ಹಾಗಾಗಿ ಮುಂದಿನ ಸಲದಿಂದ ಮಕ್ಕಳೇ ಕತೆಯಾಗಲಿ. ದೊಡ್ಡವರು ಅಗತ್ಯ ಬಿದ್ದರೆ ಪೆನ್ನಾಗಿ ಅಥವಾ ಟೈಪಿಂಗ್ ಟೂಲ್ ಆಗಿ ಇರೋಣ. ಏನಂತೀರಿ?
ಸರಿ ಸರಿ... ಮುಂದುವರಿದ ಕಥೆಗಳನ್ನು ಓದೋಣವೇ...?
......................ನಾದ ಮಣಿನಾಲ್ಕೂರು 
                  ತೆಕ್ಕೂರು, ಚಿಕಮಗಳೂರು ಜಿಲ್ಲೆ.
****************************************

               ಕಥೆ - 1 (ತನ್ಮಯ್ ಕೃಷ್ಣ ನೇರಳಕಟ್ಟೆ)
********************************************                   ಮಾರನೇಯ ದಿನ ನಾಗರಹಾವು ಹೊರಗೆ ಬಂದು ಆಹಾರ ಹುಡುಕಲು ಪ್ರಾರಂಭಿಸಿತು. ಅದೇ ಸಮಯಕ್ಕೆ ಚೇಟಾಳು ಚೆಂಡಿನ ಜತೆ ಆಟ ಆಡುತ್ತಿದ್ದಳು. ಆಡುವಾಗ ಚೆಂಡು ನಾಗರಹಾವಿನ ಹತ್ತಿರ ಹೋಯಿತು. ಅದನ್ನು ಹೆಕ್ಕಲು ಹೋದ ಚೇಟಾಳು ಚೆಂಡಿನ ಬದಲು ನಾಗರಹಾವನ್ನು ಹಿಡಿದೇ ಬಿಟ್ಟಳು. ಆಗ ನಾಗರಹಾವು   " ದಮ್ಮಯಾ ನನ್ನನ್ನು ಬಿಟ್ಟುಬಿಡು. ನನಗೆ ಉಸಿರುಗಟ್ಟುತಿದೆ. ಹೊಟ್ಟೆಯಲ್ಲಿರುವ ಮಕ್ಕಳು ಅಳುತ್ತಿದ್ದಾರೆ. ದಯವಿಟ್ಟು ಬಿಟ್ಟುಬಿಡು" ಎ೦ದು ಹೇಳಿತು . ಆಗ ಚೇಟಾಳಿಗೆ ಬೇಸರವಾಗಿ " ನೋವಾಯಿತಾ?.. ನನ್ನನ್ನು ಕ್ಷಮಿಸಿಬಿಡು" ಎಂದು ಹೇಳಿ ತಕ್ಷಣವೇ ಹಾವನ್ನು ಬಿಟ್ಟುಬಿಡುತ್ತಾಳೆ. ಅದಕ್ಕೆ ಹಾವು " ನನಗೆ ಆಹಾರವಿಲ್ಲದೆ ತುಂಬಾ ದಿನವಾಯಿತು. ನೀನು 3 ಮೊಟ್ಟೆ ತಂದುಕೊಟ್ಟರೆ ನಿನ್ನನ್ನು  ಕ್ಷಮಿಸುವೆ " ಎಂದಿತು. ಆಗ ಚೇಟಾಳು " ಇಗೋ ಈಗ ತರುವೆ..... ಬೇರೆ ಎಲ್ಲೂ ಹೋಗಬೇಡ, ಇಲ್ಲಿಯೇ ಕಾಯುತ್ತಿರು" ಎ೦ದು ಹೇಳಿ...... ಕೃಷ್ಣಣ್ಣನ ಮನೆಗೆ ಹೋಗಿ ಅಡುಗೆ ಮನೆಯಿಂದ 3 ಮೊಟ್ಟೆ ತಂದುಕೊಂಡು ಬರುತ್ತಾಳೆ. ಆದರೆ ಅದೇ ಕ್ಷಣದಲ್ಲಿ ಅಲ್ಲೇ ಇದ್ದ ಗರುಡನು ನಾಗರ ಹಾವನ್ನು ನೋಡಿ ತಕ್ಷಣವೇ ಮಿಂಚಿನ ವೇಗದಲ್ಲಿ ಬಂದು ಚೂಪಾದ ಬೆರಳಿನಿಂದ ಹಾವನ್ನು ಎತ್ತಿಕೊಂಡು ಹೋಗುತ್ತದೆ.. ಹಾವಿನ ಬೊಬ್ಬೆ ಕೇಳಿ ಚೇಟಾಳು ಗರುಡನಿಗೆ ಮೊಟ್ಟೆಯನ್ನು ಬಿಸಾಡುವಳು. ಬಿಸಾಡಿದ 2 ಮೊಟ್ಟೆಗಳು ಗುರಿ ತಲುಪಲಿಲ್ಲ. 3 ನೇ ಮೊಟ್ಟೆಯು ಗರುಡನ ಕಾಲಿಗೆ ಬಿದ್ದಾಗ ಹಾವು ತಪ್ಪಿ ಎತ್ತರದಿಂದ ದೊಪ್ಪನೆ ನೆಲಕ್ಕೆ ಬಿತ್ತು. ಪಾಪಾ...... ನೆಲಕ್ಕೆ ಬಿದ್ದ ಪೆಟ್ಟಿಗೆ ಹಾವಿಗೆ ಪ್ರಜ್ಞೆ ತಪ್ಪಿತು. ಮೈ ಮೇಲೆ ತುಂಬಾ ಗಾಯಗಳಿತ್ತು. ಚೇಟಾಳ ಆರೈಕೆಯಿಂದ ಕೊನೆಗೊ  ಪ್ರಜ್ಞೆ ಬಂತು. ಆಗ ತುಂಬಾ ಖುಷಿ ಪಟ್ಟ ಚೇಟಾ.... " ನಿನ್ನ ಮನೆ ಎಲ್ಲಿ ?..ನೀನು ಹುಷಾರು ಆಗುವವರೆಗೆ ಮನೆಯಲ್ಲಿಯೇ ಇರು. ನಿನಗೆ ತಿಂಡಿ ನಾನು ತಂದು ಕೊಡುವೆ. "  ಎಂದು ಹೇಳಿ ಹಾವನ್ನು ಹುತ್ತದೊಳಗೆ ಬಿಟ್ಟಳು. ಅಂದಿನಿಂದ ದಿನಾಲೂ ಹಾವಿಗೆ ಒಂದೊಂದು ಮೊಟ್ಟೆಯನ್ನು ತಂದು ಕೊಡುತ್ತಿದ್ದಳು. ಹೀಗೆ ಅವರಿಬ್ಬರು ಗೆಳೆಯರಾದರು. ಒಂದು ತಿಂಗಳ ನಂತರ ನಾಗರಹಾವು 4 ಮರಿಗಳಿಗೆ ಜನ್ಮ ನೀಡಿತು. ಚೇಟಾಳಿಗೆ ಖುಷಿಯೋ ಖುಷಿ. ಆ ಮುದ್ದು ಮರಿಗಳೊಂದಿಗೆ ಆಟ ಆಡುತ್ತಿದ್ದಳು. ಹೀಗೆ ಅಪಾಯಕಾರಿ ಮತ್ತು ವಿಷಕಾರಿಯಾದ ನಾಗರ ಹಾವನ್ನು ತನ್ನ ಪ್ರೀತಿಯ ಆರೈಕೆ ಮೂಲಕ ಗೆಳೆಯನ್ನನಾಗಿ ಮಾಡಿದ ಚೇಟಾಳ ಧೈರ್ಯ ನಿಜಕ್ಕೂ ಮೆಚ್ಚುವಂಥದು.

.................. ತನ್ಮಯ್ ಕೃಷ್ಣ ನೇರಳಕಟ್ಟೆ
9ನೇ ತರಗತಿ
ವಿ.ಕ. ಮಾ. ಶಾಲೆ , ತೆಂಕಿಲ ಪುತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

*******************************************


               ಕಥೆ - 2 (ಯಶಶ್ವಿ ಕನ್ಯಾನ) 

---------------------------------------------------

               ಹಾವು ಸ್ವಲ್ಪ ಹೊತ್ತಿನ ನಂತರ ಹುತ್ತದಿಂದ ಹೊರಗೆ ಬಂದಿತು. ಅತ್ತ ಇತ್ತ ನೋಡಿತು. ಯಾರೂ ಇರಲಿಲ್ಲ. ತಲೆ ಎತ್ತಿ ಮೇಲೆ ನೋಡಿತು. ಅಲ್ಲಿ ಗರುಡವೂ ಕಾಣಿಸುತ್ತಿರಲಿಲ್ಲ. " ಅಬ್ಬಾ ಇಲ್ಲಿ ಯಾರೂ ಇಲ್ಲ " ಎಂದು ಹಾವು ಸ್ವಲ್ಪ ಭಯ ಮುಕ್ತತೆಯಿಂದ ಉಸಿರಾಡಿತು. ಹಾವಿಗೆ ಹೊಟ್ಟೆ ಹಸಿಯುತ್ತಿತ್ತು. ಬೇಗ ಬೇಗ ಸರಸರನೆ ಹಾವು ಬೇಲಿಯ ಕಡೆಗೆ ಬಂದಿತು. ನೋಡಿದರೆ ಕೋಳಿಯ ಗುಂಪು ಅಲ್ಲಿರಲಿಲ್ಲ. ಹಾವು..... " ಕೋಳಿಗಳು ಆಗ ಹೇಳಿದ ಹಾಗೆ ಬೇರೆ ಕಡೆಗೆ ಹೋಯಿತೇ " ಎಂದು ತನ್ನ ಮನಸ್ಸಿನಲ್ಲಿ ಅಂದುಕೊಂಡಿತು.    

             ಆದರೆ ಕೋಳಿಗಳು ಎಲ್ಲೂ ಹೋಗಿರಲಿಲ್ಲ. ಎಲ್ಲಾ ಕೋಳಿಗಳು ಅದರ ಗೂಡು ಸೇರಿಕೊಂಡಿದ್ದವು. ಸ್ವಲ್ಪ ಹೊತ್ತು ಅಲ್ಲೇ ಕಾಯುತ್ತಾ ನಿಂತಿತು. ಆದರೆ ಕೋಳಿಗಳು ಬರಲೇ ಇಲ್ಲ. ಬೇಸರದಿಂದ ಹುತ್ತದ ಬಳಿ ಹೋಯಿತು. ಹಾಗೆ ಇಡೀ ದಿನ ಹಾವು ಹಸಿವಿನಿಂದಲೇ ಇತ್ತು. ಮರುದಿನ ಬೆಳಗ್ಗೆ ಆಯಿತು. ಹಾವು ಬೆಳಗ್ಗೆ ಬೇಗ ಹುತ್ತದಿಂದ ಹೊರಬಂದು ಏನಾದರೂ ತಿನ್ನಲು ಸಿಗುತ್ತದೆಯೇ ಎಂದು ಹುಡುಕಾಡಿತು. ಆದರೆ ಏನೂ ಸಿಗಲಿಲ್ಲ. ಮತ್ತೇ ಆ ಬೇಲಿಯ ಕಡೆಗೆ ಹಾವು ಹೋಯಿತು. ಮನೆಯ ಆಚೆ ಈಚೆ ಎಲ್ಲಾ ಕಡೆಯೂ ಹುಡುಕಿತು. ಕೋಳಿಗಳ ಗುಂಪು ಕಾಣಿಸಲೇ ಇಲ್ಲ. ಕೊನೆಗೆ ಮನೆಯ ಹಿಂದೆ ಕಡೆ ಹಾವು ಹೋಗಿ ನೋಡಿತು. ನೋಡಿದರೆ ಕೋಳಿಗಳ ಗುಂಪು ಅಲ್ಲಿತ್ತು. ಬೇಗ ಬೇಗನೆ ಅದನ್ನು ತಿನ್ನಬೇಕು ಎನ್ನುತ್ತಾ ಅಲ್ಲೇ ಕಾಯಿತು. ದೊಡ್ಡ ಕೋಳಿಗಳು ಆಹಾರವನ್ನು ಹುಡುಕಲು ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಒಂದು ಕೋಳಿ ಮರಿಯನ್ನು ಕಚ್ಚಿಕೊಂಡು ಬೇಲಿಯ ಹೊರಗೆ ಬಂದು ಅದನ್ನು ತಿಂದು ತನ್ನ ಹಸಿವನ್ನು ನೀಗಿಸಿತು. ಹಸಿವು ನೀಗಿತು ಎನ್ನುವ ಖುಷಿಯಲ್ಲಿ ಮೇಲೆ ನೋಡಿದಾಗ ಮತ್ತೇ ಅದೇ ಗರುಡ. ಹಾವಿಗೆ ಇದನ್ನು ನೋಡಿ ತನ್ನ ಜೀವವೇ ಬಾಯಿಗೆ ಬಂದಂತಾಯ್ತು. ಹಾವು ಸರಸರನೆ ಹುತ್ತದ ಬಳಿ ಹೋಗುತ್ತಿತ್ತು. ಗರುಡವೂ ಕೆಳಗೆ ಹಾರುತ್ತಾ ಬಂತು. ಹಾವು ಇನ್ನಷ್ಟೂ ಜೋರಾಗಿ ಸರಸರನೆ ಹುತ್ತದ ಬಳಿ ಹೋಯಿತು. ಇನ್ನೇನು ಗರುಡ ಹಾವಿನ ಹತ್ತಿರ ಬಂತು ಎನ್ನುವಷ್ಟರಲ್ಲಿ ಹಾವು ಹುತ್ತದ ಒಳಗೆ ಸೇರಿಕೊಂಡು ಬಿಟ್ಟಿತು. " ಇನ್ನು ಇಲ್ಲಿ ಇರುವುದು ಸರಿಯಲ್ಲ. ನಾಳೆ ಬೆಳಗ್ಗೆ ಈ ಜಾಗದಿಂದ ಹೋಗಬೇಕು. ಬೇರೆ ಹುತ್ತದ ಕಡೆ ಹೋಗಬೇಕು " ಎಂದುಕೊಂಡಿತು. ಮರುದಿನ ಬೆಳಗ್ಗೆ ಅಲ್ಲಿಂದ ಬೇರೆ ಕಡೆಗೆ ಹೋಯಿತು. ಹೋಗುವಾಗ ಒಂದು ಮನೆ ಕಂಡಿತು. ಅಲ್ಲಿಗೆ ಹೋಗೋಣ ಎಂದುಕೊಂಡಾಗ ಆ ಮನೆಯವರು ಆ ಹಾವನ್ನು ಓಡಿಸಿದರು. ಅಲ್ಲಿಂದ ಆ ಹಾವು ಇನ್ನೊಂದು ಕಡೆಗೆ ಕಾಡಿಗೆ ಹೋಯಿತು. ಆ ಕಾಡಿನಲ್ಲಿ ಅಲ್ಲೇ ಪಕ್ಕದಲ್ಲಿ ಒಂದು ಹುತ್ತ ಇತ್ತು. ಅಲ್ಲೇ ಆ ಹಾವು ಸಂತೋಷದಿಂದ ವಾಸಿಸಿತು. 

 .......................................ಯಶಶ್ವಿ

ಹತ್ತನೇ ತರಗತಿ.    ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

**********************************************


               ಕಥೆ-3 (ಅಶ್ವಿತಾ.ಜಿ .ಶೆಟ್ಟಿ)

--------------------------------------------------

              ಹಾವಿನ ಹೊಟ್ಟೆ ಹಸಿವಿನಿಂದ ಅಳುತ್ತಿತ್ತು. ಇದರಿಂದ ಕಂಗಾಲಾದ ಹಾವು ನಿದ್ದೆಗೆ ಜಾರಿತು. ಇದನ್ನೆಲ್ಲ ನೋಡುತ್ತ ಕುಳಿತಿದ್ದ ಕೋಳಿಗೆ ಒಂದು ಆಲೋಚನೆ ಬಂದಿತು. ನಿದ್ದೆಯಿಂದ ಎದ್ದ ಹಾವು ಹಸಿವಿನಿಂದ ತನ್ನ ಮರಿಗಳನ್ನು ತಿಂದರೆ ಎಂದು ಯೋಚಿಸಿ ಇದಕ್ಕೆ ಏನಾದರೂ ಆಹಾರ ತಂದುಕೊಟ್ಟರೆ ತನ್ನ ಮರಿಗಳನ್ನು ಹಾವಿನಿಂದ ರಕ್ಷಿಸಬಹುದು....... ಎಂದು ಆಲೋಚಿಸಿತು. ಕೋಳಿಯು ಆಹಾರ ಹುಡುಕುತ್ತಾ ಸ್ವಲ್ಪ ದೂರ ಹೋದಾಗ ಅದಕ್ಕೆ ಒಂದು ಸತ್ತು ಬಿದ್ದಿದ್ದ ಇಲಿ ಮರಿಯು ಕಾಣಿಸಿತು. ಅದು ತನ್ನ ಕೊಕ್ಕಿನ ಸಹಾಯದಿಂದ ಇಲಿ ಮರಿಯನ್ನು ಎಳೆದುಕೊಂಡು ಹುತ್ತದ ಹತ್ತಿರ ಬಂದಿತು. ಸ್ವಲ್ಪ ಹೊತ್ತಾದ ನಂತರ ಹಾವಿಗೆ ಎಚ್ಚರವಾಯಿತು ಅದು ಸರ ಸರನೆ ಹುತ್ತದಿಂದ ಹೊರಬಂದಿತು. ಆಗ ಕೋಳಿಯು ಸತ್ತ ಇಲಿ ಮರಿಯನ್ನು ಹಾವಿಗೆ ಕೊಟ್ಟು ಕೈ ಮುಗಿದು... " ನೀನು ನನ್ನ ಮರಿಗಳಿಗೆ ಏನೂ ಮಾಡಬೇಡ " ಎಂದು ಹೇಳಿತು. ಅದಕ್ಕೆ ಹಾವು..... ಸರಿಯೆಂದು ಉತ್ತರಿಸಿತು. ಹಸಿವಿನಿಂದ ಚಡಪಡಿಸುತ್ತಿದ್ದ ಹಾವು ಇಲಿಯನ್ನು ಗಬಕ್ಕನೇ ತಿಂದು ತನ್ನ ಹಸಿವನ್ನು ತೀರಿಸಿ ಹುತ್ತದ ಒಳಗೆ ಹೋಯಿತು. ಮಾರನೆಯ ದಿನ ಕೋಳಿಯು ಎಂದಿನಂತೆ ತನ್ನ ಮರಿಗಳೊಂದಿಗೆ ಆಟವಾಡುತ್ತಿತ್ತು. ಇದನ್ನೆಲ್ಲ ನೋಡುತ್ತ ಕುಳಿತಿದ್ದ ಹಾವಿಗೆ ಒಂದು ಯೋಚನೆ ಬಂದಿತು ಇದರಿಂದ ಹೇಗಾದರೂ ಮಾಡಿ ಒಂದು ಮರಿಯನ್ನು ಲಪಟಾಯಿಸಬೇಕೆಂದು ಯೋಚಿಸಿತು. ಪೊದೆಯ ಮರೆಯಲ್ಲಿ ಕುಳಿತು ಹೊಂಚುಹಾಕಿತು. ತಾಯಿ ಕೋಳಿ ಸ್ವಲ್ಪ ಆಚೆ ಹೋದಮೇಲೆ ಒಂದು ಮರಿ ಕೋಳಿಯನ್ನು ಹಾವು ಹುತ್ತದ ಒಳಗೆ ಎತ್ತಿಕೊಂಡು ಹೋಯಿತು. ಸ್ವಲ್ಪ ಹೊತ್ತಾದ ನಂತರ ತಾಯಿ ಕೋಳಿ ಬಂದು ತನ್ನ ಮರಿಗಳನ್ನು ನೋಡಿದಾಗ ಅದರಲ್ಲಿ ಒಂದು ಮರಿಯು ಕಾಣೆಯಾಗಿತ್ತು. ಅದು ಹಾವಿನ ಹುತ್ತದ ಬಳಿಗೆ ಹೋಗಿ... ನನ್ನ ಮರಿಯನ್ನೇನಾದರು ನೋಡಿದೆಯಾ.... ಎಂದು ಹಾವಿನಲ್ಲಿ ಕೇಳಿತು. ಅದಕ್ಕೆ ಹಾವು ಹೌದು ನೋಡಿದೆ ನಿನ್ನ ಮರಿಯನ್ನು ಗರುಡ ಎತ್ತಿಕೊಂಡು ಹೋಯಿತು ಎಂದು ಸುಳ್ಳು ಹೇಳಿ ಒಳಗೊಳಗೇ ನಸುನಗುತ್ತಾ ಹುತ್ತದ ಒಳಗೆ ಹೋಯಿತು. ಮರುದಿವಸ ಹಾವು ಮತ್ತೊಂದು ಕೋಳಿ ಮರಿಯನ್ನು ತಿಂದುಹಾಕಿತು ಹೀಗೆ ದಿನಕ್ಕೊಂದರಂತೆ ಕೋಳಿ ಮರಿಯು ಕಾಣೆಯಾಗತೊಡಗಿತು. ಕೊನೆಗೆ ಕೋಳಿಯ 5 ಮರಿಗಳು ಮಾತ್ರ ಉಳಿದವು. ಇದರಿಂದ ತಾಯಿ ಕೋಳಿಯು ತುಂಬಾ ನೊಂದುಕೊಂಡಿತು. ತಾಯಿ ಕೋಳಿಯು ಇದನ್ನು ಹೇಗಾದರೂ ಮಾಡಿ ಪತ್ತೆ ಹಚ್ಚಬೇಕೆಂದು ಯೋಚಿಸಿ ಒಂದು ಉಪಾಯ ಮಾಡಿತು ಮಾರನೆಯ ದಿನ ತಾಯಿ ಕೋಳಿ ಮರಿಗಳನ್ನು ಆಟವಾಡಲು ಬಿಟ್ಟು ಪೊದೆಯಲ್ಲಿ ಅಡಗಿಕುಳಿತುಕೊಂಡಿತು. ಸ್ವಲ್ಪ ಹೊತ್ತಿನ ನಂತರ ಹಾವು ಹುತ್ತದಿಂದ ಹೊರಬಂದು ಯಾರು ಇಲ್ಲದಿರುವುದನ್ನು ಕಂಡು ಹಾವು ಸರಸರನೆ ಕೋಳಿ ಮರಿಗಳ ಹತ್ತಿರ ಬಂದಿತು. ಇನ್ನೇನು ಹಿಡಿಯಬೇಕೆನ್ನುವಷ್ಟರಲ್ಲಿ ತಾಯಿ ಕೋಳಿಯು ಪೊದೆಯಿಂದ ಹೊರಬಂದು ಬೊಬ್ಬೆಹಾಕಿತು. ಕೋಳಿ ಕಿರುಚಿದ್ದನ್ನು ಕೇಳಿ ಅಕ್ಕಪಕ್ಕದ ಮನೆಯವರು ಓಡೋಡಿ ಬಂದರು. ಜನರು.... ಹಾವು , ಕೋಳಿ ಮರಿಯನ್ನು ಹಿಡಿದು ಕೊಂಡಿರುವುದನ್ನು ನೋಡಿ ಹಾವಿಗೆ ಸರಿಯಾದ ಬುದ್ಧಿ ಕಲಿಸಿದರು. ಹಾವಿಗೆ ತನ್ನ ತಪ್ಪು ಅರಿವಾಗಿ ಕಾಡಿಗೆ ಓಡಿ ಹೋಯಿತು ಇದನ್ನೆಲ್ಲ ನೋಡುತ್ತ ನಿಂತಿದ್ದ ಚೇಟಾ ಚಪ್ಪಾಳೆ ತಟ್ಟಿ ಕುಣಿದಾಡುತಿದ್ದಳು. ತಾಯಿ ಕೋಳಿ ತನ್ನ ಮರಿಗಳ ಜೊತೆಗೆ ಸಂತೋಷದಿಂದ ತನ್ನ ಮನೆಗೆ ಹೋಯಿತು

..................................ಅಶ್ವಿತಾ.ಜಿ .ಶೆಟ್ಟಿ

6 ನೇ ತರಗತಿ   ಗುಣಶ್ರೀ ವಿದ್ಯಾಲಯ ಸಿದ್ಧಕಟ್ಟೆ ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

******************************************


              ಕಥೆ - 4 ( ಭವಿಕ್ ಎಸ್. ಪಿ. )

-----------------------------------------------------

         ಮೇಲೆ ಹಾರಾಡುತ್ತಿದ್ದ ಗರುಡವು ಹೇಗಿತ್ತು ಅಂದರೆ...... ಆ ಗರುಡನ ಕಣ್ಣು ದೊಡ್ಡ ಇತ್ತು. ಅದರ ರೆಕ್ಕೆ,... ಬಿಡಿಸುವಾಗ ತುಂಬಾ ವಿಶಾಲ ಇತ್ತು. ಅದರ ಉಗುರು ತುಂಬಾ ಚೂಪಾಗಿತ್ತು. ಆ ಗರುಡವು ಕೆಳಗೆ ಹಾವನ್ನು ನೋಡಿ ಅದನ್ನು ತಿನ್ನಲಿಕ್ಕೆ ಹೋಯಿತು. ಹಾವು ಗರುಡನನ್ನು ನೋಡಿ ಅಡಗಿ ಪೊದೆ ಯೊಳಗೆ ಕುಳಿತಿತು. ಗರುಡವು ಕೋಳಿಯ ಮರಿಗಳನ್ನು ನೋಡಿ, ಕೆಳಗೆ ಹಾರಿ ಬಂತು. ಆಗ ಕೋಳಿಗೆ ಕೋಪ ಬಂದು ಅದನ್ನು ಓಡಿಸಿತು. ಇದರಿಂದ ಮರಿಗಳಿಗೆ ಖುಷಿ ಆಗಿ, ಕಾಳನ್ನು ಹುಡುಕಿಕೊಂಡು ಮುಂದೆ ಹೋಯಿತು.

........................ಭವಿಕ್ ಎಸ್. ಪಿ. 

3ನೇ ತರಗತಿ. 

ದ. ಕ. ಜಿ .ಪಂ. ಉ. ಹಿ. ಪ್ರಾ. ಶಾಲೆ , ಕಾವು. ಪುತ್ತೂರು ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ    

*********************************************

                   ಕಥೆ - 5 (ವೈಷ್ಣವಿ ಕಾಮತ್ )

---------------------------------------------------                              ತನಗೆ ಆಹಾರವಿಲ್ಲದೆ ಬದುಕುವುದಾದರೂ ಹೇಗೆಂಬ ಚಿಂತೆ ಹಾವಿಗೆ ಕಾಡುತ್ತಿತ್ತು. ಇಲ್ಲಿಂದ ಎಲ್ಲಾದರೂ ಬೇರೆ ಕಡೆ ಹೋದರೆ ಅಲ್ಲಿಯಾದರೂ ಆಹಾರ ಸಿಗಬಹುದು ಎಂಬ ಆಸೆಯಿಂದ ಹೋಯಿತು. ಆಹಾರವನ್ನು ಹುಡುಕಿ ಹುಡುಕಿ ಒಂದು ಸಣ್ಣ ಹಳ್ಳಿಗೆ ಹಾವು ತಲುಪಿತು. ಅಲ್ಲಿ ಎಲ್ಲಾ ಕೋಳಿಗಳು ಸಭೆಯಲ್ಲಿ ತೊಡಗಿದ್ದರು. ಹಾವು ಅಲ್ಲಿಂದ ಹೊರಟಿರುವ ವಿಷಯ ಕೋಳಿಗಳಿಗೆ ತಿಳಿಯಿತು. ಇದನ್ನು ಕೇಳಿ ಎಲ್ಲಾ ಕೋಳಿಗಳಿಗೆ ಹಾವು ಇನ್ನು ನಮ್ಮ ತಂಟೆಗೆ ಬರುವುದಿಲ್ಲ ಎಂದು ಸಂತೋಷವಾಯಿತು. ಹೇಗಾದರೂ ಮಾಡಿ ಈ ಗರುಡನನ್ನು ಓಡಿಸಬೇಕು ಎಂದು ಎಲ್ಲಾ ಕೋಳಿಗಳು ಹೇಳಿದವು. ಆಗ ಒಂದು ಕೋಳಿಯು ಹೀಗೆ ಹೇಳಿತು..... ಈಗಾಗಲೇ ಸತ್ತಿರುವ ಕೋಳಿಗಳು ಹೇಗೂ ನಮ್ಮಲ್ಲಿವೆ. ಗರುಡ ಇರುವ ಜಾಗದಿಂದ ಸ್ವಲ್ಪ ದೂರ ಈ ಕೋಳಿಗಳನ್ನು ಜೀವ ಇರುವ ಹಾಗೆ ನಿಲ್ಲಿಸೋಣ. ಆಗ ಗರುಡನು ಅದನ್ನು ತಿನ್ನಲು ಹೋಗುವಾಗ ನಾವು ಇಲ್ಲಿಂದ ಎಲ್ಲಾದರೂ ಹೊರಟು ಹೋಗೋಣ ಎಂದು ಹೇಳಿತು. ಆಗ ಉಳಿದ ಕೋಳಿಗಳು ಅದು ಸತ್ತಿರುವುದು ಗರುಡನಿಗೆ ತಿಳಿದರೆ ಅವ ನಮ್ಮನ್ನು ಹುಡುಕಿಕೊಂಡು ಬರುತ್ತಾನೆ... ಎಂದು ಹೇಳಿದವು. ಗರುಡನು ........ ಮರಿಗಳು ತಿನ್ನಲು ತನಗೆ ಯಾವಾಗ ಸಿಗುತ್ತವೆ ಎಂದು ಕಾದು ಕಾದು ಸುಸ್ತಾಗಿ ಹೋದನು. ನಾನು ಈಗ ಬೇರೆ ಕಡೆ ಹೋಗುತ್ತೇನೆ. ಮತ್ತೆ ಆ ಮರಿಗಳು ಆಡಲು ಬರುತ್ತಾರೆ. ಆಗ ನಾನು ತಿನ್ನುತ್ತೇನೆ. ಎಂದು ಹೊರಟು ಹೋದನು.

       ಆಗ ಒಂದು ಕೋಳಿಯು ನಾವು ಇಲ್ಲಿಂದ ಎಲ್ಲಾದರೂ ಹೊರಟು ಹೋಗೋಣ ಎಂದು ಹೇಳಿತು. ಆಗ ಉಳಿದ ಕೋಳಿಗಳು ನಾವು ಹೋದರೆ ನಮಗೆ ಆಹಾರ ಇಲ್ಲದಿದ್ದರೂ ಪರವಾಗಿಲ್ಲ ನಮ್ಮ ಮರಿಗಳಿಗೆ ಆಹಾರ ಬೇಕು. ಮತ್ತು ಯಾವುದೇ ಅಪಾಯಗಳು ಆಗಬಾರದು. ಹಾಗಾದರೆ ಹೋಗೋಣ. ಕೋಳಿಗಳು ಆಹಾರವನ್ನು ಹುಡುಕುತ್ತಾ ಹುಡುಕುತ್ತಾ ಹಾವು ಇರುವ ಸಣ್ಣ ಹಳ್ಳಿಗೆ ತಲುಪಿದವು. ಹಾವಿನ ಕಣ್ಣಿಗೆ ಕೋಳಿಗಳು ಕಂಡವು. ಹಾವಿಗೆ ಕೋಳಿ ಮರಿಗಳನ್ನು ತಿನ್ನಲು ಆಸೆಯಾಯಿತು. ಆದರೆ ಹಾವಿಗೆ ಮರಿಗಳ ಮೇಲೆ ಕರುಣೆ ಉಂಟಾಯಿತು. ಮರಿಗಳು ಹಾವನ್ನು ನೋಡಿ ಓಡಲು ಶುರುಮಾಡಿದವು. ಆಗ ಹಾವು ನಾನು ನಿಮ್ಮನ್ನು ಏನು ಮಾಡುವುದಿಲ್ಲ ಮತ್ತು ತೊಂದರೆ ಕೊಡುವುದಿಲ್ಲ. ಇಷ್ಟು ದಿನ ನನಗೆ ಆಹಾರವಿಲ್ಲದೆ ಮರಿಗಳನ್ನು ಹಿಡಿಯುತ್ತಿದ್ದೆ. ಈಗ ನನಗೆ ಆಹಾರ ಸಿಕ್ಕಿದೆ ಎಂದು ಹೇಳಿತು. ಕೋಳಿಗಳು ಹಾವನ್ನು ನಂಬಿದವು. ಹಾವು ಕೋಳಿಗಳ ಹತ್ತಿರ ಕ್ಷಮೆಯನ್ನು ಕೇಳಿತು. ಮತ್ತು ಹಾವು ನಾವು ಇನ್ನು ಮುಂದೆ ಒಳ್ಳೆಯ ಸ್ನೇಹಿತರಾಗೋಣ ಎಂದು ಹೇಳಿತು. ಇದಕ್ಕೆ ಕೋಳಿಗಳು ಒಪ್ಪಿದವು. ನಿನಗೆ ಆಹಾರ ಸಿಕ್ಕಿದರೆ ನಮ್ಮೊಂದಿಗೆ ಹಂಚಿಕೊಂಡು ತಿನ್ನಬೇಕು ನಮಗೆ ಆಹಾರ ಸಿಕ್ಕಿದರೆ ನಿನ್ನೊಂದಿಗೆ ಹಂಚಿ ತಿನ್ನುತ್ತೇವೆ ಎಂದು ಕೋಳಿಗಳು ಹೇಳಿದವು. ಅಲ್ಲಿ ಗರುಡನಿಗೆ ಎರಡು ದಿನ ಆಹಾರ ಸಿಗದ ಕಾರಣ ಸತ್ತು ಹೋದನು. ಕೋಳಿಗಳು ಮತ್ತು ಹಾವು ಬಹಳ ವರ್ಷಗಳವರೆಗೆ ಒಳ್ಳೆಯ ಸ್ನೇಹಿತರಾಗಿ ಬದುಕಿದವು.     

............................ವೈಷ್ಣವಿ ಕಾಮತ್ ಮಂಚಿ

5ನೇ ತರಗತಿ 

ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕ.

ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ


**************************************Ads on article

Advertise in articles 1

advertising articles 2

Advertise under the article