-->
ಪೂರ್ಣಗೊಳಿಸಿದ ಕಥೆಗಳ ಸಂಚಿಕೆ -1

ಪೂರ್ಣಗೊಳಿಸಿದ ಕಥೆಗಳ ಸಂಚಿಕೆ -1

           ಪೂರ್ಣಗೊಳಿಸಿದ ಕಥೆಗಳ ಸಂಚಿಕೆ -1
********************************************
             ಚೇಟಾಳ ಹಾವು ಪುರಾಣ (ಭಾಗ 1) ಇಲ್ಲಿಯವರೆಗೆ......... 
ಬೇಲಿಯ ಕೆಲಸ ಮಾಡುತ್ತಿದ್ದಾಗ ಪಕ್ಕ ಹರಿದ ನಾಗರ ಹಾವಿನಿಂದ ಭಯ ಪಟ್ಟಿದ್ದರು ಕೃಷ್ಣಣ್ಣ. ಅವರ ಸದ್ದು ಕೇಳಿ ಬಂದ ಪಕ್ಕದ ಮನೆ ಚೇಟಾ, ಹಾವನ್ನು ಕಂಡು ಚಂದ ಇದೆ ಅನ್ನುತ್ತಾ ಹಿಡಿಯಲು ಹೋಗುತ್ತಾಳೆ. ಅದು ಕಚ್ಚುತ್ತದೆ ಎಂದು ಬೈದ ಕೃಷ್ಣಣ್ಣನ ಬೈಗುಳ ಕೇಳಿ ಬೇಸರಿಸಿಕೊ0ಡು ಬಸುರಿ ಹಾವು ಬೇಲಿಯ ಆಚೆ ಹೋಗುತ್ತದೆ. ಅಲ್ಲಿ ತಾಯಿ ಕೋಳಿ ಮಕ್ಕಳ ಜೊತೆ ಗುಪ್ತ ಸಭೆ ನಡೆಸಿ ಹಾವಿನಿಂದ ಮತ್ತು ಗರುಡದಿಂದ ಬದುಕುವುದು ಹೇಗೆ ಎಂದು ಎಚ್ಚರ ಹೇಳುತ್ತಿತ್ತು. ಆಗಲೇ ಅತ್ತ ಬಂದ ಹಾವು ಮೇಲೆ ಹಾರುತಿದ್ದ ಗರುಡದಿಂದ ಬದುಕಿಕೊಳ್ಳಲು, ತನ್ನ ಹಸಿವೆಯನ್ನು ಕಟ್ಟಿಕೊಂಡು ಹುತ್ತದಲ್ಲಿ ಅವಿತುಕೊಂಡಿತು.
                       ಈ ಮೊದಲ ಭಾಗವನ್ನು ಮುಂದುವರಿಸಿಕೊಂಡು ಈವರೆಗೆ ಹಲವು ಮಕ್ಕಳು ಕಥೆಗಳನ್ನು ಕಳಿಸಿದ್ದಾರೆ. ಅದರಲ್ಲಿ  ಕೆಲವು ಮಕ್ಕಳ ಮುಗ್ಧ ಕಲ್ಪನೆಗಳು ಕಾಣಿಸುತ್ತಿವೆ, ಇನ್ನು ಕೆಲವು ಕಡೆ ಪೋಷಕರ ಹಸ್ತಕ್ಷೇಪ ಕಾಣಿಸುತ್ತಿದೆ, ಇನ್ನು ಕೆಲವು ಕಡೆ ದೊಡ್ಡವರ ನಂಬಿಕೆಗಳ ಛಾಯೆ ದಟ್ಟವಾಗಿವೆ. ಮಕ್ಕಳು ಕಥೆ ಹೇಳೋಕೆ ಶುರು ಮಾಡಿದರೆ ಅಲ್ಲಿ ಕಥೆ ಬಿಟ್ಟು ವಿಮರ್ಶೆ ಇರೋದಿಲ್ಲ. ವಿಮರ್ಶೆ ಶುರು ಆದರೆ ದೊಡ್ಡವರ ನೆರಳು ಇವರನ್ನು ಮರೆ ಮಾಡಿದೆ ಅಂತಲೇ ಅರ್ಥ. ಹಾಗಾಗಿ ಮುಂದಿನ ಸಲದಿಂದ ಮಕ್ಕಳೇ ಕತೆಯಾಗಲಿ. ದೊಡ್ಡವರು ಅಗತ್ಯ ಬಿದ್ದರೆ ಪೆನ್ನಾಗಿ ಅಥವಾ ಟೈಪಿಂಗ್ ಟೂಲ್ ಆಗಿ ಇರೋಣ. ಏನಂತೀರಿ?
ಸರಿ ಸರಿ... ಮುಂದುವರಿದ ಕಥೆಗಳನ್ನು ಓದೋಣವೇ...?
......................ನಾದ ಮಣಿನಾಲ್ಕೂರು 
ತೆಕ್ಕೂರು, ಚಿಕಮಗಳೂರು ಜಿಲ್ಲೆ.
****************************************

        ಕಥೆ -1 (ಪ್ರಾರ್ಥನಾ ಡಿ ಆಚಾರ್ಯ)
************************************
  ಹೊಟ್ಟೆ ಹಸಿವು ತಾಳಲಾರದ ವೇದನೆ ಈಗಾಗಲೇ ಕಳೆದೆರಡು ವರ್ಷದಲ್ಲಿ ಪ್ರತಿಯೊಬ್ಬನಿಗೂ ಅದರ ಅನುಭವವಾಗಿದೆ.
       ಮೆಲ್ಲನೆ ಅತ್ತಿತ್ತ ನೋಡಿಕೊಂಡು ಹೊರಬಂತು ಹಾವಕ್ಕ,  ಹುತ್ತದ ಬಾಗಿಲಲ್ಲೇ ಇದ್ದ ಇಲಿಯೊಂದನ್ನು ಗಬಕ್ಕನೆ ಹಿಡಿದು ತಿಂದೇಬಿಟ್ಟಿತು, "ಅಬ್ಬಾ! ಅಂತು ಇಂತು ನನ್ನ ಹಸಿವು ನೀಗಿತು" ಎನ್ನುತ್ತಾ ನಿದ್ರೆಗೆ ಜಾರಿತು.
        ಇತ್ತ ತಂಪಾದ ಗಾಳಿಗೆ ಗೆದ್ದಲು ಹೆಕ್ಕಿ ಹೆಕ್ಕಿ ತಿನ್ನುತ್ತಾ ಸಂತೋಷದಿಂದ ಇದ್ದ ಮರಿಕೋಳಿಯು ಗಿಡುಗನ ಬಾಯಿಗೆ ಬಿದ್ದೇ ಬಿಟ್ಟಿತು. ಪ್ರಕೃತಿ ನಿಯಮದಂತೆ ದುರ್ಬಲರು ಬಲಿಷ್ಠರಿಗೆ ಆಹಾರವಾಗುವುದು ಸಹಜ. 
        ಚೇಟಾಳಿಗೆ ವಿಶಿಷ್ಟವಾದ ಹಾವನ್ನು ನೋಡಿದ ಮೇಲೆ ನಿದ್ದೆಯೇ ಬರಲಿಲ್ಲ, ಓಡಿಹೋಗಿ ಕೃಷ್ಣಣ್ಣನ ಬಳಿ ಹಾವಿನ ಕಥೆ ಹೇಳುವಂತೆ ಹಠ ಮಾಡಿದಳು. ಕೃಷ್ಣಣ್ಣನಿಗೆ ಚೇಟಾಳ ಚೊರೆ ತಾಳಲಾಗದೆ ಅತ್ತಿತ್ತ ನೋಡುವಾಗ ಅಲ್ಲೇ ಬಳಿಯಲ್ಲಿ ಒಂದು ಹಾವಿನ ಪೊರೆ ಕಂಡಿತು. ತಕ್ಷಣ ಅವರು ಕಥೆ ಹೇಳುವುದಾಗಿ ಭರವಸೆ ನೀಡಿದರು. 'ನೋಡು ಮಗುವೇ, ಅದು ಹಾವಿನ ಪೊರೆ. ಹಾವುಗಳು ಏಕೆ ಪೊರೆ ಬಿಚ್ಚುತ್ತವೆ ಎಂಬುದು ನಿನಗೆ ಗೊತ್ತೇ? ಇಲ್ಲವಲ್ಲ, ಹಾಗಾದರೆ ಕೇಳು....
         ಒಂದಾನೊಂದು ಕಾಲದಲ್ಲಿ ಭಗವಂತನು ಮನುಷ್ಯರನ್ನು ಸೃಷ್ಟಿಮಾಡಿ ಬಹಳ ವರ್ಷಗಳ ನಂತರ ಒಂದು ಸಲ ಭೂಮಿಗೆ ಬಂದ, ತನ್ನ ಪ್ರೀತಿಯ ಮಕ್ಕಳು ಹೇಗಿದ್ದಾರೆ ನೋಡಬೇಕು ಅಂತ ಭೂಮಂಡಲವನ್ನೆಲ್ಲ ಸುತ್ತಿದನಂತೆ. ಎಲ್ಲವೂ ಹಚ್ಚಹಸುರಾಗಿ ಕಂಗೊಳಿಸುತ್ತಿತ್ತು ಪ್ರಕೃತಿಯ ಸೌಂದರ್ಯವನ್ನು ಕಂಡು ಬಹಳ ಸಂತೋಷಪಟ್ಟನು, ಆದರೆ ಮನುಷ್ಯರನ್ನು ನೋಡಿ ಬಹಳ ಚಿಂತಾಮಯನಾದನು ಮನುಷ್ಯನ ಚರ್ಮ ಕಾಲಕ್ರಮೇಣ ಸುಕ್ಕುಗಟ್ಟಿತ್ತು, ಗಾಯದ ಕಲೆಗಳಿಂದ, ಚರ್ಮವ್ಯಾಧಿಗಳ ಕಲೆಗಳಿಂದ ವಿಕಾರ ವಾಗುತ್ತಿತ್ತು.  ಬಿಸಿಲಿಗೆ ತಿರುಗಿ ಕಪ್ಪು ಕಟ್ಟುತ್ತಿತ್ತು.      
        ಭಗವಂತನು ಬಹಳ ಯೋಚಿಸಿದನು ಮನುಷ್ಯರು ಅಗತ್ಯವಿರುವಾಗ ಬದಲಾಯಿಸಿಕೊಳ್ಳಬಹುದಾದ ಚರ್ಮದ ಹೊದಿಕೆಯನ್ನು ತಯಾರಿಸಿದ ಅವುಗಳನ್ನೆಲ್ಲ ಒಂದು ಸುಂದರವಾದ ಪೆಟ್ಟಿಗೆಯಲ್ಲಿ ಇಟ್ಟು ಊಸರವಳ್ಳಿಯನ್ನು ಕರೆದು ಭಗವಂತನು ಆ ಪೆಟ್ಟಿಗೆಯನ್ನು ಅದರ ಕೈಯಲ್ಲಿ ಕೊಟ್ಟು "ಇದನ್ನು ತೆಗೆದುಕೊಂಡು ಹೋಗು ಭೂಮಿಯ ಮೇಲಿನ ಮನುಷ್ಯರಿಗೆ ಕೊಡು" ಎಂದರು. ಊಸರವಳ್ಳಿಯು ಸೈ.. ಎಂದು ಹೊರಟಿತು.    
         ಅದು ಬೇಸಿಗೆಕಾಲ ,ಉರಿಬಿಸಿಲು ತುಂಬಾ ಸೆಕೆ ಬೇರೆ, ನಡೆಯುತ್ತಾ ನಡೆಯುತ್ತಾ ಊಸರವಳ್ಳಿಗೆ ಸುಸ್ತಾಯ್ತು ಸ್ವಲ್ಪ ನೀರು ಕುಡಿದು ಮುಂದೆ ಹೋಗೋಣ ಅಂತ ಒಂದು ತೊರೆಯ ಹತ್ತಿರ ಹೋಯಿತು. ಅಲ್ಲಿ ಅದರ ಸಹೋದರನಾದ ಹಾವು ಮರದಡಿಯಲ್ಲಿ ಕೂತಿತ್ತು ಹಾವಿಗೆ ಮನುಷ್ಯರನ್ನು ಕಂಡರೆ ಬದ್ಧದ್ವೇಷ. ಇದು ಊಸರವಳ್ಳಿಗೆ ಗೊತ್ತೇ ಇರಲಿಲ್ಲ ಮಾತು ಮಾತಿನಲ್ಲಿ ಊಸರವಳ್ಳಿಯು ತಾನು ಹೋಗ್ತಾ ಇರೋ ಕೆಲಸದ ಬಗ್ಗೆ ಹೇಳಿ ಆ ಪೆಟ್ಟಿಗೆಯನ್ನು ಹಾವಿನ ಹತ್ತಿರ ಇಟ್ಟು ನೀರು ಕುಡಿಯೋಕೆ ಹೋಯಿತು. ಅದರಂತೆ ಹಾವು ಊಸರವಳ್ಳಿಯನ್ನು ಕುರಿತು "ಜನವಿರೋ ಸ್ಥಳ ತುಂಬಾ ದೂರವಿದೆ ಒಂದಿಷ್ಟು ಹೊಟ್ಟೆ ಗಟ್ಟಿಮಾಡಿಕೋ" ಎಂದು ಮನೆಗೆ ಕರೆದುಕೊಂಡು ಹೋಯಿತು.ಹೊಟ್ಟೆ ತುಂಬಿತೋ ಇಲ್ಲವೋ ಊಸರವಳ್ಳಿಗೆ ಕಣ್ಣುಗಳು ಎಳೆದುಕೊಂಡು ಬಂತು, ಮಲಗಿ ನಿದ್ದೆಗೆ ಜಾರಿತು.
         ಅದು ಮಲಗಿದ ತಕ್ಷಣ ಹಾವು ಪೆಟ್ಟಿಗೆಯನ್ನು ಎತ್ತಿಕೊಂಡು ಅಟ್ಟದ ಮೇಲೆ ಅಡಗಿಸಿಟ್ಟಿತು. ಊಸರವಳ್ಳಿ ನಿದ್ರೆ ಮುಗಿಸಿ ಎದ್ದು ನೋಡಿದರೆ ಪೆಟ್ಟಿಗೆ ಮಾಯವಾಗಿದೆ ಇದೆಲ್ಲವೂ ಹಾವಿನದೇ ಕೆಲಸ ಆಗಿರಬಹುದು ಎಂದು ಕೋಪಗೊಂಡು "ಈಗಲೇ ನನ್ನ ಪೆಟ್ಟಿಗೆ
ಯನ್ನು ವಾಪಸ್ ಕೊಡು ಇಲ್ಲದಿದ್ದರೆ ನಾನು ದೇವರಿಗೆ ನನ್ನ ಮುಖ ತೋರಿಸಲಾರೆನು ಎಂದಿತು. ಆಗ ಹಾವು, "ಮನುಷ್ಯರು ಕ್ರೂರಿಗಳು ಪ್ರಾಣಿಗಳನ್ನು ಹಿಡಿದು ಬೋನಿನಲ್ಲಿ ಹಾಕ್ತಾರೆ, ಬಾಯಿ ಬಿಡಿಸಿ, ವಿಷ ಕಕ್ಕಿಸಿ ಆಟವಾಡಿಸುತ್ತಾರೆ. ನಮ್ಮ ಚರ್ಮ ಸುಲಿದು ಬೇಯಿಸಿ ತಿನ್ನುತ್ತಾರೆ. ನಮ್ಮನ್ನು ಬದುಕಲು ಬಿಡಲ್ಲ ಎಂದಿತು. ಅವರು ಕುರೂಪಿಗಳಾಗಿಯೇ ಇರಲಿ ಆಗಲೇ ಸರಿಯಾಗುತ್ತದೆ ಎಂದು ಊಸರವಳ್ಳಿಯನ್ನು ಮನೆಯಿಂದ ಹೊರಗೆ ದಬ್ಬಿತು. ಹೀಗೆ ಬೇಸರದಿಂದ ಊಸರವಳ್ಳಿ ಇನ್ನೇನು ಮಾಡಲಿ ಎಂದು ಯೋಚಿಸುತ್ತಾ ಭಗವಂತನಿಂದ ಅಡಗಲು ಉಪಾಯ ಮಾಡಿಕೊಂಡು ಬದುಕಲಾರಂಭಿಸಿತು. ಇತ್ತ ಹಾವು ತನ್ನ ಚರ್ಮ ಹಾಳಾಗುತ್ತಾ ಹೋದ  ಹಾಗೆ ಹೊಸ ಚರ್ಮವನ್ನು ಪೆಟ್ಟಿಗೆಯಿಂದ ತೆಗೆದು ಧರಿಸಿಕೊಳ್ಳೋಕೆ ಶುರು ಮಾಡಿತು. ಇದೇ ಪೊರೆ ಬಿಡುವುದು ಅಂತಾಯ್ತು.
          ಹೀಗೆ ಕೃಷ್ಣಣ್ಣ  ಕಥೆಯನ್ನು ಮುಗಿಸಿದನು.
       ಹಾವನ್ನು ಉರಗ, ಸರ್ಪ ಹೀಗೆ ಹಲವಾರು ಹೆಸರಿನಿಂದ ಕರೆಯುತ್ತಾರೆ . ಹಿಂದೂ ಸಂಪ್ರದಾಯದಲ್ಲಿ ಹಾವನ್ನು ಪೂಜಿಸುತ್ತಾರೆ ನಾಗರಪಂಚಮಿ, ಆಶ್ಲೇಷ ಬಲಿ ಅಲ್ಲದೆ ನಾಗಾರಾಧನೆಯ ಅನೇಕ ದೇವಾಲಯಗಳು ಪ್ರಸಿದ್ಧಿಯಲ್ಲಿವೆ. ನಾಗಾರಾಧನೆಯಿಂದ ಚರ್ಮ, ನರ ಇತ್ಯಾದಿ ವ್ಯಾಧಿಗಳು ಕಡಿಮೆಯಾಗುತ್ತದೆ ಎಂಬ ನಂಬಿಕೆಯೂ ಇದೆ. ಅನೇಕ ವಿಧವಿಧವಾದ ಹಾವುಗಳು ಇವೆ, ಕೆಲವು ಬಹು ವಿಷಪೂರಿತವಾಗಿರುತ್ತವೆ. ಇದನ್ನೆಲ್ಲ ಕೇಳಿ ಚೇಟಾ ಬಹಳ ಸಂತೋಷಪಟ್ಟಳು. ಅಷ್ಟರಲ್ಲಿ ಬೇಲಿಯ ಆಚೆ ಜೋರಾಗಿ ಕಿರುಚುತ್ತಿರುವ ಕೋಳಿಯ ಸದ್ದು ಕೇಳಿಸಿತು. ಏನೆಂದು ನೋಡಲು ಓಡಿದಾಗ ಅದೇ ನಾಗರಹಾವು ಕೋಳಿ ಮೊಟ್ಟೆಯನ್ನು ತಿನ್ನಲು ಬಂದಿತ್ತು. ಬುಸ್!! ಎಂದು ಎಡೆಯೆತ್ತಿದ ಹಾವನ್ನು ಕಂಡು ಚೇಟಾಳಿಗೆ ಭಯವಾಯಿತು, ತನ್ನಿಂತಾನೇ ತನ್ನೆರಡು ಕೈಗಳನ್ನು ಜೋಡಿಸಿ ನಾಗರ ಹಾವಿಗೆ ನಮಸ್ಕರಿಸಿದಳು ಇದೇ ಕೃಷ್ಣಣ್ಣ ನ ಕಥೆಯ ಪ್ರಭಾವ....
            ಮಕ್ಕಳಿಗೆ ಹೆದರಿಸುವ ಬದಲು ಕಥೆಗಳನ್ನು ಹೇಳಿ ಅವರ ಮನ ಪರಿವರ್ತನೆ ಮಾಡಬಹುದು. 
...............................ಪ್ರಾರ್ಥನಾ ಡಿ ಆಚಾರ್ಯ
ಹತ್ತನೇ ತರಗತಿ
ಸುದಾನ ವಸತಿಯುತ ಶಾಲೆ ಪುತ್ತೂರು
ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
**************************************


                 ಕಥೆ 2 ( ನಾಗರಾಜ್ ಬಿ.ಎಸ್ )
----------------------------------------------------
       ಹಾವು ತನ್ನ ಹಸಿವಿಗಾಗಿ ಆಹಾರ ಹುಡುಕಬಹುದೇ ಎಂದು ತಲೆಯನ್ನು ಹುತ್ತದಿಂದ ಹೊರಗೆ ಹಾಕಿತು. ಆಗಲೂ ಕೂಡ ಆಕಾಶದಲ್ಲಿ ಗಿಡುಗನು ಹಾರಾಡುತ್ತಿದ್ದ. ತಾಯಿ ಕೋಳಿ ಗಿಡುಗನ ಭಯದಿಂದ ತನ್ನ ಮರಿಗಳನ್ನು ತನ್ನ ರೆಕ್ಕೆ ಅಡಿಯಲ್ಲಿ ಇರಿಸಿಕೊಂಡಿತು. ಆದರೆ ಕೋಳಿಮರಿಗಳಿಗೆ ಹಸಿವಿನ ಕೂಗು ಶುರುವಾಗಿತ್ತು. ತನ್ನ ಮರಿಗಳನ್ನು ಕರೆದುಕೊಂಡು ಆಹಾರ ಹುಡುಕಿದರೆ ತನ್ನ ಮರಿಗಳಿಗೆ ಆಪತ್ತಾಗಬಹುದು ಎಂದು ತಾಯಿ ಕೋಳಿಗೆ ಚಿಂತೆಯಾಯಿತು. ಆಗ ತಾಯಿ ಕೋಳಿ ಹೇಳಿತು 'ಮಕ್ಕಳೇ ಇನ್ನೂ ಸ್ವಲ್ಪ ಹೊತ್ತು ಕಾಯೋಣ ಆಹಾರ ಸಿಗುತ್ತದೆ " ಎಂದು ಹೇಳಿತು. ಮರಿಗಳಗೆ ಹಸಿವು ತಡೆಯಾಲಾಗಲಿಲ್ಲ. ತನ್ನ ಹತ್ತಿರದಲ್ಲೇ ಜಿಗಿ - ಜಿಗಿದಾಡುತ್ತಿದ್ದ ಮಿಡತೆಯನ್ನು ಹಿಂಬಾಲಿಸಿತು. ಆಗಲೇ ಗಿಡುಗನು ಕೋಳಿ ಮರಿಯನ್ನು ಬೇಟೆಯಾಡಲು ವೇಗವಾಗಿ ಹಾರಾಡಿ ಬಂದಿತು. ತನ್ನ ಮರಿ ಆಪತ್ತಲ್ಲಿ ಇರುವುದನ್ನು ಕಂಡ ತಾಯಿ ಕೋಳಿ ಭಯ ಬೀತವಾಯತು. ಇದನ್ನೆಲ್ಲ ನೋಡುತ್ತಿದ್ದ ಹಾವು ಯೋಚಿಸಿತು' ನಾನೂ ಕೂಡಾ ಕೋಳಿ ಮರಿಯನ್ನು ಬೇಟೆಯಾಡಿದ್ದೆ ಆಗ ತಾಯಿ ಕೋಳಿ ತುಂಬ ಬೇಸರವಾಗಿತ್ತು. ನನ್ನ ಹೊಟ್ಟೆ ಯೊಳಗೂ ಮರಿಗಳಿವೆ ಈಗ ನನಗೆ ತಿಳಿಯಿತು ಮರಿ ಕಳೆದುಕೊಂಡಾಗ ಎಷ್ಟು ನೋವಾಗುತ್ತದೆ ಎಂದು' ಈಗಲಾದರೂ ಆ ಮರಿಯನ್ನು ಕಾಪಾಡಬೇಕೆಂದು ಹಾವು ತನ್ನ ಎಲ್ಲಾ ಶಕ್ತಿಯನ್ನು ಸೇರಿಸಿ ಗಿಡುಗನ ಮೇಲೆ ದಾಳಿ ಮಾಡಿತು. ಗಿಡುಗ ಓಡಿ ಹೋಯಿತು. ಇದನೆಲ್ಲ ನೋಡುತಿದ್ದ ತಾಯಿ ಕೋಳಿಗೆ ಹಾವಿನ ಮೇಲೆ ನಂಬಿಕೆ ಬರುತ್ತದೆ. ಮುಂದೆ ಹಾವು ಮತ್ತು ಕೋಳಿ ಸ್ನೇಹಿತರಾಗಿ ತಮ್ಮ ಮರಿಗಳನ್ನು ರಕ್ಷಣೆ ಮಾಡಿದವು.
....................................ನಾಗರಾಜ್ ಬಿ ಎಸ್.  
9ನೇ ತರಗತಿ  
ಸರ್ಕಾರಿ ಪ್ರೌಢಶಾಲೆ ನಾರ್ಶ ಮೈದಾನ. 
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
******************************************


                    ಕಥೆ-3 (ಶ್ರಾವ್ಯ ಮಂಚಿ) 
--------------------------------------------------
             ಏನೂ ಅರಿಯದ ಮುಗ್ಧ ಚೇಟಾಳಿಗೆ ಅವಳ ಮುಂದೆ ನಡೆಯುತ್ತಿರುವುದು ಎಲ್ಲಾ ತಮಾಷೆಯಾಗಿ ಕಂಡಿತು. ಎಲ್ಲೋ ಬಾನೆತ್ತರದಲ್ಲಿ ರೆಕ್ಕೆಗಳನ್ನು ಚಾಚಿ ಸ್ವಚ್ಛಂದವಾಗಿ ಹಾರುವ ಗಿಡುಗನಿಗೆ ನನ್ನ ಹಾಗೆ ನೆಲದ ಮೇಲೆ ಓಡಾಡುವ ಪ್ರಾಣಿಗಳನ್ನು ಭಯ ಪಡಿಸುವುದು ಜೊತೆಗೆ ಈ ಪ್ರಾಣಿಗಳೂ ಭಯಪಡುವುದು, ಓಡಿ ಬಿಲ ಸೇರುವದು ಎಲ್ಲ ಮಕ್ಕಳಾಟಿಕೆಯಂತೆ ಭಾಸವಾಯಿತು. ಭಯದ ಅರಿವೇ ಇಲ್ಲದ ಚೇಟಾಗೆ ಭಯದ ಅರಿವು ತಮಾಷೆಯಲ್ಲಿಯೇ ಆಗಿಹೋಯಿತು. ಹುತ್ತದೊಳಗಿನ ಹಾವಿಗೆ ಹಸಿವು ನೀಗಿಸುವ ಚಿಂತೆ ಒಂದೆಡೆಯಾದರೆ ತನ್ನ ಪ್ರಾಣದ ಜೊತೆಗೆ ತನ್ನ ಹೊಟ್ಟೆಯಲ್ಲಿರುವ ತನ್ನ ಮುಂದಿನ ಪೀಳಿಗೆ ರಕ್ಷಣೆಯ ಹೊಣೆ ಇನ್ನೊಂದೆಡೆ. ಬಿಲದಿಂದ ಹೊರ ಬರುವಂತಿಲ್ಲ ಜೊತೆಗೆ ಒಳಗೆ ಉಳಿದು ಬಿಡುವಂತೆಯೂ ಇಲ್ಲ. ಕೃಷ್ಣಣ್ಣನ ಬೇಲಿ ರಚನೆಯ ಕೆಲಸ ಮುಂದುವರೆಯುತ್ತಲೇ ಇತ್ತು. ಗಿಡುಗನ ಹಾರಾಟವು ನಡೀತಾನೆ ಇತ್ತು. ಹಾರುತ್ತಿದ್ದ ಗಿಡುಗನಿಗೆ ಹಾವನ್ನು ತಿನ್ನುವ ಉದ್ದೇಶವಿತ್ತೋ ಗೊತ್ತಿಲ್ಲ . ಆದರೆ ಸುತ್ತಲಿನ ಸನ್ನಿವೇಶ ಗಲಿಬಿಲಿಯ ವಾತಾವರಣ ಹಾವಿನ ಭಯಕ್ಕೆ ಕಾರಣವಾಯಿತೋ ಎನ್ನುವಂತೆ ತೋರುತ್ತಿತ್ತು. ಸೂಕ್ಷ್ಮ ನೋಟದ ಗಿಡುಗನ ಬಾಯಿಂದ ತಪ್ಪಿಸಿಕೊಂಡು ಓಡಾಡಿದರೂ, ಕೃಷ್ಣಣ್ಣನ ಮುಳ್ಳಿನ ಬೇಲಿಯಂತಿರುವ ಮೊನಚಾದ ಜನರ ನೋಟಗಳಿಂದ ತಪ್ಪಿಸಿಕೊಳ್ಳುವುದು ಒಂದು ಸವಾಲು ಎಂಬುದು ಹಾವಿನ ಅರಿವಿಗೆ ಬರುವುದು ತಡವಾಯಿತು. ಚಿನ್ನದ ಬಣ್ಣದ ಹಾವು ಈಗ ಮಣ್ಣಿನ ಹುತ್ತದ ಒಳಗೆ. ಚೇಟ ಹಾವಿನ ಹೊರ ಬರುವಿಕೆಗೆ ಕಾದು ಕಾದು ಸುಸ್ತಾಗಿ ಬಿಟ್ಟಳು. ಮನೆಯಲ್ಲಿ ಯಾರಿಗೂ ಹೇಳದೆ ಬಂದಿರುವುದರಿಂದ ಪುಟ್ಟ ಚೇಟ ಅಮ್ಮನ ಬೈಗುಳಕ್ಕೆ ಭಯಗೊಂಡು ಮನೆಯತ್ತ ಓಡಿದಳು. ಕೋಳಿ ತನ್ನ ಮರಿಗಳ ಚಿಕ್ಕ ಸೈನ್ಯದ ಜೊತೆಗೆ ಕಾಳು ಹಾಯಿಸುವ ಸವಾರಿ ಮುಂದುವರಿಸಿತು, ಕೃಷ್ಣಣ್ಣ ಬೇಲಿಯ ಕೆಲಸದಲ್ಲಿ ತೊಡಗಿದ. ಎಲ್ಲರಿಗೂ ಅವರವರದೇ ಕೆಲಸ. ಹಾವು ಮಾತ್ರ ಹುತ್ತದೊಳಗಿನ ಬಂಧಿ.        
                                                                        ................................................ಶ್ರಾವ್ಯ 
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

*******************************************

          ಕಥೆ - 4 (ನಿನಾದ್ ಕೈರಂಗಳ್ )
-------------------------------------------------
        ತುಂಬಾ ಹಸಿವಿನಿಂದ ಮಲಗಿದ ನಾಗರಹಾವಿಗೆ ಮರಿಗಳು ಹುಟ್ಟಿದವು. ಆಗ ನಾಗರಹಾವಿನ ಮರಿಗಳಿಗೂ ತುಂಬಾ ಹಸಿವಾಯಿತು. ನಾಗರಹಾವಿನ ಹತ್ತಿರ ತಿನ್ನಲಿಕ್ಕೆ ಏನೂ ಇರಲಿಲ್ಲ. ಇದನ್ನೆಲ್ಲ ಗಮನಿಸುತ್ತಿದ್ದ ಚೇಟ , ತುಂಬಾ ಬೇಸರಗೊಂಡಳು. ಚೇಟಾ ಸಾಯಿಸಿದ ಇಲಿಯನ್ನು ತಗೊಂಡು
ನಾಗರಹಾವಿಗೆ ಹಾಗೂ ನಾಗರಹಾವಿನ ಮರಿಗಳಿಗೆ ಕೊಟ್ಟಳು ನಾಗರಹಾವಿಗೆ ತುಂಬಾ ಖುಷಿಯಾಯಿತು.
........................ನಿನಾದ್ ಕೈರಂಗಳ್
4 ನೇ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
***********************************************




Ads on article

Advertise in articles 1

advertising articles 2

Advertise under the article