-->
ಪದಗಳ ಆಟ ಭಾವಚಿತ್ರ ಪಾತ್ರ ಸಂಚಿಕೆ-4

ಪದಗಳ ಆಟ ಭಾವಚಿತ್ರ ಪಾತ್ರ ಸಂಚಿಕೆ-4

 ಪದಗಳ ಆಟ
 ಭಾವಚಿತ್ರ
 ಪಾತ್ರ
 ಸಂಚಿಕೆ - 4

                 ಪದವಿಗಳಲ್ಲಿ ಪ್ರಥಮ
                  ಜ್ಞಾನಕ್ಕಿಲ್ಲ ಅಂತಿಮ
----------------------------------------------------           
                      ಚಿತ್ರ : ಸುಮಾಡ್ಕರ್
          ನಹಿ ಜ್ಞಾನೇನ ಸದೃಶಂ . ಜ್ಞಾನವೇ ಶಕ್ತಿ.
 ಇದು ನನಗೆ ಮೊದಲು ತಿಳಿದಿರಲಿಲ್ಲ. ನನ್ನ ಬಾಲ್ಯದಲ್ಲಿ ಶಾಲೆಗೆ ಹೋಗಿ ಕಲಿಯಲು ಎಷ್ಟು ಆಸೆಪಟ್ಟಿದ್ದೆ. ಎಲ್ಲಿಯೇ ಆಗಲಿ ಹಕ್ಕಿನ ಉಲ್ಲಂಘನೆಯಾದಾಗ ಕರ್ತವ್ಯಕ್ಕೆ ಚ್ಯುತಿ ಬಂದಾಗ ಶೋಷಣೆಯೇ ಅಟ್ಟಹಾಸಗೈಯುವಾಗ ನನಗೆ ಸುಮ್ಮನಿರಲು ಆಗುತ್ತಲೇ ಇರಲಿಲ್ಲ. ಎಷ್ಟು ಬಾರಿ ಜನರಿಗೆ ಒಳ್ಳೆಯದು ಮಾಡಲು ಹೋಗಿ ಅಧ್ವಾನವಾದದ್ದು ಇದೆ. ಆ ಸಂದರ್ಭಗಳಲ್ಲಿ ಸನ್ನಿವೇಶಗಳಲ್ಲಿ ನನ್ನನ್ನು ರಕ್ಷಣೆ ಮಾಡಿದ್ದು ಜ್ಞಾನ. 

                ಈ ಪ್ರಕೃತಿಯಲ್ಲಿ ಹುಟ್ಟಿದ ಎಲ್ಲರೂ ಸಮಾನರು.  ನನ್ನಗಂಧವತಿ ಭೂಮಿ, ಗಂಧವಹ - ಮರುತ,  ಗಂಗೆ ಇವನ್ನು  ಅನುಭವಿಸಲು ಎಲ್ಲರಿಗೂ ಸಮಾನ ಹಕ್ಕಿದೆ ಎನ್ನುವ ಜ್ಞಾನ ಅರಿವು ತಿಳುವಳಿಕೆ ನನ್ನನ್ನು ನನ್ನವರನ್ನು ರಕ್ಷಿಸಿದೆ.  
ಮುಂಬೈ ಮಹಾನಗರದಲ್ಲಿ ನನ್ನ ತಂದೆ ಅನೇಕ ಸ್ಕೂಲುಗಳಿಗೆ ಅಲೆದರು. ನಾನು ಕಲಿತರೆ ನನ್ನ ಜನಾಂಗದ ಸಮಸ್ಯೆಗಳಿಗೆ ಉಪಸರ್ಗಗಳಿಗೆ ಉತ್ತರ ಸಿಗಬಹುದು ಎಂದು ಅವರು ಬಲವಾಗಿ ನಂಬಿದ್ದರು. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಹೇಗೆ ಅಮಾನುಷವಾಗಿ,  ಕ್ರೂರವಾಗಿ,  ಅನಾಗರಿಕವಾಗಿ,  ನಿಷ್ಕರುಣೆಯಿಂದ ನಿರ್ದಾಕ್ಷಿಣ್ಯದಿಂದ ನಡೆಸಿ ಕೊಳ್ಳಬಲ್ಲರು ಎಂಬುದನ್ನು ನಾನಲ್ಲಿ ಕಂಡೆ. ಅನುಭವಿಸಿದೆ ಕೂಡ. ಆದರೆ ಅಂತಹ ನರಕ ಕೂಪದಲ್ಲೂ ಅಮೃತ ಸಮಾನ ಗುರುಗಳಿದ್ದರು ಎನ್ನುವುದು ಒಂದು ಆಶಾಕಿರಣ. ನನಗಾಗಿ ಅವರ ಸಮಯ ಕೊಟ್ಟರು. ಉಪಾಧಿ ಕೊಟ್ಟರು. ಅವಮಾನ ಸಹಿಸಿಕೊಂಡರು. ಇಂತಹ ಪ್ರಾತಃಸ್ಮರಣೀಯ ದಿವ್ಯಾಮ್ ಶ ಸಂಭೂತರು ನನ್ನ ಜೀವನವೇ  ಪರಿವರ್ತನೆಯಾಗುವಲ್ಲಿ ಮಹತ್ವದ ಪಾತ್ರವಹಿಸಿದರು. ನನ್ನ ಮತ್ತೊಬ್ಬ ಗುರು ವಿದೇಶಕ್ಕೆ ಹೋಗಿ ಕಲಿಯಲು ಅಂದಿನ ರಾಜರು ಒಬ್ಬರ ಸಹಾಯವನ್ನು ಮಾಡಿಸಿಕೊಟ್ಟರು. 
 
           ಬದುಕಿನ ಸಂಘರ್ಷಗಳು ನನಗೆ ನಿಜವಾದ ಪಾಠ ಕಲಿಸಿವೆ. ನಾನು ಅದರಿಂದ ಗಟ್ಟಿಯಾಗಿದ್ದೇನೆ, ದೃಢಮನಸ್ಕನಾಗಿದ್ದೇನೆ ಪ್ರಬುದ್ಧತೆಯನ್ನು ಮೈಗೂಡಿಸಿಕೊಂಡಿದ್ದೆ. 
    ಪುಟಕ್ಕಿಟ್ಟಷ್ಟು  ಚಿನ್ನಕ್ಕೆಮೆರುಗು
    ಕೆತ್ತಿದಷ್ಟು ಶಿಲ್ಪಕ್ಕೆ ಸೊಬಗು. 
    ಕೆಸರಲ್ಲಿ ಇದ್ದರೂ ಕಮಲ ಅರಳಿ 
    ಸೊಗವ ಬೀರುವಂತೆ 
ನಾನು ಕೆಸರಿಗೆ ತಳ್ಳಲ್ಪಟ್ಟು.......
ಅದರಿಂದ ಎದ್ದು ಸವಾಲನ್ನು ಸ್ವೀಕರಿಸಿ 
ಗೆದ್ದು ತೋರಿಸಬೇಕೆಂಬ ಪಣತೊಟ್ಟೆ. 
ಇದಕ್ಕಾಗಿ ನಾನು ತುಂಬಾ ಓದಬೇಕು ಎಂದು ನನ್ನ ಅಪ್ಪ ಹೇಳುತ್ತಿದ್ದರು. ಪ್ರೀತಿ ಮತ್ತು ದಯೆ ಮಾತ್ರ ನಿಜವಾದ ಧರ್ಮಗಳು ಎಂದು ಅವರು ನಂಬಿದ್ದರು. ನಾನು ಅದಕ್ಕೆ ನಿಷ್ಠನಾದೆ,  ಬದ್ಧನಾದೆ. ಅವಮಾನಗಳಿಂದ ಸೋಲಿನಿಂದ ವಿಚಲಿತನಾಗದೆ ಅದರಿಂದ ಉಂಟಾದ ಕೋಪವನ್ನು ನಾನು ಹೆಚ್ಚು ಓದಲು, ಹೆಚ್ಚು ಸಾಧನೆ ಮಾಡಲು ವಿನಿಯೋಗಿಸಿಕೊಂಡೆ. 
   
        ನಾನು ಹೈಸ್ಕೂಲು ದಿನಗಳಲ್ಲೇ ಪಾಠ ಬಿಟ್ಟು ಬಹಳ ಅನ್ಯ ಸಾಹಿತ್ಯ ಪುಸ್ತಕಗಳನ್ನು ಓದುತ್ತಿದ್ದೆ. ಗ್ರಂಥಾಲಯ ನನ್ನ ಪ್ರೀತಿಯ ಜಾಗ. ಗ್ರಂಥಾಲಯದ ಹಾದಿಯಿಂದಲೇ ನನ್ನ ಬದುಕಿನ ಪಥವು ಸುಗಮವಾಯಿತು ಎಂದೇ ಹೇಳಬೇಕು. ಸಹೃದಯ  ಗುರು ಸಿಕ್ಕಿದ್ದು ನನ್ನ ಭಾಗ್ಯ ವಿಶೇಷ. ಅವರ ವಿಪುಲ ಜ್ಞಾನ ಧಾರೆಯನ್ನು ನನಗೆ ಎರೆದರು. ನನ್ನ ನಿರ್ಧಾರ ಅಚಲವಾಯಿತು. ಗಮ್ಯ ಸುಲಭ ಸಾಧ್ಯವಾಯಿತು. ನಾನು ಮೆಟ್ರಿಕ್ ಪಾಸಾದಾಗ ನನ್ನ ಇಡೀ ಸಮುದಾಯದ ಜನರು ಸಂಭ್ರಮ ಉಲ್ಲಾಸಗಳಿಂದ ಕುಣಿದರು. ನನ್ನ ಕಾಲೇಜು ವಿದ್ಯಾಭ್ಯಾಸಕ್ಕೆ ಹೆಗಲು ಕೊಟ್ಟವರು ಗುರು. ಧನಸಹಾಯ ನೀಡಿದವರು ರಾಜರು. ಕಾಲೇಜಿನ ಉಪನ್ಯಾಸಕರು ಉದರದ ಹಸಿವಿಗೆ ಅನ್ನ, ಜ್ಞಾನದ ತೃಷೆಗೆ ಪುಸ್ತಕ, ಮಾನ ರಕ್ಷಣೆಗೆ ವಸನ ಕೊಟ್ಟು ಪೊರೆದರು. ಕಾಲೇಜು ಶಿಕ್ಷಣ ಮುಗಿಸಿದೆ. ಅದರಾಚೆಗಿನ ಉನ್ನತ ವ್ಯಾಸಂಗ ನನ್ನ ಲಭ್ಯವಾಗಿದ್ದರೂ ಬಡತನ ನನ್ನನ್ನು ಹಿಂದಕ್ಕೆ ಎಳೆಯಿತು. ನಾನು ಅನಿವಾರ್ಯವಾಗಿ ನೌಕರಿಗೆ ಸೇರಿದೆ. ತಂದೆ ತೀರಿಕೊಂಡಾಗ ನನ್ನ ಬಾಲ್ಯ ಯೌವ್ವನವು ಸತ್ತು ಹೋದಂತೆ ಭಾಸವಾಯಿತು. 
ಅಮೆರಿಕದಲ್ಲಿ ಎಂ. ಎ.,  ಪಿಎಚ್ ಡಿ ಮಾಡುವಾಗ        
      ವಿದ್ಯಾರ್ಥಿ ವಾ ತ್ಯಜೇತ್ ಸುಖಂ 
      ಸುಖಾರ್ಥಿ  ವಾ  ತ್ಯಜೇತ್ ವಿದ್ಯಾ.   
ಎಂಬಂತೆ ಇನಿತು ಸಮಯವನ್ನು ವ್ಯರ್ಥ ಮಾಡದೆ ಅಪಾರ ಶ್ರದ್ಧೆಯಿಂದ ಕಲಿತೆ,  ಕಲಿತೆ ಮತ್ತೆ ಕಲಿತೆ. ಮುಗಿಯಲಿಲ್ಲ ಇನ್ನೂ ಕಲಿಯಬೇಕೆಂಬ ಹಂಬಲ,  ದಾಹ, ಜ್ಞಾನ ಪಿಪಾಸೆ. ಮತ್ತೆ ಇಂಗ್ಲೆಂಡಿಗೆ ಹೋದರೂ ಅನಿವಾರ್ಯವಾಗಿ ಮರಳಿದೆ. ಎಷ್ಟೋ ಸಂದರ್ಭಗಳಲ್ಲಿ ನಾನು ಕಲೆಹಾಕಿದ ಜ್ಞಾನ,  ಜ್ಞಾನ ಸೇತುವಾದ  ಪುಸ್ತಕಗಳು ನನ್ನನ್ನು ಸಂಕಷ್ಟ ಕಾಲದಲ್ಲಿ ಕಾಪಾಡಿವೆ. 

            ನಾನು ಪ್ರೊಫೆಸರ್ ಆದಾಗ ನನ್ನ ವಿಷಯಜ್ಞಾನ, ಪಾಂಡಿತ್ಯದಿಂದ ನನ್ನ ವಿದ್ಯಾರ್ಥಿಗಳು ಬೆಲ್ಲಕ್ಕೆ ಮುತ್ತುವ ಇರುವೆಯಂತೆ ನನ್ನನ್ನು ಕಾಣಲು ಬರುತ್ತಿದ್ದರು. ಶೋಷಿತರನ್ನು ಸಂಘಟಿಸಿ ಅವರಿಗೆ ಶೋಷಣೆಯ ವಿರುದ್ಧ ದನಿ ಎತ್ತಲು ಪ್ರೇರೇಪಿಸಿದೆ. ಸಾಮೂಹಿಕ ಭೋಜನ ಸಾಮೂಹಿಕ ಸಾರ್ವಜನಿಕ ಪ್ರವೇಶ ಮೊದಲಾದ ಚಟುವಟಿಕೆಗಳನ್ನು ಹಮ್ಮಿಕೊಂಡೆ. ಆಗೆಲ್ಲ ನನಗೆ ಬೆಂಗಾವಲಾಗಿ ನಿಂತದ್ದು ಜ್ಞಾನ ಕಾನೂನಿನ ಜ್ಞಾನ. ದಲಿತರಿಗಾಗಿ ವಿಶೇಷ ಪತ್ರಿಕೆ ನಡೆಸಲು ಅವರ ಹಕ್ಕುಗಳಿಗಾಗಿ ಹೋರಾಡಲು ಈ ಜ್ಞಾನವೇ ಅಸ್ತ್ರವಾಯಿತು. ದಲಿತರನ್ನು ತುಳಿದು ಅದಃಪತನಕ್ಕೆ ಕಾರಣವಾಗುತ್ತಿರುವ ಬಲ್ಲಿದರ ಮೌಢ್ಯವನ್ನು ಬಯಲಿಗೆಳೆಯಲು ಕಳೆಯಲು ನಾನು ಮತ್ತಷ್ಟು ಓದಬೇಕಾಯಿತು. ವೇದ ಉಪನಿಷತ್ತು ಮನುಸ್ಮೃತಿ ಗಳನ್ನು ಗಾಢವಾಗಿ ಓದಿ ನಿಗೂಢವಾದ ಸಮ್ಯಕ್ ಜ್ಞಾನವನ್ನು ಹೊರತೆಗೆದು ಲೋಕಕ್ಕೆ ಸಮಾನತೆಯ ತತ್ವ ದರ್ಶನ ಮಾಡಿಸಿದೆ. ನೀವು ನಂಬಿರುವುದು ಮಿಥ್ಯೆ, ಅನೃತ ಸುಳ್ಳು. ಸತ್ಯ ಇದು ಎಂದು ನಿರ್ಭಿಡೆಯಿಂದ ತೋರಿಸಿಕೊಟ್ಟೆ. ದೀನ ದುರ್ಬಲರಿಗೆ ನೆರವಾಗುವಲ್ಲಿ ರಾಷ್ಟ್ರದ ನಾಯಕರುಗಳನ್ನು ವಿರೋಧಿಸಲು ಹಿಮ್ಮೆಟ್ಟಲಿಲ್ಲ. ಭಾವನಾತ್ಮಕವಾಗಿ ನನ್ನನ್ನು ದುರ್ಬಲಗೊಳಿಸಲಾಯ್ತು. ಆದರೂ ದಲಿತ ಸಮುದಾಯಕ್ಕೆ ಅನ್ಯಾಯವಾಗಲು ಬಿಡಲಿಲ್ಲ. ಧೈರ್ಯ ಸಾಹಸಗಳಿಂದ ಇನ್ನಷ್ಟು ಅಸ್ತ್ರಗಳನ್ನು ವಿದೇಶದ ಗೋಷ್ಠಿಗಳಿಂದ ತಂದೆ: ಭೀಮನಾದೆ. ನಮ್ಮ ನೆಲದ ಸ್ಮೃತಿ ಗಳಿಂದ ಅಗೆದೆ. ನನ್ನ ಆಳವಾದ ಜ್ಞಾನ ತಾರ್ಕಿಕತೆ,  ತೀಕ್ಷ್ಣ ಬರಹ,  ಆಡಳಿತಾತ್ಮಕ ಕೌಶಲ ಕರ್ಮನಿಷ್ಠೆಗಳಿಂದ ರಾಜಕೀಯ ಸ್ಥಾನಮಾನಗಳು ನನ್ನನ್ನು ಅರಸಿಕೊಂಡು ಬಂದವು. ನನ್ನ ದೇಶ ನನ್ನ ಜನರು ಸ್ವಾಭಿಮಾನದಿಂದ ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸುವಂತಾಗಲು  ಏನೇನು ಬೇಕೋ ಅದೆಲ್ಲವನ್ನೂ ಅಪಾರ ಅಧ್ಯಯನದಿಂದ ಮಾಡಿದೆ. ಈ ಕಾಯಕದಲ್ಲಿ ನನಗೆ ಯಾರೊಬ್ಬರ ಸಹಾಯ ಸಿಗಲಿಲ್ಲ. ಏಕಾಂಗಿ ವೀರನಂತೆ ಶೂರನಂತೆ ವೀರ ಅಭಿಮನ್ಯುವಿನಂತೆ ಹೋರಾಡಿದೆ. ಗೆದ್ದು ಭಾರತಮಾತೆಯ ಋಣವನ್ನು ಸ್ವಲ್ಪಮಟ್ಟಿಗೆ ಸಂದಾಯ ಮಾಡಿದೆ. ಇಡೀ ಜಗತ್ತೇ ನನ್ನ ಈ ಕಾಯಕವನ್ನು ಮುಕ್ತಕಂಠದಿಂದ ಶ್ಲಾಘಿಸಿತು. 

            ಸಾಮಾಜಿಕ ನ್ಯಾಯ ಹಾಗೂ ಸಮಾನತೆಯಿಂದ ಮಾತ್ರ ದೇಶ ಪ್ರಬಲವಾಗ  ಬಲ್ಲುದು ಎಂದು ನಾನು ಸಾರಿ ಹೇಳಿದರೂ ನನ್ನ ಬೇಡಿಕೆಯನ್ನು, ಎರಕೆಯನ್ನು ಸಂಪ್ರದಾಯಸ್ಥರು ಅರ್ಥಮಾಡಿಕೊಳ್ಳಲಿಲ್ಲ ಮನ್ನಿಸಲಿಲ್ಲ. ನಾನು ಮಾನಸಿಕವಾಗಿ ಘಾಸಿಗೊಂಡೆ. ಆಯಾಸಗೊಂಡು ಕ್ಷೋಭೆಗೊಳಗಾದೆ. ಶಾಂತಿ ಸಮಾಧಾನಗಳನ್ನು ಅರಸುತ್ತಾ ಹೋದೆ. ನಿಜವಾದ ಧರ್ಮ ಮನುಜನಿಗೆ  ದುಃಖದಿಂದ ದುರಾಸೆಯಿಂದ ಖಿನ್ನತೆಯಿಂದ ಮುಕ್ತಿ ನೀಡಬೇಕು. ಇವೆಲ್ಲದಕ್ಕೂ ಪರಿಹಾರವಾಗಬೇಕು ಎಂದು ಕರೆ ಕೊಟ್ಟೆ. ಆರೋಗ್ಯವಂತ ಸಮಾಜದ ಹೆಗ್ಗುರುತು ಸಚ್ಚಾರಿತ್ರ್ಯ ಎಂಬುದನ್ನು ಮನಗಂಡು ಅದನ್ನೇ ಸಾರಿದೆ. 
ಇವು ನಿಮ್ಮೊಳಗಿದೆಯೇ..?
ಇವರು ನಿಮ್ಮೊಳಗಿಲ್ಲವೇ.........?
..................................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372

*******************************************

Ads on article

Advertise in articles 1

advertising articles 2

Advertise under the article