-->
ಬದಲಾಗೋಣವೇ ಪ್ಲೀಸ್....! ಸಂಚಿಕೆ - 5

ಬದಲಾಗೋಣವೇ ಪ್ಲೀಸ್....! ಸಂಚಿಕೆ - 5

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 


        ಬದಲಾಗೋಣವೇ ಪ್ಲೀಸ್....! ಸಂಚಿಕೆ - 5
********************************************
         ಅಮ್ಮ ಒಳಗಿಂದ ಗೊಣಗುತ್ತಿದ್ದಳು " ಛೆ... ! ಅಷ್ಟು ದೊಡ್ಡ ಕುಂಬಳಕಾಯಿ ಹೊರಗಿನಿಂದ ನೋಡಲು ಚೆನ್ನಾಗಿತ್ತು...  ಗಟ್ಟಿಯಾಗಿತ್ತು. ಈಗ ನೋಡಿದರೆ ಒಳಗಿಂದೊಳಗೆ ಕೊಳೆತು ಹಾಳಾಯಿತು ". ಹಾಗೋ ಈಗೋ ಬೇಸರಗೊಂಡ ಅಮ್ಮನನ್ನು  ಸಮಧಾನಪಡಿಸಿ ಬೇರೆ ತರಕಾರಿಯ ವ್ಯವಸ್ಥೆ ಮಾಡಿದೆ. ಆದರೆ ಮನದಲ್ಲಿ ಕುಂಬಳ ಕಾಯಿಯ ಕತೆ ಆಶ್ಚರ್ಯ ತಂದಿತು.

         ಹೌದು ಕುಂಬಳಕಾಯಿ ಅತ್ಯುತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುವ ತರಕಾರಿ . ಗಾತ್ರದಲ್ಲೂ ದೊಡ್ಡದು. ಎಲ್ಲರಿಗೂ ಇಷ್ಟವಾದದ್ದು. ಬಾಹ್ಯವಾಗಿ ಗಟ್ಟಿಮುಟ್ಟಾಗಿ ಕಂಡರೂ ಅದು ಯಾವುದೇ ಕಾರಣಕ್ಕಾಗಿ ಒಳಗಿನೊಳಗಿಂದ ಕೊಳೆಯಲು ಪ್ರಾರಂಭವಾದರೆ  ಒಡೆದು ಚೂರಾದಾಗಲೇ ನಮ್ಮ ಗಮನಕ್ಕೆ ಬರುವುದು... ಆಶ್ಚರ್ಯವಲ್ಲವೇ?

        ಹೌದು ನಮ್ಮ ಮನಸ್ಸು ಕೂಡಾ ಕುಂಬಳಕಾಯಿಯಂತೆ. ಧನಾತ್ಮಕ ಭಾವಗಳ ಪೌಷ್ಟಿಕತೆ ಇದ್ದರೂ ಅಂತರಂಗವಾಗಿ ನಂಬಿಕೆಗೆ ಹೊಡೆತ ಬಿದ್ದಾಗ ಒಳಗಿಂದೊಳಗೆ ಕೊಳೆಯಲಾರಂಭಿಸುತ್ತದೆ. ನಾವು ಯಾವುದೇ ವ್ಯಕ್ತಿಗಳಲ್ಲಿ , ನಮ್ಮ ಸುತ್ತಮುತ್ತಲ ಪರಿಸರದಲ್ಲಿ , ನಾವು ಕೆಲಸ ಮಾಡುವ ಸಂಸ್ಥೆಗಳಲ್ಲಿ....  ಹೀಗೆ ಬೇರೆ ಬೇರೆ ನಂಬಿಕೆಗಳಿಂದ ಬದುಕುತಿರುತ್ತೇವೆ. ಆ ನಂಬಿಕೆಗಳು ನಮಗೆ ಎರಡು ಅದ್ಭುತ ಜೀವನ ಪಾಠಗಳನ್ನು ಕಲಿಸುತ್ತದೆ.. ಒಂದೋ ಜೀವನ ಪೂರ್ತಿ ನಮ್ಮ ಜತೆಗಿರುತ್ತದೆ ಅಥವಾ ಜೀವನ ಪೂರ್ತಿ ಮರೆಯಲಾಗದ ಪಾಠ ಕಲಿಸಿರುತ್ತದೆ.

          ಹೌದಲ್ವ ನಂಬಿಕೆಯೇ ಜೀವನ.. ನಂಬಿಕೆಯೇ ಪ್ರೀತಿ... ನಂಬಿಕೆಯೇ ಸಂಬಂಧ... ನಂಬಿಕೆಯೇ ಶಾಶ್ವತ ಬಂಧನ... ನಂಬಿಕೆಯೇ ಶಾಂತಿ.. ನಂಬಿಕೆಯೇ ಬೆಳಕು. ಆದರೆ ಯಾರನ್ನು , ಯಾವುದನ್ನು , ಎಲ್ಲಿ ಮತ್ತು ಹೇಗೆ ನಂಬಬೇಕೆಂಬುವುದೇ ಯಕ್ಷಪ್ರಶ್ನೆ.
ನಾವು  ನಂಬಿರುವ ಸಂಸ್ಥೆ ಅಥವಾ ವ್ಯಕ್ತಿಯ ಹಾವಭಾವ, ವರ್ತನೆ ಚಟುವಟಿಕೆಗಳು , ಬಣ್ಣದ ಮಾತುಗಳು ,  ಪ್ರದರ್ಶನ ಹಾಗೂ ಪ್ರಚಾರ ವ್ಯಕ್ತಿತ್ವವನ್ನು ಗಮನಿಸಿ ಆಕರ್ಷಿತರಾಗಿ ನಂಬುತ್ತೇವೆ. ನಮ್ಮಲ್ಲಿ ಅವರನ್ನು ಅವರಲ್ಲಿ ನಮ್ಮನ್ನು ಕಾಣುತ್ತೇವೆ. ಆದರೆ ಕಾಲ ಕಳೆದಂತೆ ಪರಿಸ್ಥಿತಿ ಮತ್ತು ಪರಿಸರ ಬದಲಾದಂತೆ ನಾವು ನಂಬಿದವರು  ನಮ್ಮ ನಂಬಿಕೆಗೆ ವಿರುದ್ಧವಾಗಿ ವರ್ತಿಸಿದಾಗ ನಾವು ಖಿನ್ನತೆಗೊಳಗಾಗುತ್ತೇವೆ. ಬದುಕೇ ಭ್ರಮನಿರಸನವಾದಂತೆ ವರ್ತಿಸುತ್ತೇವೆ. ಎಲ್ಲಾ ಮರೆತು ಏಕಾಂತ ಜೀವನಕ್ಕೆ ಮನಸ್ಸು ಬಯಸುತ್ತದೆ. ಹಾಗೆಯೇ ಇದರ ಪ್ರಭಾವದಿಂದ ಎಲ್ಲವನ್ನು.. ಎಲ್ಲರನ್ನು ಅಪನಂಬಿಕೆಗಳಿಂದ ನೋಡುತ್ತೇವೆ. ಸೂಕ್ಷ್ಮ ಬುದ್ದಿ ಹೆಚ್ಚಾಗುತ್ತದೆ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ,  ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ಪಾಠವನ್ನು ಕಲಿಸಿ ಹೋಗುತ್ತಾರೆ. ಕುಂಬಳಕಾಯಿ ಒಳಗಿಂದೊಳಗೆ ಕೊಳೆಯಲು ಕಾರಣರಾಗುತ್ತಾರೆ.

              ಅದೇ ರೀತಿ ನಾವು ನಂಬಿದವರಲ್ಲಿ ಕೆಲವರು ಹಾಲಿನಲ್ಲಿ ನೀರು ಬೆರೆತಂತೆ ಕೊನೆಯವರೆಗೆ ಸ್ಪೂರ್ತಿಯಾಗಿ, ಆಧಾರವಾಗಿ ಇರುತ್ತಾರೆ. ನಮ್ಮ ಕಷ್ಟ ಸುಖಗಳಿಗೆ , ಲಾಭ ನಷ್ಟಗಳಿಗೆ  ಹೆಗಲಿಗೆ ಹೆಗಲು ಕೊಟ್ಟು ಜತೆಗಿರುತ್ತಾರೆ....ಜತೆಯಾಗಿಯೇ ಇರುತ್ತಾರೆ. ಇಂಥವರು ತಮಗೆ ಸಮಯವಿಲ್ಲದಿದ್ದರೂ ತನ್ನನ್ನು ನಂಬಿದವರಿಗಾಗಿ ಸದಕಾಲ ATMನಂತೆ ಸಹಾಯ ಮಾಡುತ್ತಾರೆ. ಆಪ್ತರಾಗಿದ್ದುಕೊಂಡು ಬದುಕು ಬಂಗಾರವನ್ನಾಗಿಸುತ್ತಾರೆ. ಎಂಥಹ ಕಠಿಣ ಪರಿಸ್ಥಿತಿ ಬಂದರೂ ನಂಬಿಕೆಗೆ ಅರ್ಹರಾಗಿಯೇ ಇರುತ್ತಾರೆ. ಕುಂಬಳಕಾಯಿ ಕೊಳೆಯದಂತೆ ಕೊನೆಯವರೆಗೂ ಕಾಪಾಡುತ್ತಾರೆ.

            ನಾವು ಅತಿಯಾಗಿ ಯೋಚಿಸುವುದನ್ನು ಬಿಡಬೇಕು. ಅತಿಯಾಗಿ ಯೋಚಿಸಿದರೂ ಬದುಕು ಹೇಗೆ ಸಾಗಬೇಕೋ ಅದರಂತೆಯೇ ಸಾಗುತ್ತದೆ .. ಬಂದದನ್ನು ಬಂದಂತೆ ಸ್ವೀಕರಿಸಬೇಕು. ಹೀಗೆ ಸಮಸ್ಯೆಯುತ ಬದುಕನ್ನು ಇದ್ದಂತೆ ಸ್ವೀಕರಿಸಿದ ಕಾರಣ ಕ್ಯಾನ್ಸರ್ ರೋಗ ಗೆದ್ದ ಕ್ರಿಕೆಟಿಗ ಯುವರಾಜ ಸಿಂಗ್ , ಏಡ್ಸ್ ನ್ನು ಗೆದ್ದ ಟೆನಿಸಿಗ ಆರ್ಥರ್ ಆ್ಯಶ್,  ಮಕ್ಕಳ ಕೊರತೆ ಗೆದ್ದ ಸಾಲುಮರ ತಿಮ್ಮಕ್ಕ., ಅಂಕಗಳ ಪರೀಕ್ಷೆಯಲ್ಲಿ ಫೇಲಾದರೂ ಜೀವನ  ಪರೀಕ್ಷೆಯಲ್ಲಿ ಜಗತ್ತನೇ ಗೆದ್ದ ಹಲವಾರು ಮಂದಿ ಸ್ಪೂರ್ತಿಯಾಗುತ್ತಾರೆ.

        ಗಂಧದ ಕೊರಡೊಂದು ಕಲ್ಲಿನಲ್ಲಿ ತೇಯ್ದು ಗಾತ್ರದಲ್ಲಿ ಕುಗ್ಗುತ್ತಾ ಹೋದರೂ ಅದು ನೀಡುವ ಪರಿಮಳದಿಂದ ಶ್ರೀಗಂಧವಾಗುತ್ತದೆ. ಹಣತೆಯೊಂದು ಸುತ್ತಲಿನ ಜಗತ್ತಿಗೆ ಬೆಳಕು ನೀಡುವ ಪ್ರಯತ್ನದಲ್ಲಿ ತನ್ನನ್ನು ತಾನು ಉರಿಸಿಕೊಂಡರೂ ಅಂಧಕಾರವನ್ನು ಕಳೆದು ಶ್ರೀದೀಪವಾಗುತ್ತದೆ......

              ಬನ್ನಿ ಆಂತರಂಗಿಕವಾಗಿ ಕೊಳೆದು ನಾಶವಾಗುವ ಬದಲು ನಮ್ಮಲ್ಲಿ ನಾವೇ ಗಟ್ಟಿಯಾಗೋಣ ನಂಬಿದವರಿಗೆ ಬಲ ತುಂಬೋಣ. ನಂಬಿಕೆ ಎಂದರೇನು ಎಂದು ತಿಳಿಯದವರನ್ನು ನಂಬಿ ಪಾಠ ಕಲಿತ ನಾವು ಇನ್ನೊಬ್ಬರಿಗೆ ಶ್ರೀಗಂಧವಾಗೋಣ... ಶ್ರೀದೀಪವಾಗೋಣ... 
ಕುಂಬಳ ಕಾಯಿ ಕೊಳೆಯದಂತೆ ನಮಗೆ ಮತ್ತು ನಮ್ಮ ನಂಬಿದವರಿಗೆ ಆಪ್ತರಕ್ಷರಾಗೋಣ... ಈ ಬದಲಾವಣೆಗಾಗಿ ನಾವು ಯಾರನ್ನು ಕಾಯದೇ ನಾವೇ ಬದಲಾಗೋಣ. ಬದಲಾವಣೆ ನಮ್ಮ  ನಿಯಮವಾಗಲಿ. ಬದಲಾಗೋಣವೇ ಪ್ಲೀಸ್...! ಏನಂತೀರಿ.

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736

*********************************************Ads on article

Advertise in articles 1

advertising articles 2

Advertise under the article