-->
ಸಾಧನೆಯ ಹಾದಿಯಲ್ಲಿ - ಅನನ್ಯ ಮಲ್ಲೇಸ್ವಾಮಿ

ಸಾಧನೆಯ ಹಾದಿಯಲ್ಲಿ - ಅನನ್ಯ ಮಲ್ಲೇಸ್ವಾಮಿ

ಅನನ್ಯ ಮಲ್ಲೇಸ್ವಾಮಿ  10ನೇ ತರಗತಿ
D/o  ಶ್ರೀ ಮಲ್ಲೇಸ್ವಾಮಿ 
ಉಪನಿರ್ದೇಶಕರು ಸಾ.ಶಿ.ಇ. ದ.ಕ. ಜಿಲ್ಲೆ



   ಸಾಧನೆಯ ಹಾದಿಯಲ್ಲಿ : ಅನನ್ಯ ಮಲ್ಲೇಸ್ವಾಮಿ
    ಎಲ್ಲಾ ಮಕ್ಕಳಲ್ಲೂ ಸಾಧನೆಯ ಸಾಮರ್ಥ್ಯ ಖಂಡಿತಾ ಇದೆ. ಸರಿಯಾದ ಮಾರ್ಗದರ್ಶಕರು , ಬೆಂಬಲ ನೀಡುವ ಪೋಷಕರು , ಚಪ್ಪಾಳೆ ತಟ್ಟುವ ಕೈಗಳು ಇದ್ದಾಗ ವಿದ್ಯಾರ್ಥಿ ಯಾವುದೇ ಅಡೆತಡೆಗಳಿಲ್ಲದೆ ತನ್ನ ಗುರಿಯತ್ತ ಸಾಗುತ್ತಾನೆ. ಕಲಿಯುವ ಮನಸ್ಸು ಬೆಳೆಯುವ ಛಲ ದೃಢವಾಗಿದ್ದರೆ ಯಾರೂ ಕೂಡ ಸಾಧನೆಯ ಉತ್ತುಂಗವನ್ನು ತಲುಪಬಹುದು. ಪಠ್ಯದ ಚೌಕಟ್ಟನ್ನು ಮೀರಿ ಬೇಕಾಗುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಯೋಚನೆ ಮಾಡುವಂತಹ ವಿದ್ಯಾರ್ಥಿಗಳು ಅತ್ಯಂತ ವಿರಳ. ಇದ್ದರೂ ಹೆತ್ತವರ ಸರಿಯಾದ ಪ್ರೋತ್ಸಾಹ ಸಿಗುತ್ತದೆ ಎನ್ನುವುದು ಕನಸು. ಆದರೆ ಅನನ್ಯ ಹಾಗಲ್ಲ. ಪಠ್ಯದ ವಿಷಯಕ್ಕೆ ಮಾತ್ರ ಸೀಮಿತವಾಗದೆ ಕಲೆ, ಸಾಹಿತ್ಯ ,ಕ್ರೀಡೆ , ವಿಜ್ಞಾನದಲ್ಲಿ ಐಚ್ಛಿಕವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಮೂಲಕ ಕಲಿಕೆಯಲ್ಲೂ ಉನ್ನತ ಸಾಧನೆ ಮುಂದುವರಿಸಿದ್ದಾರೆ.

           ಅನನ್ಯ ಇವರು ಪ್ರಸ್ತುತ ಶಿಕ್ಷಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪ ನಿರ್ದೇಶಕರಾಗಿರುವ 
ಶ್ರೀ ಮಲ್ಲೇಸ್ವಾಮಿ ಮತ್ತು ಶ್ರೀಮತಿ ಪ್ರತಿಮಾ ಮಲ್ಲೇಸ್ವಾಮಿ ಇವರ ಪುತ್ರಿ. ಈಗ ಮೈಸೂರಿನ ಕ್ರಿಸ್ಟ್ 
 ದ ಕಿಂಗ್ ಕಾನ್ವೆಂಟ್ ಸ್ಕೂಲ್ ನಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ. ಪ್ರಾಥಮಿಕ ಶಾಲಾ ಜೀವನವನ್ನು ಆರಂಭಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆ.ವಿ.ಜಿ. ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ. ಬಾಲ್ಯದಲ್ಲಿಯೇ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿಯನ್ನು ತೋರುತ್ತಿದ್ದುದನ್ನು ಮನಗಂಡು ಸುಳ್ಯದ ಪ್ರಸನ್ನ ಐವರ್ನಾಡು ಇವರ ಹವ್ಯಾಸಿ ಚಿತ್ರಕಲಾ ಶಾಲೆಗೆ ಸೇರಿಸಿದರು. ಹೀಗೆ ಚಿತ್ರಕಲೆಯ ಬಗ್ಗೆ ವಿಶೇಷ ಒಲವನ್ನು ಮೂಡಿಸಿದ ಅನನ್ಯ ನಿರಂತರವಾಗಿ ಚಿತ್ರಕಲೆ ಮತ್ತು ಕ್ರಾಫ್ಟ್ ವಿಷಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು. 

       ಕ್ರೆಯಾನ್ಸ್ , ಪೆನ್ಸಿಲ್ ಶೇಡಿಂಗ್ , ವಾಟರ್ ಕಲರ್ ಇತ್ಯಾದಿ ಮಾಧ್ಯಮಗಳಲ್ಲಿ ವಿಶೇಷ ತರಬೇತಿಯನ್ನು ಪಡೆದು ಚಿತ್ರಕಲಾಕೃತಿಗಳನ್ನು ರಚಿಸಲಾರಂಭಿಸಿದರು. ತನ್ನ ಏಕಾಗ್ರತೆ ತಾಳ್ಮೆ ಸಂಯಮದ ವ್ಯಕ್ತಿತ್ವದೊಂದಿಗೆ ಚಿತ್ರಕಲೆ ಕರಗತವಾಗತೊಡಗಿತು. ಮನೆಯವರ ಸಕಾಲಿಕ ಪ್ರೋತ್ಸಾಹ ಮತ್ತು ಚಿತ್ರಕಲಾ ಶಿಕ್ಷಕರ ಸಂಪೂರ್ಣ ಮಾರ್ಗದರ್ಶನದಿಂದ ತನ್ನ ಪ್ರಯತ್ನವನ್ನು ಇಮ್ಮಡಿಗೊಳಿಸಿದರು. ಬಹುಮಾನ ಮುಖ್ಯ ಅಲ್ಲ ಭಾಗವಹಿಸುವಿಕೆ ಮುಖ್ಯ ಅನ್ನೋದನ್ನು ಪದೇ ಪದೇ ಒತ್ತಿ ಹೇಳುತ್ತಿದ್ದ ತಂದೆಯ - ತಾಯಿಯ ಮಾತನ್ನು ಅಕ್ಷರಶಃ ಪಾಲಿಸುತ್ತಿದ್ದಳು.

      ಅನನ್ಯ ಬಹುಮುಖ ವ್ಯಕ್ತಿತ್ವದ ಪ್ರತಿಭೆ. ನೃತ್ಯಕ್ಕೂ ಸೈ ಎನ್ನಿಸಿದ ಹುಡುಗಿ. ನೃತ್ಯದಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುವ ಈಕೆ ಹಲವಾರು ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮವನ್ನು ನೀಡಿದ್ದಾರೆ. ಸಾಂಘಿಕವಾಗಿ ಮತ್ತು ವೈಯಕ್ತಿಕವಾಗಿಯೂ ವೇದಿಕೆ ಹಂಚಿಕೊಂಡು ಪ್ರೇಕ್ಷಕರ ಮನಸೂರೆಗೊಂಡವರು. 

    ಗಿಟಾರ್ ಮತ್ತು ಪಿಯಾನೋ ನುಡಿಸುವುದರಲ್ಲಿಯೂ ವಿಶೇಷ ಆಸಕ್ತಿ ತೋರುತ್ತಿದ್ದಾರೆ ಈ ಬಾಲಕಿ. ಮೈಸೂರಿನ ತನ್ನ ಮನೆಯ ಹತ್ತಿರ ಗುರುಗಳಾದ ದಿಗಂತ್ ಅವರ ಬಳಿ ಗಿಟಾರ್ ನುಡಿಸುವುದನ್ನು ಅಭ್ಯಸಿಸುತ್ತಿದ್ದಾರೆ. ಗುರುಗಳಿಂದ ನಿಷ್ಠೆಯಿಂದ ಕಲಿತು ಪ್ರಾಮಾಣಿಕವಾಗಿ ಇಟ್ಟುಕೊಳ್ಳುವ ಗುಣದಿಂದಾಗಿ ಎಲ್ಲವನ್ನು ತಿಳಿದುಕೊಳ್ಳುವ ಪ್ರಕ್ರಿಯೆ ಇವರಲ್ಲಿ ಸುಲಲಿತವಾಗಿದೆ. ಯೂಟ್ಯೂಬ್ ಮೂಲಕ ಪಿಯಾನೊ ನುಡಿಸುವುದನ್ನು ಕಲಿಯುತ್ತಿದ್ದಾರೆ. ಯಾವುದೇ ವಿಷಯವನ್ನು ಕುತೂಹಲದಿಂದ ನೋಡೋ ಕಣ್ಣುಗಳ ಪ್ರಶಾಂತತೆ ಜೊತೆಗೆ ಕಲಿಯಬೇಕೆನ್ನುವ ಉತ್ಸಾಹ ಅದಮ್ಯವಾಗಿದೆ. ಇದು ವಿದ್ಯಾರ್ಥಿ ಎನಿಸಿಕೊಂಡವರಲ್ಲಿ ಇರಬೇಕಾದ ಮೂಲ ಗುಣವೂ ಹೌದು.

            ಇನ್ನೊಂದು ವಿಶೇಷವಾದ ಆಸಕ್ತಿ ಎಂದರೆ **ಭಾಷೆಯ ಕಲಿಕೆ** . ಕೊರಿಯಾ ದೇಶ ಭಾಷೆಯಾದ ಕೊರಿಯನ್ ಭಾಷೆಯನ್ನು ಅಭ್ಯಸಿಸುತ್ತಿದ್ದಾರೆ. ಕೊರಿಯನ್ ಸಂಗೀತವನ್ನು ತುಂಬಾ ಇಷ್ಟಪಡುತ್ತಿದ್ದ ಅನನ್ಯ ಯೂಟ್ಯೂಬ್ ಮೂಲಕ ಕೊರಿಯಾ ದೇಶದ ಸಂಸ್ಕೃತಿ ತುಂಬಾ ಆಪ್ತವಾಯಿತು. ಅದಾಗಲೇ ಫ್ರೆಂಚ್ ಭಾಷೆಯನ್ನು ಕಲಿತಿದ್ದ ಅನನ್ಯ ನಿಗೆ ಕೊರಿಯಾ ಭಾಷೆಯನ್ನು ಕಲಿಯುವುದು ಸುಲಲಿತವಾಯಿತು. ಯೂಟ್ಯೂಬ್ ಮೂಲಕ ಕೊರಿಯಾ ಭಾಷೆಯ 625 ಪದಗಳನ್ನು ಕಲಿತು ವಾಕ್ಯರಚನೆಯ ಅಭ್ಯಾಸದ ಜೊತೆಗೆ ಬರವಣಿಗೆಯನ್ನು ಕಲಿತುಕೊಂಡಳು. ಇದು ಯಾರ ಸಹಾಯವಿಲ್ಲದೆ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಆರಿಸಿಕೊಂಡ ಕಲಿಕೆಯಂದರೆ ತಪ್ಪಾಗಲಾರದು. 

             ಅನನ್ಯನಿಗೆ ವಿಜ್ಞಾನ ವಿಷಯದಲ್ಲಿಯೂ ಏನಾದರೊಂದು ಸಾಧಿಸಬೇಕೆಂಬ ಛಲ. ವಿಜ್ಞಾನ , ಗಣಿತ , ತಂತ್ರಜ್ಞಾನಕ್ಕೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹವ್ಯಾಸವಾಗಿ ಬೆಳೆದಿದೆ. 2016 ರಲ್ಲಿ ಗುಲ್ಬರ್ಗದಲ್ಲಿ  ನಡೆದ ರಾಷ್ಟ್ರ  ಮಟ್ಟದ " National Childrens Science Congress." ಇಲ್ಲಿ ಭಾಗವಹಿಸಿರುವುದು ಹೆಮ್ಮೆಯ ಸಂಗತಿ. 

     ಅನೇಕ ಕ್ರಾಫ್ಟ್ , ಚಿತ್ರ - ಕಲಾಕೃತಿಗಳ ಪ್ರದರ್ಶನದಲ್ಲೂ ಭಾಗವಹಿಸಿದ್ದಾರೆ. ಶಾಲೆಗಳಲ್ಲಿ ನಡೆಯುತ್ತಿದ್ದಂತಹ ಚಿತ್ರಕಲಾ ಪ್ರದರ್ಶನಗಳು ಇನ್ನಷ್ಟು ಉತ್ತೇಜನವನ್ನು ನೀಡುತ್ತಿದ್ದುದು ಇವರ ಕಲಾಚಟುವಟಿಕೆ ಇನ್ನಷ್ಟು ಪಕ್ವಗೊಳ್ಳಲು ಕಾರಣವಾಯಿತು. ಕುಶಾಲನಗರದ ಜಿ.ಎಂ.ಪಿ. ಸರಕಾರಿ ಶಾಲೆಯಲ್ಲಿ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ ನೋಡುಗರ ಪ್ರಶಂಸೆಯ ಮಾತುಗಳು ಹಿತವೆನಿಸಿ ಸಾಧನೆಯ ಹಾದಿ ಇನ್ನಷ್ಟು ತೆರೆಯಿತು.

     ವಿವಿಧ ಸ್ಪರ್ಧೆಯಲ್ಲಿ ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿರುವ ಅನನ್ಯ - ತಾಲ್ಲೂಕು ಮಟ್ಟ , ಜಿಲ್ಲಾ ಮಟ್ಟ , ಹಾಗೂ ಪ್ರತಿಭಾಕಾರಂಜಿಯ ಆಶುಭಾಷಣ ವಿಷಯದಲ್ಲಿ ರಾಜ್ಯಮಟ್ಟ ಕ್ಕೆ ಆಯ್ಕೆಯಾಗಿದ್ದರು. ಹೀಗೆ ತನ್ನ ಹಲವು ಆಯಾಮಗಳಲ್ಲಿ ಪ್ರತಿಭೆಯನ್ನು ವಿಸ್ತರಿಸಿ ಬೆಳೆಯುತ್ತಿದ್ದಾರೆ. ಶಿಕ್ಷಣದ ಜೊತೆ ಎಲ್ಲಾ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುತ್ತಾ ಬದುಕನ್ನು ಸುಂದರಗೊಳಿಸುವ ಮಹದಾಸೆಯನ್ನು ಇಟ್ಟಿರುವ ಅನನ್ಯನಿಗೆ ಕನಸು ಬೆಟ್ಟದಷ್ಟಿದೆ. ಸಾಧನೆಯ ಹಾದಿಯಲ್ಲಿ ಗುರಿಯತ್ತ ಸಾಗುತ್ತಿರುವ ಅನನ್ಯ ನಾಡಿಗೊಂದು ಪ್ರತಿಭಾಸಂಪನ್ನೆಯಾಗಿ ಮೂಡಿಬರಲಿ ಎಂಬುದು ಮಕ್ಕಳ ಜಗಲಿಯ ಹಾರೈಕೆ.

 ............................................... ಕೈರಂಗಳ್
                                                 9844820979







Ads on article

Advertise in articles 1

advertising articles 2

Advertise under the article