-->
ಬದಲಾಗೋಣವೇ ಪ್ಲೀಸ್..! ಸಂಚಿಕೆ-4

ಬದಲಾಗೋಣವೇ ಪ್ಲೀಸ್..! ಸಂಚಿಕೆ-4

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 

     ಬದಲಾಗೋಣವೇ ಪ್ಲೀಸ್....! ಸಂಚಿಕೆ - 4 

                  ಅಂಟಿದರೆ ಸುಖವಿಲ್ಲ ... 
            ಅಂಟದಿದ್ದರೆ ಸುಖವೇ ಎಲ್ಲಾ..!
*******************************************
            ಗುರುಪೂರ್ಣಿಮೆಯ ದಿನ ನನ್ನನ್ನು ತುಂಬಾ ಕಾಡಿದ ಗುರುವಾಣಿಯ ನೆನಪಾಯಿತು. ಅದನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಮನಸಾಯಿತು.
                 ಹೌದು ನನ್ನನ್ನು ತುಂಬಾ ಕಾಡಿದ ಅರ್ಥಪೂರ್ಣವಾದ ಗುರುವಾಣಿ ಇದು. ನೀರಿನ ಹನಿಯೊಂದು ಮಣ್ಣಿಗೆ ಬಿದ್ದ ಕ್ಷಣ ಅಂಟಿಕೊಂಡು ತನ್ನತನದ ಅಸ್ತಿತ್ವವನ್ನು ಕಳೆದುಕೊಂಡು ಮಾಯವಾಗುತ್ತದೆ. ಅದೇ ನೀರಿನ ಹನಿಯು ತಾವರೆ ಎಲೆಯ ಮೇಲೆ ಬಿದ್ದ ಕ್ಷಣ ಅಂಟಿಕೊಳ್ಳದೆ ಅತ್ತಿಂದಿತ್ತ ಸ್ವತಂತ್ರವಾಗಿ ಆರಾಮವಾಗಿ ಚಲಿಸುತ್ತಾ ತನ್ನ ಅಸ್ತಿತ್ವವನ್ನು ನಿರೂಪಿಸಿರುತ್ತದೆ. ನೀರ ಹನಿಯು ಮಣ್ಣು ಹಾಗೂ ಎಲೆಯ ಮೇಲೆ ಬಿದ್ದಾಗ ವರ್ತಿಸಿದಂತೆ ನಾವೂ ಕೂಡಾ ಕೆಲವೊಮ್ಮೆ ವರ್ತಿಸುತ್ತೇವೆ. ಬದುಕು ಅನಿತ್ಯ ಸಂಬಂಧಗಳ ಬಲೆಗೆ ಬಿದ್ದಾಗ ತೀರಾ ಅಂಟಿದರೆ ಅಸ್ತಿತ್ವ ಕಳೆದುಕೊಳ್ಳಬಹುದು. ಅಂಟದಿದ್ದರೆ ಅಸ್ತಿತ್ವ ಉಳಿಸಬಹುದು. ಸಂಕಟ ರಹಿತ ಸುಖಮಯ ಜೀವನ ನಡೆಸಬಹುದು.      
             ಇಲ್ಲಿ ನಾವು ಅಂಟುವುದು ಮತ್ತು ಅಂಟದಿರುವುದರ ವ್ಯತ್ಯಾಸವನ್ನು ಸ್ಪಷ್ಟವಾಗಿ ಗಮನಿಸಬೇಕಾಗುತ್ತದೆ. ಹಗ್ಗವನ್ನು ಹಾವೆಂದು ಭಾವಿಸಿದಾಗ ನಮಗಾಗುವ ಭಯ, ಹಿಂಸೆ ಹೇಳತೀರದು. ಅದೇ ರೀತಿ ಹಾವನ್ನು ಹಗ್ಗವೆಂದು ಭಾವಿಸಿ ವರ್ತಿಸಿದರೆ ನಮಗಾಗುವ ಅಪಾಯವನ್ನು ಊಹಿಸಲಾಗದು. ಹಾಗಾಗಿ ಹಾವು ಮತ್ತು ಹಗ್ಗವನ್ನು ಅದರದ್ದೆ ಸ್ಥಿತಿಯಲ್ಲಿ ನೋಡಿದರೆ ಯಾವುದೇ ಅಪಾಯವಿಲ್ಲ. ನಾವು ಬದುಕಿನಲ್ಲಿ ಅನಿತ್ಯವಾದದನ್ನು ನಿತ್ಯವೆಂದೂ ನಿತ್ಯವಾದುದನ್ನು ಅನಿತ್ಯವೆಂದು ತಿಳಿದಾಗ ಅದಕ್ಕೆ ಅಂಟಬೇಕಾಗುತ್ತದೆ. ಏಕೆಂದರೆ ನಾವು ಭ್ರಮೆಗೊಳಗಾಗುತ್ತೇವೆ. ಆಗ  ಸಂಕಟಗಳು ಹೆಚ್ಚಾಗಿ ಸುಖಮಯ ಬದುಕು ಇಲ್ಲದಾಗುವುದು. ಅದಕ್ಕೆ ಸುಖವನ್ನು ಸವಿಯಬೇಕಾದವರು ಸಂಕಟಗಳಿಗೆ ಅಂಟಬಾರದು. ಎಲೆಯ ಮೇಲಿನ ನೀರ ಹನಿಯಂತೆ ಸ್ವತಂತ್ರವಾಗಿ ತೇಲುತ್ತಿರಬೇಕು.  ಯಾವುದೇ ಕ್ಷಣದಲ್ಲಿ ಕಾರಣವಿಲ್ಲದೆ ಬರಬಹುದಾದ ಅಥವಾ ಬಿಟ್ಟು ಹೋಗಬಹುದಾದ  ಹಣ , ಅಂತಸ್ತು , ಅಧಿಕಾರ , ಬಾಹ್ಯ ಸೌಂದರ್ಯ , ಯೌವ್ವನ , ಆಸ್ತಿ , ರಕ್ತ ಸಂಬಂಧಗಳು ಇತ್ಯಾದಿ ಅನಿತ್ಯಗಳಿಗೆ ಅಂಟಿಕೊಂಡರೆ ಅದರ ತಾತ್ಕಾಲಿಕ ಸುಖವೆಂಬ ಭ್ರಮೆಯ ಆಗಸದಲ್ಲಿ ನಾವು ಸದಾ ಕಾಲ ಗಾಳಿಪಟವಾಗಿ ತೇಲಾಡುತ್ತಿರಬಹುದು. ಆದರೆ ಅನಿತ್ಯವು ದೂರವಾದಾಗ  ದಾರ ಕಡಿದ ಗಾಳಿಪಟದಂತೆ ಕ್ಷಣ ಮಾತ್ರದಲ್ಲೇ ಮುದುಡಬಹುದು. ಬದುಕು ಭಾರವಾಗಬಹುದು. ಭಾವ ಬಂಧನವಾಗಬಹುದು. ತೇಜ ನಿಸ್ತೇಜವಾಗಬಹುದು. ಯಾವುದೂ ಬೇಡವೆಂಬ ಶೂನ್ಯಭಾವ ಹುಟ್ಟಬಹುದು. ಹುಟ್ಟಿನಿಂದ ಜತನವಾಗಿ ಕಾಪಾಡಿಕೊಂಡ ನಮ್ಮತನ ಕಳೆದು ಹೋಗಬಹುದು. ಅದಕ್ಕೆ ಅನಿತ್ಯಗಳಿಗೆ ಅಂಟದೆ ಸರಳವಾಗಿ ಬದುಕಿದರೆ ಸದಾ ಸಂಕಟವಿಲ್ಲದೆ ನಿರಂತರ ಸುಖ ಹಾಗೂ ಸಂತೃಪ್ತ ಭಾವದಿಂದ ಬದುಕಬಹುದಾಗಿದೆ. ಅಧಿಕಾರಕ್ಕೆ ಅಂಟಿದವರು... ಆಸ್ತಿಗೆ ಅಂಟಿದವರು... ಸಂಬಂಧಗಳಿಗೆ ಅಂಟಿದವರು...     ಹಣಕ್ಕೆ ಅಂಟಿದವರು ...  ಹೀಗೆ ನಾನಾ ವಿಚಾರಕ್ಕೆಅಂಟಿದವರು ಅಲ್ಲಿಂದ ಹೊರಬರಲಾರದೆ ಚಡಪಡಿಸುವುದು... ಮತ್ತೆ ಮತ್ತೆ ಅದಕ್ಕೆ ಅಂಟಿಕೊಳ್ಳಲು ನಾನಾ ಕಸರತ್ತುಗಳನ್ನು ಮಾಡಿ ಅದರಲ್ಲೇ ಬದುಕನ್ನು ಕಳೆದುಕೊಳ್ಳುವುದನ್ನು ಕಾಣಬಹುದು. ಆದರೆ ನಿಜವಾದ ಸಾಧಕನಿಗೆ ಸಾಧನೆ ಅಂಟಾಗಬಾರದು.. ಅಂಟಾದರೆ ಅಲ್ಲೇ ನಿಲ್ಲಬೇಕಾಗುತ್ತದೆ. ಅಹಂಕಾರ ಬೆಳೆಯುತ್ತದೆ... ಜತೆಗೆ ಮತ್ಸರವೂ ಕೂಡಾ. ಅದರಿಂದ ಹೊಸತನದ ಸೃಷ್ಟಿಯೂ ನಿಲ್ಲುತ್ತದೆ. ಸಾಧಕನು ಸಾಧನೆಗೆ ಅಂಟದಿದ್ದರೆ ಮಾತ್ರ ಹೊಸತರ ಸೃಷ್ಟಿಯಾಗುತ್ತದೆ. ಹಾಗಾಗಿ ಅಂಟದಿರುವುದನ್ನೆ ನಾವು ಸಮತೋಲನ ಸ್ಥಿತಿ ಎನ್ನಬಹುದು. ಇವರೇ ನಿಜವಾದ ಗುರುಗಳು. ಆಕಾಶದಲ್ಲಿ ಬಿಲಿಯನ್ ಗಟ್ಟಲೆ ನಕ್ಷತ್ರಗಳಿದ್ದರೂ ನಮಗೆ ಹತ್ತಿರವಿರುವ ಸೂರ್ಯನೆಂಬ ನಕ್ಷತ್ರವೇ ದಾರಿ ದೀಪವಾದಂತೆ ಕೇವಲ ನೆಪಮಾತ್ರಕ್ಕೆ ಗುರುಗಳೆಂಬ ಹೆಸರಿನಲ್ಲಿರುವವರಿಗಿಂತ ಇಂಥಹ ಸಾಧಕರೇ ನಿಜವಾದ ಗುರುಗಳಾಗುತ್ತಾರೆ. ಇದರಿಂದಲೇ ಬುದ್ಧ, ವಿವೇಕಾನಂದರಂತಹ ಮಹಾತ್ಮರು ಐಷಾರಾಮಿ ಅನಿತ್ಯಗಳಿಗೆ ಅಂಟದೆ ಸದಾ ಸಾಧಕರಾಗಿ, ಗುರುಗಳಾಗಿ ಕಂಡುಬರುತ್ತಾರೆ. ಈ ಸ್ಥಿತಿ ತಲುಪಿದಾಗ ಸಮಸ್ಯೆಗಳಿಗೆ ನಾವು ದಾಸರಾಗದೆ ಸಮಸ್ಯೆಗಳೇ ನಮಗೆ ದಾಸರಾಗುವುದು. ಇದರಿಂದಾಗಿ  ನಮ್ಮ ದೇಹ - ಮನಸ್ಸು ಹಾಗೂ ಜತೆಗಿರುವ ನೂರಾರು ಜನರಿಗೂ ಸಂಕಟರಹಿತ ಬದುಕು ಸಿಗಬಹುದು. ಈ ಅಂಟದಿರುವ ಬದಲಾವಣೆಗಾಗಿ ಇನ್ನೊಬ್ಬರನ್ನು  ಕಾಯದೆ ನಾವೇ ಬದಲಾಗಬೇಕು.
ಬದಲಾವಣೆ ನಮ್ಮ ದಿನನಿತ್ಯದ ನಿಯಮವಾಗಲಿ. ಬದಲಾಗೋಣವೇ ಪ್ಲೀಸ್...!!  ಏನಂತಿರಿ...?
ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
*********************************************


Ads on article

Advertise in articles 1

advertising articles 2

Advertise under the article