-->
ಹಕ್ಕಿ ಕಥೆ - 4

ಹಕ್ಕಿ ಕಥೆ - 4

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

                             ಹಕ್ಕಿ ಕಥೆ - 4

ಒಂದು ಕಾಗೆ ಬಂದಿತು
ತಿಂಡಿಯನ್ನು ಕಂಡಿತು
ಕೂಗಿ ತನ್ನ ಬಳಗವನ್ನು
ಕಾ.. ಕಾ.. ಎಂದಿತು          
ಈ ಹಾಡನ್ನು ಬಹಳಷ್ಷು ಜನ ಕೇಳಿರ್ತೀರಿ... 

           ಕಾಗೆ ನಮಗೆಲ್ಲಾ ಅತ್ಯಂತ ಚಿರಪರಿಚಿತ ಹಕ್ಕಿ.. ಪಂಚತಂತ್ರದ ಕಥೆಗಳಲ್ಲಿ, ಮಕ್ಕಳ ಹಾಡುಗಳಲ್ಲಿ ಬಹಳಷ್ಟು ಕಡೆ ಸುಲಭವಾಗಿ ಸಿಕ್ಕಿಬಿಡುವ ಅತ್ಯಂತ ಆಪ್ತವಾದ ಹಕ್ಕಿ. ಅದಕ್ಕೇ ಇರಬೇಕು ನಾವು ನಮ್ಮ ಹಿರಿಯರಿಗೆ ಮಾಡುವ ಅಪರಕ್ರಿಯೆಗಳಲ್ಲಿ ಹಿಡಿ ಅನ್ನವನ್ನು ಕಾಗೆಗಳಿಗೆ ಇಡುವ ಕ್ರಮ ಇದೆ. 

           ಪಕ್ಷಿಗಳ ಬಗ್ಗೆ ಅಧ್ಯಯನ ಮಾಡುವ ವಿಜ್ಞಾನಿ ಒಬ್ರು ಸ್ವಾರಸ್ಯಕರ ಘಟನೆ ಒಂದನ್ನ ಹೇಳಿದ್ದು ನೆನಪಾಗ್ತದೆ. ಕಾಗೆ ಗೂಡುಕಟ್ಟಲು ಮರಗಳನ್ನ ಆಶ್ರಯಿಸುತ್ತದೆ. ಮರದಮೇಲೆ ಹಲವಾರು ಗಟ್ಟಿ ಒಣಕಡ್ಡಿಗಳನ್ನು ತಂದು ಜೋಡಿಸಿ ಬುಟ್ಟಿಯಾಕಾರದ ಗೂಡನ್ನು ಕಟ್ಟಿ, ಕೋಳಿಮೊಟ್ಟೆಗಿಂತ ತುಸು ಚಿಕ್ಕಗಾತ್ರದ ಬಿಳಿ ಬಣ್ಣದ ಮೊಟ್ಟೆಗಳನ್ನು ಇಟ್ಟು ಮರಿಮಾಡ್ತದೆ. ತಂದೆ ತಾಯಿ ಎರಡೂ ಬಹಳ ಜತನದಿಂದ ಮರಿಗಳನ್ನು ಕಾಪಾಡುತ್ತವೆ. ಗೂಡಿನಹತ್ರ ಯಾರನ್ನೂ ಬರೋಕೆ ಬಿಡೋದೇ ಇಲ್ಲ. ಬೇಟೆಗಾರ ಹದ್ದುಗಳು ಬಂದರೂ ಹೆದರದೆ ಹಿಮ್ಮೆಟ್ಟಿಸುತ್ತವೆ, ಒಮ್ಮೊಮ್ಮೆ ಅಟ್ಟಿಸಿಕೊಂಡೂ ಹೋಗುತ್ತವೆ.

        ಹೀಗೆ ಮರಿಗಳು ಬೆಳೆದು ರೆಕ್ಕೆ ಬಲಿತು ಹಾರಿ ಹೋದ ಮೇಲೆ ಗೂಡು ಖಾಲಿ ಆಯ್ತು. ಹಕ್ಕಿಗಳಿಗೆ ಗೂಡು ಮರಿಗಳನ್ನು ಬೆಳೆಸುವ NURSING HOME ಮಾತ್ರ, ಮರಿಗಳು ಬೆಳೆದ ಮೇಲೆ ಅವುಗಳಿಗೆ ಗೂಡಿನ ಅಗತ್ಯ ಇಲ್ಲ, ಅವು ಗೂಡನ್ನು ನಮ್ಮತರಹ ಪಕ್ಕಾ ಮನೆಯಾಗಿ, ಖಾಯಂ ವಿಳಾಸವಾಗಿ ಬಳಸೋದಿಲ್ಲ. ಹೀಗಿರುವ ಆ ಗೂಡು ನಮ್ಮ Scientist ಸಾಹೇಬರ ಗಮನ ಸೆಳೀತಂತೆ. ಆ ಗೂಡನ್ನು Binocular ನಿಂದ ನೋಡುತ್ತಿದ್ದ ಅವರಿಗೆ ಆಶ್ಚರ್ಯ ಕಾದಿತ್ತು. ಆಶ್ಚರ್ಯವನ್ನ confirm ಮಾಡ್ಕೊಳ್ಲಿಕ್ಕೆ ಮರಹತ್ತಿ ಗೂಡನ್ನ ಪರೀಕ್ಷೆ ಮಾಡಿದ್ರು. ನಗರದ ಉದ್ಯಾನದ ಮರದಲ್ಲಿದ್ದ ಗೂಡನ್ನು ಕಟ್ಲಿಕ್ಕೆ ಆ ಕಾಗೆ ಕಬ್ಬಿಣದ ಸರಳು, ತಂತಿ, ಪ್ಲಾಸ್ಟಿಕ್ ದಾರ ಎಲ್ಲವನ್ನೂ ಬಳಸಿತ್ತಂತೆ. ಇದು ಕಾಗೆಯ ಬುದ್ದಿವಂತಿಕೆ ಮತ್ತು ಪರಿಸರದ ಬದಲಾವಣೆಗೆ ಒಗ್ಗಿಕೊಳ್ಳುವ ಅದರ ಗುಣಕ್ಕೆ ಒಳ್ಳೆ ನಿದರ್ಶನ. 

          ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವಲ್ಲಿ ಕಾಗೆಯ ಪಾತ್ರ ಬಹಳ ಮಹತ್ವದ್ದು. ಇದಕ್ಕೆ ಸಂಬಂಧಪಟ್ಟ ಹಾಗೆ ಒಂದು ಘಟನೆ ನೆನಪಾಗುತ್ತೆ. ನಾನೊಂದ್ಸರಿ ಟ್ರೈನ್ ಜರ್ನಿ ಮಾಡ್ತಾ ಇದ್ದೆ. ಸ್ಟೇಷನ್ ನಲ್ಲಿ ಟ್ರೈನ್ ನಿಂತ್ಕೊಂಡಿತು. ಬೆಳಗ್ಗಿನ ತಿಂಡಿ ತಿನ್ನೋ ಸಮಯ, ತಿಂಡಿ ಪಾರ್ಸೆಲ್ ತಗೊಂಡು ತಿನ್ಲಿಕ್ಕೆ ಶುರು ಮಾಡಿದ್ವಿ. ಹೊಟ್ಟೆತುಂಬಾ ತಿಂಡಿ ತಿಂದು, ಕೆಲವರು ತಿಂಡಿ ಪೊಟ್ಣಣ ಕಿಟಕಿಯಿಂದ ಆಚೆ ಎಸೆದು ಬಿಟ್ಟ್ರು. ಇನ್ನೊಂದು ಟ್ರೈನ್ ಕ್ರಾಸಿಂಗ್ ಕೊಡೋಕ್ಕೆ ನಮ್ಮ ಟ್ರೈನ್ ಕಾಯ್ತಾ ಇತ್ತು. ಪಕ್ಕದ ಟ್ರಾಕ್ ಮೇಲೆ ತಿಂಡಿ ಪ್ಯಾಕೆಟ್ ಗಳು ಬಿದ್ದಿದ್ದವು. ಕಾಗೆಗಳು ಒಂದೊಂದಾಗಿ ಬಂದು ಪ್ಯಾಕೆಟ್ ಗಳನ್ನು ಎತ್ತಿಕೊಂಡು ಹೋದವು. ಹತ್ತೇ ನಿಮಿಷದಲ್ಲಿ ಪಕ್ಕದ ಟ್ರಾಕ್ ಕ್ಲೀನ್ ಆಗಿತ್ತು. 

         ಅದೇರೀತಿ ರಸ್ತೆಮೇಲೆ ವಾಹನದ ಚಕ್ರಕ್ಕೆ ಸಿಕ್ಕಿ ಹಲವಾರು ಪ್ರಾಣಿಗಳು ಸಾಯೋದು ಮಾಮೂಲಿ. ನಮ್ಮ ಕಾಗೆರಾಯ ಅಲ್ಲೂ ಹಾಜರ್. Postmartam ಮಾಡಿ ಪರಿಸರ ಸ್ವಚ್ಛ ಮಾಡೋದ್ರಲ್ಲಿ ಎತ್ತಿದ ಕೈ

ಇಂಗ್ಲೀಷ್ ಹೆಸರು: House Crow
ವೈಜ್ಞಾನಿಕ ಹೆಸರು: (Corvus splendens) 
ಇಂತಹಾ ಪ್ರಜ್ಞಾವಂತ ಕಾಗೆಯ ಬಗ್ಗೆ ನಿಮ್ಮ ಅನುಭವಗಳು ಇದ್ರೆ ಅದನ್ನ ನಮ್ಮಜೊತೆಗೂ ಹಂಚಿಕೊಳ್ಳಿ ... 
ಆಗಬಹುದಲ್ಲ...

................................ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

************************************************


Ads on article

Advertise in articles 1

advertising articles 2

Advertise under the article