-->
ಬದಲಾಗೋಣವೇ ಪ್ಲೀಸ್....! ಸಂಚಿಕೆ -3

ಬದಲಾಗೋಣವೇ ಪ್ಲೀಸ್....! ಸಂಚಿಕೆ -3

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 


       ಬದಲಾಗೋಣವೇ ಪ್ಲೀಸ್....! ಸಂಚಿಕೆ -
    **************************************   
      ಕಳ್ಳತನ ಮಾಡಿಯೋ ಮಾಡದೆಯೋ ವ್ಯಕ್ತಿಯೊಬ್ಬ ಕಳ್ಳನ ಹಣೆಪಟ್ಟಿ ಧರಿಸಿ ಜೈಲು ಸೇರಿರುತ್ತಾನೆ. ಬಿಡುಗಡೆಗೊಂಡು ನೆಮ್ಮದಿಯ ಜೀವನ ಸಾಗಿಸಬೇಕೆಂದುಕೊಂಡರೂ ತನ್ನವರು, ಸಮಾಜ ಅವನಿಗೆ ಮತ್ತೆ ಮತ್ತೆ ಕಳ್ಳನ ಹಣೆಪಟ್ಟಿ ಕಟ್ಟುತ್ತಾ ಆತನ ಆತ್ಮವಿಶ್ವಾಸ ಹಾಗೂ ಭವಿಷ್ಯವನ್ನೇ ನಾಶ ಮಾಡುವ ಪರಿಸ್ಥಿತಿ ಬಂದಿದೆ. ಬದಲಾವಣೆಯ ಹಾದಿಯಲ್ಲಿ ಬೆಳಕ ಕಾಣಲು ಹೊರಟ ವ್ಯಕ್ತಿಗೆ ಪರಿಸ್ಥಿತಿ ಮತ್ತು ಸಮಾಜದಿಂದ ಬದಲಾವಣೆ ಸಾಧ್ಯವೇ...? ಬದಲಾವಣೆಯ ಪಥ ಹೇಗೆ...? ಎಂದು ನನ್ನ ಆತ್ಮೀಯ ಗೆಳೆಯನೋರ್ವ ಸಲಹೆಯನ್ನು ಕೇಳಿದ. ತುಂಬಾ ಸಂಕೀರ್ಣ ಪ್ರಶ್ನೆಯಾದ ಕಾರಣ ಆಲೋಚಿಸಿದಾಗ ಘಟನೆಯೊಂದು ನೆನಪಿಗೆ ಬಂತು.
       ಓರ್ವ 40 ವರ್ಷ ಪ್ರಾಯದ ಕುರುಚಲು ಗಡ್ಡ ಬಿಟ್ಟ ನೋಡಲು ಉತ್ಸಾಹಿಯಂತಿರುವ ಮಧ್ಯ ವಯಸ್ಕನೋರ್ವ ವಿಶ್ರಾಂತಿಗಾಗಿ ಒಂದು ಮರದ ಕೆಳಗೆ ಮಲಗಿದ್ದನು. ಅದೇ ದಾರಿಯಲ್ಲಿ ದಾರಿಗರಾಗಿ ಬಂದ ಅನೇಕರಲ್ಲಿ ಕಳ್ಳನೋರ್ವ.... "ಇವನ್ಯಾರು ನನ್ನಂತೆ ಕಳ್ಳನಿರಬೇಕು . ಈಗ ನಿದ್ದೆ ಮಾಡಿದಂತೆ ನಟಿಸಿ ಕಳ್ಳತನಕ್ಕೆ ಪ್ಲಾನ್ ಮಾಡುತ್ತಿರಬೇಕು" ಅಂದುಕೊಂಡು ಮುನ್ನಡೆದ. ಅನಾಥನೋರ್ವ... "ಇವನ್ಯಾರು ಅನಾಥ... ಶಕ್ತಿಹೀನನಾಗಿ ಬಿದ್ದಿದ್ದಾನೆ. ಏನಾದರೂ ಸಹಾಯ ಮಾಡೋಣ" ಎಂದುಕೊಂಡು 200 ರೂಪಾಯಿ ನೋಟನ್ನು ಕಿಸೆಗೆ ಹಾಕಿ ಮುನ್ನಡೆದ. ಕುಡುಕನೊರ್ವ..... "ಇವನ್ಯಾರು ಕುಡುಕ. ಕಂಠಪೂರ್ತಿ ಕುಡಿದು ನಡೆಯಲಾರದೇ ಬಿದ್ದಿದ್ದಾನೆ" ಎಂದು ಗ್ರಹಿಸಿದ. ನಿರುದ್ಯೋಗಿಯೋರ್ವ..... "ನನ್ನಂತೆ ಕೆಲಸ ಇಲ್ಲದೆ ತಲೆಬಿಸಿಯಲ್ಲಿ ಮಲಗಿರಬೇಕು." ಎಂದು ಆಲೋಚಿಸಿದ. ಹೀಗೆ ತಮ್ಮದೇ ಮೂಗಿನ ನೇರಕ್ಕೆ ಅರ್ಥೈಸಿಕೊಂಡು ಹಲವರು ಹೋಗುತ್ತಾರೆ. ಮಲಗಿದ್ದ ವ್ಯಕ್ತಿ ಇದನ್ನೆಲ್ಲ ಕೇಳಿಸಿಕೊಂಡಿದ್ದನಾದರೂ ತನ್ನ ಗುರಿ ವಿಶ್ರಾಂತಿಯಾಗಿರುವ ಕಾರಣ ಪ್ರತಿಕ್ರಿಯೆ ನೀಡದೆ ಆಯಾಸ ಸರಿದ ಮೇಲೆ ಎದ್ದು ಕೊಂಡು ನಿಶ್ಚಿಂತೆಯಿಂದ ಮುಂದೆ ಹೋದ. ಮಲಗಿದವ ಕಳ್ಳನೇ.. ಅನಾಥನೇ.. ಕುಡುಕನೇ.. ನಿರುದ್ಯೋಗಿಯೇ.... ಯಾರಿಗೂ ಗೊತ್ತಿಲ್ಲ. ಅವರವರು ಅವರವರ ಭಾವಕ್ಕೆ ತಕ್ಕ ಆಪಾದನೆ, ಹಣೆ ಪಟ್ಟಿ ಕಟ್ಟಿ ಹೋದರು. ಮಲಗಿದ ವ್ಯಕ್ತಿಯನ್ನು ನಿಜವಾಗಿ ಅರ್ಥೈಸಿದವರು ಯಾರೂ ಇಲ್ಲ. ಮಲಗಿದ ವ್ಯಕ್ತಿ ಇವರೆಲ್ಲರ ಆಪಾದನೆಗಳನ್ನು ಕೇಳಿಯೋ ಕೇಳದಂತೆ ವರ್ತಿಸಿದರಿಂದ ನಿಶ್ಚಿಂತನಾಗಿ ಸಾಗಿದ. ಗುರಿ ತಲುಪಿದ. ಆತ ತನ್ನದಲ್ಲದ ಹಣೆಪಟ್ಟಿಗೆ ಸಮರ್ಥನೆ ಕೊಡುವುದರಲ್ಲೇ ಕಾಲಕಳೆಯುತ್ತಿದ್ದರೆ ಗುರಿ ತಲುಪದೆ ದಾರಿಮಧ್ಯೆ ಉಳಿಯುತ್ತಿದ್ದ.
          ವಿಶ್ರಾಂತಿಯ ಉದ್ದೇಶ ಮರೆತು ಚಿಂತೆಯ ದಾಸನಾಗುತ್ತಿದ್ದ. ತನ್ನದಲ್ಲದ ತಪ್ಪಿಗೆ ಸುಮ್ಮನೆ ಸುಖಮಯ ಜೀವನ ಕಳೆದುಕೊಳ್ಳುತ್ತಿದ್ದ.
ಇಲ್ಲಿ ಮಲಗಿರುವ ವ್ಯಕ್ತಿಯ ಸ್ಥಾನದಲ್ಲಿ ನಾವಿರುತ್ತಿದ್ದರೆ ಹೇಗೆ ವರ್ತಿಸುತ್ತಿದ್ದೆವು....? ಅದರ ಮೇಲೆ ನಮ್ಮ ಚಿಂತೆ... ನಿಶ್ಚಿಂತೆ... ಬಿಡುಗಡೆ ಇರುತ್ತದೆ.
        ಯಾರೋ ಕಳ್ಳನ ಹಣೆಪಟ್ಟಿ ಹಚ್ಚಿದ್ದನ್ನು ನಾವು ಹೇಗೆ ಸ್ವೀಕರಿಸಿರುತ್ತೇವೆ...? ಎಂಬುದರ ಮೇಲೆ ನಮ್ಮ ಬದುಕು ಇರುತ್ತದೆ. ಹಣೆಪಟ್ಟಿ ಕಟ್ಟುವ ಚಟದವರನ್ನು ನಾವು ನಿಲ್ಲಿಸಲಾಗುವುದಿಲ್ಲ. ಅವರು ಮಂಗನ ಬಾಲಕ್ಕೆ ಬೆಂಕಿ ಹಚ್ಚಿ ಮನರಂಜನೆ ಪಡೆಯುವ ವಿಕೃತ ಮನದವರು. ಹಾಗಂತ ಅವರು ಹಣೆಪಟ್ಟಿ ಕಟ್ಟಿದ ಕೂಡಲೇ ನಾವು ಕಳ್ಳರಾಗುವುದಿಲ್ಲ. ಹಾಗಾಗಿ ಪರಿಸ್ಥಿತಿಯಿಂದ ಹೊರಬರಬೇಕಾದರೆ ಮಲಗಿದ ವ್ಯಕ್ತಿಯಂತೆ ತನ್ನ ಉದ್ದೇಶ ಸಾಧನೆಯತ್ತ ಲಕ್ಷ್ಯವಹಿಸಿ ಸುಮ್ಮನಿರಬೇಕು. ಆಗ ಉದ್ದೇಶ ಈಡೇರಿ ಆತ್ಮವಿಶ್ವಾಸ - ಭವಿಷ್ಯ ಉಜ್ವಲವಾಗುತ್ತದೆ. ಕತ್ತಲ ದಾರಿ ಸರಿದು ಬೆಳಕಿನ ಕಿರಣ ಮೂಡಲಾರಂಭಿಸುತ್ತದೆ.
         ನಮ್ಮಲ್ಲಿ ಎರಡು ರೀತಿ ಬದುಕುವವರಿದ್ದಾರೆ.
ಒಂದನೆ ವರ್ಗದವರು ಪ್ರಕೃತಿ ನಿಯಮದಂತೆ ಸಹಜವಾಗಿ ಬದುಕುವವರು. ಇವರು ಯಾವಾಗಲೂ ನಗು-ನಗುತ್ತಾ ಖುಷಿಯಿಂದ ಯಾವುದಕ್ಕೂ ವ್ಯರ್ಥವಾಗಿ ಚಿಂತಿಸದೆ ಲೈಫ್ ಇಸ್ ಬ್ಯುಟಿಫುಲ್... ಲೈಫ್ ಇಸ್ ಟೆನ್ಸನ್ ಲೆಸ್ . Be happy... ನೋ ಬಿ.ಪಿ ಎಂದುಕೊಂಡು ಆರಾಮ್....ಸೇ ಇರುವವರು. ಇವರಿಗೂ ಸಮಸ್ಯೆಗಳು... ಸಂಕಟಗಳು.... ಆಗಾಗ ಬರುತ್ತಿರುತ್ತದೆ. ಆದರೆ ಅಂಟದೇ ಬದುಕುತ್ತಾರೆ. ಇವರ ಸಂಖ್ಯೆ ತೀರಾ ಕಡಿಮೆ.
        ಇನ್ನೊಂದು ವರ್ಗದವರು ಮಾನವ ನಿರ್ಮಿತ ನಿಯಮಗಳಿಗೆ ಕಟ್ಟುಬಿದ್ದು ಕೃತಕ ಸೌಲಭ್ಯ ಸುಖಗಳಿಗೆ ದಾಸರಾಗಿ ಜೀವನ ನಡೆಸುವವರು. ಇವರು ಯಾವಾಗಲೂ ಪ್ರತಿಯೊಂದನ್ನು ಕಾನೂನು ಬದ್ದವಾಗಿ ಶಿಸ್ತುಬದ್ದವಾಗಿ... ಚೌಕಟ್ಟಿನೊಳಗೆ ನೋಡುವವರು. ಇವರಿಗೆ ಅಂಗಿಯಲ್ಲಿ ಒಂದು ಸಣ್ಣ ಗುರುತಿಸಲಾಗದ ಕಳೆ ಇದ್ದರೂ ಕೋಪಿಸುವವರು... ಬಡಿಸುವಾಗ ಊಟದ ತಟ್ಟೆಯಲ್ಲಿ ಒಂದು ಅಗುಳ ಅನ್ನ ಕೆಳಕ್ಕೆ ಬಿದ್ದರೂ ರೇಗಾಡುವವರು. ಇವರಿಗೆ ಗಂಡ ಅಥವಾ ಹೆಂಡತಿ , ಮಕ್ಕಳು , ಕೆಲಸದವರು , ಸಾರ್ವಜನಿಕರರು.. ಹೀಗೆ ಎಲ್ಲರೂ ತನ್ನ ಕಲ್ಪನೆಯ ಮೂಗಿನ ನೇರಕ್ಕೆ ಹೀಗೆಯೇ ಇರಬೇಕು ಎಂಬ ಹಟ. ಇವರು ಎಲ್ಲದಕ್ಕೂ ಚಿಂತಿಸಿ ಲೈಫ್ ಇಸ್ ಟೆನ್ಸ್ ನ್ ಪುಲ್... ಲೈಪ್ ಇಸ್ ಪುಲ್ ಬ್ಯುಸಿ. ಎಂದು ತಾನು ಸುಖವಾಗಿ ಇರದೆ ತನ್ನವರನ್ನು ಸುಖವಾಗಿರಲು ಬಿಡದೆ ಬದುಕುವವರು. ಕೊನೆಗೆ ಏನು ಸಾಧಿಸಲಾಗದೆ ಚಡಪಡಿಸುವವರು. 
       ಈಗ ಆಯ್ಕೆ ನಮ್ಮದು. ಪ್ರಕೃತಿ ಸಹಜ ಬದುಕೇ... ಮಾನವ ನಿರ್ಮಿತ ಬದುಕೇ.... ಎಂಬುದು. ನಮ್ಮ ಬದುಕು ನಮ್ಮದೇ. ಅದನ್ನು ಇನ್ನೊಬ್ಬರ ಕೈಗೆ ಕೊಡಬಾರದು.. ಕೊಟ್ಟರೆ ಸದಾ ಸ್ವತಂತ್ರರಹಿತ.. ಚಿಂತನೆ ರಹಿತ.... ಸಾರ ತೆಗೆದ ಕಬ್ಬಿನ ನಾರಿನಂತಾಗುವುದು. 
       ಕೋಶ ತೆರೆದು ಬಂದರಷ್ಟೇ ಚಿಟ್ಟೆಗೊಂದು ಬದುಕಿದೆ. ಅಜ್ಞಾನದ ಕೋಶ ತೆರೆದು ಇನ್ನೊಬ್ಬರ ಸ್ವಾತಂತ್ರ್ಯದ ಬದುಕನ್ನು ಗೌರವಿಸಿ ನಮ್ಮದೇ ಶೈಲಿಯಲ್ಲಿ ಬದುಕಬೇಕು. ಬದುಕು ಹೀಗೆ ಇರಬೇಕು ಎಂದು ಚಿಂತಿಸಿದರೆ ರೋಗಿ. ಬದುಕು ಇರುವಂತೆ ಸ್ವೀಕರಿಸಿದರೆ ನಿರೋಗಿ. ಬದಲಾವಣೆಗೆ ಯಾರನ್ನು ಕಾಯದೆ ನಾವೇ ಬದಲಾಗೋಣ. ಬದುಕಿನ ಬದಲಾವಣೆಗಾಗಿ ಬದಲಾಗೋಣವೇ ಪ್ಲೀಸ್...! ಏನಂತೀರಿ.

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
*********************************************

Ads on article

Advertise in articles 1

advertising articles 2

Advertise under the article