ನಾದಣ್ಣನ ಕಥೆ ಪೂರ್ಣಗೊಳಿಸಿ....1
ಚೇಟಾಳ ಹಾವು ಪುರಾಣ (ಭಾಗ 1)
••••••••••••••••••••••••••••••••••••••
ಬೇಲಿಯ ತಂತಿಯನ್ನು ಬಿಗಿಯಾಗಿ ಕಟ್ಟುವ ಕೆಲಸದಲ್ಲಿ ಮುಳುಗಿದ್ದರು ಕೃಷ್ಣಣ್ಣ. ಒಮ್ಮೆಲೇ ಬೆಚ್ಚುತ್ತಾ "ಅಯ್ಯಮ್ಮ, ಪರದೇಸಿ ಹಾವು " ಎಂದು ಗಡಗಡ ನಡುಗುತ್ತಾ ನಿಂತರು. ಅವರು ಭಯದಿಂದ ಬೆವರಿದ್ದರು. ಅವರ ಕಣ್ಣಿನ ಹುಬ್ಬುಗಳು ಎತ್ತರಕ್ಕೆ ಹಾರಿದ್ದವು. ಅವರ ಉಸಿರಿನ ಸದ್ದು ಪಕ್ಕದ ಮನೆಯ ಚೇಟಾ ಗೆ ಕೇಳಿತು. ಅವಳು ಹೊರಬಂದು "ಏನಾಯ್ತು ಅಂಕಲ್?" ಎಂದು ಪುಟುಪುಟನೆ ಹತ್ತಿರ ಬಂದಳು.
ಈ ಚೇಟಾ "ಭಯ ಎಂದರೇನು" ಎಂದು ತಿಳಿಯದೇ ಹುಟ್ಟಿ ಬೆಳೆದವಳು. ಮುಂದಿನ ಆಗಸ್ಟ್ 30ಕ್ಕೆ ಅವಳಿಗೆ 7ವರ್ಷ ತುಂಬುತ್ತದೆ. ಶಾಲೆಯಲ್ಲಿ ಬಹಳ ತುಂಟಿ. ಆಗಾಗ ಬಟ್ಟೆ ಬಾಯಿಗೆ ಹಾಕುವುದು ಅವಳ ಅಭ್ಯಾಸ. ಅವಳ ಅಂಗಿಯ ಎದುರಿನ ಬಟನ್, ಕಾಲರ್ ಎಲ್ಲವೂ ಇಲಿ ತಿಂದ ಹಾಗೆ ಸದಾ ತೂತು ತೂತು.
ಇಂತಹ ತುಂಟಿ ಚೇಟಾ, ಕೃಷ್ಣಣ್ಣ ನ ಹತ್ತಿರ ಬಂದವಳೇ "ಅಯ್ಯ್, ಹಾವು.. ಎಷ್ಟು ಚಂದ... " ಅನ್ನುತ್ತಾ ಹಿಡಿದೇ ಬಿಡುತ್ತೇನೆ ಎಂಬಂತೆ ಹಿಂದೆ ಹೋಗಿಬಿಟ್ಟಳು. ಕೃಷ್ಣಣ್ಣ ಭಯದಿಂದ ನಡುಗುತ್ತಾ ಜೋರು ದನಿಯಲ್ಲಿ "ಹೋಗ್ಬೇಡ, ಹಾವು ಕಚ್ಚುತ್ತದೆ " ಅನ್ನುತ್ತಾ ಅವಳನ್ನು ಎತ್ತಿ ವಾಪಾಸ್ ಕರೆದುಕೊಂಡು ಬಂದರು. ಹಾವು ಕೂಡ ಹಾಗೆ, ಮಿರಿಮಿರಿ ಮಿಂಚುವ ಚಿನ್ನದ ಹಾಗೆ ಹಳದಿ ಬಣ್ಣದಿಂದ ರೈಸುತ್ತಿತ್ತು. ಅದರ ಬಾಲ ಮೂಲಂಗಿ ತುದಿಯ ಹಾಗೆ ಮೊಂಡು ಆಗಿತ್ತು. ಅದು ಸುಮಾರು ಆರರಿಂದ ಏಳು ಅಡಿ ಉದ್ದವಿತ್ತು. ಮುಸುಡಿ ನಾಯಿ ಮರಿಯ ಹಾಗೆ ಮುದ್ದು ಮುದ್ದಾಗಿತ್ತು. ಕತ್ತಿನ ಸುತ್ತಲೂ ಇದ್ದ ಯೂ ಮಾರ್ಕ್ ಮಾತ್ರ ಅದು ನಾಗರಹಾವು ಎಂಬುದರ ಟ್ರೇಡ್ ಮಾರ್ಕ್ ಥರಾ ಇತ್ತು.
ಇಂತಹ ಮುದ್ದು ನಾಗರಹಾವು ಹಾಗೆ ಮೊಂಡು ಬಾಲ ಆಚೀಚೆ ಸುತ್ತಿಸುತ್ತಾ, ಆಗಾಗ ನಾಲಗೆ ಹೊರಗೆ ಚಾಚುತ್ತ ಬೇಲಿಯ ಇನ್ನೊಂದು ಕಡೆಗೆ ಹೊರಟಿತ್ತು. ಕೃಷ್ಣಣ್ಣನ ಮಾತು ಕೇಳಿ ಹಾವಿಗೆ ಸ್ವಲ್ಪ ಬೇಸರವೂ, ಕಿರಿಕಿರಿಯೂ ಆಗಿತ್ತು. ಯಾಕೆಂದರೆ ಹಾವು ಅದರ ಹೊಟ್ಟೆಯ ಹಸಿವಿಗೆ ಆಹಾರ ಹುಡುಕುತ್ತಾ ಹೊರಟಿತ್ತು. ಅಲ್ಲದೇ ಹಾವಿನ ಹೊಟ್ಟೆಯಲ್ಲಿ ಮೊಟ್ಟೆ ಕೂಡ ಬೆಳೆದಿತ್ತು.
ಹಾವು ಮನಸಲ್ಲೇ ಬಯ್ಕೊಂಡು ತೆವಳುತಿತ್ತು, " ನನ್ ಹೊಟ್ಟೆಲೂ ಮಕ್ಕಳಿದ್ದಾರೆ. ಇಷ್ಟಿದ್ದು ಕೂಡ ಆ ಮಗುವಿಗೆ ಕಚ್ಹೋಕೆ ನಾನೇನು ಮನುಷ್ಯ ಪ್ರಾಣಿನಾ? " ಅನ್ನುತ್ತಾ ಪೊದೆಗಳ ರಾಶಿಯಲ್ಲಿ ತೂರಿಕೊಂಡು ಸಾಗಿತು. ಅಲ್ಲೇ ದೂರದಲ್ಲಿ ನೋಡ್ತಾ ನಿಂತಿದ್ದ ಚೇಟಾ ಕೈತಟ್ಟಿಕೊಂಡು ನಗುತ್ತಿದ್ದಳು. ಹಾವಿನ ಮಾತು ಅವಳಿಗೆ ಕೇಳಿಸಿತೋ ಏನೋ!.
ಬೇಲಿಯ ಆಚೆಗಿನ ಇನ್ನೊಂದು ಮನೆಯ ಅಂಗಳದಲ್ಲಿ ಕಿಚಪಿಚ ಅನ್ನುತಾ ಆಡುತ್ತ, ಕುಣಿಯುತ, ಓಡುತ್ತಿದ್ದ ಮರಿಗಳನ್ನೆಲ್ಲ ತಾಯಿ ಕೋಳಿ ಕರೆದು ಗುಂಪು ಸೇರಿಸಿತು. ಎಲ್ಲಾ ಮರಿಗಳು ಪಿಳಿಪಿಳಿ ಕಣ್ಣು ಬಿಡುತ್ತ ತಾಯಿಯನ್ನು ಸುತ್ತುವರೆದವು. ಹಾಗೆ ಒಂದು ಆಪ್ತವಾದ ಮತ್ತು ಗುಪ್ತವಾದ ಸಭೆ ಆರಂಭವಾಯಿತು. ತಾಯಿ ಕೋಳಿ ಹೇಳಿತು, " ಗಮನವಿಟ್ಟು ಕೇಳಿ, ಮೊನ್ನೆ ನಮ್ಮ ಚಿಕ್ಕಮ್ಮಳನ್ನು ಇಲ್ಲಿ ರಾಹು ದೈವಕ್ಕೆ ಹರಕೆ ಅಂತ ಕರ್ಕೊಂಡು ಹೋಗಿದ್ದಾರೆ. ನಿನ್ನೆ ಆ ನಾಗರಹಾವು ನಮ್ಮ ಸಣ್ಣ ಪಾಪುವನ್ನು ಕಚ್ಕೊಂಡು ಹೋಗಿಬಿಟ್ಟಿದೆ. ನಮಗೆ ಬದುಕುವುದು ಭಾರೀ ಕಷ್ಟ ಇದೆ. ಇಲ್ಲಿ ಮೇಲ್ಗಡೆಯಿಂದ ಗರುಡ ಕೂಡ ಬಾಯಿ ತೆರೆದುಕೊಂಡು ಕಾಯ್ತಿದೆ ನೋಡಿ " ಎಂದು ತಲೆ ಎತ್ತಿ ಮೇಲೆ ನೋಡಿತು. ಮಕ್ಕಳೆಲ್ಲ ಆಕಡೆಯೇ ನೋಡುತ್ತಿದ್ದವು.
ಅದೇ ಸಮಯಕ್ಕೆ ಬೇಲಿ ದಾಟಿ ಒಳಕ್ಕೆ ಹೆಜ್ಜೆ ಇರಿಸಿದ ನಾಗರಹಾವು, ತಲೆ ಎತ್ತಿ ಮೇಲೆ ನೋಡುತ್ತಿರುವ ಎಲ್ಲರನ್ನೂ ಗಮನಿಸಿ ತಾನೂ ಮೇಲೆ ನೋಡಿತು. ಹಾರಾಡುವ ಗರುಡ ಕಾಣಿಸಿತು. ನಾಗರಹಾವಿನ ಎದೆಯಲ್ಲಿ ಭಯ ತಾಂಡವ ನೃತ್ಯ ಶುರು ಮಾಡಿತು. "ಹೌದೌದು, ಇಲ್ಲಿ ನಮಗೆ ಬದುಕುವುದು ಭಾರೀ ಕಷ್ಟ ಇದೆ " ಅನ್ನುತಾ ಸರಸರನೇ ಹರಿಯುತ್ತಾ ಅಲ್ಲೇ ಬೇಲಿಯಲ್ಲಿದ್ದ ಹುತ್ತಕ್ಕೆ ನುಗ್ಗಿ ಅಡಗಿಕೊಂಡಿತು. ಹಾವಿನ ಹೊಟ್ಟೆ ಹಸಿವಿನಿಂದ ಅಳುತಿತ್ತು...
( ಮುಂದುವರಿಯುವುದು...)
ಮಕ್ಕಳೇ..... ಕಥೆಯನ್ನು ಪೂರ್ಣಗೊಳಿಸಿ , ಈ ವಾಟ್ಸಪ್ ಸಂಖ್ಯೆ... 9844820979 ಯ ಮಕ್ಕಳ ಜಗಲಿಗೆ ಕಳುಹಿಸಿಕೊಡಿ
ನಾದ ಮಣಿನಾಲ್ಕೂರು ತೆಕ್ಕೂರು , ಚಿಕ್ಕಮಗಳೂರು
*******************************************