-->
ಪದಗಳಆಟ ಭಾವಚಿತ್ರ ಪಾತ್ರ ಸಂಚಿಕೆ - 2

ಪದಗಳಆಟ ಭಾವಚಿತ್ರ ಪಾತ್ರ ಸಂಚಿಕೆ - 2

ಪದಗಳ ಆಟ
ಭಾವಚಿತ್ರ ಪಾತ್ರ 
ಸಂಚಿಕೆ - 2

    ಚಿತ್ರ : ಸುಮಾಡ್ಕರ್

 ನಿಂತ ನಿಲುವಿಗೆ ಗುಡುಗಿದೆ.... ಗುಡುಗಿದ ಧ್ವನಿಗೆ                              ಎಂದೂ ನಿಲುಗಡೆಯಿಲ್ಲ....!
********************************************
      ಯಾರೇ ಆಗಲಿ ಎಷ್ಟು ವರ್ಷ ಜೀವಿಸಿದ್ದಾರೆ ಮುಖ್ಯವಲ್ಲ, ಹೇಗೆ ಬದುಕಿದ್ದಾರೆ, ಯಾರೊಳಗೆ ಪ್ರವೇಶಿಸಿದ್ದಾರೆ, ಬೆಳಗಿದ್ದಾರೆ ಎನ್ನುವುದರಿಂದ ಉಳಿಯುತ್ತಾರೆ. ಕೀರ್ತಿಶೇಷ ರಾಗುತ್ತಾರೆ.

              ಆ ಬದುಕು, ನನ್ನೊಳಗೆ ಪ್ರವಹಿಸಿದ ಬದುಕು ಕೇವಲ ಒಬ್ಬನದಲ್ಲ. ವೃಷ್ಠಿಯದಲ್ಲ ಸಮಷ್ಟಿಯದು. ಆ ಬದುಕೊಂದು ಗುಡುಗು. ಕಾರ್ಮೋಡದ ಆಗಸದಲ್ಲಿ ಮಿಂಚು, ವಿದ್ಯುಲ್ಲತೆ. ಯುವಕರಿಗೆ ಸ್ಪೂರ್ತಿಯ ವರ್ಷ ಸುಧೆ, ಅಮೃತಧಾರೆ. ಅವನಿಯಲ್ಲಿ ಜನಿಸಿದ ಪ್ರತಿಯೊಬ್ಬನು ಸತ್ವಶಾಲಿ.  ಸರ್ವರಲ್ಲೂ ಒಂದು ಅಗಾಧ ಚೈತನ್ಯ ಸುಪ್ತವಾಗಿ ಇದ್ದೇ ಇದೆ. ಯಾರು ಕೀಳಲ್ಲ. ಎಲ್ಲರೂ ತಮ್ಮ ಸಾಮರ್ಥ್ಯದ ಸದ್ಬಳಕೆಯಿಂದ ಮೇಲಂತಸ್ತನ್ನು ಏರಬಹುದು. ಉನ್ನತ ಸ್ತರವನ್ನು ಹತ್ತಿ ವಿರಾಜಮಾನ ರಾಗಬಹುದು. ತಮ್ಮ ಜೀವನದ ಶಿಲ್ಪಿ, ಜೀವನ ನೌಕೆಯ ಅಂಬಿಗ ತಾವೇ. ಪಥ ದರ್ಶಿಯಾರೂ ಆಗಿರಬಹುದು. ತಾಯಿ-ತಂದೆ ಆಗಿರಬಹುದು. ಸ್ನೇಹಿತರೂ ಆಗಬಹುದು. ಕ್ರಮಿಸುವ ದಾರಿಗೆ ಮಾರ್ಗದರ್ಶನ ಬೇಕು ಎಂಬ ಅರಿವು ಅಗತ್ಯ. ಭವ ಮೀಟಿ ಆ ತಟ ಸೇರುವುದು ಸಾಧ್ಯ ಎಂಬ ದೃಢ ಸಂಕಲ್ಪ ಆಚಲ ವಿಶ್ವಾಸವಿರಬೇಕು ಅಷ್ಟೇ.
 ಹೀಗೆ ಭಾರತೀಯ ತತ್ವದರ್ಶನ ವಾಚಿಕ ಆಡಂಬರಕ್ಕೆ ನಿಲ್ಲದೆ ನಿಜಾರ್ಥದಲ್ಲಿ ಅನುಭೂತಿಯಾಗ ಬಲ್ಲುದು, ಶ್ರೀಸಾಮಾನ್ಯನಿಗೂ ವೇದ್ಯವಾಗಬಲ್ಲುದು  ಎಂಬುದನ್ನು ಸಾಬೀತುಪಡಿಸಿದ ಯೋಗಿ  ಯುಗಪ್ರವರ್ತಕ. ಭೋಗಾಪೇಕ್ಷೆ ಇಲ್ಲದೆ ಯುವ ಶಕ್ತಿಯನ್ನು ಜಾಗೃತಗೊಳಿಸಿ ಅವರ ನಿಜ ತನವನ್ನು ಆತ್ಮವಿಶ್ವಾಸದ ದರ್ಪಣದಲ್ಲಿ ಕಾಣಿಸಲಿಕ್ಕಾಗಿಯೇ  ಬದುಕಿದ ಸಂತ, ಮಹಂತ.

          ಅಂದು ದೇಹ ದುರ್ಬಲವಾದರೂ ಪ್ರಬಲ ಪ್ರಖರ ಚಿಂತನೆಯಿಂದ ನಾಡಿನ ಮಾನಸ ಗುರುವಾದರು. ಗುರುವಿಲ್ಲದ ಖಾಲಿತನವನ್ನು ತುಂಬಿ ಭಾರತೀಯರಿಗೆ ಶತಮಾನಗಳ ಭಾರತದ ದರ್ಶನ ಒದಗಿಸಿದರು. ಆ ದಾರ್ಶನಿಕ ನನಗೂ ಗುರುವಾದರು. ನನ್ನ ಕಾಲೇಜು ದಿನಗಳಲ್ಲಿ ಭೌತಿಕವಾಗಿ ಮಾನಸಿಕವಾಗಿ ಕುಸಿದು ಹೋಗಿದ್ದ ದಿನಗಳು. ಆ ಮಹಾಗುರುವಿನ ಜೀವನ ಆಖ್ಯಾನ ನನಗೆ ಹಿಮಾಂಶುವಾಯಿತು. ಶಿಥಿಲವಾಗಿದ್ದ ನನ್ನ ಮನೋಸ್ಥೈರ್ಯ ಮುಗಿಲಿನೊಳಗಣ ಸುಪ್ಪಾಣಿ ಮುತ್ತಿನ ಆಧ್ಯಾತ್ಮಿಕ ಸ್ಪರ್ಶಕ್ಕೆ ನಿಮಿರಿ ನಿಂತಿತು. ಎಂತಹ ಸಾನಿಧ್ಯವದು. ಜೈವಿಕವಾದ ತಾಯಿ-ತಂದೆಯರು ದೈಹಿಕವಾಗಿ ಜನ್ಮ ನೀಡುತ್ತಾರೆ. ಆದರೆ ನಾನು ಮಾನಸಿಕವಾಗಿ ಒಪ್ಪಿಕೊಂಡ ಗುರು ನನಗೆ ಎರಡನೇ ಜನ್ಮ ನೀಡಿದರು. ನಾನು  ಬದುಕಲು ಕಲಿತೆ. ಆ ಅಲೌಕಿಕವಾದ ಗುರು-ಶಿಷ್ಯ ಸಂಬಂಧ ಪ್ರಾಕೃತ ವಲ್ಲದೆ ಯೌಗಿಕವಾದುದು. ಅಲ್ಲಿ ಎರಡು ವ್ಯಕ್ತಿಗಳ ನಡುವೆ ವಿದ್ಯುದಾಲಿಂಗನ ವಿದೆ.
 ನನ್ನ ಗುರು ಅವರ ಗುರುವಿನೊಡನೆ ಎಂತಹ ಅನುಬಂಧವನ್ನು ಹೊಂದಿದ್ದರು. ಅವರಿಗೆ ಗುರುವಿನ ಸಾನ್ನಿಧ್ಯವೇ ತಪಸ್ಸು. ಅವರ ಸಹವಾಸ ಸಂಭಾಷಣೆ ಸೇವೆ ಇವುಗಳ  ಪರಿವೇಶದಲ್ಲಿ ಸತ್ಯ ಸಾಕ್ಷಾತ್ಕಾರದ ಸಾಧನೆಗಾಗಿ ತೊಡಗಿದ್ದರು. ಬುದ್ಧಿಯ ಸಿಡಿಮದ್ದಿಗೆ ಭಾವ ಕಿಡಿ ಇಟ್ಟು ಸಿದ್ದಿ ಪಡೆದರು.

             ಜಗತ್ತಿನ ವಿವಿಧ ಮತಗಳ ಸಾಮ್ಯ ತಾರತಮ್ಯಗಳನ್ನು ಶಾಸ್ತ್ರೀಯವಾಗಿ ಮಾತಾಡಬಲ್ಲವರಾಗಿದ್ದರು. ವಿಜ್ಞಾನದ ನವೀನ ನೂತನ ಆವಿಷ್ಕಾರಗಳನ್ನು ಹೃದಯಂಗಮವಾಗಿ ಜಗತ್ತಿನ ಇತಿಹಾಸವನ್ನು ಸಜೀವವಾಗಿ ಚಿತ್ರಿಸುತ್ತಿದ್ದರು. ಸಮಾಜಶಾಸ್ತ್ರ ಮನಶಾಸ್ತ್ರ  ಗಳನ್ನು ಅದ್ಭುತವಾಗಿ ವರ್ಣಿಸುತ್ತಿದ್ದರು. _ಆತ್ಮನೋ ಮೋಕ್ಷಾರ್ಥಮ್_ _ಜಗದ್ಧಿತಾಯ ಚ_- ಎಂಬ ಲೋಕೋತ್ತರ ದೀಕ್ಷೆಗೆ ಬದ್ಧರಾಗಿದ್ದರು. ಅಪೂರ್ವ ಅಂತರ್ದೃಷ್ಟಿ ವಿಪುಲ ಆಧ್ಯಾತ್ಮಿಕ ಜ್ಞಾನದಿಂದ ಸ್ವದೇಶ ವಿದೇಶಕ್ಕೆ ಆದಾನ ಪ್ರಧಾನ ಸಂಬಂಧ ಸ್ಥಾಪಿಸಿ ನಂತರ ಸ್ವದೇಶ ಸೇವೆಯನ್ನೇ ಮಹಾ ಕಾಯಕವೆಂದು ಸ್ವೀಕರಿಸಿ ಅದಕ್ಕೆ ಕಂಕಣಬದ್ಧರಾಗಿ ದುಡಿದರು. ಆ ಕೈಂಕರ್ಯಕ್ಕೆ ದೀಕ್ಷೆಗೆ ಯಾವುದೇ ಅಡೆತಡೆ ಯಾಗಲಿಲ್ಲ. ಕಾಯಿಲೆಗಳ ರಾಶಿಯಿಂದ ರೋಗರುಜಿನಗಳ ಬಾಧೆಯಿಂದ ನರಳುತ್ತಿದ್ದರೂ ಜರ್ಜರಿತರಾಗಿದ್ದರೂ, ಕೃಷ ರಾಗಿದ್ದರೂ ಸನಾತನ ಸಂದೇಶವನ್ನು ಜಗದಗಲಕೆ ವಿಶ್ವದ ಮೂಲೆ ಮೂಲೆಗೆ ತಲುಪಿಸುವುದಕ್ಕೆ ಪಣತೊಟ್ಟರು. ಕಟಿಬದ್ಧರಾದರು. ನನ್ನ ಜೀವಿತಾವಧಿ ಕ್ಷಣಿಕ, ನೀರ್ಗುಳ್ಳೆ, ಅತ್ಯಲ್ಪ ಎಂದು ಮನಗಂಡರು. ಭಾರತದ ಸ್ಥಾನಮಾನವನ್ನು ವಿಶ್ವದ ದೃಷ್ಟಿಯಲ್ಲಿ ಮುಂಗಾಣುತ್ತಿದ್ದ ಅವರು ನಮ್ಮ ಜನ್ಮ ಭೂಮಿಯ, ತಾಯಿನಾಡಿನ ಸೇವೆ ಮಾಡಬೇಕೆಂದು ಕಾಯೇನ ವಾಚಾ ಮನಸಾ ಬಯಸಿದರು. ಹಪಹಪಿಸಿದರು, ತಹತಹಿಸಿದರು. ಆ ತೃಷೆಯೇ, ವಾಂಛೆಯೇ ಹೆಬ್ಬಯಕೆಯೇ ಅವರಿಗೆ ನಡೆದಾಡಲು ಶಕ್ತಿ-ಸಾಮರ್ಥ್ಯ ಬಲ ಕಸುವನ್ನು ಕೊಡುತ್ತಿತ್ತೋ ಏನೋ!

        ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಯಾತ್ರೆ ಮಾಡುತ್ತಾ ಭರತಖಂಡದ ಪುನರುತ್ಥಾನದ ಮಾರ್ಗವನ್ನು ಚಿಂತಿಸಿ, ಚಿಂತಿಸಿ ಸುಪ್ರತಿಭರಾಗಿ ಮೇಲೆದ್ದರು. ತಪ್ತ ಜೀವನದ ಮೂಸೆಯಲ್ಲಿ ಕರಗಿ ಪ್ರದೀಪ್ತರಾದರು. ಸರ್ವ ಧರ್ಮ ಸಮನ್ವಯತೆಯನ್ನು ಪ್ರತಿಪಾದಿಸಿದರು.

          ಇವರು ಹಚ್ಚಿದ ದೀಪದ ಕುಡಿಗಳು ಭರತಮಾತೆಯ ಸುಪುತ್ರರಾಗಿ ಅವರ ನಂತರದ ದಿನಮಾನದಲ್ಲಿ ಅಲ್ಲಲ್ಲಿ ಚಿಗುರೊಡೆದು ಹೆಮ್ಮರವಾಗಿ ಬೆಳೆದರು. ಆ ಸನಾತನ ಧರ್ಮದಲ್ಲಿ, ಯುಗಧರ್ಮ ದಲ್ಲಿ ನನ್ನ ವಿಶ್ವಶ್ರೇಷ್ಠ ಗುರುವಿದ್ದಾರೆ. ಆ ಮಹಾನದಿ ಹರಿಯುತ್ತಲೇ ಇದೆ ಭರತವರ್ಷದಲ್ಲಿ ಸತತ. ಆ ಮಹಾನಾದ  ಮೊಳಗುತ್ತಲೇ ಇದೆ ಜನ್ಮಭೂಮಿಯ ಮೀರುತ. ಅಲ್ಲೆಲ್ಲಾ ನನ್ನ ವಿಶ್ವಗುರುವಿದ್ದಾರೆ. ಇವರು ನಿಮ್ಮೊಳಗೂ ಇರಬಹುದಲ್ಲವೇ.....?!      
       
..........................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372

**************************************

Ads on article

Advertise in articles 1

advertising articles 2

Advertise under the article