ನನ್ನ ಹವ್ಯಾಸ
Wednesday, June 23, 2021
Edit
ಸಾನ್ವಿ ಸಿ ಎಸ್ 4 ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ನನ್ನ ಹವ್ಯಾಸ
ಹವ್ಯಾಸ ಎಂದರೆ ಬಿಡುವಿನ ಸಮಯವನ್ನು ಸದುಪಯೋಗಪಡಿಸುವುದು. ಇವತ್ತು ನಾನು ನನ್ನ ಹವ್ಯಾಸದ ಬಗ್ಗೆ ಹೇಳುತ್ತೇನೆ.
ಅಂದು ಲಾಕ್ ಡೌನ್ ಸಮಯ. ಆಗ ಶಾಲೆಯಿಂದ ಆನ್ಲೈನ್ ಪಾಠ ಶುರುವಾಗಿರಲಿಲ್ಲ. ಆಗ ಮನೆಯಲ್ಲಿ ನನಗೆ ಉದಾಸೀನ ಹಿಡಿದಿತ್ತು. ನನ್ನನ್ನು ಮೊಬೈಲ್ ನೋಡಲು ಬಿಡುತ್ತಿರಲಿಲ್ಲ, ಒಂದು ಗಂಟೆ ಟಿ.ವಿ ನೋಡಲು ಬಿಡುತ್ತಿದ್ದರಷ್ಟೇ. ಬೇರೆ ಸಮಯದಲ್ಲಿ ಸುಮ್ಮನೆ ಕುಳಿತುಕೊಂಡು ಅಥವಾ ತಂಗಿಯೊಡನೆ ಆಟವಾಡಿಕೊಂಡಿರುತ್ತಿದ್ದೆ. "ಸುಮ್ಮನೆ ಆಟವಾಡಿಕೊಂಡು ಅಥವಾ ಸುಮ್ಮನೆ ಕುಳಿತು ಸಮಯ ಕಳೆಯುವುದರಿಂದ ಓದಿ ಸಮಯ ಕಳೆಯಬಾರದೆ?" ಎಂದು ಅಜ್ಜಿ ನನಗೆ ಯಾವಾಗಲೂ ಹೇಳುತ್ತಿದ್ದರು. ಆದರೆ ನಾನು ಆ ಮಾತನ್ನು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಆದ ಕಾರಣ ಅಜ್ಜಿ ದಿನಾಲೂ ನನಗೆ 'ಮಕ್ಕಳ ರಾಮಾಯಣ' ಪುಸ್ತಕವನ್ನು ಓದಿಸಲು ಶುರುಮಾಡಿದರು. ಆಗ ನನಗೆ ಅಜ್ಜಿಯ ಮೇಲೆ ತುಂಬಾ ಸಿಟ್ಟುಬರುತ್ತಿತ್ತು. ಅಜ್ಜಿ "ನೀನು ಓದು , ನಾನು ಅರ್ಥ ಹೇಳುತ್ತೇನೆ" ಎಂದು ಹೇಳಿದರೂ ನಾನು ಅಳುತ್ತಿದ್ದೆ. ದಿನಾಲೂ ಅಜ್ಜಿಗೂ ನನಗೂ ಜಟಾಪಟಿಯಾಗುತ್ತಿತ್ತು. ಅಂತೂ ಅಜ್ಜಿ 'ಮಕ್ಕಳ ರಾಮಾಯಣ' ಓದಿಸಿ ಮುಗಿಸಿದರು. ಒಂದು ದಿನ ನನಗೆ ಓದಲು ಆಸಕ್ತಿ ಮೂಡಿತು. ನಾನು ಅಜ್ಜಿಗೆ ಆಶ್ಚರ್ಯವಾಗುವಂತೆ 'ಮಕ್ಕಳ ರಾಮಾಯಣ' ಪುಸ್ತಕವನ್ನು ಓದಿ ಮುಗಿಸಿದೆ. ನಾನು ಓದಿ ಮುಗಿಸಿದ್ದನ್ನು ನೋಡಿ ಅಜ್ಜಿ "ಇನ್ನು ನೀನು ನಿನ್ನಷ್ಟಕೆ ಓದು. ಅರ್ಥವಾಗದಿದ್ದುದನ್ನು ನನ್ನಲ್ಲಿ ಕೇಳು" ಎಂದರು. ನಾನು ಆಯಿತು ಎಂದೆ. ನಾನು ಮೊದಲು 'ಮಕ್ಕಳ ಶ್ರೀಕೃಷ್ಣ' , 'ಎಳೆಯರ ರಾಮಾಯಣ' , 'ಕಿಶೋರ ಭಾರತ', 'ಪೌರಾಣಿಕ ಕಥೆಗಳು' ಮುಂತಾದ ಪುಸ್ತಕಗಳನ್ನು ಓದಿದೆನು. ನನಗೆ ಪೌರಾಣಿಕ ಕಥೆಗಳೆಂದರೆ ಅಚ್ಚುಮೆಚ್ಚು. ನಮ್ಮ ಸಂಬಂಧಿಕರ ಮನೆಗೆ ಹೋದಾಗ ಅಲ್ಲಿ ಪುಸ್ತಕವಿದ್ದರೆ ತಂದು ಓದಲು ಶುರುಮಾಡಿದೆ. ಹೀಗೆ ಓದುವುದು ನನ್ನ ಅಚ್ಚುಮೆಚ್ಚಿನ ಹವ್ಯಾಸವಾಯಿತು. ನನ್ನ ಬಳಿ ಯಾರಾದರೂ " ನಿನಗೆ ಏನು ಬೇಕು?" ಎಂದು ಕೇಳಿದರೆ ನಾನು " ಪುಸ್ತಕವಾಗಬಹುದು" ಎಂದು ಹೇಳುತ್ತೇನೆ. ಪುಸ್ತಕವೆಂದರೆ ನನಗೆ ಪಂಚಪ್ರಾಣ. ನನಗೆ ಅಪ್ಪ ಮತ್ತು ದೊಡ್ಡಪ್ಪ ಕೂಡ ಪುಸ್ತಕ ತಂದು ಕೊಡುತ್ತಾರೆ.
ಪುಸ್ತಕದಿಂದ ನಮಗೆ ತುಂಬಾ ಜ್ಞಾನ ಸಿಗುತ್ತದೆ ಮತ್ತು ನಮಗೆ ತುಂಬಾ ವಿಷಯಗಳು ಅರ್ಥವಾಗುತ್ತದೆ.
.................ಸಾನ್ವಿ ಸಿ ಎಸ್ 4 ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ