ನಾನು ಓದಿದ ಪುಸ್ತಕ
Sunday, June 13, 2021
Edit
ಕೃತಸ್ವರ ದೀಪ್ತ 9ನೇ ತರಗತಿ
ಸ.ಪ.ಪೂ.ಕಾಲೇಜು ಸುಳ್ಯ.
ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಕೃತಿ:EARLY INDIANS
ಕೃತಿಕಾರ:TONY JOSEPH
ಬೆಲೆ: ₹423
ಪುಟ:262
ಪ್ರ.ಮುದ್ರಣ:2018
ಈ ಪುಸ್ತಕವನ್ನು ಬರೆದದ್ದು ಭಾರತದ ಪ್ರಸಿದ್ಧ ಪತ್ರಕರ್ತರುಗಳಲ್ಲಿ ಒಬ್ಬರಾದ ಶ್ರೀ ಟಾನಿ ಜೋಸೆಫ್ ಅನ್ನುವವರು. ಪ್ರಕಾಶಕರು ‘ ಜಗರ್‍ನಟ್ ಪಬ್ಲಿಕೇಷನ್ಸ್’. ಈ ಪುಸ್ತಕದಲ್ಲಿ ಶ್ರೀ ಟಾನಿ ಜೋಸೆಫ್‍ರವರು ಪ್ರಸಿದ್ಧ ತಳಿಶಾಸ್ತ್ರಜ್ಞರ ಸಹಾಯದಿಂದ ಆನುವಂಶೀಯ ಶಾಸ್ತ್ರ ( Genetics ) ದ ಮೂಲಕ ನಮ್ಮ ಚರಿತ್ರೆಯನ್ನು ವಿಭಿನ್ನ ರೀತಿಯಲ್ಲಿ ಕಟ್ಟುವ ಕೆಲಸ ಮಾಡಿದ್ದಾರೆ. ಆನುವಂಶೀಯ ಶಾಸ್ತ್ರದ ಜೊತೆ ಜೊತೆಗೇ ಪುರಾತತ್ತ್ವಶಾಸ್ತ್ರ, ಭಾಷಾ ವಿಜ್ಞಾನ ಹಾಗೂ ಪುರಾತನ ಹವಾಮಾನ ವಿಜ್ಞಾನದ ಸಹಾಯವನ್ನೂ ಪಡೆದಿದ್ದಾರೆ. ಈ ಪುಸ್ತಕದಲ್ಲಿ
1. The first Indians
2. The first farmers
3. The first urbanites: The Harappans
4. The last migrants: The Aryans
ಎಂಬ ಹೆಸರಿನ ನಾಲ್ಕು ಅಧ್ಯಾಯಗಳಿದ್ದು, ಒಂದೊಂದು ಅಧ್ಯಾಯವೂ ಸಾವಿರಾರು ವರ್ಷಗಳ ಹಿಂದೆ ಭಾರತದಲ್ಲಿ ನಡೆದ ಬೇರೆ ಬೇರೆ ವಲಸೆಗಳ ಬಗ್ಗೆ ಹೇಳುತ್ತದೆ. ಈ ಎಲ್ಲಾ ವಲಸಿಗರೂ ಭಾರತಕ್ಕೆ ಬಂದ ನಂತರ ಇಲ್ಲಿ ಮೊದಲೇ ನೆಲೆಸಿದ್ದಂತಹ ಇತರೆ ವಲಸಿಗರೊಂದಿಗೆ ಬೆರೆತು ಹೊಸ ಸಂಸ್ಕ್ರತಿಗಳಿಗೆ ನಾಂದಿ ಹಾಡಿದ್ದನ್ನು ಪುಸ್ತಕವು ಸವಿವರವಾಗಿ ವಿವರಿಸುತ್ತದೆ.
ಮೊದಲನೆಯ ಅಧ್ಯಾಯ (The first Indians) 3,00,000 ವರ್ಷಗಳ ಹಿಂದೆ ಆಫ್ರಿಕಾದಲ್ಲಿ ಉದಯಿಸಿದ ಮಾನವ (Homo sepians) ನು 70,000 ವರ್ಷಗಳಲ್ಲಿ ವಿಶ್ವ ಪರ್ಯಟನೆಗೆ ತೊಡಗಿ ಇಡೀ ಯುರೇಷ್ಯಾವನ್ನು ಹಬ್ಬಿದ ವಿವರಗಳಿವೆ. ಜೊತೆಗೆ ಭಾರತಕ್ಕೆ ಇದೇ ಪ್ರಥಮ ಮಾನವನು 65,000 ವರ್ಷಗಳಲ್ಲಿ, ಅಂದರೆ ಹೊರಟ 5,000 ವರ್ಷಗಳ ನಂತರ ತಲುಪಿದ. ತಲುಪಲು ಬಳಸಿದ ಮಾರ್ಗಗಳ ನಕ್ಷೆಗಳೂ ಪುಸ್ತಕದಲ್ಲಿವೆ. ಹೀಗೆ ಬಂದ ಆದಿ ಮಾನವನು ತನ್ನೊಡನೆ ಯುರೇಷಿಯಾದಲ್ಲಿ ವಾಸಿಸುತ್ತಿದ್ದ ನಿಯಾಂಡರ್ ಥಾಲ್ ಹಾಗೂ ಮಧ್ಯ ಏಷ್ಯಾದ ಡೆನಿಸೋವಾ ಎಂಬ ಇತರ ಮಾನವ ಪ್ರಬೇಧಗಳ ಆನುವಂಶೀಯತೆಯನ್ನೂ ತಂದ. ಆದ್ದರಿಂದಲೇ ಇಂದಿಗೂ ಭಾರತೀಯರಲ್ಲಿ ಶೇ.2 ರಷ್ಟು ನಿಯಾಂಡರ್ ಥಾಲ್ ಮಾನವನದ್ದು ಹಾಗೂ ಶೇ.4-5 ರಷ್ಟು ಡೆನಿಸೋವಾ ಮಾನವ ಪ್ರಬೇಧಗಳ ಡಿ.ಎನ್.ಎ ಅಂಶಗಳಿವೆ. ಸೆಪಿಯನ್ಸ್ ಮಾನವ ಭಾರತಕ್ಕೆ ಬರುವ ಮೊದಲೇ ಇಲ್ಲಿ ಇತರ ಮಾನವ ಪ್ರಬೇಧಗಳೂ ಇದ್ದವು ಎನ್ನುವುದಕ್ಕೆ ಬಿಂಬೆಡ್ಕಾ ಗುಹಾಲಯ ಮತ್ತು ಇನ್ನಿತರ ಗುಹಾಲಯಗಳು, ಕೆಲವು ಪಳೆಯುಳಿಕೆಗಳು ಹಾಗೂ ಪೂರ್ವದ ಮನುಷ್ಯ ಬಳಸಿದ ಕಲ್ಲಿನ ಆಯುಧಗಳೇ ಸಾಕ್ಷಿ. ಪ್ರಥಮ ಮಾನವ ಬಂದ ನಂತರ ಅವು ಕಣ್ಮರೆಯಾಗಿರಬಹುದು. ಇವಿಷ್ಟು ನನಗೆ ಕಂಡಂತಹ ಮುಖ್ಯವಾದ ಅಂಶಗಳು. ಇದರ ಜೊತೆಗೆ ಆನುವಂಶೀಯಶಾಸ್ತ್ರದ ಬಗ್ಗೆ ಕೆಲ ಮಾಹಿತಿಗಳೂ ಇವೆ. ಪೂರ್ವದ ಮಾನವ ಉಪಯೋಗಿಸಿದ ಎನ್ನಲಾದ ಕಲ್ಲಿನ ಆಯುಧಗಳ ಮಾಹಿತಿಗಳೂ ಇವೆ. “ ಈ ವಲಸೆ ಭಾರತೀಯರ ಆದಿಮ ಚರಿತ್ರೆಯ ಪ್ರಮುಖ ಘಟ್ಟ, ಏಕೆಂದರೆ ಇಂದಿಗೂ ಎಲ್ಲ ಭಾರತೀಯರ 60% ಡಿ.ಎನ್.ಎ ಅಂಶವು ಪ್ರಥಮ ಮಾನವನದ್ದೇ ಆಗಿದೆ ” ಎನ್ನುತ್ತಾರೆ ಲೇಖಕರು.
ಎರಡನೇ ಅಧ್ಯಾಯದ ಹೆಸರು “The first farmers””. ಸರಿ ಸುಮಾರು 9,000 ವರ್ಷಗಳಲ್ಲಿ ಜಗತ್ತಿನ ಅಲ್ಲಲ್ಲಿ ಕೃಷಿಕ್ರಾಂತಿ ಉಂಟಾಯಿತು. ಇದರಿಂದಾಗಿ ಆದಿಮಾನವರು ವ್ಯವಸಾಯಗಾರರಾದರು. ಇಂತಹ ಪ್ರದೇಶಗಳಲ್ಲಿ ಈಗಿನ ಇರಾನಿನ ಝಾಗ್ರೋಸ್ ಎಂಬ ಸ್ಥಳವೂ ಒಂದು. ಅಲ್ಲಿನ ಜನರು ಮುಂದಿನ 3000 ವರ್ಷಗಳಲ್ಲಿ ದಕ್ಷಿಣ ಪಶ್ಚಿಮ ಏಷ್ಯಾಕ್ಕೆ ಬಂದು ಇಲ್ಲಿನ ಪ್ರಥಮ ಮಾನವರ ಜೊತೆ ಮಿಶ್ರಗೊಂಡು ಭಾರತದಲ್ಲಿ ಕೃಷಿ ಕಾಯಕವನ್ನು ಪಸರಿಸಿದರು(ಅದಕ್ಕಿಂತಲೂ ಮೊದಲು ಇಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದ ಬಗ್ಗೆ ಕೆಲವು ಪುರಾವೆಗಳು ದೊರೆತಿವೆ). ಸರಿ ಸುಮಾರು ಇದೇ ಸಮಯದಲ್ಲಿ ಈಗಿನ ಪಾಕಿಸ್ತಾನದ ಮೆಹರ್ ಘರ್ ಎಂಬ ಪ್ರದೇಶವು ಕೃಷಿ ಸಂಬಂಧಿತ ಚಟುವಟಿಕೆಗಳ ಮುಖ್ಯ ತಾಣವಾಗಿತ್ತು. ಕೃಷಿಯ ಜೊತೆಗೆ ಕುಂಬಾರಿಕೆಯಂತಹ ಕೌಶಲ್ಯಕರ ಕಾಯಕ ಬೆಳೆಯಿತು. ಭಾರತದಲ್ಲಿ ಬಾರ್ಲಿ ಹಾಗೂ ಗೋಧಿಯ ಬೆಳೆಗಳು ಬೆಳೆಯಲಾರಂಭಿಸಿದವು. ಇದೇ ಸಮಾಜವು ಮುಂದೆ ಶ್ರೇಷ್ಠ ಹರಪ್ಪ ಮೊಹೆಂಜೋದಾರೋ ನಾಗರೀಕತೆಯಾಯಿತು.
ಮೂರನೇ ಅಧ್ಯಾಯವಾದ The first urbanites: The Harappans ನಲ್ಲಿ ಲೇಖಕರು ಹರಪ್ಪ ಸಂಸ್ಕೃತಿಯನ್ನು ಪರಿಚಯಿಸಲು ಆನುವಂಶೀಯ ವಿಜ್ಞಾನಕ್ಕಿಂತ ಭಾಷಾಶಾಸ್ತ್ರ ಹಾಗೂ ಪುರಾತತ್ತ್ವ ಶಾಸ್ತ್ರವನ್ನು ಹೆಚ್ಚಾಗಿ ಬಳಸಿದಂತೆ ಕಾಣುತ್ತದೆ. ಮೊದಲೆರಡು ಉಪ ಅಧ್ಯಾಯಗಳಲ್ಲಿ ನಮಗೆಲ್ಲರಿಗೂ ತಿಳಿದಿರುವ ಹರಪ್ಪ ನಾಗರೀಕತೆಯ ವಾಸ್ತುಶಿಲ್ಪಗಳು, ಸಮಾನ ನಾಗರೀಕತೆಗಳಲ್ಲಿ ಒಂದಾದ ಮೆಸಪಟೋಮಿಯಾದೊಡನೆಯಿದ್ದ ವ್ಯಾಪಾರ ಸಂಬಂಧಗಳ ವಿವರಣೆಯಿದೆ. ಇಲ್ಲಿ ಹರಪ್ಪ ನಾಗರೀಕತೆಯನ್ನು ನಾಲ್ಕು ಪ್ರಮುಖ ಕಾಲಘಟ್ಟಗಳಾಗಿ ಮಾಡಿದ್ದು ಅವುಗಳನ್ನು Early food producing era (7000-5500 BCE), Early Harappan era (5500-2600BC), Mature Harappan era (2600-1900 BCE), Late Harappan era (1900-1300 BCE)) ಎಂದು ಹೆಸರಿಸಲಾಗಿದೆ. ಜೆನೆಟಿಕ್ಸ್ ವಿಷಯಕ್ಕೆ ಬಂದಾಗ ಸಿಂಧೂ ಕಣಿವೆ ಬಹುಸಂಖ್ಯಾತ ನಾಗರೀಕರಲ್ಲಿ 14% ದಿಂದ 42% ಪೂರ್ವಿಕತೆ ಆದಿಮ ಮಾನವರದ್ದಾಗಿದ್ದರೆ, ಉಳಿದವು ಝಾಗ್ರೋಸಿಯಾದ ರೈತರದ್ದಾಗಿತ್ತು. ಆದರೆ ಕೆಲವರು ‘ಆ್ಯನಾಟೋಲಿಯಾ’ ಎಂಬ ಯುರೋಪಿನ ಪೂರ್ವಿಕತೆಯನ್ನು ಮಾತ್ರ ಹೊಂದಿದ್ದರು. ಮುಖ್ಯವಾಗಿ ಈ ಅಧ್ಯಾಯದಲ್ಲಿ ಹರಪ್ಪನ್ನರು ಆದಿಮ ದ್ರಾವಿಡ ಭಾಷೆಗಳನ್ನು ಮಾತನಾಡುತ್ತಿದ್ದರು ಎಂಬ ವಾದಕ್ಕೆ ಸಂಬಂಧಿಸಿದ ಸಾಕಷ್ಟು ಮಾಹಿತಿಗಳನ್ನೂ, ಆಧಾರಗಳನ್ನೂ ಲೇಖಕರು ಕೊಟ್ಟಿದ್ದಾರೆ. ಉದಾಹರಣೆಗೆ ಎಳ್ಳು ಎಂಬ ಶಬ್ಧವು ಪೂರ್ವದ ಅಕ್ಕಾಡಿಯನ್‍ನಲ್ಲೂ ಇದ್ದದ್ದು ಮಾತ್ರವಲ್ಲದೆ ಇಂದಿಗೂ ದ್ರಾವಿಡ ಭಾಷೆಗಳಲ್ಲಿ ಒಂದೇ ಅರ್ಥ ನೀಡುತ್ತದೆ. ಹಾಗೂ proto elamo Dravidian ನ ನೀ ಶಬ್ಧವೂ ಹಳೇ ಎಲಮೈಟ್, ಪ್ರೋಟೋ ದ್ರಾವೀಡಿಯನ್ ಭಾಷಾ ಪರಿಕಲ್ಪನೆಯಲ್ಲಿ ಏನೂ ಬದಲಾವಣೆಯಾಗದೇ ಇಂದಿಗೂ ‘ನೀನು’ ಎಂಬ ಅರ್ಥವನ್ನು ನೀಡುತ್ತದೆ ಇತ್ಯಾದಿ. ಇದರ ಜೊತೆಗೆ ಹರಪ್ಪನ್ನರು ದಕ್ಷಿಣ ಭಾರತಕ್ಕೆ ಬಂದಂತಹ ಸಾಧ್ಯತೆಗಳನ್ನೂ ಸಾಬೀತುಪಡಿಸುತ್ತದೆ. ಇದೇ ಸಮಯದ ಸರಿಸುಮಾರಿಗೆ ಈಶಾನ್ಯ ಭಾರತೀಯ ಹಾಗೂ ನಿಕೋಬಾರಿನ ಪ್ರಮುಖ ಭಾಷಾ ಕುಟುಂಬವಾದ ಆಸ್ಟ್ರೋ ಏಷ್ಯಾಟಿಕ್ ಭಾಷೆಯ ಪ್ರಸಾರವೂ ಅಲ್ಲಿಗೆ ಪೂರ್ವ ಏಷ್ಯಾದ ಜನರಿಂದಾಗಿ ಅಲ್ಲಿನ ಸಂಸ್ಕೃತಿಯಲ್ಲಿ ಕೆಲವು ಬದಲಾವಣೆಗಳೇ ಆದವು. 2000 ವರ್ಷಗಳ ನಂತರ ನಡೆಯಿತು ಎನ್ನಲಾದ ಈ ವಲಸೆಯೂ ದೇಶದ 1% - 2% ಜನರು ಮಾತನಾಡುವ ಆಸ್ಟ್ರೋ ಏಷ್ಯಾಟಿಕ್ ಭಾಷೆಗಳನ್ನು ಮಾತ್ರವಲ್ಲದೆ ಭಾರತೀಯ ಪ್ರಮುಖ ಬೆಳೆಗಳಲ್ಲಿ ಒಂದಾದ ಅಕ್ಕಿ (oryza sativa) ಯನ್ನು ತಂದಿತು. ಒಟ್ಟಾರೆಯಾಗಿ ಈ ಅಧ್ಯಾಯ ಸಿಂಧೂ-ಕಣಿವೆ ಸಂಸ್ಕ್ರತಿ ಹಾಗೂ ಇತರ ವಲಸೆಗಳ ಬಗ್ಗೆ ಉತ್ತಮವಾದ ಮಾಹಿತಿಗಳನ್ನು ಕೊಡುತ್ತದೆ.
ಕೊನೆಯ ಅಧ್ಯಾಯವಾದ The last migrants - The aryans ಭಾರತೀಯ ಇತಿಹಾಸ ಕ್ಷೇತ್ರದಲ್ಲಿ ಆಗಾಗ್ಗೆ ಚರ್ಚೆಗೆ ಒಳಗಾಗುತ್ತರುವ ಆರ್ಯ ವಲಸೆಯ ಬಗ್ಗೆ ಆಗಿರುವುದರಿಂದ ಲೇಖಕರು ಹೆಚ್ಚಾಗಿ ಇತ್ತೀಚೆಗಿನ ಡಿ.ಎನ್.ಎ ಅಧ್ಯಯನಗಳಿಂದ ತಿಳಿದು ಬಂದಂತಹ ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ. ಅವರು ಹೀಗೆ ಬರೆಯುತ್ತಾರೆ “ ರಷ್ಯಾದ ನೆರೆಹೊರೆಯ steppe ಪ್ರದೇಶದಿಂದ ಭಾರತಕ್ಕೆ ಸುಮಾರು 3000 ವರ್ಷಗಳ ಹಿಂದೆ ಬಂದ ಇಂಡೋ- ಯುರೋಪಿಯನ್ ಭಾಷೆಯನ್ನಾಡುತ್ತಿದ್ದ ಹಾಗೂ ತಮ್ಮನ್ನು ‘ಆರ್ಯರು” ಎಂದು ಕರೆದುಕೊಳ್ಳುತ್ತಿದ್ದ ಅಲೆಮಾರಿ ವರ್ಗ ಇಲ್ಲಿಗೆ ಇಂಡೋ-ಯುರೋಪಿಯನ್ ಭಾಷೆಗಳನ್ನು ತಂದರು. ಅವುಗಳಲ್ಲಿ ಪುರಾತನ ಸಂಸ್ಕೃತಿ ಮುಖ್ಯವಾದದ್ದು. ಈ ವಲಸಿಗರಲ್ಲಿ ಗಂಡಸರು ಹೆಚ್ಚಾಗಿ ಇದ್ದು ಕುದುರೆಗಳಲ್ಲಿ ವಲಸೆ ಬಂದಿರುವ ಸಾಧ್ಯತೆಗಳಿವೆ. ಪುರುಷರಾದ ಕಾರಣ ಗಂಡಸರಲ್ಲಿ ಮಾತ್ರ ಕಂಡುಬರುವ ‘Y ವರ್ಣತಂತುವಿನ ಸಹಾಯದಿಂದ ಈಗಿನ ಪುರುಷರ ಮೂಲಕ ಆರ್ಯರ ಪೂರ್ವಿಕತೆಯನ್ನು ತಿಳಿಯಬಹುದು. R1a ಎನ್ನುವ Y ವರ್ಣತಂತುವಿನ ಒಂದು ವಿಭಾಗವು ಈಗಿನ ಇಂಡೋ-ಯುರೋಪಿಯನ್ ಭಾಷೆಗಳಾದ, ರಷ್ಯನ್, ಹಿಂದಿ ,ಇರಾನಿಯನ್, ಬಂಗಾಳಿ, ಗುಜರಾತಿ ಹಾಗೂ ಇತರ ಭಾಷೆಗಳನ್ನಾಡುವ ಪ್ರದೇಶದ ಜನರಲ್ಲಿ ನೋಡಿದಾಗ ಎರಡು ವಿಭಾಗಗಳಾದಂತೆ ಕಂಡುಬರುತ್ತದೆ. ಅವು R1a-M417, R1a -Z282 , R1a-Z93. R1a -Z282 . ಇದರಲ್ಲಿ R1a -Z282 ಯುರೋಪಿಯನ್ ಕಂಡುಬಂದರೆ, R1a-Z93. ಮಧ್ಯ ಏಷ್ಯಾ ಹಾಗೂ ಭಾರತದ ಜನರಲ್ಲಿ ಕಾಣಸಿಗುತ್ತದೆ. R1a-Z93. ಪ್ರಾಚೀನ ಕುರುಹುಗಳ ಭಾರತದಲ್ಲಿ 2500 ವರ್ಷಗಳ ನಂತರ ಮಾತ್ರ ಕಂಡುಬರುವುದರಿಂದ ಅದು ನಂತರದ ವಲಸೆಯಾಗಿದ್ದಿರಬಹುದು. ಇಂದಿನ ಹೆಚ್ಚಿನ ಎಲ್ಲಾ ವರ್ಗ ಜಾತಿಗಳು ಇಂಡೋ-ಆರ್ಯನ್ ಆನುವಂಶೀಯತೆಯನ್ನು ಹೊಂದಿದ್ದರೂ ಹೆಚ್ಚಾಗಿ ಅವು ಮೇಲ್ವರ್ಗದಲ್ಲಿ ಸ್ವಲ್ಪ ಕಮ್ಮಿಯಾಗಿ ಮಧ್ಯಮ ವರ್ಗಗಳಲ್ಲಿ ಹಾಗೂ ಕಡಿಮೆಯಾಗಿ ಕೆಳವರ್ಗಗಳಲ್ಲಿ ಇವೆ. ಇಲ್ಲಿ ಗಮನಿಸತಕ್ಕಂತಹ ಇನ್ನೊಂದು ಬಹುಮುಖ್ಯವಾದಂತಹ ವಿಚಾರವೇನೆಂದರೆ ಇದೇ ಸಮಯದ ಸುಮಾರಿಗೆ, ಭಾರತದ ಎರಡು ಪ್ರಮುಖ ಭಾರತೀಯ ವರ್ಗಗಳು ಕಾಣಿಸಿಕೊಂಡವು. ಅವು ANI- Ancestral North INDIANS. ಹಾಗೂ Ancestral South INDIANS. ಆಗ ತಾನೇ ಬಂದಿದ್ದ ಇಂಡೋ-ಆರ್ಯರು ಉತ್ತರ ಭಾರತದ ಇರಾನಿಯನ್ ಪೂರ್ವಿಕತೆಯನ್ನು ಹೊಂದಿದ್ದ ಹರಪ್ಪನ್ನರ ಜತೆ ಮಿಶ್ರವಾಗಿ ANI ಆದರೆ, ದಕ್ಷಿಣಕ್ಕೆ ಬಂದಿದ್ದಂತಹ ಹರಪ್ಪನ್ನರು ಇಲ್ಲಿನ ಆದಿಮಾನವನ ಜತೆ ಮಿಶ್ರವಾಗಿ ASI ಆದದ್ದು. ಆದರೆ ಇವು ನಾವಿಂದು ಕರೆಯುವ ಉತ್ತರ ಮತ್ತು ದಕ್ಷಿಣ ಭಾರತೀಯರಲ್ಲ, ಬದಲಾಗಿ ಈ ಎರಡು ಪಂಗಡಗಳ ಮುಂದಿನ ಸಾವಿರಾರು ವರ್ಷಗಳ ಕಾಲ ಒಂದಾಗುತ್ತಾ ಒಂದಾಗುತ್ತಾ ಮಿಶ್ರವಾಗುತ್ತೇವೆ. ಆದ್ದರಿಂದ ಇಂದಿಗೂ ಭಾರತವು ಹಲವಾರು ಸಂಸ್ಕೃತಿಗಳ ತಾಣವಾದರೂ, ಬಹುಪಾಲು ಎಲ್ಲಾ ವಲಸಿಗರೂ, ವರ್ಗಗಳ, ಪಂಗಡಗಳು ಒಂದೇ ಪ್ರಾಚೀನತೆಯನ್ನು ಹೊಂದಿವೆ. ಇವಿಷ್ಟು ಈ ಅಧ್ಯಾಯದ ಸಾರ. ಮುಂದಿನ ಕೆಲವು ಉಪ-ಅಧ್ಯಾಯಗಳು ಹಾಗೂ ಕಿರು ಪ್ರಬಂಧಗಳ ಮುಖ್ಯ ಅಂಶಗಳು ಹೀಗಿವೆ.
ಭಾರತದಲ್ಲಿ ನಾವಿಂದು ಗುರುತಿಸುವ ಜಾತಿ ಪದ್ಧತಿ ಕ್ರಿ.ಪೂ. 100 ರ ನಂತರ ಮಾತ್ರ ಕಂಡುಬಂದಿರುವುದು. ಅವು ಸಮಾನ ವೃತ್ತಿಯ ಜನರು ಮದುವೆಯಾಗುವುದರಿಂದ ಹುಟ್ಟಿತು. ಅದು ಆರ್ಯರು ಜಾರಿಗೆ ತಂದಂತದಲ್ಲ.
ಋಗ್ವೇದವು ಭಾರತದ ಪ್ರಾಚೀನ ಕೃತಿಯಾಗಿದೆ.
ಭಾರತಕ್ಕೆ ನಂತರ ಧರ್ಮ ಪ್ರಚಾರಕ್ಕೆ / ವ್ಯಾಪಾರ ಕಸುಬಿಗೆ ಬಂದ ಅರಬ್ಬರು ಹಾಗು ಸಿರಿಯನ್ನರು ಇಲ್ಲಿ ಒಂದಾಗಿ ಸಾಮರಸ್ಯದ ಜೀವನ ನಡೆಸಿದರು.
ವಾಸಿಸುವ ಭೌಗೋಳಿಕತೆ ಹಾಗೂ ಆಹಾರ ಕ್ರಮಗಳ ಆಧಾರದಲ್ಲಿ ಜೀನ್ ಮ್ಯುಟೇಶನ್‍ಗಳಾದದ್ದನ್ನು ನಾವು ಕಾಣಬಹುದು. ಉದಾಹರಣೆಗೆ ಉತ್ತರ ಭಾರತದ ಜನರು ಯಾವಾಗಿನಿಂದ ಹಾಲಿನ ಉತ್ಪನ್ನಗಳ ಮೇಲೆ ಹೆಚ್ಚಾಗಿ ಅವಲಂಬಿತರಾದರೋ ಅಂದಿನಿಂದ ಅವರ ಜೀನಲ್ಲೂ ಅವಕ್ಕೆ ಹೊಂದಿಕೊಂಡಂತಹ ಬದಲಾವಣೆಗಳಾಗಿವೆ.
ಒಟ್ಟಾರೆಯಾಗಿ ಹೇಳುವುದಾದರೆ ನನಗೆ ಈ ಪುಸ್ತಕವು ನಮ್ಮ ಪೂರ್ವೇತಿಹಾಸದ ಪರಿಚಯವನ್ನು ಕೊಟ್ಟಿತ್ತಲ್ಲದೇ, ಓದಿದ ಮೇಲೆ ಒಂದು ಮಾತು ಸ್ಪಷ್ಟವಾಯಿತು “ನಾವ್ಯಾರೂ ಇಲ್ಲಿನ ಮೂಲನಿವಾಸಿಗಳಲ್ಲ ಎಲ್ಲರೂ ಬೇರೆ ಬೇರೆ ಕಡೆಯಿಂದ ವಲಸೆ ಬಂದವರು ಹಾಗೂ ಪರಸ್ಪರ ಮಿಶ್ರಗೊಂಡವರು”.
...................ಕೃತಸ್ವರ ದೀಪ್ತ 9ನೇ ತರಗತಿ
ಸ.ಪ.ಪೂ.ಕಾಲೇಜು ಸುಳ್ಯ.
ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ