-->
ದುಡಿಮೆಯ ಫಲ - ಕಥೆ

ದುಡಿಮೆಯ ಫಲ - ಕಥೆ

       ದೀವಿತ್ 7 ನೇ ತರಗತಿ
       ದ.ಕ.ಜಿ.ಪಂ.ಹಿ.ಪ್ರಾಥಮಿಕ     
       ಶಾಲೆ ನೆಟ್ಲ.ಬಂಟ್ವಾಳ ತಾಲೂಕು
 
                 ದುಡಿಮೆಯ ಫಲ - ಕಥೆ

      ಒಂದು ಊರಿನಲ್ಲಿ ಸೋಮಪ್ಪನೆಂಬ ಒಬ್ಬ ರೈತನಿದ್ದ. ಅವನು ತನ್ನ ಪತ್ನಿ ಮತ್ತು ಮೂರು ಜನ ಗಂಡು ಮಕ್ಕಳೊಂದಿಗೆ ಕೃಷಿ ಕಾಯಕ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದ. ಮಕ್ಕಳೆಲ್ಲರೂ ಚೆನ್ನಾಗಿ ಓದಬೇಕೆಂಬುದು ತಂದೆ ತಾಯಿಯರ ಆಸೆಯಾಗಿತ್ತು. ಅದರಂತೆಯೇ ಮೊದಲ ಮಗ ಪ್ರಕಾಶ ಉತ್ತಮ ವಿದ್ಯಾಭ್ಯಾಸ ಪಡೆದು ವಕೀಲಿ ವೃತ್ತಿ ಮಾಡಲಾರಂಭಿಸಿದ. ಎರಡನೆಯವ ಗಿರೀಶ ಮೆಕಾನಿಕಲ್ ಇಂಜಿನಿಯರಿಂಗ್ ಕಲಿತು ಅದೇ ಕೆಲಸ ಮಾಡಲಾರಂಭಿಸಿದನು. ಆದರೆ ಮೂರನೇ ಮಗ ರಮೇಶನು ಎಸ್. ಎಸ್. ಎಲ್. ಸಿ. ಮುಗಿಸಿದ ಮೇಲೆ ಓದಲು ಆಸಕ್ತಿ ವಹಿಸಲಿಲ್ಲ. ಇದರಿಂದಾಗಿ ಮಗ ಹೆಚ್ಚು ಓದಲಿಲ್ಲವೆಂದು ಸೋಮಪ್ಪನಿಗೆ ಬೇಸರವಿತ್ತು. ಆದರೆ ರಮೇಶನು ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದುದರಿಂದ ತನ್ನ ನಂತರ ಜಮೀನು ಕೆಲಸ ಮಾಡಬಲ್ಲನೆಂಬ ನೆಮ್ಮದಿ ಇತ್ತು. 

        ಮಕ್ಕಳು ವಯಸ್ಸಿಗೆ ಬಂದಿದ್ದರಿಂದ ಸೋಮಪ್ಪನು ಅವರೆಲ್ಲರಿಗೂ ಮದುವೆ ಮಾಡಿಸಿದನು. ಮದುವೆ ಮುಗಿಸಿಕೊಂಡು ಇಬ್ಬರು ಮಕ್ಕಳು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ರಮೇಶ ಹಳ್ಳಿಯಲ್ಲೇ ಉಳಿದ. ಸೋಮಪ್ಪನು ತನಗೆ ವಯಸ್ಸಾಗುತ್ತಿದೆ ಎಂದರಿತು ತನ್ನ ಮೂರುವರೆ ಎಕರೆ ಜಮೀನನ್ನು ಪಾಲು ಮಾಡಿ ಮೂರು ಮಕ್ಕಳಿಗೂ ಸರಿಯಾಗಿ ಹಂಚಿಕೊಡುವ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ. ಆದರೆ ಪ್ರಕಾಶ ಮತ್ತು ಗಿರೀಶ ಆಸ್ತಿಯೆಲ್ಲಾ ಕಿರಿಯವನಿಗೆ ಇರಲಿ ಎಂದು ಹೇಳಿದರು. ಆದರೆ ಸೋಮಪ್ಪನು ಎರಡೆಕರೆ ಜಮೀನನ್ನು ರಮೇಶನ ಹೆಸರಿಗೆ ವರ್ಗಾಯಿಸಿ ಉಳಿದ ಒಂದುವರೆ ಎಕರೆ ಜಮೀನನ್ನು ತನ್ನ ಬಳಿಯೇ ಇಟ್ಟುಕೊಂಡ. ಮುಂದೊಂದು ದಿನ ತನ್ನ ಇಬ್ಬರು ಮಕ್ಕಳು ಬಂದು ಕೇಳಿದರೆ ಇರಲಿ ಎನ್ನುವ ದೂರದೃಷ್ಟಿಯಿಂದ ಹಾಗೆ ಮಾಡಿದ. 

       ಪ್ರಕಾಶನು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತ ಉತ್ತಮ ಹೆಸರು ಸಂಪಾದನೆ ಮಾಡಿದ. ಗಿರೀಶನು ಕೂಡ ಕೆಲಸದಲ್ಲಿ ಭಡ್ತಿ ಹೊಂದಿ ಉತ್ತಮ ಸಂಪಾದನೆ ಪಡೆಯಲಾರಂಭಿಸಿದ....

         ರಮೇಶ ತನ್ನ ಹೊಲದಲ್ಲಿ ಅಡಿಕೆ ಸಸಿ, ವೀಳ್ಯದೆಲೆ, ತರಕಾರಿ ಬೆಳೆಯಲಾರಂಭಿಸಿದ. ನಾಲ್ಕು ಹೆಚ್ಚು ದನಗಳನ್ನು ಖರೀದಿಸಿ ಹೈನುಗಾರಿಕೆ ಮತ್ತು ಕೋಳಿಸಾಕಾಣಿಕೆ ಮಾಡಲಾರಂಭಿಸಿದ. ಕೃಷಿಯಲ್ಲಿ ಸಾವಯವ ಗೊಬ್ಬರವನ್ನೇ ಬಳಸತೊಡಗಿದ. ಇದರಿಂದಾಗಿ ಇವನು ಬೆಳೆದ ಬೆಳೆಗಳಿಗೆ ಹೆಚ್ಚಿನ ಬೇಡಿಕೆ ಬರಲಾರಂಭಿಸಿತು. ಜಾಗ ಸಾಕಾಗದಿದ್ದಾಗ ಇತರರ ಜಮೀನನ್ನು ಗೇಣಿಗೆ ಪಡೆದು ಅಲ್ಲಿಯೂ ಬಾಳೆಗಿಡ ಬೆಳೆದ. ಒಳ್ಳೆಯ ಫಸಲೇ ಬಂತು. ಇವನ ಕೃಷಿ ಪದ್ಧತಿಗೆ ಮೆಚ್ಚಿದ ಜನತೆ ಮತ್ತು ಸರಕಾರ ಪ್ರಗತಿಪರ ಕೃಷಿಕ ಎನ್ನುವ ಪ್ರಶಸ್ತಿ ನೀಡಿ ಗೌರವಿಸಿದರು. ಹಲವಾರು ಸನ್ಮಾನಗಳು ದೊರಕಿದವು. ಸೋಮಪ್ಪನು ಸಂತೋಷದಿಂದ ತನ್ನ ಮಗನನ್ನು ಕೊಂಡಾಡಿದನು. ರಮೇಶನು ಕೃಷಿಯಲ್ಲಿ ಆಧುನಿಕ ಪದ್ಧತಿಯನ್ನು ಅಳವಡಿಸಿ ಹೆಚ್ಚು ಅಭಿವೃದ್ಧಿಪಡಿಸಿದನು. ತಾನು ಹೆಚ್ಚು ಓದಲಿಲ್ಲವೆಂದು ಬೇಸರವಿತ್ತು. ತನ್ನ ಮಕ್ಕಳು ಕೃಷಿ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಿ ತನ್ನ ಕೃಷಿಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಆಶಯ ವ್ಯಕ್ತಪಡಿಸುತ್ತಾನೆ. ಒಟ್ಟಿನಲ್ಲಿ ಸಾಧನೆಗೆ ಯಾವ ಕ್ಷೇತ್ರವಾದರೇನು ದುಡಿಮೆ ಮುಖ್ಯ ಎನ್ನುವುದನ್ನು ತೋರಿಸಿ ಕೊಟ್ಟ ಧೀಮಂತ ರೈತ ರಮೇಶ. 

 
    ........................ದೀವಿತ್ 7 ನೇ ತರಗತಿ
    ದ.ಕ.ಜಿ.ಪಂ.ಹಿ.ಪ್ರಾಥಮಿಕ     
    ಶಾಲೆ ನೆಟ್ಲ.ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article