-->
ಶಿಕ್ಷಣ ಎಂದರೆ ....

ಶಿಕ್ಷಣ ಎಂದರೆ ....

    ರಮೇಶ ನಾಯ್ಕ, ಉಪ್ಪುಂದ.  
    ಕನ್ನಡ ಭಾಷಾ ಶಿಕ್ಷಕರು. 
    ಸರ್ಕಾರಿ ಪ್ರೌಢಶಾಲೆ, ದರೆಗುಡ್ಡೆ. 
    ಮೂಡಬಿದ್ರೆ ತಾಲೂಕು .ದಕ್ಷಿಣ ಕನ್ನಡ     


                       ಶಿಕ್ಷಣ ಎಂದರೆ.....

             ಆಧುನಿಕ ಸಮಾಜದ ಮೂಲಭೂತ ಚಟುವಟಿಕೆಗಳಲ್ಲಿ ಶಿಕ್ಷಣವು ಒಂದು. ಇದು ಆಧುನಿಕ ಮಾನವ ಸಮೂಹ ಜೀವನದ ಅನಿವಾರ್ಯ ಅವಶ್ಯಕತೆಯಾಗಿದೆ. ಶಿಕ್ಷಣವೆಂದರೆ ಮೆದುಳಿನಲ್ಲಿ ಬರಿಯ ಮಾಹಿತಿ ತುರುಕುವುದಲ್ಲ, ಅಲ್ಲಿ ಜೀರ್ಣವಾಗದೆ ಆಯುಷ್ಯವಿಡಿ ಗೊಂದಲವೆಬ್ಬಿಸುವ ಜ್ಞಾನವಲ್ಲ, ವಿದ್ಯೆಯಿಂದ ಉಚ್ಛ ವಿಚಾರಗಳು ರಕ್ತಗತವಾಗಬೇಕು. ಜೀವನದಲ್ಲಿ ಮೂಡುವಂತಾಗಬೇಕು. ಶೀಲ ಮೈ ತುಂಬುವಂತಾಗಬೇಕು. ಇಂತಹ ವಿಚಾರಗಳು ಶಿಕ್ಷಣದಲ್ಲಿ ಸಾಕಾರಗೊಳ್ಳಬೇಕು. ಆ ಮುಖೇನ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಬೇಕು.                                                   ಇಂದಿನ ಶಿಕ್ಷಣದ ಬಗ್ಗೆ ಆಲೋಚನೆಗೈದಾಗ ಅಸಮಾನತೆ, ಅತೃಪ್ತಿ, ಮದ, ಮತ್ಸರ ತಾಂಡವವಾಡುವ ರಣರಂಗವೆನಿಸುತ್ತದೆ. ಇಂದಿನ ವಿದ್ಯಾರ್ಥಿಗಳು ಮುಂದಿನ ಭವ್ಯ ಭಾರತವನ್ನು ಕಟ್ಟಬೇಕಾಗಿರುವುದರಿಂದ ಅವರ ಬೌದ್ಧಿಕಮಟ್ಟ ಸಮಾನರೀತಿಯಲ್ಲಿ ಸಾಕಾರಗೊಳಿಸಬೇಕಾಗಿದೆ. ಶಿಕ್ಷಣವು ಮಾನವ ಜೀವನದ ಉಸಿರು, ನಾಗರೀಕ ಸಮಾಜದ ಸುಲಕ್ಷಣ. ಶಿಕ್ಷಣವು ವ್ಯಕ್ತಿಯ ವ್ಯಕ್ತಿತ್ವಕ್ಕೆ ಎಷ್ಟು ಅವಶ್ಯಕವೋ ಸಮಾಜದ ಸ್ಥಿರತೆ ಮತ್ತು ಭದ್ರತೆ, ಐಕ್ಯಮತದ ಸ್ಥಾಪನೆಗೂ ಅಷ್ಟೇ ಅಗತ್ಯವಿರುವುದರಿಂದ ಸಮಾಜದ ಸಮಸ್ತ ಪ್ರಜೆಗಳಿಗೆ ಶಿಕ್ಷಣ ದೊರೆಯುವುದು ತಿಮುಖ್ಯ.       

             ವೇಯಿನ್ ರೀಡರ್ ರವರ " ಶಿಕ್ಷಣ ಅನುಭವ ಭಂಡಾರಕ್ಕೆ ಬೀಗದ ಕೈ, ಸಾಮಾಜಿಕ ಪುನರುತ್ಥಾನಕ್ಕೆ ದಾರಿ " ಎನ್ನುವ ನುಡಿಯನ್ನು ಇಂದಿನ ಶಿಕ್ಷಣದಲ್ಲಿ ಸೂತ್ರೀಕರಿಸಬೇಕಾಗಿದೆ. ಆದರೆ ಇಂದು ಶಿಕ್ಷಣಾರ್ಥಿಗಳು ಜಾತಿ - ಪಂಥ - ಕುಲಗೋತ್ರವನ್ನು ಶೈಕ್ಷಣಿಕ ಸಂಸ್ಥೆಗಳವರೆಗೆ ತರಬೇಕಾಗಿದೆ. ಸಮಾಜದಲ್ಲಿ ಜಾತಿ-ಮತ ತೊರೆದು ಸಮಾನ ಶಿಕ್ಷಣ ನೀಡಿ, ಸಮಾನತೆಯ ಭಾವನೆಯನ್ನು ಬೆಳೆಸುವುದು ಅತಿ ತುರ್ತಾಗಿದೆ. " ದೇಶದ ಭವಿಷ್ಯ ರೂಪಿಸುವುದು ಅಲ್ಲಿರುವ ಅಣೆಕಟ್ಟುಗಳಲ್ಲ, ಕಾರ್ಖಾನೆಗಳಲ್ಲ, ಅಲ್ಲಿನ ಶಿಕ್ಷಣ " ಎನ್ನುವ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ನುಡಿ ಎಷ್ಟು ಸಮಂಜಸವಾಗಿದೆ. ಆದ್ದರಿಂದ ಶಿಕ್ಷಣ ರಂಗದಲ್ಲಿ ವಿದ್ಯಾರ್ಥಿಗಳಲ್ಲಿ ಸಮಾನ ಸಹನಶೀಲತೆ, ಸಮಾನ ಸಹಾನುಭೂತಿ, ಸಮಾನವಾಗಿ ಬದುಕುವ ದಾರಿಗೆ ತುರ್ತಾಗಿ ಮತ್ತು ಸ್ಪಷ್ಟ ಗುರಿ ಸಾಧನೆಗೆ ಸಹಕಾರ ಬೇಕಾಗಿದೆ. ಅಲ್ಲದೆ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಬಾರದಂತೆ ಕಾಯ್ದುಕೊಳ್ಳುವ ವಾತಾವರಣವನ್ನು ನಿರ್ಮಾಣ ಮಾಡಬೇಕು. ಹಾಗೆಯೇ ವಿದ್ಯಾರ್ಥಿಗಳು ನಾವಿರುವ ಸ್ಥಳ, ಊರು, ಮನೆ ಇವೆಲ್ಲಾ ಸರಿಯಿಲ್ಲವೆಂದು ಕಿರಿಕಿರಿ ಪಟ್ಟುಕೊಳ್ಳುತ್ತಿದ್ದರೆ ನೆಮ್ಮದಿ ಬಂದೀತೆ ? ಹೀಗೆಯೇ ನಮ್ಮ ಸುತ್ತಮುತ್ತಲಿನ ಜನರ ವಿಷಯದಲ್ಲಿ ಅಸಮಾನತೆ, ಅತೃಪ್ತಿ ಪಟ್ಟುಕೊಂಡು ಅವರೊಡನೆ ದ್ವೇಷ-ಅಸೂಯೆ ಕಟ್ಟಿಕೊಂಡರೆ ಜೀವನ ನಡೆಸಲಾದೀತೆ ?. ಹೀಗೆಯೇ ಎಲ್ಲರೂ ತಮ್ಮ ತಪ್ಪನ್ನು ತಾವೇ ಅರ್ಥ ಮಾಡಿಕೊಂಡು ಬಾಳುವುದು ಕಲಿತರೆ ಅವನ ಪ್ರಬುದ್ಧತೆ ತೃಪ್ತಿಯಾಗಿ ಪೂರ್ಣಗೊಂಡು ಸುಖವಾಗಿ ಬಾಳುವ ವಾತಾವರಣ ಸೃಷ್ಟಿಯಾಗಲು ಸಾಧ್ಯ.    
                                                           
               ಕಲಿಕೆ ಎಂಬ ಪರಿಕಲ್ಪನೆ ಶಿಕ್ಷಣದ ಸರ್ವಾಂತರ್ಯಾಮಿ. ಇದನ್ನು ಪ್ರತಿಯೊಬ್ಬನ ದೇಹ, ಮನದ ಬೆಳವಣಿಗೆಯಿಂದ ಬೇರ್ಪಡಿಸಲಾಗದ ಸಂಗತಿ. ಇದರಿಂದ ವ್ಯಕ್ತಿಯು ಪರಿಸರದಿಂದ ತನ್ನೆಡೆಗೆ ಎಡೆಬಿಡದೆ ಬರುತ್ತಿರುವ ಪ್ರೇರಕವನ್ನು ಗಮನಿಸಿ, ಅವುಗಳಿಗೆ ಸೂಕ್ತವಾದ ಪರಿಹಾರವನ್ನು ಕಂಡುಕೊಂಡು ಸಮಾಜದಲ್ಲಿ ತನ್ನ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದರೆ ಉತ್ತಮ. " ಯಾವ ದೊಡ್ಡ ನೀತಿವಂತನೂ ಒಂದೇ ದಿನದಲ್ಲಿ ಹಾಗಾಗಲಿಲ್ಲ ", " ಅದರಲ್ಲೂ ಯಾವನೊಬ್ಬನು ಹುಟ್ಟಿನಲ್ಲೆ ನೀತಿವಂತನಾಗಿರಲಿಲ್ಲ ". ನಮ್ಮಿಬ್ಬರನ್ನೂ ರಕ್ಷಿಸಲಿ, ನಾವಿಬ್ಬರೂ ನಮ್ಮ ನಮ್ಮ ಅನುಭವವನ್ನು ಹಂಚಿಕೊಳ್ಳೋಣ. ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡೋಣ, ನಮ್ಮಿಬ್ಬರ ವ್ಯಾಸಂಗದಿಂದ ನಮಗೆ ಬೆಳಕು ಬರಲಿ. ನಮ್ಮಿಬ್ಬರ ನಡುವೆ ದ್ವೇಷ ಬಾರದಿರಲಿ. ಎಂಬ ಕೇನೋಪನಿಷತ್ ನ ವಾಣಿಯನ್ನು ಇಲ್ಲಿ ಸ್ಮರಿಸಬಹುದಾಗಿದೆ.                    

          ವಿದ್ಯಾರ್ಥಿಗಳಲ್ಲಿ ಶಿಕ್ಷಣದೊಂದಿಗೆ ಸದ್ಗುಣ ಮೈಗೂಡಿಸಬೇಕು. 

೧) ವ್ಯಕ್ತಿಗತ ಸದ್ಗುಣ - ಧೈರ್ಯ, ಪರಿಪಕ್ವತೆ, ಶ್ರೇಷ್ಠತೆ, ಸ್ವಾವಲಂಬನೆ ಇತ್ಯಾದಿ.

೨) ನೆರೆಹೊರೆಯವರೊಂದಿಗೆ ಬಾಳುವ ಸದ್ಗುಣ - ನಿಷ್ಠೆ, ತಾಳ್ಮೆ, ಕೃತಜ್ಞತೆ, ಸ್ವಾತಂತ್ರ್ಯ ಇತ್ಯಾದಿ.

೩)ಸಾಮಾಜಿಕ ಸದ್ಗುಣ- ಪ್ರೀತಿ,
 ಭಾತೃತ್ವ, ಅತಿಥಿ ಸತ್ಕಾರ, ನ್ಯಾಯ, ಅಹಿಂಸೆ, ಜಾತ್ಯತೀತತೆ, ಧರ್ಮ- ಸಹಿಷ್ಣುತೆ, ಸಹಾನುಭೂತಿ ಇತ್ಯಾದಿ.        
                                                              
             ಇವುಗಳು ಶಿಕ್ಷಣದಿಂದಲೇ ದೊರೆಯಬೇಕು. ಆಗ ಮಾತ್ರ ಶಿಕ್ಷಣಕ್ಕೆ ಅರ್ಥ ಬರುತ್ತದೆ.ಆದರೆ ಇಂದಿನ ಸ್ಥಿತಿ ಹೇಗಿದೆಯೆಂದರೆ - ' ಹಿಂದೆ ಗುರುವೊಬ್ಬ ಇದ್ದ, ಮುಂದೆ ಗುರಿಯಿತ್ತು. ಇಂದು ಗುರುವೂ ಇಲ್ಲ, ಮುಂದೆ ಗುರಿಯೂ ಇಲ್ಲ" ಎಂಬ ಭಾವನೆ ಮೂಡುತ್ತದೆ. ಎಲ್ಲಿಯ ತನಕ ಉಪಲಕ್ಷ್ಯಗಳಿಂದ ಲಕ್ಷ್ಯ, ಲಕ್ಷ್ಯ ಗಳಿಂದ ಧ್ಯೇಯ, ಧ್ಯೇಯಗಳಿಂದ ನೈತಿಕಾರ್ಥಗಳು ಶಿಕ್ಷಣದಲ್ಲಿ ಇರುವುದಿಲ್ಲವೋ, ಅಲ್ಲಿಯವರಿಗೆ ಶಿಕ್ಷಣ ಎಂಬುದು ಕೆಲವರ ಪಾಲಿಗೆ ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಳ್ಳುವ ಕಸ್ತೂರಿಯಾಗಿ ಉಳಿಯುತ್ತದೆ.    

                    ಶಿಕ್ಷಣ ಎನ್ನುವುದು ಕೇವಲ ಉದ್ಯೋಗಕ್ಕಲ್ಲ , ಅದು ಜೀವನದ ಅರ್ಥ ಪೂರ್ಣತೆಗೆ ಎಲ್ಲರಲ್ಲೂ ಇರುವ ನೈಜ ಅಸ್ತ್ರ ಎಂದು ತಿಳಿಯಬೇಕಾಗಿದೆ. ನೀತಿಯನ್ನು ತಿಳಿದವರು, ಪ್ರಕೃತಿಯ ನಿಯಮವನ್ನು ತಿಳಿದವರು, ವೇದವಿದು, ಶಾಸ್ತ್ರಜ್ಞರು, ಬ್ರಹ್ಮ ಜ್ಞರೂ ಇದ್ದಾರೆ. ಆದ್ದರಿಂದ ಸಮಾಜದ ಅಜ್ಞಾನವನ್ನು ತೊಲಗಿಸುವುದರೊಂದಿಗೆ ಅಜ್ಞಾನಿಯಲ್ಲಿ ಜ್ಞಾನದ ದೀವಿಗೆಯನ್ನು ಬೆಳಗಿಸಿ, ಶಿಕ್ಷಣದ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳೇ ತಮ್ಮ ಭವಿಷ್ಯ ರೂಪಿಸುವ, ದೇಶದ ಭವಿಷ್ಯ ಬರೆಯುವ ಕಲ್ಕಿಗಳಾಗುವಂತಾಗಲಿ.                          
 ನಹೀ ಜ್ಞಾನೇನ ಸದೃಶಂ                               

  ರಮೇಶ ನಾಯ್ಕ, ಉಪ್ಪುಂದ.  
ಕನ್ನಡ ಭಾಷಾ ಶಿಕ್ಷಕರು. 
ಸರ್ಕಾರಿ ಪ್ರೌಢಶಾಲೆ, ದರೆಗುಡ್ಡೆ. 
ಮೂಡಬಿದ್ರೆ ತಾಲೂಕು .ದಕ್ಷಿಣ ಕನ್ನಡ

Ads on article

Advertise in articles 1

advertising articles 2

Advertise under the article