-->
ಓ ಮುದ್ದು ಮನಸೇ.... ! - 6

ಓ ಮುದ್ದು ಮನಸೇ.... ! - 6

ಶ್ರೀ ಗುರುರಾಜ ಇಟಗಿ
ಮಕ್ಕಳ ಆಪ್ತ ಸಮಾಲೋಚಕರು
ಮಂಗಳೂರು
          
               ಓ ಮುದ್ದು ಮನಸೇ....! - 6

 ( ಓ ಮುದ್ದು ಮನಸೇ......! - 5 ರಿಂದ ಮುಂದುವರಿದ ಭಾಗ..... ಸೆಲೆಕ್ಷನ್ ಇದೆ ಎಂದು ಸ್ಕೂಲಿಗೆ ಹೋದ ಸ್ನೇಹಾ ಮನೆಗೆ ಬರಲೇ ಇಲ್ಲ....) 

                     ಇಲ್ಲಿಂದ ಇನ್ನೆಷ್ಟು ದೂರ ಆಗುತ್ತೆ ನಿನ್ನ ಮನೆ ?.... ಸ್ನೇಹಾ (ಹೆಸರು ಬದಲಿಸಲಾಗಿದೆ) ಕೇಳಿದಳು. ನೀನ್ಯಾಕೆ ಅಷ್ಟೊಂದು ಭಯಾ ಪಡ್ತಿದ್ದೀಯಾ, ನಾನಿಲ್ವಾ ನಿನ್ ಜೊತೆ ?.... ನವೀನ್ (ಹೆಸರು ಬದಲಿಸಲಾಗಿದೆ) ಅವಳ ಕೆನ್ನೆ ಸವರಿ, ಮನೇಲಿ ಪ್ರೋಗ್ರಾಮ್ ಇದೆ ಅಪ್ಪ ಎಮ್.ಎಲ್.ಏ ಬೇರೆ ತುಂಬಾ ಜನಾ ಇರ್ತಾರೆ ಮೈಸೂರ್ ನ ರಾಮಾನುಜ ರೋಡ್ ಹತ್ರ ನನ್ನ ಫ್ರೆಂಡ್ ಒಬ್ಬ ಇದ್ದಾನೆ, ಅವನ್ಗೆ ಹೇಳಿ ರೂಮ್ ಅರೆಂಜ್ ಮಾಡಿದ್ದೀನಿ ಇವತ್ತು ಅಲ್ಲೇ ಇದ್ದು ನಾಳೆ ಹೋಗೋಣ. ಬೇಡಾ ಇವತ್ತೇ ಹೋಗೋಣ, ನನ್ಗೆ ಭಯಾ ಆಗ್ತಿದೆ, ಸ್ನೇಹಾ ಗಾಬರಿಗೊಂಡಳು....!! ನನ್ಮೇಲೆ ನಂಬ್ಕೆ ಇಲ್ವಾ?.... ಮನೆಗ್ ಹೋಗಿ ಅಪ್ಪನ್ ಹತ್ರ ನಾನ್ ಮಾತಾಡ್ತೀನಿ.... ಅವರ್ಜೊತೆ ನಾವಿಬ್ರು ನಿನ್ ಮನೆಗೆ ಹೋಗೋಣ ಆಯ್ತಾ... ಅದ್ಸರಿ ನಿನ್ ಹತ್ರ ಕಾರ್ ಇದೆ ಅಂದಿದ್ಯಲ್ಲ ಮತ್ಯಾಕೆ ಬಸ್ಸಲ್ಲಿ ಬಂದಿದ್ದು?... ಸ್ನೇಹಾ ನವೀನನ ಮುಖ ನೋಡಿದಳು. ಅದೂ... ಮನೆಯಿಂದ ಕಾರ್ ತಂದ್ರೆ ಅಪ್ಪ ಎಲ್ಲಿಗೆ ಅಂತ ಕೇಳ್ತಾರೆ.. ಅದ್ಕೆ ಅವರಿಗೆ ಹೇಳ್ದೇನೆ ನಾನು ಬಸ್ಸಲ್ಲಿ ಬಂದಿರೋದು. ನಿನ್ನ ಕಾಲೇಜ್ ಎಲ್ಲಿರೋದು ?.... ಸ್ನೇಹಾಳ ಪ್ರಶ್ನೆಗಳು ನಿಲ್ಲಲಿಲ್ಲ. ಸ್ವಲ್ಪ ಸುಮ್ನೆ ಇರು ಮಾರಾಯ್ತಿ...... ರೂಮ್ಗೆ ಹೋದ್ಮೇಲೆ ಎಲ್ಲಾ ಹೇಳ್ತೀನಿ...!!

             ರಾಮಾನುಜ... ರಾಮಾನುಜ... ಯಾರ್ರೀ ಇಳಿಯೋರು? ಕಂಡಕ್ಟರ್ ಕೂಗಿದ ! ಮುಖವನ್ನು ದುಪ್ಪಟ್ಟಾದಿಂದ ಮರೆಮಾಡುವಂತೆ ಹೇಳಿದ ನವೀನ ಬಸ್ಸಿಂದ ಇಳಿದವನೇ ಅವಳ ಕೈ ಹಿಡಿದು ಸರಸರನೆ ನಡೆಯ ತೊಡಗಿದ. ಯಾಕೋ, ಓಡ್ತಿದ್ದೀಯಾ? ಸುಮ್ನೆ ಬಾ ಮಾತಾಡ್ಬೇಡಾ ನವಿನ್ ಗದರಿದ. ಗಬ್ಬು ನಾರುತ್ತಿದ್ದ ಕೊಳಚೆ ನೀರು ಕಿರಿದಾದ ರಸ್ತೆಯ ಮೇಲೇ ಹರಿಯುತ್ತಿತ್ತು. ಅದು ರಸ್ತೆಯೂ ಅಲ್ಲ ಇಕ್ಕೆಲಗಳಲ್ಲಿ ಒತ್ತೊತ್ತಾದ ಮನೆಗಳಿಂದ ಕೂಡಿದ ಕಿರಿದಾದ ಓಣಿ. ಎಲ್ಲಿಗೆ ಕರ್ದ್ಕೊಂಡು ಹೋಗ್ತಿದ್ದೀಯೋ? ಇನ್ನೆಷ್ಟು ದೂರ? ನಂಗೆ ಭಯಾ ಆಗ್ತಿದೆ. ಯಾವುದಕ್ಕೂ ಉತ್ತರವಿಲ್ಲ.....! ಎರಡು ಮಹಡಿಯ ಯಾವುದೋ ಹಳೇ ಕಾಲದ ಮನೆಯಂತಿದ್ದ ಕಟ್ಟಡದ ಬಳಿ ಬಂದು ನಿಂತ ನವೀನ್, ಯಾರಿಗೋ ಕರೆ ಮಾಡಿ ಬರುವಂತೆ ಹೇಳಿದ. ನಿಮಿಷ ಮಾತ್ರದಲ್ಲಿ ಯಾವುದೋ ಹಳೆ ಆಟೋ ರಿಕ್ಷಾ ಬಂದು ನಿಂತಿತು. ಬಡಕಲು ದೇಹ ಉದ್ದುದ್ದ ಗಡ್ಡದ ಒಬ್ಬ, ಇನ್ನೊಬ್ಬ ಡುಮ್ಮಾ ಆಟೋದಿಂದ ಇಳಿದು ನವೀನ್ ಗೆ ಕೈ ಸನ್ನೆ ಮಾಡಿ ಬರುವಂತೆ ಹೇಳಿದರು. ತಡಮಾಡದ ನವೀನ್ ಸ್ನೇಹಾಳನ್ನು ಕರೆದುಕೊಂಡು ಗಡಿ ಬಿಡಿಯಲ್ಲಿ ಆಟೋ ಹತ್ತಿದ. ಸ್ನೇಹಾಳಿಗೆ ಯಾಕೋ ಸರಿ ಅನ್ನಿಸಲಿಲ್ಲ, ಭಯಾ, ಗಾಬರಿ ಅಳೋದಕ್ಕೆ ಶುರುವಿಟ್ಟುಕೊಂಡಳು. ನವೀನ್ ಪ್ಲೀಸ್, ನಾನ್ ವಾಪಾಸ್ ಮನೆಗೆ ಹೋಗ್ತೀನಿ. ನೀನು ನಿಮ್ಮನೆಗೆ ಕರ್ಕೊಂಡು ಹೋಗ್ತೀನಿ ಇವತ್ತೇ ವಾಪಸ್ ಹೋಗ್ಬಹ್ದು ಅಂತಾ ಹೇಳಿ ಎಲ್ಲಿಗೋ ಕರ್ಕೊಂಡು ಹೋಗ್ತಿದ್ದೀಯಾ. ಪ್ಲೀಸ್ ಕಣೋ ನಂಗೆ ಭಯಾ ಆಗ್ತಿದೆ. ಕೇಳಿಸಿಕೊಂಡರೂ ಕೇಳದಂತೆ ನಟಿಸಿದ ನವೀನ್. ಸರಿ ಹಾಗಾದ್ರೆ ನನ್ಗೆ ನನ್ನ ಮೊಬೈಲ್ ಕೊಡು ನಾನು ಮನೆಗೆ ಕಾಲ್ ಮಾಡ್ಬೇಕು, ಸ್ನೇಹಾ ಕೇಳಿದಳು. ನಿನ್ನ ಮೊಬೈಲ್ ಆನ್ ಇದ್ರೆ ಮನೇವ್ರು ಕಾಲ್ ಮಾಡ್ಬಹ್ದು ಸ್ವಿಚ್ ಆಫ್ ಮಾಡಿ ನಂಗೆ ಕೊಡು ಆಮೇಲೆ ಕೊಡ್ತೀನಿ ಅಂತ ಸ್ನೇಹಾಳ ಮೊಬೈಲನ್ನು ತನ್ನ ಬಳಿ ಇಟ್ಟು ಕೊಂಡಿದ್ದ ನವೀನ್, ಈಗ ಕಾಲ್ ಮಾಡಿದ್ರೆ ಸುಮ್ನೆ ಅವ್ರು ಗಾಬರಿ ಆಗ್ತಾರೆ, ಆಮೇಲೆ ನಾನೇ ಮಾಡಿ ಕೊಡ್ತೇನೆ ಮಾತಾಡು ಎಂದವನೇ ಡ್ರೈವರ್ ಬಳಿ ಆಟೋ ನಿಲ್ಲಿಸುವಂತೆ ಸೂಚಿಸಿದ.
         ಇನ್ಯಾವುದೋ ಬಿಲ್ಡಿಂಗ್ ಬಳಿ ನಿಂತ ಆಟೋ ಇಳಿದ ನವೀನ್ ಸ್ನೇಹಾಳನ್ನು ಕರೆದುಕೊಂಡು ಒಳ ನಡೆದ. ಕಸಗುಡಿಸದೆ ಅದೆಷ್ಟು ತಿಂಗಳು ಕಳೆದಿವೆಯೋ ಗೊತ್ತಿಲ್ಲ, ಸಿಗರೇಟ್ ವಾಸನೆ ಬೇರೆ, ಮನೆಯಲ್ಲಿ ಯಾರೂ ವಾಸವಿದ್ದಂತೆ ಕಾಣುತ್ತಿಲ್ಲ. ಸ್ನೇಹಾ ಗಾಬರಿಗೊಂಡಳು, "ಇಲ್ಗ್ಯಾಕೋ ಕರ್ಕೊಂಡ್ ಬಂದೇ! ಐ ವಾಂಟು ಗೋ ಹೋಮ್, ಪ್ಲೀಸ್ ಗೀವ್ ಮೀ ಮೈ ಮೊಬೈಲ್ ಫೋನ್" ಹಟ ಹಿಡಿದಳು ಸ್ನೇಹಾ. ಇಲ್ಲಿಯವರೆಗೂ ಸಹನೆಯಿಂದಲೇ ವರ್ತಿಸುತ್ತಿದ್ದ ನವೀನ್ ಏಕಾಏಕಿ ಸ್ನೇಹಾಳ ಮೇಲೆರಗಿದ....!! ಅವಳ ಕತ್ತು ಬಿಗಿಯಾಗಿ ಹಿಡಿದು, ಜಾಸ್ತಿ ಮಾತಾಡಿದ್ರೆ ಸಾಯಿಸಿ ಬಿಡ್ತೀನಿ ಅಂದ, ಇದು ನಿಮ್ಮೂರಲ್ಲ, ನಾನು ಹೇಳ್ದಂಗೆ ಕೇಳ್ಬೇಕು ಅಷ್ಟೇ. ಗದ್ಗದಿತಳಾದಳು ಸ್ನೇಹಾ...!!!

            ಅನಾಮಿಕ ಮೊಬೈಲ್ ಕರೆಗಳಿಗೆ ಮರುಳಾಗಿ, ಅಪ್ಪ ಅಮ್ಮನಿಗೆ ಸುಳ್ಳು ಹೇಳಿ, ಸ್ಕೂಲಿಗೆ ಚಕ್ಕರ್ ಹೊಡೆದು, ಹುಡುಗನನ್ನು ಭೇಟಿ ಮಾಡೋಕೆ ಬಂದಿದ್ದ ಸ್ನೇಹಾ ಅದೆಂತಹ ಮೋಸದ ಜಾಲದಲ್ಲಿ ಸಿಲುಕಿದ್ದೇನೆ ಎಂದು ಅರ್ಥೈಸ್ಕೊಳ್ಳುವಷ್ಟರ ಹೊತ್ತಿಗೆ ತಡವಾಗಿಬಿಟ್ಟಿತ್ತು...!!!

         ಒಂದಿಡೀ ದಿನ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಒಳಗಾದ ಸ್ನೇಹ ಜರ್ಜರಿತಳಾದಳು, ನವೀನ್ ನ ಮುಷ್ಠಿಯಿಂದ ತಪ್ಪಿಸಿಕೊಳ್ಳಲಾಗದೆ ಚಡಪಡಿಸಿದಳು. ಆ ದಿನ ರಾತ್ರಿ ನವೀನ್ ತನ್ನ ಗೆಳೆಯರೊಟ್ಟಿಗೆ ಸೇರಿ ಕುಡಿದು ನಿದ್ರೆಗೆ ಜಾರಿದ. ಅದೇ ಸಮಯವನ್ನು ಬಳಸಿಕೊಂಡ ಸ್ನೇಹಾ ನವೀನ್ ನ ಕಿಸೆಯಿಂದ ತನ್ನ ಮೊಬೈಲ್ ಎತ್ತಿಕೊಂಡು ಅಪ್ಪನ ನಂಬರ್ಗೆ ಕಾಲ್ ಮಾಡಿದಳು.

         ಹೆಲೋ ಹೆಲೋ... ಪಪ್ಪಾ ನಾನು ಸ್ನೇಹಾ, ಪ್ಲೀಸ್ ಹೆಲ್ಪ್ ಮಿ ಪಪ್ಪ, ಐ ಯಾಮ್ ಸಾರಿ.. ಸ್ನೇಹಾ ಪ್ಲೀಸ್ ಡೋಂಟ್ ಬಿ ಸ್ಕೇರ್ಡ್. ನಾನು ಪೋಲೀಸ್ ಇನ್ಸ್ಪೆಕ್ಟರ್ ಮಾತಾಡೋದು. ನೀನು ಎಲ್ಲಿದ್ದೀಯಾ ಅಂತ ಗೊತ್ತಾ? ಪ್ಲೀಸ್ ಹೆಲ್ಪ್ ಮಿ ಸರ್.. ಭಯಾ ಆಗ್ತಿದೆ ನಂಗೆ. ಸರ್ ಇದು ಮೈಸೂರ್, ಆದ್ರೆ ನಾನ್ ಇರೋ ಜಾಗ ಯಾವ್ದು ಅಂತ ಗೊತ್ತಿಲ್ಲ ನಂಗೆ. ನವೀನ್ ಅನ್ನೋವ್ನು ಇಲ್ಲಿಗೆ ಕರ್ಕೊಂಡು ಬಂದಿದ್ದಾನೆ ಸರ್. ಬೇಗ ಬನ್ನಿ ಸರ್ ಪ್ಲೀಸ್... ಕರೆ ನಿಂತಿತು.

          ಸ್ನೇಹಾಳ ನಂಬರ್ ಟ್ರೇಸ್ ಮಾಡಿದ ಪೋಲೀಸರಿಗೆ ಮೈಸೂರು ತಲುಪಲು ಬಹಳ ಸಮಯ ಹಿಡಿಯಲಿಲ್ಲ. ನವೀನ್ ಮತ್ತು ಅವನ ಗೆಳೆಯರನ್ನು ಅರೆಸ್ಟ್ ಮಾಡಿದ ಪೋಲೀಸರು ಅವರನ್ನು ನೇರವಾಗಿ ಸ್ಟೇಷನ್ನಿಗೆ ಕರೆದುಕೊಂಡು ಹೋಗಿ ತರ ತರದ ಬಿಸಿ ಬಿಸಿ ಕಜ್ಜಾಯಗಳನ್ನು ಉಣಬಡಿಸಿದರು. ಇತ್ತ ಸ್ನೇಹಾಳನ್ನೂ ಅವರದ್ದೇ ವಾಹನದಲ್ಲಿ ನೇರವಾಗಿ ಆಸ್ಪತ್ರೆಗೆ ಕರೆತಂದರು. ಸರ್ ನನ್ಗೆ ಪಪ್ಪಾ ಮಮ್ಮಿನ ನೋಡ್ಬೇಕು ಮನೆಗೆ ಕರ್ಕೊಂಡು ಹೋಗಿ ಎಂದಳು ಸ್ನೇಹಾ. ಅಷ್ಟರಲ್ಲೇ ಎದುರಾದ ಸ್ನೇಹಾಳ ಅಮ್ಮ ಓಡೋಡಿ ಬಂದು ಮಗಳನ್ನು ಗಟ್ಟಿಯಾಗಿ ತಬ್ಬಿಕೊಂಡರು. ಮಮ್ಮಿ , ಪಪ್ಪಾ ಎಲ್ಲಿ ?... ಐ ವಾಂಟು ಸೀ ಹಿಮ್.... ಇದ್ದ ಒಬ್ಬಳೇ ಮಗಳು ಮನೆಗೆ ಬಾರದಿದ್ದಾಗ ಯಾವ ತಂದೆ ತಾಯಿ ನೆಮ್ಮದಿಯಿಂದರಲು ಸಾಧ್ಯ ಹೇಳಿ? ಸ್ನೇಹಾಳ ವಿಷಯದಲ್ಲಾದದ್ದೂ ಅದೇ, ಬಿ ಪಿ ಜಾಸ್ತಿಯಾಗಿ ಆಸ್ಪತ್ರೆಯ ಐ. ಸಿ.ಯು ಬೆಡ್ ಮೇಲೆ ಮಲಗಿದ್ದ ಅಪ್ಪ ಮಗಳು ವಾಪಾಸ್ ಬಂದದ್ದನ್ನು ಕಂಡಾಗ ಅನುಭವಿಸಿದ ನಿರಾಳತೆಯಿದೆಯಲ್ಲ ಪ್ರತಿಯೊಬ್ಬ ಮಕ್ಕಳಿಗೂ ತಂದೆ ತಾಯಿಯರ ಪ್ರಾಮುಖ್ಯತೆಯನ್ನು ನೆನಪಿಸಿದಂತಿತ್ತು.

             ಮುಗ್ಧ ಮಕ್ಕಳನ್ನು ತಮ್ಮ ಮಾಯಾ ಜಾಲದಲ್ಲಿ ಬೀಳಿಸಿಕೊಂಡು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಅಥವಾ ಅವರನ್ನೂ ತಮ್ಮಂತೆ ಕೆಟ್ಟ ಮಾರ್ಗದತ್ತ ಸೆಳೆಯುವ ನವೀನ್ ನಂತಹ ಮಾಯಾವಿಗಳು ನಮ್ಮ ಸುತ್ತಲೂ ಇದ್ದಾರೆ. ಜೀವಮಾನದ ಶ್ರ‍ಮ, ತ್ಯಾಗ ಮತ್ತು ಪ್ರೀತಿಯನ್ನು ಕೇವಲ ಮಕ್ಕಳ ಸಂತೋಷಕ್ಕಾಗಿ ಮೀಸಲಿಡುವ, ಅವರ ನಗುವಿನಲ್ಲಿ ನೆಮ್ಮದಿ ಕಾಣುವ ತಂದೆ ತಾಯಿಯರ ಮಹತ್ವವನ್ನರಿಯದ ಮಕ್ಕಳು ಮಾತ್ರ ನವೀನ್ ನಂತವರ ಮಾಯಾ ಜಾಲದ ಮೋಸಕ್ಕೆ ಬಲಿಯಾಗುತ್ತಾರೆ. ತಾರುಣ್ಯದ ತಪ್ಪುಗಳು ಅದೆಷ್ಟೋ ಮಕ್ಕಳ ಭವಿಷ್ಯತ್ತನ್ನು ಕಮರಿಸಿವೆ !! ಅಂತಹದ್ದೇ ಒಂದು ತಪ್ಪನ್ನು ಮಾಡಿ ಬದುಕಿನಲ್ಲೊಂದು ಬಹುದೊಡ್ಡ ಪಾಠ ಕಲಿತಿದ್ದ ಸ್ನೇಹಾ ಸುಮ್ಮನೆ ಕೂರಲಿಲ್ಲ. ಅಪ್ಪನ ಪ್ರೋತ್ಸಾಹ, ಅಮ್ಮನ ಪ್ರೀತಿ ಅವಳನ್ನೆಂದೂ ಕಳೆದ ಕಹಿ ಘಟನೆಗಳತ್ತ ದೂಡಲೇ ಇಲ್ಲಾ....

           ಸಮಯ ಬೆಳಿಗ್ಗೆ ಎಂಟು ಗಂಟೆಯಾಗಿದ್ದರೂ ಸ್ನೇಹಾ ಹಾಸಿಗೆಯಿಂದ ಏಳದ್ದನ್ನು ಕಂಡ ಅಮ್ಮ ಕೂಗಿದರು...... ಶಾಲೆಗೆ ರಜೆ ಇದ್ರೆ ಸಾಕು, ಹಾಸಿಗೆ ಬಿಟ್ಟು ಏಳಲ್ಲ. ಅತ್ತ ಒಂದೇ ಸಮನೆ ಮೊಬೈಲ್ ರಿಂಗ್ ಆಗ್ತಾ ಇದ್ದದ್ದನ್ನು ಕೇಳಿದ ಅಮ್ಮ ಗಂಡನನ್ನು ಕರೆದು ಅಂದರು ಏನ್ರೀ, ಕಾಲ್ ಬರ್ತಿದೆ ಯಾರ್ದು ನೋಡಿ. ಮನೆ ಹೊರಗೆ ಮೆಟ್ಟಿಲಮೇಲೆ ಕುಳಿತು ಪೇಪರ್ ಓದ್ತಿದ್ದ ಸ್ನೇಹಾಳ ಅಪ್ಪ ಕಾಲ್ ಪಿಕ್ ಮಾಡಿದ್ರು. ಆ ಕಡೆಯಿಂದ, ಹೆಲೋ ಸರ್ ಇದು ಸ್ನೇಹಾಳ ಟೀಚರ್ ಮಾತಾಡೋದು, ಕಂಗ್ರಾಚುಲೇಶನ್ಸ್ ಸರ್ ! ಯಾಕೆ ಮೇಡಮ್ ಏನ್ ವಿಶೇಷ ? ನಿಮ್ಮ ಮಗಳು ಸ್ಕೂಲಿಗೆ ಫರ್ಸ್ಟ್..... ಅವಳಿಗೆ 98% ಮಾರ್ಕ್ಸ್ ಸಿಕ್ಕಿದೆ. ಅಪ್ಪ ಅಮ್ಮನ ಕಣ್ಣಲ್ಲಿ ಸಂತೋಷ ಭಾಷ್ಪ ಉಕ್ಕಿತು...!! ಇದಾವುದರ ಅರಿವೂ ಇಲ್ಲದ ಸ್ನೇಹಾ ಮಾತ್ರ ಗೊರಕೆ ಹೊಡೆಯುತ್ತಿದ್ದಳು.......

         ಗುರುರಾಜ್ ಇಟಗಿ
ಮಕ್ಕಳ ಆಪ್ತ ಸಮಾಲೋಚಕರು
ಮಂಗಳೂರು

Ads on article

Advertise in articles 1

advertising articles 2

Advertise under the article