-->
ರಾಜನ ಮನ ಪರಿವರ್ತನೆ - ಕಥೆ

ರಾಜನ ಮನ ಪರಿವರ್ತನೆ - ಕಥೆ

ಪ್ರಿಯಾ 10 ನೇ ತರಗತಿ 
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ 
ಬಂಟ್ವಾಳ ತಾಲೂಕು

        ರಾಜನ ಮನ ಪರಿವರ್ತನೆ - ಕಥೆ

ಒಬ್ಬ ರಾಜ ತನ್ನ ರಾಜ್ಯ ನೋಡಲು ಕುದುರೆಯನ್ನೇರಿ ಹೊರಟ. ಒಂದು ಊರಿನ ಹಾದಿಯಲ್ಲಿ ಹೋಗುವಾಗ ಆತನಿಗೆ ತುಂಬಾ ಹಸಿವಾಯಿತು. ಸುತ್ತಮುತ್ತ ನೋಡಿದಾಗ ಬೃಹದಾಕಾರದ ಮರದಲ್ಲಿ ತುಂಬಾ ಹಣ್ಣುಗಳು ಜೋತು ಬಿದ್ದಿದ್ದವು. ಆ ಮರ ಎತ್ತರವಿದ್ದ ಕಾರಣ ಒಂದೂ ಹಣ್ಣು ಆತನ ಕೈಗೆ ಎಟಕಲಿಲ್ಲ. ಆಗ ಮರ ಕಡಿಯುವವನೊಬ್ಬ ಸಾಕಷ್ಟು ಹಣ್ಣುಗಳನ್ನು ಕೊಯ್ದು ರಾಜನಿಗೆ ಕೊಟ್ಟ. ತಕ್ಷಣ ರಾಜ ಗಬಗಬನೆ ತಿಂದು ಮರ ಕಡಿಯುವವನಿಗೆ ಚಿನ್ನದ ನಾಣ್ಯಗಳನ್ನು ಕೊಟ್ಟು ಮುಂದೆ ಸಾಗಿದ. 
         ಹೀಗೆ ಸಾಗುವಾಗ ಆತ, ನಾನು ರಾಜನಾದರೂ ನನಗೆ ಮರ ಏರಲು ತಿಳಿದಿಲ್ಲ. ಇದೆಂಥಾ ಅವಮಾನ' ಎಂದು ಮರುಗಿದ. ಹೀಗೆ ದೂರ ಸಾಗುವಾಗ ಬಿಸಿಲು ಆತನಿಗೆ ಸುಸ್ತಿನ ಜೊತೆಗೆ ನಿದ್ರೆ ಬರಲು ಶುರುವಾಯಿತು. ಮರದ ಕೆಳಗೆ ಮಲಗಿದರೂ ಆತನಿಗೆ ನಿದ್ರೆ ಬರಲಿಲ್ಲ. ದೂರದಲ್ಲಿ ಮರಕೆಲಸದವನೊಬ್ಬ ತನ್ನ ತಲೆಗೆ ಕಟ್ಟಿದ್ದ ತುಂಡು ಬಟ್ಟೆ ಹಾಸಿ ಗಾಢ ನಿದ್ರೆಗೆ ಜಾರಿದ್ದ. ಆಗ ರಾಜನಿಗೆ, ಅವನಿಗೆ ಆ ಭಗವಂತ ಅದೆಷ್ಟು ಸುಖ ನಿದ್ದೆ ಕರುಣಿಸಿದ್ದಾನೆ. ಕಲ್ಲು, ಮಣ್ಣು ತರಗೆಲೆಯ ಮೇಲೆಯೇ ಗಾಢ ನಿದ್ರೆ ಮಾಡುತ್ತಿರುವನಲ್ಲ ಎಂದು ಯೋಚಿಸಿ ಆತನನ್ನು ಕರೆದು 'ನಿನಗೆ ಹೇಗೆ ಇಷ್ಟು ನಿದ್ರೆ ಬರುತ್ತದೆ. ಈ ಮಣ್ಣು, ಧೂಳಿನಲ್ಲಿ ನನಗೆ ಕೂರಲು ಮನಸ್ಸಾಗುತ್ತಿಲ್ಲ' ಎಂದ. ಆಗ ಮರಗೆಲಸದವ ನಮ್ಮ ಬದುಕೇ ಹೀಗೆ. ಕಷ್ಟಪಟ್ಟು ದುಡಿದರೆ ದೇಹಕ್ಕೆ ಆಯಾಸವಾಗುತ್ತದೆ. ಆಗ ಎಲ್ಲಿ ಮಲಗಿದರೂ ನಿದ್ರೆ ಬರುತ್ತದೆ ಎಂದ. ಅಲ್ಲಿಂದ ಅರಮನೆ ಸೇರಿದ ರಾಜ ತನ್ನ ಮಹಾರಾಣಿಯನ್ನು ಕರೆದು, ನಾನು ರಾಜ. ನನಗೆ ತಿಳಿಯದೇ ಇರುವ ವಿದ್ಯೆಯಿಲ್ಲವೆನಿಸಿದ್ದೆ. ಆದರೆ ಮರ ಏರಿ ಹಣ್ಣುಗಳನ್ನು ಕೊಯ್ಯುವ ಕಲೆ ನನಗೆ ತಿಳಿದೇ ಇಲ್ಲ. ನಾನು ಸುಖದ ಅರಮನೆಯಲ್ಲಿ ಹೇಗೆ ಬೇಕಾದರೂ ಮಲಗುವೆ ಎಂದೆನಿಸಿದ್ದೆ. ಆದರೆ ಅಲ್ಲೊಬ್ಬ ಮಣ್ಣಿನ ಮೇಲೆಯೇ ಸುಖವಾಗಿ ಮಲಗಿದ್ದ. ನನಗೆ ಅಲ್ಲಿ ನಿದ್ರೆಯೇ ಬರಲಿಲ್ಲ. ಅರಮನೆಯಿಂದ ಒಮ್ಮೆಯೂ ಹೊರಗೆ ಹೋಗದ ನಾನು ಈ ಆಸ್ತಿ ಧನಕನಕದಲ್ಲಿಯೇ ಬದುಕಿ ಇದನ್ನೇ ಸುಖ ಜೀವನ ಎಂದು ಭಾವಿಸುವೆ. ಆದರೆ ಅವರೆಲ್ಲ ಅಷ್ಟೋ ಇಷ್ಟೋ ಹಣದಲ್ಲಿ ಹೇಗೆ ಸುಖವಾಗಿದ್ದಾರೆ ನೋಡು ಎಂದ. ಆಗ ಮಹಾರಾಣಿ ಆತನಿಗೆ ನೀವು ರಾಜ ಎಂಬ ನಿಮ್ಮ ಮನಸ್ಥಿತಿಯೇ ನಿಮಗೆ ಮುಳ್ಳಾಗಿದೆ. ನೀವು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿ. ಆಗ ಎಲ್ಲವೂ ನಿಮಗೆ ಸಿದ್ಧಿಸುತ್ತದೆ. ಪ್ರಜೆಗಳು ಬಹಳ ಕಷ್ಟದಲ್ಲಿ ಬದುಕು ನಡೆಸುತ್ತಿದ್ದಾರೆ ಎಂದು ಅರಿತುಕೊಳ್ಳಿ ಎಂದಳು. ಆಗ ರಾಜನಿಗೆ ತನ್ನ ತಪ್ಪಿನ ಅರಿವಾಗಿ ಪ್ರಜೆಗಳ ಒಳಿತಿಗಾಗಿ ಅನೇಕ ಕೆಲಸಗಳನ್ನು ಮಾಡಿ ಅವರಿಗಾಗಿ ಬದುಕಿದನು.

                             ಪ್ರಿಯಾ 10 ನೇ ತರಗತಿ 

Ads on article

Advertise in articles 1

advertising articles 2

Advertise under the article