-->
ಮಕ್ಕಳ ಆರೋಗ್ಯ ಅದೊಂದು ಸೌಭಾಗ್ಯ....

ಮಕ್ಕಳ ಆರೋಗ್ಯ ಅದೊಂದು ಸೌಭಾಗ್ಯ....

    ಬಿ.ಸತ್ಯವತಿ ಭಟ್ ಕೊಳಚಪ್ಪು
                 ಮಂಗಳೂರು


       ಮಕ್ಕಳ ಆರೋಗ್ಯ..ಅದೊಂದು ಸೌಭಾಗ್ಯ
             ಮಕ್ಕಳೆಂದರೆ ಅದು ನಮಗೆ ದೇವರಿತ್ತ ಒಂದು ಸಂಪತ್ತು.!.. ಒಂದು ದಿವ್ಯನಾದ ವರ! ಮನೆ ತುಂಬ ಲವಲವಿಕೆಯಿಂದ ಪುಟು ಪುಟುನೆ ಓಡಾಡುತ್ತಿರುವ ಮಕ್ಕಳನ್ನು ಕಂಡಲ್ಲಿ ಯಾರಿಗೆ ತಾನೆ ಇಷ್ಟವಿಲ್ಲ.. ಮಕ್ಕಳ ಇಂಥಾ ಸಂತೋಷಕ್ಕೆ ಅವರ ಆರೋಗ್ಯವೂ ಉತ್ತಮವಾಗಿರಬೇಕಲ್ಲವೇ.. ಹುಟ್ಟುವಾಗ ಮಕ್ಕಳು ಎಷ್ಟೇ ಆರೋಗ್ಯವಂತರಾಗಿದ್ದರೂ ಹೆತ್ತವರ ಆರ್ಥಿಕ ಕೊರತೆಯಿಂದಲೋ.. ನಿರ್ಲಕ್ಷ ತನದಿಂದಲೋ ಮುಂದೆ ಮಕ್ಕಳು ಕಾಹಿಲೆ ಬೀಳುವ ಸಾಧ್ಯತೆ ಜಾಸ್ತಿ...!
     
         ಮಗು ಹುಟ್ಟಿದಾಕ್ಷಣದಿಂದ ಒಂದು ವರ್ಷದ ತನಕ ಅದಕ್ಕೆ ತಾಯಿಯ ಹಾಲೇ ಸರ್ವ ಶ್ರೇಷ್ಠ... ಆ ಹಾಲು ದೇವರು ಮಗುವಿಗಾಗಿಯೇ ಮೀಸಲಾಗಿಟ್ಟಿರುವ ಒಂದು ದಿವ್ಯಾಮೃತ!...ತಾಯಿ ಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಬೇಕಾದ ಎಲ್ಲ ಪೌಷ್ಟಿಕಾಂಶಗಳು ಸೇರಿರುವುದಲ್ಲದೆ ಅದು ಮಗುವಿನ ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಜೊತೆ ಜೊತೆಗೆ ಹೆತ್ತವರ ಪ್ರೀತಿಯೂ ಮಕ್ಕಳಿಗೆ ಧಾರಾಳ ಸಿಗಬೇಕಾದುದು ಅವರ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ ಅನ್ನುವುದು ಮಾನಸಿಕ ತಜ್ಞರ ಅಭಿಪ್ರಾಯ

                ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಮಾರ್ಗದ ಬದಿಯ ತಿಂಡಿಗಳಿಗೆ ಬೇಕರಿ ತಿನಿಸುಗಳಿಗೆ ಮುಗಿ ಬೀಳುವುದು ಸಹಜ... ಅಂತೆಯೇ ಹೋಟೇಲುಗಳ ಬರ್ಗರ್ ಪಿಝ್ಝಾಕ್ಕೂ ಮಾರು ಹೋಗುತ್ತಾರೆ.... ಇದನ್ನೆಲ್ಲ ತೀರ ಕಡಿಮೆಗೊಳಿಸಿ ಆದಷ್ಟು ಮನೆಯ ಅಡುಗೆಗೆ ಹೊಂದಿಕೊಳ್ಳುವಂತೆ ನೋಡಿಕೊಂಡಲ್ಲಿ ಪದೇ ಪದೇ ಶೀತ ನೆಗಡಿಗೆ ಮಕ್ಕಳು ತುತ್ತಾಗುವುದು ಕಡಿಮೆ.... ಮೈದಾ ತಿನಸುಗಳ.. ಸಕ್ಕರೆಹಾಕಿದ ಸಿಹಿ ಪದಾರ್ಥಗಳ ಅತಿ ಸೇವನೆ ಯಾವತ್ತೂ ಆರೋಗ್ಯಕ್ಕೆ ಮಾರಕ...ನೆನಪಿರಲಿ!

          ಮಕ್ಕಳು ಒಂದು ಹಂತಕ್ಕೆ ಬೆಳೆದ ನಂತರ ಅವರ ವಯಸ್ಸಿಗನುಗುಣವಾಗಿ ನುರಿತವರಿಂದ ಯೋಗಾಭ್ಯಾಸ ಪ್ರಾಣಾಯಾಮಗಳನ್ನು ಕಲಿಸಿ ಕೊಟ್ಟು ಆ ಕ್ರಿಯೆಯನ್ನು ಶಿಸ್ತು ಬದ್ಧವಾಗಿ ಜೀವನ ಪರ್ಯಂತ ಅಳವಡಿಸಿಕೊಂಡಲ್ಲಿ ಮಾನಸಿಕ ಶಾರೀರಿಕ ಸ್ವಾಸ್ಥ್ಯ ಕಾಪಾಡಲು ಅವರು ವೈದ್ಯರಲ್ಲಿಗೆ ವೃಥಾ ಅಲೆದಾಡುವ ಶ್ರಮ ತಪ್ಪುತ್ತದೆ... ಈ ಅಭ್ಯಾಸ ರೋಗ ನಿವಾರಕವೂ ಹೌದು... ರೋಗ ನಿರೋಧಕವೂ ಹೌದು.

          ಸಣ್ಣಪುಟ್ಟ ಕಾಹಿಲೆಗಳು ಮಕ್ಕಳಿಗೆ ಬಂದಲ್ಲಿ. ಮನೆಯಲ್ಲೆ ತಯಾರಿಸಿದ ಕಷಾಯಗಳನ್ನೋ ಅಥವಾ ಆಯುರ್ವೇದದ ಸಿದ್ಧೌಷದಗಳಿಂದಲೋ ಪರಿಹರಿಸಿಕೊಳ್ಳುವುದು ಸೂಕ್ತ. ಇದರಿಂದ ಅಡ್ಡ ಪರಿಣಾಮಗಳಿರುವುದಿಲ್ಲ... ಮಕ್ಕಳಿಗೆ ಪದೇ ಪದೇ ಏಂಟಿ ಬಯೋಟಿಕ್(ಜೀವ ವಿರೋಧ) ಔಷಧಿಹಾಕಿಸುವುದರಿಂದ ಮುಂದೆ ಅವರ ಹೃದಯ ಕಿಡ್ನಿ ಗಳು ದುರ್ಬಲವಾಗುವುವು ಎಂದು ಪ್ರಾಮಾಣಿಕ ಡಾಕ್ಟ್ರರರೇ ಒಪ್ಪಿಕೊಳ್ಳುತ್ತಾರೆ.

         ಈಗಿನ ಕಾಲಾವಸ್ಥೆಯಲ್ಲಿ ಮಕ್ಕಳು ಮೊಬೈಲಿಗೇ ಅಂಟಿಗೊಂಡು ಏಕಾಂತ ಪ್ರಿಯರಾಗಿರುತ್ತಾರೆ... ಇದರಿಂದ ಕಣ್ಣಿನ ಸಮಸ್ಯೆಗಳು ಬರುವುದಲ್ಲದೆ ಕುಳಿತಲ್ಲೇ ಇದ್ದು ಇದ್ದು ರಕ್ತ ಪರಿಚಲನೆ ಸರಿಯಾಗಿ ಆಗದೆ ಬೊಜ್ಜು ಬೆಳೆಯುವುದಲ್ಲದೆ ಅವರ ಆರೋಗ್ಯವೂ ಏರು ಪೇರಾಗುತ್ತದೆ.. ಫೋನಿನ ಗೀಳಿಗೆ ಅತಿ ಬಲಿಯಾಗದಂತೆ ಹೆತ್ತವರು ಎಚ್ಚರಿಕೆ ವಹಿಸಿ ಅವರನ್ನು ಆದಷ್ಟು ಹೊರಗಿನ ಆಟೋಟಗಳಿಗೆ ಪ್ರೇರೇಪಿಸಬೇಕು. 

            ಮಕ್ಕಳು ಚಿಕ್ಕವರಿರುವಾಗಲೇ ಅವರಿಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಬಗ್ಗೆ ಅರಿವು ಮೂಡಿಸಬೇಕು. ಬಾಂಧವ್ಯದ ಬಗ್ಗೆ ತಿಳಿ ಹೇಳಬೇಕು... ದೇಶ ಪ್ರೇಮ ವನ್ನು ಮೂಡಿಸಬೇಕು... ಇದು ಅವರ ಮುಂದಿನ ಜೀವನಕ್ಕೊಂದು ಉತ್ತಮ ದಾರಿ ದೀಪವಾಗಿ ಅವರ ದೈಹಿಕ ಮಾನಸಿಕ ಆರೋಗ್ಯದ ಸಮತೋಲನಕ್ಕೆ ಖಂಡಿತ ನಾಂದಿಯಾಗಿ ಸಮಾಜದಲ್ಲಿ ಅವರೊಬ್ಬ ಸತ್ಪ್ರಜೆಯಾಗುವುದರಲ್ಲಿ ಎರಡು ಮಾತಿಲ್ಲ .....

                                 ಬಿ.ಸತ್ಯವತಿ ಭಟ್ ಕೊಳಚಪ್ಪು
                                        ಮಂಗಳೂರು

Ads on article

Advertise in articles 1

advertising articles 2

Advertise under the article