-->
ಓ ಮುದ್ದು ಮನಸೇ - 3

ಓ ಮುದ್ದು ಮನಸೇ - 3

    ಗುರುರಾಜ ಇಟಗಿ
    ಮಕ್ಕಳ ಮನಶಾಸ್ತ್ರಜ್ಞರು
    ಮಂಗಳೂರು

                ಓ ಮುದ್ದು ಮನಸೇ...! - 3

                 ಜಗತ್ತಿನ ಎಲ್ಲಾ ಎಲ್ಲೆಗಳನ್ನೂ ಮೀರಿ ಅಡೆತಡೆಗಳಿಲ್ಲದ ಬದುಕಿನಲ್ಲಿ ಹಾರಾಡುವ ತವಕ ಚಿಗುರೊಡೆಯುವುದೇ ತಾರುಣ್ಯದಲ್ಲಿ. ಸರಿ ಸುಮಾರು ಹನ್ನೆರಡರಿಂದ ಹದಿನೆಂಟು ವರ್ಷದೊಳಗಿನ ಮಕ್ಕಳನ್ನು "ಅಡೋಲಿಸೆಂಟ್ಸ್" ಎನ್ನುತ್ತಾರೆ. ಈ ವಯಸ್ಸು ಎಷ್ಟು ಸುಂದರವೋ ಅಷ್ಟೇ ಅಪಾಯಕಾರಕವೂ ಆಗಿದೆ. ಈ ವಯೋಮಾನದ ಸುಂದರ ಕ್ಷಣಗಳನ್ನ ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯತ್ತಿನೆಡೆಗೆ ಮುಂದಡಿಯಿಡುವ ಮಕ್ಕಳಿಗಿಂತ ತಮ್ಮ ನಾಳೆಗಳನ್ನೇ ಕಮರಿಸಬಲ್ಲ ಗೊಂದಲಗಳ ಸುಳಿಯಲ್ಲಿ ಸಿಲುಕಿ ಅಪಾಯಗಳಿಗೆ ತೆರೆದುಕೊಳ್ಳುವವರೇ ಹೆಚ್ಚು. ಅಂತಹದ್ದೊಂದು ಅಪಾಯದಲ್ಲಿ ಬಿದ್ದು ಹೊರಬರಲಾರದೇ ಚಡಪಡಿಸುತ್ತಿದ್ದ ನಿಶಾ (ಹೆಸರು ಬದಲಿಸಲಾಗಿದೆ) ನನ್ನ ಮುಂದೆ ತನ್ನ ಭಾವನೆಗಳ ತೊಳಲಾಟವನ್ನು ತೆರೆದಿಟ್ಟಾಗ ಭಾರತದ ಬಹುದೊಡ್ಡ ಯುವ ಸಮುದಾಯವೇ ನನ್ನ ಮುಂದೆ ನಿಂತಂತೆ ಭಾಸವಾಯಿತು. ಅವಳ ಕಹಾನಿಯೇ ಅಂತಹದ್ದು, ಡಿಜಿಟಲ್ ಪರದೆಯಲ್ಲಿ ನಾವು ನೋಡುವ ಯಾವ ಸಿನಿಮಾಗೂ ಕಮ್ಮಿಯಿರದ ಪಕ್ಕಾ ಟೀನೇಜ್ ಲವ್ ಸ್ಟೋರಿ ಅದು.

             ಕಠಿಣ ಪರಿಶ್ರಮ, ನಿರಂತರ ಓದು ಮತ್ತು ಕ್ರಿಯಾಶೀಲತೆಯಿಂದ ಟೆಂತ್-ಕ್ಲಾಸ್ ನಲ್ಲಿ ಉತ್ತಮ ಅಂಕಗಳಿಸಿದ್ದ ನಿಶಾ ಪ್ರತಿಷ್ಠಿತ ಕಾಲೇಜೊಂದರಲ್ಲಿ ಮುಂದಿನ ಶಿಕ್ಷಣಕ್ಕಾಗಿ ಸೀಟು ಗಿಟ್ಟಿಸಿಕೊಂಡಿದ್ದಳು. ಹೊಸ ಹುರುಪಿನೊಂದಿಗೆ ಸಾವಿರ ಕನಸುಗಳನ್ನು ಹೊತ್ತು ಕಾಲೇಜಿಗೆ ಬಂದ ಅವಳು ಅಲ್ಲಿನ ಶಿಕ್ಷಕರೊಂದಿಗಾಗಲಿ ಅಥವಾ ವಿದ್ಯಾರ್ಥಿಗಳೊಂದಿಗಾಗಲಿ ಬೆರೆಯಲು ಬಹಳ ಸಮಯ ತೆಗೆದುಕೊಳ್ಳಲಿಲ್ಲ. ಅವಳ ತುಂಟತನ, ಮುಗ್ಧತೆ ಮತ್ತು ಎಂತವರನ್ನೂ ಹುಬ್ಬೇರಿಸುವಂತೆ ಮಾಡುವ ಮುದ್ದು ಮನಸ್ಸು ಅವಳದೇ ತರಗತಿಯ ಹುಡುಗ ನರೇಶ್ (ಹೆಸರು ಬದಲಿಸಲಾಗಿದೆ) ನನ್ನೂ ಆಕರ್ಷಿಸಿತ್ತು. ಯಾವುದೇ ಕೊರತೆಯಿಲ್ಲದೆ ಬೆಳೆದಿದ್ದ ನರೇಶ್ ಅಪ್ಪ ಅಮ್ಮನ ಸಲುಗೆಗೋ ಅಥವಾ ಜೀವನದಲ್ಲಿ ದೊರಕಿದ್ದ ಅತಿಯಾದ ಸವಲತ್ತುಗಳಿಂದಲೋ ಗೊತ್ತಿಲ್ಲ, ಕಾಲೇಜ್ ಎಂದರೆ ಎಂಜಾಯ್-ಮೆಂಟ್ ಅನ್ನುವ ಕನಸು ಹೊತ್ತು ಇಲ್ಲಿಗೆ ಬಂದವನು. ಅದಕ್ಕೆ ಪೂರಕವಾದ ಗೆಳೆಯರ ಗುಂಪೂ ಕೂಡ ಅವನ ಜೊತೆಯಾಗಿತ್ತು. ಇಂತಹ ನರೇಶ್ ನಿಶಾಳನ್ನು ಬಹುವಾಗಿ ಹಿಂಬಾಲಿಸತೊಡಗಿದ. ಇದಾವುದರ ಪರಿವೆಯೂ ಇರದ ನಿಶಾ ತನ್ನ ಪಾಡಿಗೆ ತಾನು ಕಾಲೇಜಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಳು. ಒಮ್ಮೆ ನಿಶಾಳ ಗೆಳತಿಯೊಬ್ಬಳು ಕೊಟ್ಟ ಪತ್ರವೊಂದನ್ನು ಓದಿ ಅವಳಿಗೆ ಆಶ್ಚರ್ಯ ಮತು ಭಯ ಉಂಟಾಗಿತ್ತು. ಹೌದು, ಅದು ನರೇಶನ ಪ್ರೀತಿಯ ನಿವೇದನೆ, ವಿಚಲಿತಗೊಳ್ಳದ ನಿಶಾ ತನಗೆ ಇಂತಹ ವಿಷಯಗಳಲ್ಲಿ ಆಸಕ್ತಿಯಿಲ್ಲವೆಂದೂ ಹಾಗೂ ತಾನು ಕಾಲೇಜಿಗೆ ಸೇರಿದ್ದು ಓದೋದಕ್ಕೇ ಹೊರತು ಇಂತಹ ಕೆಲಸಗಳಿಗಲ್ಲವೆಂದೂ ಗಟ್ಟಿ ಮನಸ್ಸಿನ ಉತ್ತರವನ್ನ ಅದೇ ಪತ್ರದಲ್ಲಿ ಬರೆದು ನರೇಶನಿಗೆ ಹಿಂತಿರುಗಿಸಿದಳು.

         ನರೇಶ್ ಬಯಸಿದ್ದೂ ಇದನ್ನೇ! ಅವನಿಗೆ ನಿಶಾಳ ಪ್ರತಿಕ್ರಿಯೆ ಬೇಕಿತ್ತೇ ವಿನಹ ಒಪ್ಪಿಗೆಯಲ್ಲ. ಅವಳೆಲ್ಲಿ ಶಿಕ್ಷಕರಿಗೆ ಕಂಪ್ಲೇಂಟ್ ಮಾಡಿಬಿಡುತ್ತಾಳೋ ಎಂದು ಭಯಗೊಂಡಿದ್ದ ನರೇಶ್ ನಿಶಾಳ ಉತ್ತರವನ್ನು ನೋಡಿ ನಿರಾಳನಾಗಿದ್ದ ಮತ್ತು ಇನ್ನಷ್ಟು ಅವಳನ್ನು ಹಿಂಬಾಲಿಸಲು ಶುರುವಿಟ್ಟುಕೊಂಡ. ಇದೆಲ್ಲವನ್ನು ತಿಳಿದ ಅವನ ಗೆಳೆಯರು ನಿಶಾಳನ್ನು ರೇಗಿಸತೊಡಗಿದರು. ಅದೆಷ್ಟು ನಿರ್ಲಕ್ಷಿಸಿದರೂ ನಿಶಾಳ ತಾರುಣ್ಯದ ವಯಸ್ಸು, ಗೆಳೆಯರ ಪ್ರಭಾವ ಅವಳನ್ನು ನರೇಶ್ ನತ್ತ ಸೆಳೆಯುವಂತೆ ಮಾಡಿಯೇ ಬಿಟ್ಟಿತು. ಹೀಗೆ ಶುರುವಾದ ಇವರಿಬ್ಬರ ಪ್ರೇಮ್ ಕಹಾನಿ ಕೊನೆಯಾದದ್ದು ಮಾತ್ರ ದುರಂತ !.

                ಇಲ್ಲಿಂದಲೇ ನಾನು ಹೇಳ ಹೊರಟ ತಾರುಣ್ಯದ ಲವ್ ಸ್ಟೋರಿಯ ರಿಯಲ್ ಕಹಾನಿ ಶುರುವಾಗೋದು. ಹಾಸ್ಟೇಲ್ ಒಂದರಲ್ಲಿ ತಂಗಿದ್ದ ನಿಶಾ ಪ್ರತಿದಿನ ಬೆಳಿಗ್ಗೆ ಕಾಲೇಜಿಗೆ ಹೊರಡುವ ಮುನ್ನ ಅದೆಷ್ಟು ಹೊತ್ತು ಕನ್ನಡಿಯ ಮುಂದೆ ನಿಲ್ಲುತ್ತಿದ್ದಳೆಂದರೇ, ಒಮ್ಮೊಮ್ಮೆ ಗೆಳತಿಯರೊಂದಿಗೆ ಜಗಳವೇ ಆಗುತ್ತಿತ್ತು. ಅವಳ ಗಮನ ಓದಿನಿಂದ ತನ್ನ ಸೌಂದರ್ಯದಕಡೆ ಹೊರಳಿತು, ಹೊಸ ಹೊಸ ಬಟ್ಟೆ ಖರೀದಿಸೋದು, ಗಂಟೆಗಟ್ಟಲೆ ಮೇಕಪ್ ಮಾಡೋದು, ಮತ್ತು ಫ್ರೀ ಇದ್ದಾಗಲೆಲ್ಲ ಮೊಬೈಲ್ ನಲ್ಲಿಯೇ ಮುಳುಗಿರುತ್ತಿದ್ದ ನಿಶಾ ಆಗಾಗ ತರಗತಿಗಳಿಗೂ ಬಂಕ್ ಮಾಡಿ ಹಾಸ್ಟೇಲ್ ನಲ್ಲೇ ಇದ್ದುಬಿಡುತ್ತಿದ್ದಳು. ತನ್ನ ಚುರುಕುತನದಿಂದ ಎಲ್ಲರಿಗೂ ಮಾದರಿಯಾಗಿದ್ದ ಅವಳು ಅದೆಷ್ಟು ಲೇಜಿಯಾಗಿದ್ದಳೆಂದರೆ ಕಾಲೇಜಿಗೆ ರಜೆಯಿದ್ದಾಗ ಇಡೀ ದಿನವೂ ಮಲಗಿಕೊಂಡೇ ಕಾಲ ಕಳೆದುಬಿಡುತ್ತಿದ್ದಳು. ಸುಳ್ಳುಹೇಳುವ ಅವಳ ವರ್ತನೆಯು ಶಿಕ್ಷಕರನ್ನೂ ಕೆರಳಿಸಿತ್ತು. ಸಣ್ಣ ವಿಚಾರಗಳಿಗೂ ವಿಚಲಿತಗೊಳ್ಳುವುದು, ರೇಗಾಡುವುದು, ಕೆಲವೊಮ್ಮೆ ಮಾತುನಿಲ್ಲಿಸಿ ಮೌನಕ್ಕೆ ಶರಣಾಗುತ್ತಿದ್ದರಿಂದ ಹತ್ತಿರವಿದ್ದ ಗೆಳೆಯರೂ ದೂರವಾಗಿದ್ದರು. ಇಂತಹದ್ದೊಂದು ಮಹತ್ತರ ಬದಲಾವಣೆ ಭಾವನೆ - ಆಲೋಚನೆಗಳಿಗೆ ಧಕ್ಕೆತಂದು ಅವಳ ಅರಿವಿಗೇ ಬಾರದ ಬಹುದೊಡ್ಡ ಹೊರೆಯಾಗಿ ನಿಂತಿದ್ದು ಮಾತ್ರ ಅರಗಿಸಿಕೊಳ್ಳಲಾಗದ ಸತ್ಯ.

                  ಹೌದು, ಫೇಲ್ ಆಗುವುದು ವಿಶೇಷವಲ್ಲದಿದ್ದರೂ ನಿಶಾಳ ಬದುಕಿನಲ್ಲಿ ಮಾತ್ರ ಇದು ದೊಡ್ದ ದುರಂತವೇ ಆಗಿತ್ತು. ಕೆಲವು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ನಿಶಾ ಒಬ್ಬಳೇ ಮಗಳಾಗಿ ಸಂಪೂರ್ಣ ಅಮ್ಮನ ಆರೈಕೆಯಲ್ಲೇ ಬೆಳೆದ ಹುಡುಗಿ. ಅಷ್ಟೇನು ಉತ್ತಮ ಜೀವನ ಅವರದ್ದಾಗಿರಲಿಲ್ಲ, ಸಾಮಾನ್ಯ ಮಿಡಲ್-ಕ್ಲಾಸ್ ಕುಟುಂಬದ ಅವಳಿಗೆ ಅಮ್ಮನ ದುಡಿಮೆಯೇ ಆಧಾರ. ಇಂತಹ ಕಷ್ಟದಲ್ಲಿಯೂ ಮಗಳ ಉತ್ತಮ ಭವಿಷ್ಯತ್ತಿಗಾಗಿ ಕನಸುಕಂಡಿದ್ದ ಅವಳಮ್ಮ ತನ್ನ ಸುಖ ಸಂತೋಷಗಳೆಲ್ಲವನ್ನು ತ್ಯಾಗ ಮಾಡಿ, ನೋವುಗಳನ್ನು ಅದುಮಿಟ್ಟು ಮಗಳ ಸುಖ ಸಂತೋಷಕ್ಕೋಸ್ಕರ ದುಡಿಯತೊಡಗಿದರು. ತನ್ನ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಅವರ ಹಂಬಲ ಅವರನ್ನು ಸರಕಾರಿ ಕಾಲೇಜಿನಲ್ಲಿ ಸಿಕ್ಕ ಫ್ರೀ ಸೀಟನ್ನು ತ್ಯಜಿಸಿ ಖಾಸಗಿ ಕಾಲೇಜಿನ ಫೀಸ್ ಕಟ್ಟಲು ಲಕ್ಷಗಟ್ಟಲೆ ಸಾಲ ಮಾಡುವಂತೆ ಮಾಡಿತು. ಇನ್ನು, ತಮ್ಮ ಜೀವನೋಪಾಯ, ಮಗಳ ಇತರೇ ಬೇಡಿಕೆಗಳನ್ನು ಸರಿದೂಗಿಸಲು ಒಂದು ಗಾರ್ಮೆಂಟ್ ನಲ್ಲಿ ಕೆಲಸಕ್ಕೆ ಸೇರಿದ ಅವರು ಸ್ವಂತ ಮನೆಯನ್ನೂ ಬೇರೆಯವರಿಗೆ ಬಾಡಿಗೆ ನೀಡಿ ಲೇಡೀಸ್ ಪೀಜಿಯೊಂದರಲ್ಲಿ ಉಳಿದುಕೊಂಡರು.

                 ಇಂತಹದ್ದೊಂದು ತ್ಯಾಗವನ್ನು ತಾಯಿಯಲ್ಲದೇ ಇನ್ನಾರು ಮಾಡಲು ಸಾಧ್ಯ? , ಮಕ್ಕಳಾದ ನಾವು ಬೆಳೆದು ಹೆಮ್ಮರವಾಗಿ ಪೋಷಕರಿಗೆ ನೇರಳಾಗಬೇಕೇ ವಿನಹ ಮುಳ್ಳಾಗಿ ಚುಚ್ಚಬಾರದಲ್ಲವೇ, ಇಂತಹ ತಂದೆ-ತಾಯಂದಿರ ಕರುಳಿನ ಕುಡಿಗಳಾದ ನಮ್ಮ ಯೋಚನೆಗಳು ಹೇಗಿರಬೇಕು? ಕುಟುಂಬದಲ್ಲಿ ನಮ್ಮ ಪಾತ್ರವೇನು?, ಇಂದಿನ ಅನುಭವಗಳು ನಾಳೆಯ ಮೆಟ್ಟಿಲುಗಳಾಗಬೇಕೆ ವಿನಹ ಇರುವ ಮೆಟ್ಟಿಲುಗಳನ್ನು ಕಡಿದುಹಾಕಬಾರದು ತಾನೇ? ನಿಶಾ ಮತ್ತು ನರೇಶನಂತೆ ಅದೆಷ್ಟೋ ಮಕ್ಕಳು ತಿಳೀದೋ, ತಿಳಿಯದೆಯೋ ತಿದ್ದಲಾಗದ ತಪ್ಪಿಗೆ ತಮ್ಮನ್ನು ತಾವು ಎಳೆದುಕೊಂಡು ಬಿಡುತ್ತಾರೆ. ಕುಟುಂಬ ಮತ್ತು ಸಮಾಜದ ಜೊತೆ-ಜೊತೆಗೆ ಮಕ್ಕಳಾದ ನಾವೂ ತೆಗೆದುಕೊಳ್ಳಬೇಕಾದ ಕಾಳಜಿ, ವಹಿಸಬೇಕಾದ ಪಾತ್ರ ಮತ್ತು ಕಟ್ಟಿಕೊಳ್ಳಬೇಕಾದ ನಾಳೆಗಳ ಕುರಿತು ಯೋಚಿಸುವ ಅನಿವಾರ್ಯತೆಯಿದೆ. ನಿಶಾ ಮತ್ತು ನರೇಶ್ ಸಮಸ್ಯೆಗೆ ಕೊಟ್ಟ ಪರಿಹಾರವನ್ನು ನಾನು ಬರೆದಿಲ್ಲ, ಅದೆಲ್ಲವೂ ವಿವರಿಸಿದ ಸಮಸ್ಯೆಯಲ್ಲಿಯೇ ಇದೆ. ವಿದ್ಯಾರ್ಥಿಗಳಾಗಿ, ಪಾಲಕರಾಗಿ ಮತ್ತು ಶಿಕ್ಷಕರಾಗಿ ಅಥವಾ ಇನ್ಯಾರಿಗೋ ಗೆಳೆಯ ಗೆಳತಿಯರಾಗಿ ಇಂತಹ ಸಮಸ್ಯೆಗಳಲ್ಲಿನ ನಮ್ಮ ನಮ್ಮ ಪಾತ್ರ ಮತ್ತು ಕಾಳಜಿಯನ್ನು ಅರಿತು, ಯೋಚಿಸಿ ಅಳವಡಿಸಿಕೊಂಡರೆ ಎಲ್ಲವೂ ಚೆಂದ ಅಂದ.

                                ...........ಗುರುರಾಜ್ ಇಟಗಿ

Ads on article

Advertise in articles 1

advertising articles 2

Advertise under the article