ತೋಳದ ಮೋಸ - ಕಥೆ
Wednesday, January 6, 2021
Edit
ಆದ್ಯಂತ್ ಅಡೂರು
ಏಳನೇ ತರಗತಿ
ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ,
ಈಶ್ವರಮಂಗಲ.
ತೋಳದ ಮೋಸ - ಕಥೆ
ಒಂದು ಊರಿನಲ್ಲಿ ಒಬ್ಬ ಹುಡುಗ ಇದ್ದ. ಆ ಹುಡುಗನ ಮನೆಯಲ್ಲಿ ಒಂದು ನಾಯಿ ಇತ್ತು. ಆ ನಾಯಿ ಒಳ್ಳೆಯ ಬುದ್ಧಿಯದ್ದಾಗಿತ್ತು. ಹುಡುಗನು ನಾಯಿಯ ಜೊತೆ ಯಾವಾಗಲೂ ಆಟವಾಡುತ್ತಿದ್ದ. ನಾಯಿಯ ರಕ್ಷಣೆಯನ್ನು ಅವನೇ ಮಾಡುತ್ತಿದ್ದ. ನಾಯಿಗೆ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಆಹಾರವನ್ನು ನೀಡುತ್ತಿದ್ದ. ಹೀಗೆ ಹುಡುಗನು ನಾಯಿಯನ್ನು ಕಾಳಜಿವಹಿಸಿ ಸಾಕುತ್ತಿದ್ದ. ಹುಡುಗನ ನಾಯಿಯ ಮೇಲಿನ ಪ್ರೀತಿಯನ್ನು ರಕ್ಕಸ ತೋಳವೊಂದು ಕಂಡಿತು. ತಾನು ನಾಯಿಯನ್ನು ಒಲಿಸಿ ಹುಡುಗನ ಪ್ರೀತಿಯನ್ನು ಗಳಿಸಲು ತೀರ್ಮಾನಿಸಿತು.
ಒಂದು ದಿನ ರಕ್ಕಸ ತೋಳವು ನಾಯಿಯನ್ನು ಭೇಟಿ ಮಾಡಿ, "ಗೆಳೆಯ....ಸ್ವಲ್ಪ ಸಮಯ ನೀನು ನನ್ನ ಕಾಡಿನ ಮನೆಗೆ ಹೋಗು. ನಾನು ನಿನ್ನ ಮನೆಯಲ್ಲಿ ಇರುತ್ತೇನೆ. ಆಗಬಹುದೇ....",ಎಂದು ಕೇಳಿತು. ಅದಕ್ಕೆ ನಾಯಿ ಒಪ್ಪಿತು. ಮರುದಿನ ರಕ್ಕಸ ತೋಳವು ನಾಯಿಯ ರೂಪದಲ್ಲಿ ಹುಡುಗನ ಮನೆಗೆ ಬಂದಿತು. ನಾಯಿಯು ತೋಳದ ಕಾಡಿನ ಮನೆಗೆ ಹೋಯಿತು. ಹುಡುಗನು ರಕ್ಕಸ ತೋಳವನ್ನು ತನ್ನ ನಾಯಿ ಎಂದುಕೊಂಡು ಪ್ರೀತಿಸಿ ಆಟವಾಡುತ್ತಿದ್ದ. ಒಂದು ದಿನ ಕಾಡಿನಲ್ಲಿದ್ದ ನಾಯಿಗೆ ಹುಡುಗನನ್ನು ನೋಡಬೇಕು ಎನಿಸಿತು. ಅದು ಹುಡುಗನ ಮನೆಗೆ ಬಂದಿತು. ನಾಯಿಯನ್ನು ಹುಡುಗನು ನೋಡಿದ. ಇದು ನನ್ನ ನಾಯಿಯಂತೆಯೇ ಇರುವ ಯಾವುದೋ ಕಾಡು ಪ್ರಾಣಿಯಾಗಿರಬೇಕೆಂದು ಹೊಡೆಯಲು ಬಂದ. ಆಗ ನಾಯಿಯು ತನ್ನ ಎರಡು ಕೈಗಳನ್ನು ಎದುರು ಚಾಚಿ ಪ್ರೀತಿಯಿಂದ ನಗುತ್ತಾ ಅವನಿಗೆ ನಮಸ್ಕರಿಸಿತು. ಆಗ ಹುಡುಗನಿಗೆ ಆಶ್ಚರ್ಯವಾಯಿತು. ರಕ್ಕಸ ತೋಳವು ನಾಯಿಯನ್ನು ಕಂಡು ಅದಕ್ಕೆ ಕಚ್ಚಲು ಬಂದಿತು. ಹುಡುಗನು ರಕ್ಕಸ ತೋಳವನ್ನು ತಡೆಯಲು ಸಿದ್ಧನಾದಾಗ ಅದು ಅವನಿಗೂ ಕಚ್ಚಲು ಪ್ರಯತ್ನಿಸಿತು. ಆಗ ಹುಡುಗನು ಹೆದರಿ ಜೋರಾಗಿ ಅಳಲು ಶುರುಮಾಡಿದ. ಆಗ ಊರಿನ ಎಲ್ಲಾ ಜನರು ಓಡಿ ಬಂದರು. ಆಗ ನಾಯಿ ಎಲ್ಲಾ ಸತ್ಯ ವಿಷಯಗಳನ್ನು ಹುಡುಗನಿಗೆ ಹೇಳಿತು. ರಕ್ಕಸ ತೋಳದ ಮೋಸ ಹುಡುಗನಿಗೆ ಅರಿವಾಯಿತು. ಹುಡುಗ ಹಾಗೂ ಜನರು ಸೇರಿ ರಕ್ಕಸ ತೋಳವನ್ನು ಕಾಡಿಗೆ ಓಡಿಸಿದರು. ನಂತರ ಹುಡುಗ ಮತ್ತು ನಾಯಿ ಸಂತೋಷದಿಂದ ಇದ್ದರು.
ನೀತಿ : ಹುಟ್ಟುಗುಣ ಘಟ್ಟ ಹತ್ತಿದರೂ ಬಿಡದು.
ಆದ್ಯಂತ್ ಅಡೂರು
ಏಳನೇ ತರಗತಿ
ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ,
ಈಶ್ವರಮಂಗಲ.