-->
ಆದಿಯ ಚಿತ್ರ ಪತ್ರ - 38

ಆದಿಯ ಚಿತ್ರ ಪತ್ರ - 38

    ಆದಿ ಸ್ವರೂಪ
    ಸ್ವರೂಪ ಅಧ್ಯಯನ ಸಂಸ್ಥೆ
    ಮಂಗಳೂರು

                 ಆದಿಯ ಚಿತ್ರ ಪತ್ರ - 38
             
                 ಆದಿಯ ಚಿತ್ರ ಪತ್ರ - 38

                             ಆ...ಯ್ತಾ...?

           "ನಾನು ನಿನ್ನನ್ನು ಬೇಯಿಸಿ ತಿನ್ನಲ್ಲ" ಅಂತ ಅಪ್ಪ ಅಮ್ಮನಿಗೆ ಮದುವೆಯಾದ ಹೊಸದರಲ್ಲಿ ಹೇಳಿದ್ರಂತೆ. ಬಹಳ ಹೆಂಗಸರು ಬೇಯಿಸಿ ಸಾಯೋದಕ್ಕೆ ಹುಟ್ಟಿದ ಹಾಗೆ ಇದ್ದಾರೆ. ಅಪ್ಪನ ಚಿಕ್ಕಮ್ಮನ ಕಥೆ ವಿಚಿತ್ರ ಇದೆ, ಹಾಗೆ ಯಾವ ಗಂಡಸರೂ ಇರುವುದಿಲ್ಲ ಅಂತ ಅನಿಸ್ತದೆ. ಮದುವೆಯಾಗಿ ೩೭ ವರ್ಷ ಆಯಿತು. ನಿನ್ನ ಚಿಕ್ಕಪ್ಪ ಒಂದು ದಿನವೂ ಈ ಕೋಣೆಗೆ ಕಾಲಿಡಲಿಲ್ಲ. " ಆ..ಯ್ತಾ...?" ಅನ್ನುವ ಒಂದು ಅಧಿಕಾರದ ದ್ವನಿ ಮಾತ್ರ ಬಳಕೆ ಮಾಡ್ತಾರೆ. ಪ್ರತಿ ದಿನ ಎರಡು ಬಗೆಯ ಪಲ್ಯ ಮತ್ತು ಹೆಸರು ಕಾಳಿನ ಪಾಯಸವೂ ಮಾಡಬೇಕು... ಮಧ್ಯಾಹ್ನಕ್ಕೆ ಟಿಫಿನ್ - ಬಾಕ್ಸಿಗೆ ತುಂಬಿಸಿಕೊಡಬೇಕು. ನೋಡು ಇದು ಒಂದು ಕಿಂಡಿ ಇಲ್ಲಿಂದ ಕೇಳಿದ್ದೆಲ್ಲ ಕೊಡ್ತೇನೆ ಅಷ್ಟೇ... ತಿಂಡಿ, ಊಟ ರುಚಿಯಾಗಿಲ್ಲವಾದರೆ ಹಾಗೆ ಕಿರುಚಿ, ಗರ್ಜಿಸಿ ಹೋಗ್ತಾರೆ... ಅಂತ ಹೇಳಿ ಚಿಕ್ಕಮ್ಮ ಅಳುತ್ತಿದ್ದರಂತೆ. ಚಿಕ್ಕಪ್ಪ ವೃತ್ತಿಯಲ್ಲಿ ಆಯುರ್ವೇದ ಪಂಡಿತರಂತೆ. ಉಳಿದಂತೆ ಕಷಾಯ ಪುಡಿ ಮಾಡುವುದು, ಎರಡು ಮಕ್ಕಳನ್ನು ಸಾಕಿದ ಕಥೆ ಭಯಾನಕ.
          " ಆ..ಯ್ತಾ... " ಕಥೆ ಚೆನ್ನಾಗಿದೆ. ಹೌದು ಬಹಳ ಮನೆಗಳಲ್ಲಿ ಹೆಣ್ಣಿಗೆ ಬೇಯಿಸುವುದೇ ಬದುಕು, ಗಂಡು ಬೇಯಿಸಿ ಕಿತ್ತು ತಿನ್ನಲು ಹುಟ್ಟಿದ ಹಾಗಿದೆ. ಬಾಲ್ಯದಿಂದಲೇ ಬಹಳ ಅಮ್ಮಂದಿರ ಬದುಕು ಕಥೆ ಕಣ್ಣಾರೆ ಕಂಡ ಅಪ್ಪ, ಅಮ್ಮನಿಗೆ ಕೊಟ್ಟ ಕೊಡುಗೆ..."ನಾನು ನಿನ್ನನ್ನು ಬೇಯಿಸಿ ತಿನ್ನಲ್ಲ". ಅನ್ನುವದರ ಮೂಲಕ ಜೀವನ ಆರಂಭವಾಯ್ತು. ಅಮ್ಮ ಲಾಭ ಲೆಕ್ಕ ಹಾಕಿದ್ರು.. ಸ್ಟವ್ ಉರಿಸುವುದು ಬೇಡ. ಅಂದರೆ ಗ್ಯಾಸ್ ಅಥವಾ ಒಲೆ ಉರಿಸುವ ಕೆಲಸ ಇಲ್ಲ. ಪಾತ್ರೆ ತೊಳೆಯುವ ಕೆಲಸ ಇಲ್ಲ. ಸಮಯ ಬಹಳ ಉಳಿತಾಯ. ನಾನು ಹುಟ್ಟುವ ಮೊದಲು ಎರಡುವರೆ ವರ್ಷ ಅಡುಗೆ ಕೋಣೆ ಹೆಚ್ಚು ಬಳಕೆ ಇಲ್ಲದೆ ಬೇಯಿಸದೆ ಹಸಿ ಹಸಿ ತಿಂದು ಸುಖ ಪಟ್ಟರಂತೆ. ನಾನು ಅಮ್ಮನ ಹೊಟ್ಟೆಯಲ್ಲಿ ಇದ್ದಾಗ ಎಪ್ಪತ್ತು ಪರ್ಸೆಂಟ್ ಮಾತ್ರ ಹಸಿ, ನಂತರ ನನ್ನ ಬೆಳವಣಿಗೆಗಾಗಿ ಬೇಯಿಸುವುದು ಆರಂಭವಾಯಿತು.
         ಗರ್ಭಿಣಿ ಇದ್ದಾಗ ಇದ್ದ ಅಮ್ಮನ ಆಹಾರ ನನ್ನ ಆರೋಗ್ಯಕ್ಕೆ ಸಹಕಾರಿ ಅನ್ನುವುದಕ್ಕೆ ಆಧಾರ ನನ್ನ ಆರೋಗ್ಯ. ಒಂದೂವರೆ ವರ್ಷದವಳಿದ್ದಾಗ ಎರಡು ದಿನ ಲೂಸ್ ಮೋಶನ್ ಗಾಗಿ ಮತ್ತು ಎಂಟು ವರ್ಷದವಳಿದ್ದಾಗ ಒಂದು ದಿನ ಜ್ವರ ಬಂದಾಗ ಮದ್ದು ತೆಗೆದುಕೊಂಡ ವಿಚಾರ ಅಮ್ಮ ಹೇಳ್ತಿರುತ್ತಾರೆ. ನನಗೆ ಗೊತ್ತಿದ್ದ ಆರೋಗ್ಯ ಸಮಸ್ಯೆ ಒಂದೆರಡು ವರ್ಷದಿಂದ ಕೆಲವೊಮ್ಮೆ ಶೀತಾ ಕಾಡಿದೆ. ಅಪ್ಪನಿಗೆ ಐದು ವರ್ಷಗಳ ಹಿಂದೊಮ್ಮೆ ಮಲೇರಿಯಾ ಬಂದದ್ದು ಗೊತ್ತು. ನಾನು ಬಾಲ್ಯದಿಂದ 10 ವರ್ಷದವರೆಗೆ ಅಪ್ಪ ಹಸಿ ತಿನ್ನುವುದನ್ನೇ ಕಂಡದ್ದು. ಯಾವುದೆಲ್ಲ ಅಂತ ನಿಮಗೆ ಕುತೂಹಲವಿರಬಹುದು. ನಿತ್ಯ ಬೆಳಗ್ಗೆ ಒಂದು ಲೋಟ ಕುಂಬಳಕಾಯಿ ಜ್ಯೂಸ್.., ಮೊಳಕೆ ಕಾಳು, ತರಕಾರಿ, ಸೊಪ್ಪು, ಹಣ್ಣು, ಬಸಳೆಸೊಪ್ಪು, ಬಟಾಟೆ ತಿನ್ನುತ್ತಾರ..? ಅಂತ ಯಾರಾದರೂ ಕೇಳಿದರೆ, ಹೌದಪ್ಪ ಕಹಿ ಇರುವುದಕ್ಕೆ ದಾಳಿಂಬೆ ಮತ್ತು ಮೊಸರು ಹಾಕಿ ತಿನ್ನುತ್ತಿದ್ದೆ ಅಂತ ಹೇಳುತ್ತಿದ್ದರು. ಕೆಲವೊಮ್ಮೆ ನಾನೂ ಜೊತೆ ಸೇರುತ್ತಿದ್ದೆ. ಅಮ್ಮ ಒಂದು ಹೊತ್ತು ಅಪ್ಪನಿಗೆ ಕಂಪೆನಿ ಕೊಡುತ್ತಿದ್ದರು. ಆದರೆ ಕೆಲವೊಮ್ಮೆ ಉಪ್ಪು ಹಾಕುತ್ತಿರಲಿಲ್ಲ.
          " ನಾಲಗೆಗೆ ಬುದ್ಧಿ ಕಲಿಸಬೇಕು" ಆಗ ಜೀವನ ಎಲ್ಲಾ ಸರಿ ಹೋಗುತ್ತದೆ...ಅನ್ನುವ ಅಪ್ಪನ ಮಾತಿನಲ್ಲಿ ಎರಡು ಅರ್ಥ ಇದೆ. ಒಂದು ಸಲ ಉಪ್ಪಿಟ್ಟು ತಿನ್ನುವಾಗ ನಾಲಗೆ ಉಪ್ಪು ಕೇಳಿತಂತೆ. ಅಪ್ಪನಿಗೆ ಅದು ಗೊತ್ತಾಗಿ ಬಿಟ್ಟಿತಂತೆ. ನಾಲಗೆಗೆ ನೀನು ಕೇಳಿದ್ದು ಕೊಡುವುದಿಲ್ಲ ಅಂತ ಅಂದ್ರಂತೆ. ಇಷ್ಟು ವರ್ಷ ನೀನು ಕೇಳಿದಾಗಲೆಲ್ಲ ಉಪ್ಪು ಹುಳಿ ಖಾರ ಕೊಟ್ಟಿದ್ದೇನೆ...ಇನ್ನು ಕೊಡಲ್ಲ ಅಂದರಂತೆ. ಅಪ್ಪನ ಮಾತು ಕೇಳುವಾಗ ವಿಚಿತ್ರ ಅನಿಸುತ್ತದೆ.
ಹೊಟ್ಟೆ... ಕೋಲ್ಡ್ ಡ್ರಿಂಕ್ಸ್ ಕೊಡು.. ರಸ್ತೆಬದಿಯ ಮಂಚೂರಿ ಕೊಡು.. ಪಿಜ್ಜಾ ಬರ್ಗರ್, ಎಣ್ಣೆ ತಿಂಡಿ ಕೊಡು... ಪಾನ್ ಬೀಡ, ವಿಸ್ಕಿ -ಬಿಯರ್ ಕೊಡು ಪುಳಿಮುಂಚಿಯೇ ಕೊಡು ಅಂತ ಅದು ಕೇಳಲೇ ಇಲ್ಲ. ಪಾಪ ಹೊಟ್ಟೆ ಒಳಗೆ ಹೋದ ಎಲ್ಲಾ ಆಹಾರವನ್ನು ಅದು 13 ಭಾಗ ಮಾಡಿ ಜೀರ್ಣಕ್ರಿಯೆಯ ಯುದ್ಧ ನಡೆಸ್ತದಂತೆ. ಪಾಪ ಅದಕ್ಕೆ ಮದುವೆ ಮನೆಗೆ ಪಾರ್ಟಿಗೆ ಹೋದಾಗ 30 ಬಗೆ ಹೊಟ್ಟೆಗೆ ತುಂಬಿಸಿದಾಗ ಅದರೊಳಗಿನ ಹೋರಾಟ ಅಯ್ಯೋ ಪಾಪ... ನಾಲಗೆ ಕೇಳಿದ್ದೆಲ್ಲ ಕೊಟ್ಟದ್ದಕ್ಕೆ ಆಸ್ಪತ್ರೆ ಸಂಖ್ಯೆ ಮತ್ತದರ ಕೋಣೆ ಹೆಚ್ಚಾಗುತ್ತಲೇ ಇದೆ.
              " ಒಂದು ಹೊತ್ತು ತಿಂದವ ಯೋಗಿ, ಎರಡು ಹೊತ್ತು ತಿಂದವ ಭೋಗಿ, ಮೂರು ಹೊತ್ತು ತಿಂದವ ರೋಗಿ, ನಾಲ್ಕು ಹೊತ್ತು ತಿಂದವನನ್ನು ಹೊತ್ತುಕೊಂಡು ಹೋಗಿ.." ಅನ್ನುವ ಮಾತು ಚೆನ್ನಾಗಿದೆ. 5 ಹೊತ್ತು ತಿನ್ನುವವರಿದ್ದಾರಲ್ಲಪ್ಪಾ...!!. ಅಪ್ಪ ಕಳೆದ ಒಂದು ವರ್ಷದಿಂದ ಭೋಗಿ. ಸಿರಿಧಾನ್ಯ( ನವಣೆ, ಸಜ್ಜೆ, ಸಾಮೆ, ಅರ್ಕ, ಕೊರ್ಲೆ, ಊದಲು, ಬುರುಗು, ರಾಗಿ, ಜೋಳ ) ಒಂದು ಹೊತ್ತಿಗೆ ಬೇಯಿಸಿಕೊಂಡು ಎರಡು ಹೊತ್ತಿಗೆ ತಿನ್ನುತ್ತಾರೆ. ಹೆಚ್ಚಾಗಿ ಒಂದು ಹೊತ್ತು ಸೊಪ್ಪು ತಿಂತಾರೆ. ಮಧ್ಯ ನೀರು ಜ್ಯೂಸು ಚೆನ್ನಾಗಿ ಕುಡಿಯುತ್ತಾರೆ. ನಾನು ಯೋಗಿ ಆಗಬೇಕು ಅಂತ ಹೇಳ್ತಾ ಇರ್ತಾರೆ.
              ಕೋರೋನ ಕಾಯಿಲೆ ಬರುವುದಕ್ಕೆ ಒಂದು ವರ್ಷ ಮೊದಲೇ ನಮ್ಮ ಮನೆಯಲ್ಲಿ ದಿನಕ್ಕೊಂದು ಸೊಪ್ಪಿನ ಕಷಾಯ ಇದ್ದೇ ಇದೆ. ಕಾಫಿ ಟೀ ಎಂದೂ ಇಲ್ಲ. ಹಾಲು ಹಾಕಿದ್ದು ಯಾವುದು ಎಂದೂ ಇಲ್ಲ. ಸಣ್ಣವಳಿದ್ದಾಗಿನಿಂದಲೂ ವೀಳ್ಯದೆಲೆ, ದೊಡ್ಡಪತ್ರೆ, ಕಹಿಬೇವು ಸೊಪ್ಪು ಒಂದಲ್ಲ ಒಂದು ನಿತ್ಯ ಜಗಿಯುತ್ತೇನೆ. ಬಾಯಿರುಚಿ ವ್ಯತ್ಯಾಸವಾದರೆ ನಾನು ಹೆಚ್ಚು ಜಗಿಯುತ್ತಾ ಇರುವುದು ಜೀರಿಗೆ. ಸಿಹಿಗಿಂತ ನನಗೆ ಕಹಿ ಇಷ್ಟ. ಮಾಂಸಾಹಾರಿಗಳು ನಾವಲ್ಲ. ಬೆಳಗ್ಗೆ ಎದ್ದ ಕೂಡಲೇ ಉಪ್ಪುನೀರಿನಲ್ಲಿ ಗಾರ್ಗಲ್ ಮಾಡಿ, ಅರಸಿನ ಹಾಕಿದ ಬಿಸಿ ನೀರು ಕುಡಿದು, ಮೊಳಕೆ ಕಾಳು ತಿಂದು, ಮತ್ತೆ ತಿಂಡಿಯ ಜೊತೆ ಸೊಪ್ಪಿನ ಕಷಾಯ. ಯಾವುದೆಲ್ಲ ಗೊತ್ತಾ...?. ಪೇರಳೆ, ಮಾವು, ಸಾಮ್ರಾಣಿ, ನೆಲನೆಲ್ಲಿ ಸೊಪ್ಪು ಕೊತ್ತಂಬರಿ, ಪುದೀನಾ, ತುಳಸಿ, ಗರಿಕೆ ಹುಲ್ಲು, ವೀಳ್ಯದೆಲೆ, ಪಾರಿಜಾತ, ಅಮೃತಬಳ್ಳಿ ಇನ್ನೂ ಕೆಲವು ನಿತ್ಯ ದಿನಕ್ಕೊಂದು ಬಗೆ... ಹಾ... ಅದಕ್ಕೆ ಕೊತ್ತಂಬರಿ, ಜೀರಿಗೆ ಪುಡಿ , ಒಣ ನೆಲ್ಲಿಕಾಯಿ, ಅರಸಿನ, ಬೆಲ್ಲ ಸದಾ ಹಾಕುತ್ತಾರೆ. ಸಂಜೆಯು ಅದನ್ನೇ ಒಂದು ಲೋಟ ಕುಡಿಯುತ್ತೇನೆ.
ಸಕ್ಕರೆ ಮತ್ತು ಮೈದಾ ಪೇಸ್ಟ್ ಗಳಿಗೆ ನಮ್ಮ ಮನೆಗೆ ಪ್ರವೇಶವೇ ಇಲ್ಲ.
ನಿತ್ಯದ ವಾಕಿಂಗ್ ಸಮಯ, ಅಮ್ಮನ ಗ್ರಾಮರ್, ಅಪ್ಪನ ಬಾಯಿ ಲೆಕ್ಕ ರುಚಿ ಆಗುತ್ತದೆ.

ಬೆಳಗ್ಗೆ ಪ್ರೀತಿಯ ನಮಸ್ತೆ, ಗುಡ್ ಮಾರ್ನಿಂಗ್ ನಿಂದ ರಾತ್ರಿ ಗುಡ್ ನೈಟ್ ಹೇಳುವವರೆಗೆ ಫಸ್ಟ್ ಥಾಟ್ಸ್ ಗೆ ಬೆಲೆ ಕೊಡದೆ...ನೆಗೆಟಿವ್ ಧ್ವನಿಯನ್ನು ಎಚ್ಚರದಿಂದ ಗಮನಿಸಿ..ಕೊಂದುಹಾಕಿ, ನಿತ್ಯ ಹಬ್ಬ ಆಚರಿಸುತ್ತಾ...

ನನ್ನ ಸ್ವರೂಪ ನನಗೆ ದರ್ಶನ ಮಾಡಿಸುವ ಅಪ್ಪ-ಅಮ್ಮನನ್ನು ಕಾಣುತ್ತೇನೆ.
ನಾನು ಅವರಿಗೆ ಸಿಗಲು ಸ್ವರೂಪ ಅಧ್ಯಯನ ನಡೆಯುತ್ತಿದೆ.
 ಅವರು ನನಗೆ ಸಿಕ್ಕಿದ್ದಾರೆ...
 ಸದಾ ಅವರನ್ನು ಕಾಣಲು ಕಾಣಿಸಲು ಆದಿ.

ಈ ಪತ್ರ
ಆತ್ಮೀಯರಾದ..
ಶೀಮತಿ ವಿಜಯಾ ಶೆಟ್ಟಿ ಸಾಲೆತ್ತೂರು.. ಮಕ್ಕಳ ಜಗಲಿ ಯಲ್ಲಿ ಸಕ್ರಿಯರಾಗಿರುವ ಕ್ರಿಯಾಶೀಲ ಶಿಕ್ಷಕರು, ಚಿಂತಕರು, ಸಾಹಿತಿಗಳು, ಸಮಾಜ ಸೇವಕರು. ಸಂಘಟಕರು.
ಇವರಿಗೆ...

                                       ಆದಿ ಸ್ವರೂಪ

Ads on article

Advertise in articles 1

advertising articles 2

Advertise under the article