-->
ಓ ಮುದ್ದು ಮನಸೇ....!  - 5

ಓ ಮುದ್ದು ಮನಸೇ....! - 5

   ಗುರುರಾಜ್ ಇಟಗಿ.
   ಮಕ್ಕಳ ಆಪ್ತಸಮಾಲೋಚಕರು.
   ಮಂಗಳೂರು


             ಓ ಮುದ್ದು ಮನಸೇ….! - 5

      ಎತ್ತರದ ಗುಡ್ಡವದು, ಅದರ ತುತ್ತ ತುದಿಗೆ ಸರಿ ಸುಮಾರು ನೂರು ಅಡಿ ಮೀರುವ ಬೃಹದಾಕಾರದ ಕಬ್ಬಿಣದ ಕಂಬ, ಅದಕ್ಕೆ ಜೋಡಿಸಲ್ಪಟ್ಟ ಕೇಬಲ್ ಕಾರ್, ಹತ್ತಿಪ್ಪತ್ತು ಜನರನ್ನು ಕುಳ್ಳಿರಿಸಿಕೊಂಡು ನಿಧಾನವಾಗಿ ಮೇಲೇರುತ್ತಿದೆ. ಅಬ್ಬಾ! ಅಲ್ಲಿಂದ ಕಾಣುವ ಪ್ರಕೃತಿಯ ವಿಹಂಗಮ ನೋಟವಿದೆಯಲ್ಲ ಕಂಣ್ತುಂಬಿಕೊಂಡವನೇಬಲ್ಲ....! ಇನ್ನೇನು ಕಂಬದ ತುತ್ತ ತುದಿಗೆ ತಲುಪಿಯೇಬಿಟ್ಟಿತು ಕೇಬಲ್ ಕಾರ್. ಅತ್ತಿತ್ತ ನೋಡಿ ಸಾವರಿಸಿಕೊಳ್ಳುವ ಹೊತ್ತಿಗೆ ಕೇಬಲ್ ಕಾರ್ ನ ಬ್ರೇಕ್ ಫೈಲ್ ಆದಂತೆ ಒಂದೇ ಸಮನೆ ಸರ್ರ್… ಎಂದು ನೂರಾರು ಕಿಲೋಮೀಟರ್ ವೇಗದಲ್ಲಿ ನೆಲದತ್ತ ಧಾವಿಸಿತು. ಹೋಯ್ ಹೋಯ್ ಎಂದು ಕಿರುಚಿದ್ದ ಕಾರಿನಲ್ಲಿದ್ದವರು ಉಸಿರು ಬಿಗಿ ಹಿಡಿದು ಕುಳಿತರು. ಅದೆಂತಹದ್ದೋ ಮಜಾ, ಹೇಳಲಾಗದ ಥ್ರಿಲ್ ಅದು....!!!
        ಟ್ರಿಣ್ ಟ್ರಿಣ್, ಟ್ರಿಣ್ ಟ್ರಿಣ್... ಮಮ್ಮಿ ಮಾಡಿಟ್ಟಿದ್ದ ಬಂಗುಡೆ ಮೀನಿನ ಪುಳಿಮುಂಚಿ, ನೀರ್ದೋಸೆ ತಿಂದು ಮಲಗಿದ್ದ ಸ್ನೇಹಾ ಒಮ್ಮೆಲೆ ಮೇಲೆದ್ದು ಕುಳಿತಳು..! ಕೇಳಿಸಿದ್ದು ಕಾಲಿಂಗ್ ಬೆಲ್, ರೇಖಾ ಆಂಟಿಯ ಮಗನ ಮದುವೆಗೆ ಹೋಗಿದ್ದ ಪಪ್ಪ ಮಮ್ಮಿ ಬಂದಿರಬೇಕೆಂದು ಗಡಿಬಿಡಿಯಲ್ಲಿ ಬಂದು ಡೋರ್ ಓಪನ್ ಮಾಡಿದಳು ಸ್ನೇಹಾ. ನಾವು ಮನೇಲಿಲ್ಲಾ ಅಂದ್ರೆ ಮಲಗೋದನ್ನ ಬಿಟ್ಟು ಬೇರೇನು ಮಾಡ್ಬೇಡ ಗೊಣಗುತ್ತ ಅಮ್ಮ ಕೇಳಿದರು, " ಊಟಾ ಮಾಡಿದ್ಯಾ?" ಏನೂ ಮಾತಾಡದ ಸ್ನೇಹಾ ಮತ್ತೆ ತನ್ನ ಬೆಡ್ ರೂಮಿಗೆ ಹೋದಳು. ತಡೆಯಲಾಗದ ಮುಗುಳ್ನಗು... ಅರೆ, ಅಷ್ಟುಹೊತ್ತು ಕಂಡಿದ್ದು ಕನಸು! ನಾನು ನಿಜವಾಗ್ಲೂ ಕೇಬಲ್ ಕಾರಿನಲ್ಲಿ ಕುಳಿತಂತಹ ಅನುಭವ. ಆದ್ರೂ ಪರವಾಗಿಲ್ಲ ಗೆಳೆಯರೊಟ್ಟಿಗೆ ಒಮ್ಮೆಯಾದ್ರೂ ಅಲ್ಲಿಗೆ ಹೋಗ್ಬೇಕು, ಎಂಜಾಯ್ ಮಾಡ್ಬೇಕು. ಸ್ನೇಹಾಳ ಕನಸು ಇಮ್ಮಡಿಸಿತು.!

      ಯಾವಾಗ್ಲೂ ಮಾಡಿದ ಹಾಗೆ ಮಾಡಿದ್ರೆ ಆಗಲ್ಲ. ಈ ವರ್ಷ ಟೆಂತ್ ನೀನು, ನಿಂಗಂತೂ ಓದೋದ್ರಲ್ಲಿ ಸ್ವಲ್ಪಾನೂ ಸೀರಿಯಸ್ ನೆಸ್ ಇಲ್ಲ, ಮೊದ್ಲೆಲ್ಲಾ ಸ್ಕೂಲಿಗೆ ರ್ಯಾಂಕ್ ಬರ್ತಿದ್ದೆ ನೀನು. ಅಡುಗೆ ಮನೆಯಿಂದ ಬರುತ್ತಿದ್ದ ಮಮ್ಮಿಯ ಮಾತುಗಳು ಸ್ನೇಹಾಳ ಎಡಗಿವಿಯಲ್ಲಿ ಹೊಕ್ಕು ಬಲಗಿವಿಯಲ್ಲಿ ಪಾಸ್ ಆಗುತ್ತಿದ್ದವು...!! ಅಮ್ಮನ ಮಾತುಗಳಿಗೆ ಈಗ ಬೆಲೆಯಿಲ್ಲ...!, ಅವಳು ಯಾವಾಗ್ಲೂ ಹಾಗೆ. ನಂಗೆ ನನ್ನ ಪಪ್ಪಾನೆ ಬೆಸ್ಟು, ಯಾವಾಗ್ಲೂ ಸಪೋರ್ಟ್ ಮಾಡ್ತಾರೆ. ಪಕ್ಕದಲ್ಲಿದ್ದ ಮೊಬೈಲ್ ಎತ್ತಿಕೊಂಡಳು ಸ್ನೇಹಾ. ಅರೆ! ಇಷ್ಟೊಂದು ಮೆಸೇಜಸ್? ಮಲ್ಗಿದ್ದಿದ್ರಿಂದ ಗೊತ್ತಾಗಿಲ್ಲ ಅನ್ಸುತ್ತೆ, ಓಪನ್ ಮಾಡಿದಳು. ಅನ್ ನೌನ್ ನಂಬರ್! ಎಲ್ಲಾ ಮೆಸೇಜ್ ಗಳೂ ಒಂದೇ ನಂಬರ್ ನಿಂದ ಬಂದಿವೆ. ಕ್ಯೂರಿಯಾಸಿಟಿ ಹೆಚ್ಚಿತು. ಒಂದೊಂದಾಗಿ ಓದತೊಡಗಿದಳು ಸ್ನೇಹಾ...!!!

   ಹೆಲ್ಲೋ ಸ್ನೇಹಾ, ನಾನ್ ಯಾರು ಅಂತ ಗೊತ್ತಾಯ್ತಾ? ಸಾಧ್ಯ ಆದ್ರೆ ಗೆಸ್ ಮಾಡು.! ನಿನ್ನೆ ನೀನು ಪಿಂಕ್ ಆಂಡ್ ಬ್ಲೂ ಡ್ರೆಸ್ ನಲ್ಲಿ ತುಂಬಾ ಚೆನ್ನಾಗಿ ಕಾಣಿಸ್ತಾ ಇದ್ದೆ.!

        ಯಾರಿರಬಹುದು ? ಸ್ನೇಹಾಳಿಗೆ ಕುತೂಹಲ ತಡೆಯಲಾಗ್ಲಿಲ್ಲ. ನೀವ್ ಯಾರು ಅಂತ ಗೊತ್ತಾಗ್ಲಿಲ್ಲ? ರೀಪ್ಲೈ ಕೊಟ್ಟಳು ಸ್ನೇಹಾ.

          ನಿನ್ಗೆ ನಾನು ಯಾರು ಅಂತ ಗೊತ್ತು, ನೀನು ನನ್ನಾ ನೋಡಿದ್ದಿಯಾ, ಥಿಂಕ್ ಮಾಡು ಗೊತ್ತಾಗತ್ತೆ. ಆಕಡೆಯಿಂದ ಟಕ್ ಅಂತ ರೀಪ್ಲೈ ಬಂತು...!

         ಹೈಸ್ಕೂಲ್, ನೆಂಟರ ಮನೆ, ಗೆಳೆಯರು ಯಾರ್ಯಾರು ತಲೆಯಲ್ಲಿ ಬಂದರೋ ಗೊತ್ತಿಲ್ಲ, ಇವರ್ಯಾರು ಅನ್ನೊದು ಮಾತ್ರ ಹೊಳೀಲಿಲ್ಲ. ಪ್ಲೀಸ್ ಯಾರು ಅಂತ ಹೇಳಿ.

         ಹೇ ಸಾರಿ, ಆ ಮೇಲೆ ಮಾತಾಡೋಣ, ಸ್ವಲ್ಪ ಕೆಲ್ಸಾ ಇದೆ. ಅತ್ತ ಕಡೆಯಿಂದ ಮೆಸೇಜ್ ಬಂದ್.

        ರಾತ್ರಿ ಇಡೀ ಸ್ನೇಹಾಳಿಗೆ ನಿದ್ರೆ ಬರಲಿಲ್ಲ. ಬಸ್ಸಲ್ಲಿ ಸ್ಕೂಲಿಗೆ ಹೋಗೋವಾಗ್ಲೂ ತಲೆಯಲ್ಲಿ ಅದೇ ಯೋಚನೆ, ಯಾರಿರ್ಬಹುದು ಅದು? ಹುಡುಗೀನಾ ಹುಡುಗಾನಾ? ಯಾರಾದ್ರು ನನ್ನ ಫೂಲ್ ಮಾಡೋಕೆ ಮೆಸೇಜ್ ಮಾಡ್ತಿದ್ದಾರಾ? ಫ್ರೆಂಡ್ಸಾ? ಹತ್ತಾರು ಪ್ರಶ್ನೆಗಳು....!! ಪ್ರತಿ ನಿಮಿಷಕ್ಕೊಮ್ಮೆ ಮೊಬೈಲ್ ಚೆಕ್ ಮಾಡ್ತಿದ್ದ ಸ್ನೇಹಾ. ಹೊಸತೊಂದರ ಹುಡುಕಾಟದಲ್ಲಿ ತೊಡಗಿದಳು.!

              ಈ ಟೀನೇಜ್ ಅಂದರೆ ಹಾಗೆ, ಯಾವಾಗಲೂ ಹೊಸಬರ ಮತ್ತು ಹೊಸದರ ಬಗ್ಗೆ ಅತೀವ ಆಸಕ್ತಿ. ಅಂತಹದ್ದೊಂದು ಆಸಕ್ತಿ ಸ್ನೇಹಾಳನ್ನು ಅನ್ ನೌನ್ ನಂಬರ್ ನಿಂದ ಬರುತ್ತಿದ್ದ ಅನಾಮಿಕ ಮೆಸೇಜ್ ಗಳ ಸೆಳೆತಕ್ಕೆ ಒಳಗಾಗುವಂತೆ ಮಾಡಿತ್ತು. ಹಾಗಂತ ಆ ಕಡೆಯಿಂದ ಮೆಸೇಜ್ ಮಾಡ್ತಾ ಇರೋದು ಹುಡುಗಿಯಲ್ಲ ಅನ್ನೋದು ಅವಳಿಗೆ ಕನ್ಫರ್ಮ್ ಆಗಿತ್ತು. ಸಿಂಪಲ್ ಆಗಿಯೇ ಗೆಳೆತನ ಆರಂಭಿಸಿದ್ದ ಸ್ನೇಹಾ ಮುಂಜಾನೆ ಹಾಸಿಗೆ ಬಿಟ್ಟಾಗಿಂದ ಆರಂಭ ಮಾಡುತ್ತಿದ್ದ ಮೆಸೇಜಿಂಗ್ ರಾತ್ರಿ ಸರಿಸುಮಾರು ಹನ್ನೊಂದು ಘಂಟೆ ಆದ್ರೂ ಮುಗಿಸ್ತಾ ಇರ್ಲಿಲ್ಲ.

        ಇಂತಹದ್ದೊಂದು ಗೆಳೆತನ ಸ್ನೇಹಾಳ ಬದುಕಿನಲ್ಲಿ ಅದೆಂತಹ ದುರಂತ ಅನುಭವ ತಂದಿತ್ತೆಂದರೆ ಅದು ತಾರುಣ್ಯದ ಪ್ರತಿಯೊಬ್ಬರಿಗೂ ಎಚ್ಚರಿಕೆಯ ಪಾಠವಾಗುವಂತೆ ಮಾಡಿತ್ತು...!

        ಅಂತು ಇಂತು ಬಹುದಿನಗಳ ನಿರಂತರ ಚಾಟಿಂಗ್ ನಂತರ ಭೇಟಿಯಾಗೊ ಡೇಟ್ ಫಿಕ್ಸ್ ಮಾಡಿಕೊಂಡಿದ್ದ ಸ್ನೇಹಾ ಎರೆಡು ಮೂರು ಬಾರಿ ಡ್ರೆಸ್ ಚೇಂಜ್ ಮಾಡಿ ಬಂದು, ಮಮ್ಮಿ ಈ ಡ್ರೆಸ್ ನಂಗೆ ಹೆಂಗೆ ಕಾಣ್ಸತ್ತೆ, ಇದು ಫಿಟ್ ಆಗತ್ತ, ಇದು ಚೆಂದಾ ಇದ್ಯಾ? ಅಂತೆಲ್ಲಾ ಕೇಳಿ ಕೊನೆಗೂ ಪೌಡರ್ ಮೆತ್ತಿ, ಲಿಪ್ ಸ್ಟಿಕ್ ಒತ್ತಿ ಉದ್ದನೆಯ ಕನ್ನಡಿಯ ಮುಂದೆ ಬೇರೆ ಬೇರೆ ಫೋಸ್ ಕೊಟ್ಟು ಅಂತು ಇಂತು ಹೊರಗೆ ಕಾಲಿಟ್ಟಳು. ಸ್ಕೂಲಲ್ಲೇನಾದ್ರು ಫಂಕ್ಷನ್ ಇದ್ಯಾ ಇವತ್ತು? ಅಮ್ಮ ಕೇಳಿದರು ಫಂಕ್ಷನ್ ಇಲ್ಲಾ ಮಮ್ಮಿ ಸೆಲೆಕ್ಷನ್ ಇದೆ…. ಗಡಿಬಿಡಿಯಲ್ಲಿ ಬಸ್ಸಿಗಾಗಿ ಓಡಿದಳು ಸ್ನೇಹಾ....

       ಸಂಜೆ ಆರು ಘಂಟೆ ಕಳೆದರೂ ಸ್ನೇಹಾಳ ಸುಳಿವಿಲ್ಲ, ಕಾಲ್ ಮಾಡಿದ್ರೇನ್ರಿ ಅವಳಿಗೆ? ಐದು ಘಂಟೆಗೆಲ್ಲಾ ಬರ್ಬೇಕಿತ್ತು, ಒಮ್ಮೆ ಫೋನ್ ಮಾಡಿಕೇಳಿ. ಹೆಂಡತಿಯ ಮಾತಿಗೆ ಉತ್ತರಿಸಿದ ಗಂಡ, ಆವಾಗಿಂದ ಮಾಡ್ತಿದ್ದೀನಿ ಮೊಬೈಲ್ ಸ್ವಿಚ್ಡ್ ಆಫ್ ಬರ್ತಾ ಇದೆ. ಸ್ಕೂಲ್ ನಲ್ಲಿ ಏನೋ ಸೆಲೆಕ್ಷನ್ ಇದೆ ಅಂದಿದ್ಲು, ಅವಳ ಕ್ಲಾಸ್ ಟೀಚರ್ಗಾದ್ರು ಫೋನ್ ಮಾಡಿ ಕೇಳಿ ಅಂದಳು. ಮರು ಮಾತನಾಡದ ಗಂಡ ಮೊಬೈಲ್ ಎತ್ತಿಕೊಂಡರು.

          ಹೆಲ್ಲೋ ಮೇಡಮ್, ಇದು ಸ್ನೇಹಾಳ ಅಪ್ಪ ಮಾತಾಡೋದು. ಸೆಲೆಕ್ಷನ್ ಮುಗ್ದಿಲ್ವಾ? ಸ್ನೇಹಾ ಇನ್ನೂ ಮನೆಗೆ ಬಂದಿಲ್ಲಾ. ಏನ್ ಸೆಲೆಕ್ಷನ್ ಸರ್? ಇವತ್ತು ಸ್ನೇಹಾ ಸ್ಕೂಲಿಗೆ ಬಂದಿದ್ದು ನಾನು ನೋಡಿಲ್ಲ, ಸ್ವಲ್ಪ ಇರಿ ಕೇಳಿ ಹೇಳ್ತೇನೆ. ಅಪ್ಪನ ಎದೆಯಲ್ಲಿ ಢವ ಢವ ಹೆಚ್ಚಿತು. ಸರ್ ಇವತ್ತು ಸ್ನೇಹಾ ಸ್ಕೂಲಿಗೆ ಬಂದಿಲ್ಲಾ ಸರ್. ಏನಾಯ್ತು, ಇಸ್ ಎವೆರಿ ಥಿಂಗ್ ಓಕೆ? ಏನಿಲ್ಲಾ ಮೇಡಮ್ ಸ್ಕೂಲಲ್ಲಿ ಏನೋ ಸೆಲೆಕ್ಷನ್ ಇದೆ ಅಂತ ಬೆಳಿಗ್ಗೇನೆ ಹೋದ್ಲು ಇನ್ನೂ ಬಂದಿಲ್ಲಾ. ಸರ್, ಅವಳ ಗೆಳೆಯರಿಗೊಮ್ಮೆ ಕಾಲ್ ಮಾಡಿ ನೋಡಿ. ಸರಿ ಮೇಡಮ್ ಥ್ಯಾಂಕ್ಯೂ. ಕಾಲ್ ಕಟ್ ಮಾಡಿ ಸೋಫಾ ಮೇಲೆ ಕುಳಿತ ಅವರು ಒಂದು ಗ್ಲಾಸ್ ನೀರು ಕುಡಿದು ಮತ್ತೆ ಮೊಬೈಲ್ ಎತ್ತಿ ಕೊಂಡು ಎಲ್ಲಾ ಗೆಳೆಯರಿಗೂ ರಿಂಗಾಯಿಸಿದರು. ಎಲ್ಲರಿಂದಲೂ ಒಂದೇ ಉತ್ತರ ಇವತ್ತು ನಾವು ಸ್ನೇಹಾಳನ್ನು ನೋಡಿಲ್ಲ! ರಾತ್ರಿ ಹನ್ನೆರೆಡು ಘಂಟೆ ಅಮ್ಮನ ಕಣ್ಣುಗಳಾಗಲೇ ಒದ್ದೆಯಾಗಿದ್ದವು, ಅಪ್ಪನಿಗೆ ಬಿಪಿ ಬೇರೆ. ಮುಂದೆ ನಡೆದಿದ್ದೆಲ್ಲವೂ ರೋಚಕ! (ಮುಂದುವರಿಯುವುದು)      


ಗುರುರಾಜ್ ಇಟಗಿ.
ಮಕ್ಕಳ ಆಪ್ತಸಮಾಲೋಚಕರು.
ಮಂಗಳೂರು

Ads on article

Advertise in articles 1

advertising articles 2

Advertise under the article