-->
ಆದಿಯ ಚಿತ್ರ ಪತ್ರ - 44

ಆದಿಯ ಚಿತ್ರ ಪತ್ರ - 44

   ಆದಿ ಸ್ವರೂಪ 
   ಸ್ವರೂಪ ಅಧ್ಯಯನ ಸಂಸ್ಥೆ 
   ಮಂಗಳೂರು

               ಆದಿಯ ಚಿತ್ರ ಪತ್ರ - 44
     ಆದಿ ಸ್ವರೂಪ
     ಮಂಗಳೂರು

                  ಆದಿಯ ಚಿತ್ರ ಪತ್ರ - 44

              "ಧ್ವನಿ ಏರಿದ್ದಕ್ಕೇ ಮನೆ ಹಾಳಾದ್ದು"

         ಬಾತ್ ರೂಮ್ ನಲ್ಲಿ ಸೋಪು ಬಾಕ್ಸ್ ಹಾಕಿದ್ದು ಯಾರು ? ಹೇಳೀ. ಬೇಗ ಹೇಳಿ... ಈ ಪೈಪಲ್ಲಿ ನೀರು ಹೊರಗೆ ಹೋಗ್ತಾ ಇಲ್ಲಾ. ಎಷ್ಟು ಸಲ ಹೇಳಿದೆ ನಿಮಗೆ.. ನೀವೇನು ಅನ್ನ ತಿನ್ನುವುದಾ..? ಮಣ್ಣಾ..? ಅಲ್ಲಾ ಬೇರೇನಾದ್ರಾ...?. ಕೈ ಕಾಲು ಸರಿ ಇಲ್ವಾ..?.ಅಪ್ಪನಿಗೆ ಹುಟ್ಟಿದವರಾ ನೀವು...?.

          ಹೇಮಂತ್ ಅಳ್ತಾ ಇದ್ದಾನೆ. ಮನೆ ಮೇಡಂಗೆ ಅವನ ಬಗ್ಗೇನೇ ಸಂಶಯ ಬಂದಿದೆ. ಕಳ್ಳನ ಮನಸ್ಸು ಹುಳ್ಳುಳ್ಳಗೆ ಆದ ಹಾಗೆ ಅವನಿಗೂ ಆಗಿದೆ. ನಾನು ಹಾಕಿದ್ದಲ್ಲಾಂತ ಏನೇನೋ ಉತ್ತರ ಕೊಟ್ಟ. ಇವನೇ ಹಾಕಿದ್ದು ಮೇಡಂ ಅಂತ ಅಶ್ವತ್ ಸಾಕ್ಷಿ ಹೇಳಿಬಿಟ್ಟ.

       ಮಂಗಳೂರಿನ ಕುಂಜತ್ತಬೈಲಿನ ಸ್ವರೂಪ ವಠಾರದಲ್ಲಿ ನಾನು ಚಿಕ್ಕವಳಿರುವಾಗ ನಡೆದ ಒಂದು ಚಿಕ್ಕ ಘಟನೆ ಇದು. ಅಪ್ಪ ಸೈಕಾಲಜಿ ಕ್ಲಾಸ್ ಮಾಡುತ್ತಿದ್ದಾಗ..ಒಟ್ಟಾರೆ ಮಕ್ಕಳು ಶಿಕ್ಷಕರು 10 ಮಂದಿ ಮಾತ್ರ ಜತೆಗಿದ್ದಾಗ ಈ ಕತೆ ನಡೆಯಿತು. ವಿಷಯ ಸಣ್ಣದಾದರೂ ಅದರ ಅಳುವಿನ ಸ್ವರೂಪ ದೊಡ್ಡದಾಗಿತ್ತು.

      ಸ್ವರೂಪ ಅಂದ್ರೆ ಸ್ವರ ಮತ್ತು ರೂಪ. ಮನೆಯಲ್ಲಿ ಮತ್ತು ಎಲ್ಲೇ ಆದರೂ ನಮ್ಮ ಧ್ವನಿ ಸರಿ ಇದ್ರೆ.. ಜಗಳ ಇರುವುದಿಲ್ಲ.

       ಹೇಮಂತ್ ಅಳ್ಬೇಡ ಅಂತ ಕೇಶವ ಸರ್ ಸಮಾಧಾನ ಮಾಡುತ್ತಿದ್ದಾರೆ.. ಮೆಹಬೂಬ ರೂಪೇಶ್ ಕುಸು ಕುಸು ಅಂತ ನಗುತ್ತಿದ್ದಾರೆ. ಹೇಮಂತನ ದುಃಖ ಹೆಚ್ಚಾಗಲು ಇವರೆಲ್ಲ ಕೆಣಕಿದ್ದು ಕಾರಣ ಇದೆ. ಆ ದಿನದ ಧ್ವನಿಯ ಶಾಕ್ ಎಲ್ಲರಿಗೂ ಆಗಿದೆ.

          ಮಕ್ಕಳಿಗೆ ದಿನನಿತ್ಯ ಸಿಗುವ ನೆಗೆಟಿವ್ ಧ್ವನಿಯ ಶಾಕ್ ಗಳು ಬಹಳ ಕಾಲ ಮೆದುಳಲ್ಲಿ ದಾಖಲೆಯಾಗಿ ಮಕ್ಕಳ ಕಲಿಕೆ - ಆಸಕ್ತಿ ಮತ್ತು ಸರ್ವತೋಮುಖ ಬೆಳವಣಿಗೆಗೆ ಬಹಳ ಹಿನ್ನಡೆ ಯಾಗುತ್ತದೆ.

      ಅಪ್ಪನ ಕೌನ್ಸಿಲಿಂಗ್ ಕ್ಲಾಸ್ ಸ್ವಲ್ಪ ಹೊತ್ತು ಅಲ್ಲಿಗೆ ಬಂದ್ ಆಗಿದೆ.. ಆಗಿತ್ತು. ಅಲ್ಲಲ್ಲ..

          ನಿಜವಾದ ಆಧಾರ ಸಹಿತ ಗ್ರೂಪ್ ಕೌನ್ಸಿಲಿಂಗ್ ಈಗ ಆರಂಭವಾಯಿತು.
ಹೇಮಂತ್..! ಯಾಕೆ ಅಳ್ತಾ ಇದ್ದಿ.. ಅಂತ ಅಪ್ಪ ಕೇಳಿದ್ರು. ಇನ್ನೂ ನೀನು ಸ್ವಲ್ಪ ಹೊತ್ತು ಅಳಬೇಕು ಅಂತಾನೂ ಒತ್ತಾಯ ಮಾಡಿದ್ರು. ಹೇಮಂತ್.. ಮೇಡಂ ಬೈದ್ರಾ..? ಅಳ್ತಾ...ಹೌದು ಅಂದ. ಇಲ್ವಲ್ಲ ಅವರು ಬೈಲಿಲ್ಲ.. ಕತ್ತೆ, ನಾಯಿ, ಮಂಗಾ ಅಂತ ಬೈದ್ರಾ.. ಹಾಗೆಲ್ಲ ಬೈಲಿಲ್ಲ ಜೋರಾಗಿ ಹೇಳಿದ್ರು ಅಷ್ಟೇ.. ಆಮೇಲೆ ಅನ್ನ ತಿನ್ನುವುದಾ ಅಲ್ಲ, ಬೇರೇನಾದ್ರೂ..? ಅಂತ ಕೇಳಿದ್ರು. ಹೇಮಂತ್ ಇದೆ ಪ್ರಶ್ನೆ ಮೆಹಬೂಬನಿಗೆ ಕೇಳ್ತೇನೆ.. ನೀನು ಅನ್ನ ಅಲ್ಲದೆ ಬೇರೇನಾದ್ರೂ ತಿನ್ನುತ್ತೀಯ...? ಚಪಾತಿ, ರೊಟ್ಟಿ, ದೋಸೆ, ಪಲಾವು.. ಸಾಕು ನಿಲ್ಲಿಸು. ಹೇಮಂತ್ ನೀನು ಮನಸಲ್ಲೇ ಹಾಗೇ ಉತ್ತರಿಸಿದ್ರೆ ಸಾಕಿತ್ತು. ಕೈ -ಕಾಲು ಸರಿ ಇಲ್ವಾ ಅಂತ ಕೇಳಿದ್ರಲ್ವಾ .? ಹುಂ.. ಹೌದು ಅಂತ ಒಪ್ಪಿಕೊಂಡ. ಅದೇ ಮಾತು ನಾನು ನಿನಗೆ ಕೇಳ್ತೇನೆ.. ಹೇಮಂತ್ ನಿನಗೆ ಕೈ ಕಾಲು ಸರಿ ಇಲ್ವಾ.. ಇದೆ ಸಾರ್. ಇದೆ ಸಾರ್.. ಸರಿ ಇದೆ. ಆಯ್ತಲ್ಲ, ಅದರಲ್ಲಿ ತಪ್ಪಿಲ್ಲ. ಹೇಮಂತ್ ನೀನು ಅಪ್ಪನಿಗೆ ಹುಟ್ಟಿದವನ..? ಅಲ್ಲಾ ಅಮ್ಮನಿಗೆ ಅಂತ ನೀನು ಯಾಕೆ ಅವರಿಗೆ ಉತ್ತರ ಕೊಟ್ಟಿಲ್ಲ ಹೇಳು! 

        .ಉತ್ತರ ಕೊಟ್ರೆ ಜಗಳ ಜಾಸ್ತಿ ಆಗ್ತಿತ್ತು ಸರ್ ಅಂತ ಹೇಮಂತನೇ ಹೇಳಿಬಿಟ್ಟ!. ಅವರಿಗೆ ಉತ್ತರ ಕೊಡುವುದಕ್ಕಿಂತ, ನಿನ್ನ ತಪ್ಪಿನ ಅರಿವಾದರೆ.. ಮತ್ತು ಆ ತಪ್ಪನ್ನು ಆ ಕೂಡಲೇ ನೀನು ಅಲ್ಲೇ ಒಪ್ಪಿಕೊಂಡಿದ್ದರೆ ಸಾಕಿತ್ತು.. ಅಲ್ವಾ ಹೇಮಂತ್ ಅಂತ ಹೇಳಿದ್ದು ಅಲ್ಲೇ ಇದ್ದ ಅಕ್ಷತಾ.

          ಹಾಗಾದ್ರೆ ಇಲ್ಲಿ ಅತ್ತದ್ದು ಯಾಕೆ ಅಂತ ಮಾತ್ರ ವಿಚಾರಣೆ ಸಾಗಿದೆ. ಅರ್ಥ ಆಯಿತು ಸಾರ್. ಬಹಳ ಸಂದರ್ಭಗಳಲ್ಲಿ ಅಳುವುದಕ್ಕೆ ಅರ್ಥ ಇಲ್ಲ ಅಂತ ಈಗ ಅರ್ಥ ಆಯಿತು ಸರ್ ಅಂತ ಕೃಷ್ಣ ಸರ್ ಅಭಿಪ್ರಾಯ ಹೇಳಿಕೊಂಡರು. ಹೇಮಂತ್... ನಿನಗೆ..? ಈಗ ಅರ್ಥ ಆಯಿತು ಸರ್...ಆದರೆ...!. ಆದರೆ ಏನು ಹೇಳು ಹೇಮಂತ್ . ಮೇಡಂ ಜೋರಾಗಿ ಹೇಳಬಾರದಿತ್ತು..!

        ಅಷ್ಟ್ರಲ್ಲಿ ಅಡುಗೆ ಕೋಣೆಯ ಪಕ್ಕದಲ್ಲೇ ಓಡಾಡುತ್ತಿದ್ದ ಮೇಡಂಗೆ ಇದು ಕೇಳಿತು. ತಕ್ಷಣ ಕೌನ್ಸಿಲಿಂಗ್ ಕೋಣೆಗೆ ನುಗ್ಗಿದ್ರು. ಯಾರು ಹೇಳಿದ್ದು..? ಜೋರಾಗಿ ಹೇಳಬಾರದಿತ್ತು ಅಂತ...ಯಾರದು ಹೇಳಿದ್ದು ? ಕತ್ತೆಗಳಿಗೆ ಕಿರುಚಿ ಹೇಳಿದ್ರೂ ಭಾಷೆ ಇಲ್ಲದವರು..! ಹಾಗೇ ಹೀಗೆ ಅಂತ ಮತ್ತೊಂದಿಷ್ಟು ಬೈಗುಳವೇ ಸಿಕ್ಕಿತು.
ಸ್ವಲ್ಪ ಹೊತ್ತು ಮತ್ತೆ ಎಲ್ಲರೂ ಮೌನ !.

       ಸ್ವಲ್ಪ ಹೊತ್ತಿನ ನಂತರ. ಅಪ್ಪನ ಶಾಂತ ಧ್ವನಿಯ ವಿಚಾರಣೆ ಮುಂದುವರಿಯಿತು.
ಸಾರ್.. ಹುಂ..ಹೇಳಿ ಕೃಷ್ಣ ಸರ್ ಮೇಡಂಗೆ ಸಿಟ್ಟು ಬರಬಾರದಾಗಿತ್ತು. ಅವರು ತುಂಬಾ ಒಳ್ಳೆಯವರು. ಸಿಟ್ಟು ಅವರ ಆರೋಗ್ಯಕ್ಕೆ ತೊಂದರೆ ಅಲ್ವಾ...?. ತಪ್ಪು ಆದಾಗ ಪರವಾಗಿಲ್ಲ ಅಂತ ಹೇಳ್ತಾ ತಪ್ಪಿನ ಅರಿವನ್ನು ಹೇಮಂತ್ ಗೆ ಮೂಡಿಸಲು ಸಂದರ್ಭ ಅವರೇ ತೆಗೆದುಕೊಳ್ಳಬೇಕಿತ್ತು. ಇದೆಲ್ಲವೂ ಸರಿ ಸಾರ್. ಮೇಡಂಗೆ ಸಿಟ್ಟು ಬರಲಿಕ್ಕೆ ಕಾರಣ ಇತ್ತು ಸಾರ್. ಕೃಷ್ಣ ಸರ್ ಈಗ ಅದು ಬೇಡ. ಎಲ್ಲರಿಗೂ ಇಲ್ಲಿ ಎಲ್ಲವೂ ಅರ್ಥ ಆಯಿತಲ್ಲ. ಹಾಗಲ್ಲ ಸರ್ ಹೇಮಂತ್ ಆಗ ಕೊಟ್ಟ ಉತ್ತರ ತುಂಬಾ ಒರಟಾಗಿತ್ತು. ನಾನು ಸೋಪು ಬಾಕ್ಸ್ ಬೀಳಿಸಿದ್ದಲ್ಲ ಮೇಡಂ ಅದೇ ಬಿದ್ದದ್ದು. ಅದೇ ಬಿದ್ದದ್ದು ಅಂತ ಹೇಳಿದ್ದು ಒರಟು ಧ್ವನಿಯಲ್ಲಿತ್ತು. ಇದು ಅವರ ಸಿಟ್ಟಿಗೆ ಕಾರಣವಾಗಿತ್ತು. ಇರಲಿ ಇದನ್ನು ಅವರ ಜತೆ ಮುಂದೊಂದು ದಿನ ಚರ್ಚಿಸೋಣ.

          ಮಾತು ಮತ್ತೆ ಎಲ್ಲಿಗೋ ಹೋಗಬಾರದು. ಇಲ್ಲಿ ಇರುವ ಎಲ್ಲರೂ ಏನು ಅರ್ಥ ಆಯಿತು ಅಂತ ಒಪ್ಪಿಕೊಳ್ಳೋಣ. ತಪ್ಪಿನ ಅರಿವನ್ನು ತಿಳಿಸಬೇಕಾದ ಜವಾಬ್ದಾರಿ ಇರುವವರಿಗೆ, ಏರು ಧ್ವನಿ, ಕಿರುಚುವ ಧ್ವನಿ ಅಗತ್ಯ ವಿಲ್ಲಾ. ತಪ್ಪು ಮಾಡಿದವನಿಗೆ ಪ್ರಶಂಸೆ ಯ ಒಳ್ಳೆಯ ಸಂದರ್ಭ ಸೃಷ್ಟಿಸಿ, ಅಲ್ಲಿ ಅದು ಹಾಗೇ ಸರಿ ಅಲ್ಲಾ ಅಂತ ಹೇಳಬಹುದು. ಆಗ ಅವರಿಗೆ ತಪ್ಪಿನ ಅರಿವು ಹೆಚ್ಚು ಮನವರಿಕೆ ಆಗಬಹುದು !.

          ಬಹಳ ಕಡೆ ಮನೆ ಮನೆಗಳಲ್ಲಿ ನಡೆದ ಜಗಳ, ತೀವ್ರ ಹೋರಾಟಕ್ಕೆ ಹೋದದ್ದು.. ವಿಷಯಕ್ಕಿಂತಲೂ ಧ್ವನಿಯ ತೀವ್ರತೆ ಕಾರಣ ಅಲ್ವೇ. ಯಾವುದೇ ತಪ್ಪಿಗೆ ಸಮಾಧಾನದ ಹತ್ತು ದಾರಿಗಳು ಇರುವಾಗ ಯಾಕೆ ಕಿರುಚಿ ಘರ್ಜಿಸಿ ತೃಪ್ತಿ ಪಡುತ್ತಾರೆ..? ಇದು ತಾತ್ಕಾಲಿಕ ಫಲಿತಾಂಶದ ತೃಪ್ತಿ ಅಷ್ಟೇ. ಇದೂ ಒಂದು ರೀತಿಯ ಖಾಯಿಲೆ ಅಲ್ವಾ..? ನಿರೀಕ್ಷೆ ಇಲ್ಲದೆ ಬೈಗುಳಗಳು ಸಿಕ್ಕಾಗ ಮೆದುಳಿನ ನರಗಳಲ್ಲಿ ಜೀವ ಕೋಶಗಳ ಸಂಚಾರಕ್ಕೆ ಒಂದು ಹೊಡೆತ ಸಿಕ್ಕ ಹಾಗೇ ಆಗ್ತದೆ ಆಲ್ವಾ... ಮನೆ ಮನೆಗಳಲ್ಲಿ, ಶಾಲೆ ಕಾಲೇಜುಗಳಲ್ಲಿ ಇಂತಹ ಶಾಕ್ ಕೊಡುತ್ತಾನೇ ಇರುತ್ತಾರೆ. ಆ ಕ್ಷಣ ನೆಗೆಟಿವ್ ಸಿಕ್ಕಿದ್ದನ್ನು ಪಾಸಿಟಿವ್ ಆಗಿ ಬದಲಾಯಿಸಿ ಕೊಳ್ಳುವ ಶಿಕ್ಷಣ ಪಡಕೊಳ್ಳದವರಿಂದ ಸಮಾಜದಲ್ಲಿ ಅನಾಹುತಗಳು ಹೆಚ್ಚು ಸೃಷ್ಟಿ ಆಗುತ್ತವೆ !.

        ಕಲಿಕೆಯಲ್ಲಿ, ಅರ್ಥ ಮಾಡಿ ಕೊಳ್ಳುವುದರಲ್ಲಿ, ಮಕ್ಕಳು ಸ್ವಲ್ಪ ಸ್ಲೋ ಅಥವಾ ಹಿಂದುಳಿದಿದ್ದಾರಾದರೆ... ಮಕ್ಕಳು ಯಾರೋ ಬೈಯ್ಯುವವರ - ಗದರಿಸುವವರ ಜತೆಗೆ ಇದ್ದಾರೆಂದೇ ಅರ್ಥ. ಅಧಿಕಾರ - ದರ್ಪದ ಅರ್ಧ ಧ್ವನಿ ಈಗಲೇ ಇಳಿಸಿ ನೋಡೋಣ. ಪ್ರತಿಯೊಂದು ಮನೆಯ ಒಳ್ಳೆಯದು ಕೆಟ್ಟದು, ಸಾಧನೆ - ಸುಂದರ ಬದುಕು ಮನೆಯ ಹಿರಿಯರ, ಗುರುಗಳ ಧ್ವನಿಯ ಸ್ವರ + ರೂಪ ( ಭಾವ ) = ಸ್ವರೂಪದಲ್ಲಿ ಅಡಗಿದೆ.

       ನಾನು ಸಣ್ಣವಳು ಅಂತ ತಾತ್ಸಾರ ಬೇಡ... ಸಣ್ಣವರು ಯಾರು..?
ನನ್ನ ಧ್ವನಿಯನ್ನು ನಾನೇ ಗಮನಿಸುವ ಪ್ರಬುದ್ಧತೆಗೆ ನಾನು... ಆದಿ. 

     ಈ ಪತ್ರ ಅಪ್ಪ ಗೋಪಾಡ್ಕರ್ ಸದಾ ಸ್ಮರಿಸುತ್ತಿರುವ, ಸಾವಿರಾರು ಮಂದಿಗೆ ಮಾನಸಿಕ ಚಿಕಿತ್ಸೆ, ನೆಮ್ಮದಿಯ ಕುಟುಂಬಕ್ಕೆ ಕಾರಣ ಮತ್ತು ಪ್ರೇರಣೆಯಾದ..

         ಬಹುಮುಖ ಪ್ರತಿಭೆಯ ಕಲಾವಿದ, ಮನೋವಿಜ್ಞಾನಿ ಗಂಗಾಧರ ಬೆಳ್ಳಾರೆಯವರ ಶ್ರೀಮತಿ ಆಶಾ ಬೆಳ್ಳಾರೆಯರಿಗೆ.. ತಲೆ ಬಾಗಿ ವಂದಿಸಿ , ಸಮರ್ಪಿಸುತ್ತಿದ್ದೇನೆ.......

                       ಆದಿ ಸ್ವರೂಪ

    

Ads on article

Advertise in articles 1

advertising articles 2

Advertise under the article