-->
ಮನಸ್ಸಿದ್ದಲ್ಲಿ ಮಾರ್ಗ - ಕಥೆ

ಮನಸ್ಸಿದ್ದಲ್ಲಿ ಮಾರ್ಗ - ಕಥೆ

 ಫಾತಿಮತ್ ಮುರ್ಷಿದ
 9 ನೇ ತರಗತಿ

              ಮನಸ್ಸಿದ್ದಲ್ಲಿ ಮಾರ್ಗ
      ಒಂದು ಊರು. ಅದರ ಮುಂದುಗಡೆ ರಾಶಿಯಂತೆ ಬಂಡೆಗಳು ಅವುಗಳನ್ನು ಒಡೆದು ತೆಗೆದರೆ ಅಲ್ಲೊಂದು ಆಟದ ಬಯಲು ಮತ್ತು ಉದ್ಯಾನ ಆಗಿ ಮಕ್ಕಳಿಗೆ ಆಡಲು, ಜನಕ್ಕೆ ವಿಶ್ರಾಂತಿಗೆಂದು ಕೂಡಲು ಒಂದು ತಾಣವಾಗಿತ್ತು. ಆ ಊರ ಒಬ್ಬ ಶ್ರೀಮಂತ ತನ್ನ ಹಣದಲ್ಲಿ ಆ ಜಾಗದಲ್ಲಿ ಮೈದಾನ ಮತ್ತು ಉದ್ಯಾನ ನಿರ್ಮಿಸಲು ಸಿದ್ಧನಿದ್ದರೂ ಆ ಬಂಡೆ ರಾಶಿಗಳದ್ದೆ ದೊಡ್ಡ ತಲೆನೋವಾಗಿತ್ತು. ಊರ ಹಲವು ಯುವಕರು ಕುಳಿತು ಕಾಲ ಕಳೆಯುತ್ತಿದ್ದರೇ ಹೊರತು ಯಾರೂ ಆ ರಾಶಿ ಬಂಡೆ ಒಡೆಯಲು ಮುಂದಾಗಲಿಲ್ಲ. 
        ಒಂದು ದಿನ ಆ ಯುವಕರು ಕುಳಿತ ಸ್ಥಳಕ್ಕೆ ಒಬ್ಬ ದಾರಿ ಹೋಕ ಬಂದು ತಾನು ಆ ಬಂಡೆಗಳನ್ನು ಒಡೆದು ಆ ಕಲ್ಲು ಚೂರುಗಳನ್ನು ತೆಗೆದುಕೊಂಡು ಹೋಗಲು ಅಪ್ಪಣೆ ಬೇಕೆಂದು ಕೇಳಿದ. ಆ ಯುವಕರು ಅದಕ್ಕೆ ತಾನೆ ಒಡೆಯರು ಎನ್ನುವಂತೆ 'ತೆಗೆದುಕೊಂಡು ಹೋಗು' ಎಂದರು. ಮಾರನೇ ದಿನ ಅವನೇ ಬಂದು ಸುತ್ತಿಗೆ ತಂದು ಬೆಳಿಗ್ಗೆಯಿಂದಲೇ ಬಂಡೆ ಒಡೆಯತೂಡಗಿದ. ದಿನವೆಲ್ಲ ಬಿಸಿಲು ಲೆಕ್ಕಿಸದೆ ಒಡೆದ. ಇನ್ನೇನು ಸೂರ್ಯ ಮುಳುಗುವ ಸಮಯ. ಆ ಯುವಕರಲ್ಲೆರೂ ನೋಡುತ್ತಿದ್ದಂತೆ ಆ ಮನುಷ್ಯನಿಗೆ ಆ ಚೂರುಗಳಲ್ಲಿ ಒಂದು ಥಳ ಥಳ ಹೊಳೆಯುವ ಕಲ್ಲಿನ ಹರಳು ಸಿಕ್ಕಿತು. ಅದನ್ನು ತನ್ನ ಪಂಚೆಯಲ್ಲಿ ಭದ್ರವಾಗಿ ಕಟ್ಟಿಕೊಳ್ಳುತಿರುವಾಗ ಆ ಯುವಕರು ಅಲ್ಲಿಗೆ ಬಂದು 'ಅದು ಏನು' ? ಎಂದು ಕುತೂಹಲದಿಂದ ಕೇಳಿದರು. ಆ ಮನುಷ್ಯನಿಗೆ ಅದು ಏನೆಂದು ತಿಳಿಯದು. 
        'ರತ್ನ ವ್ಯಾಪಾರಿಗೆ ತೋರಿಸಿ ಕೇಳುತ್ತೇನೆ' ಎಂದ. ಆ ಸಮಯದಲ್ಲೇ ಆ ಊರಿನ ಚೀನಿವಾರ ಬರುತ್ತಿದ್ದ. ಅವನೂ ಕುತೂಹಲದಿಂದ ಏನೆಂದು ವಿಚಾರಿಸಿ ಹೊಳೆಯುವ ಕಲ್ಲಿನ ಹರಳುಗಳನ್ನು ಪರೀಕ್ಷಿಸಿ 'ಇದೊಂದು ವಜ್ರಕ್ಕೆ ಸಮಾನವಾದ ಅಪರೂಪದ ಹರಳು , ಮಾರಿದರೆ ಒಂದು ಸಾವಿರ ಆದರೂ ಬರಬಹುದು' ಎಂದ. ಆ ಮನುಷ್ಯ ಇನ್ನೆರಡು ದಿನಗಳಲ್ಲಿ ಬಂದು ಕಲ್ಲುಗಳನ್ನು ಒಡೆಸಿ ಕಲ್ಲುಗಳನ್ನು, ಹರಳುಗಳನ್ನು ತೆಗೆದುಕೊಂಡು ಹೋಗುವುದಾಗಿ ಹೇಳಿ ತನ್ನ ಊರಿಗೆ ಹೊರಟ.  
         ಈಗ ಆ ಯುವಕರಿಗೆ ತಾವೇ ಬಂಡೆಗಳನ್ನು ಒಡೆದರೆ ಬಹಳಷ್ಟು ಕಲ್ಲಿನ ಹರಳುಗಳು ಸಿಗಬಹುದು, ಅವುಗಳನ್ನು ಮಾರಿ ಹಣ ಸಂಪಾದಿಸಬಹುದು ಎನಿಸಿತು. ಮಾರನೇ ದಿನ ಬೆಳಿಗ್ಗೆಯಿಂದಲೇ ಬಂಡೆ ಒಡೆಯಲು ನಿಂತರು. ಹದಿನೈದು ದಿನಗಳಲ್ಲಿ ಬಂಡೆಗಳಿಂದ ತುಂಬಿದ ಆ ಜಾಗ ಬಟ್ಟ ಬಯಲಾಗಿ ಹೋಯಿತು. 
        ಆದರೆ ಅದರಲ್ಲಿ ಒಂದೂ ಹರಳು ಸಿಗಲಿಲ್ಲ. ಛೇ ಎಂಥ ಕೆಲಸವಾಯಿತು. ಒಂದೇ ಒಂದು ಹರಳು ಸಿಗಲಿಲ್ಲ. ವೃಥಾ ಕಷ್ಟ ಪಟ್ಟಂತೆ ಆಯಿತು ಎಂದು ಪೇಚಾಡಿಕೊಂಡರು. ಇದನ್ನೆಲ್ಲ ನೋಡುತ್ತಿದ್ದ ಆ ಊರ ಶ್ರೀಮಂತ ಆ ಕಲ್ಲುಗಳಿಂದಲೇ ಸುತ್ತಲೂ ಒಂದು ಗೋಡೆ ಕಟ್ಟಿಸಿ ಒಂದು ತಿಂಗಳಲ್ಲೇ ಅದನ್ನು ಆಟದ ಮೈದಾನ ಮಾಡಿದ್ದು ಮಾತ್ರವಲ್ಲ ಗಿಡಗಳನ್ನು ನೆಡೆಸಿ ಒಂದು ವರ್ಷದಲ್ಲಿ ಅದೊಂದು ಊರ ಜನರು ಕುಳಿತು ಕೊಳ್ಳುವ ಉದ್ಯಾನವನ್ನಾಗಿ ಮಾಡಿದ.  
         ಯುವಕರಿಗೂ, ಊರ ಜನಕ್ಕೂ, ಇದನ್ನು ನೋಡಿ ಸಂತೋಷವಾಗಿತ್ತು. ಆಗಲೇ ಆ ಸಾಹುಕಾರ ' ಆ ದಾರಿಹೋಕ ಮನುಷ್ಯನನ್ನು ನಾನೇ ಗೊತ್ತು ಮಾಡಿ ಒಂದು ಬೆಲೆ ಬಾಳುವ ಹರಳನ್ನು ಕೊಟ್ಟು ಅದು ಅಲ್ಲಿ ಸಿಕ್ಕಂತೆ ತೋರಿಸಿ ನಾಟಕವಾಡು ಎಂದು ಹೇಳಿದ್ದು. ಊರ ಚೀನಿವಾರನೂ ನಾನು ಹೇಳಿದಂತೆ ಮಾಡಿ ಅದೊಂದು ಸಾವಿರ ರೂಪಾಯಿ ಬೆಲೆ ಬಾಳುವ ಹರಳು ಸಿಗಬಹುದು ಎಂದು ಹೇಳಿದ. ಇದೆಲ್ಲ ನಾನೇ ಮಾಡಿಸಿದ್ದು' ಎಂದು ನಿಜವನ್ನು ಹೇಳಿದ. 
         ಯುವಕರಿಗೂ ಏನೂ ಸಿಟ್ಟು ಬರಲಿಲ್ಲ. ಹೊರತು ಹೀಗೆ ಹೇಳಿದರು ' ಈ ಉದ್ಯಾನ ಮತ್ತು ಆಟದ ಬಯಲನ್ನು ನಮಗಾಗಿ ಮಾಡಿಸಿ ಉಪಕಾರ ಮಾಡಿದಿರಿ. ನೀವು ಮನಸ್ಸು ಮಾಡಿದ್ದರಿಂದ ಇದೆಲ್ಲ ಸಾಧ್ಯವಾಯಿತು'.ಎಂದು ಶ್ರೀಮಂತನನ್ನು ಕೃತಜ್ಞತೆಯಿಂದ ಹೊಗಳಿದರು.

 ಫಾತಿಮತ್ ಮುರ್ಷಿದ
9ನೇ ತರಗತಿ
ಮುಹಿಮ್ಮತ್ ಹೈಯರ್ ಸೆಕೆಂಡರಿ ಸ್ಕೂಲ್
ಪುತ್ತಿಗೆ
        

Ads on article

Advertise in articles 1

advertising articles 2

Advertise under the article