-->
ಓ ಮುದ್ದು ಮನಸೇ - 2

ಓ ಮುದ್ದು ಮನಸೇ - 2

ಗುರುರಾಜ್ ಇಟಗಿ
ಮಕ್ಕಳ ಮನಃಶಾಸ್ತ್ರಜ್ಞರು,  ಮಂಗಳೂರು

               ಓ ಮುದ್ದು ಮನಸೇ -2

         ಕೋವಿಡ್ ಮಹಾಮಾರಿಯ ಕಾಲ್ತುಳಿತಕ್ಕೆ ಸಿಲುಕಿ ಬಸವಳಿದು ಬೆಂಡಾಗಿ ನೋವನುಂಗಿ ಬದುಕುತ್ತಿರುವ ಅದೆಷ್ಟೋ ಜನ ನಿಟ್ಟುಸಿರುಬಿಡುವ ಕಾಲವಿದಾಗಿದ್ದರೂ, ಅನುಭವಿಸಿದ ಕಹಿ ಘಳಿಗೆಗಳು ಮತ್ತು ಕಳೆದುಕೊಂಡ ಬದುಕು ಇನ್ನೆಷ್ಟೋ ಮುದ್ದು ಮನಸ್ಸುಗಳನ್ನು ಮುದ್ದೆಯಾಗಿಸಿದೆ. ಅಂತಹದ್ದೊಂದು ಕಹಿ ಅನುಭವದ ಕಥೆ ಹೇಳುತ್ತೇನೆ ಕೇಳಿ.
         ಸಂಜೆ ಸರಿಸುಮಾರು ಆರು ಘಂಟೆಯ ಸಮಯ, ನನ್ನ ಮೊಬೈಲ್ ಒಂದೇ ಸಮನೆ ರಿಂಗಣಿಸುತ್ತಿತ್ತು. ನನ್ನ ದಿನನಿತ್ಯದ ಕ್ರೀಡಾಭ್ಯಾಸದಲ್ಲಿ ಬ್ಯುಸಿಯಾಗಿದ್ದ ನನಗೆ ಕ್ರೀಡಾಂಗಣದ ಕಾಂಪೌಂಡ್ ಮೇಲೆ ಎತ್ತಿಟ್ಟಿದ್ದ ನನ್ನ ಮೊಬೈಲ್ ಫೋನಿನ ರಿಂಗ್-ಟೋನ್ ಕೇಳಿಸಲೇ ಇಲ್ಲ. ನನ್ನ ಎಲ್ಲಾ ಚಟುವಟಿಕೆಗಳು ಮುಗಿದ ಮೇಲೆ ಮೊಬೈಲ್ ಬಳಿ ಬಂದಾಗಲೇ ಗೊತ್ತಾದದ್ದು ಯಾವುದೋ ಅನ್-ನೌನ್ ನಂಬರ್ ನಿಂದ ಏಳೆಂಟು ಬಾರಿ ಕಾಲ್ ಬಂದಿತ್ತು. ತಕ್ಷಣ ಆ ನಂಬರಿಗೆ ಕಾಲ್ ಮಾಡಿದೆ. ನಮಸ್ಕಾರ ಸರ್, ನೀವು ಫ್ರೀ ಇದ್ರೆ ಸ್ವಲ್ಪ ಹೊತ್ತು ಮಾತಾಡ್ಬಹುದೇ? ಎನ್ನುವ ಮಾತು ಕೇಳಿಸಿತು. ನೀವು ಯಾರೆಂದು ನನಗೆ ಗೊತ್ತಾಗಿಲ್ಲವಲ್ಲಾ ಎಂದಾಗ , ಸ್ಸಾರಿ ಸರ್, ನಾನು ಹರೀಶ್ (ಹೆಸರು ಬದಲಿಸಲಾಗಿದೆ) ಮೈಸೂರಿಂದ ಕಾಲ್ ಮಾಡ್ತಿದ್ದೀನಿ, ನಂಗೆ ನಿಮ್ಮ ಹೆಲ್ಪ್ ಬೇಕಿತ್ತು ಸರ್. ಯಾಕಿಲ್ಲ ಹರೀಶ್? ನನ್ನಿಂದಾಗುವ ಸಹಾಯ ಮಾಡ್ತೀನಿ. ಹೇಳು ಏನ್ ಪ್ರಾಬ್ಲಮ್ ? .ಎಂದು ಕೇಳಿದೆ.
        ಸರ್, ನಾನು 9ನೇ ಕ್ಲಾಸಲ್ಲಿ ಓದೋದು. ಲಾಕ್-ಡೌನ್ ಆದಾಗಿಂದ ಮನೇಲೇ ಇದ್ದೀನಿ. ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡ್ತೀನಿ. ಅಪ್ಪ ಲೆಕ್ಚರರ್, ಅಮ್ಮ ಟೀಚರ್ ಇಬ್ರೂ ಬೆಳಿಗ್ಗೆ ಡ್ಯೂಟಿಗೆ ಹೋದ್ರೆ ಸಂಜೆನೇ ಮನೆಗೆ ಬರೋದು, ಅಲ್ಲಿತನಕ ಮನೇಲಿ ನಾನೊಬ್ನೆ. ಆನ್ ಲೈನ್ ಕ್ಲಾಸ್ ಆದ್ಮೇಲೆ ಮೊಬೈಲ್ ನಲ್ಲಿ ಗೇಮ್ಸ್ ಆಡ್ತೀನಿ, ಸ್ವಲ್ಪ ಹೊತ್ತು ಫ್ರೆಂಡ್ಸ್ ಜೊತೆ ಚಾಟಿಂಗ್ ಮಾಡ್ತೀನಿ. ಇತ್ತೀಚೆಗೆ ತುಂಬಾ ಬೇಜಾರಾಗ್ತಿದೆ ಸರ್. ಮೊಬೈಲಿಗೆ ಬೇರೆ ಅಡಿಕ್ಟ್ ಆಗ್ಬಿಟ್ಟಿದ್ದೀನಿ. ಓದೋಕೆ ಮೂಡೇ ಬರ್ತಿಲ್ಲ, ಎಲ್ಲಿ ಫೈಲ್ ಆಗ್ಬಿಡ್ತಿನೇನೋ ಅನ್ನೋ ಭಯದಲ್ಲಿ ಏನ್ ಮಾಡ್ಬೇಕು ಅಂತಾನೆ ಗೊತ್ತಾಗ್ತಿಲ್ಲ, ಎಂದ.
        ಭಯ ಬೇಡ ಹರೀಶ್, ಅಪ್ಪ ಅಮ್ಮನ ಹತ್ತಿರ ಇದೆಲ್ಲಾ ಹೇಳಿದ್ದೀಯಾ? ..... ಅಯ್ಯೋ! ಸಾಧ್ಯ ಇಲ್ಲ ಸರ್, ನಾನ್ ಗೇಮ್ಸ್ ಆಡೋದು, ಚಾಟ್ ಮಾಡೋದು ಅವರಿಗೆ ಗೊತ್ತಿಲ್ಲ. ನನ್ನನ್ನು ಚೆನ್ನಾಗಿ ಓದ್ಸಿ, ಐ.ಎ.ಎಸ್ ಮಾಡ್ಸ್ಬೇಕು ಅಂದ್ಕೊಂಡಿದ್ದಾರೆ. ಅಪ್ಪ ತುಂಬಾ ಸ್ಟ್ರಿಕ್ಟ್, ಇದೆಲ್ಲಾ ಗೊತ್ತಾದ್ರೆ ಹೊಡೀತಾರೆ. ನೀಟಾಗಿ ಬಟ್ಟೆ ಹಾಕಿಲ್ಲಾ ಅಂದ್ರೂ ಬೈತಾರೆ, ಇನ್ನು ನಾನು ಓದ್ತಿಲ್ಲಾ ಅಂತಾ ಗೊತ್ತಾದ್ರೆ ಅಷ್ಟೇ ಕತೆ. ನೀವು ಅವರಿಗೆ ಇದೆಲ್ಲಾ ಹೇಳೊದಿಲ್ಲಾ ತಾನೇ?..... ಖಂಡಿತಾ ಇಲ್ಲ, ನಾನ್ ಇದ್ದೀನಿ ನಿನ್ ಜೊತೆ..... ಥ್ಯಾಂಕ್ಯು ಸರ್, ಆದ್ರೆ ನಂಗೆ ಯಾರೂ ನನ್ ಜೊತೆ ಇಲ್ಲಾ ಅನ್ನೊ ಫೀಲ್ ಆಗುತ್ತೆ. ಓದೋಕೆ ಕುತ್ಗೊಂಡ್ರೆ ಕಾನ್ಸೆಂಟ್ರೇಶನ್ ಸಿಗ್ತಿಲ್ಲ, ಅಪ್ಪ ಅಮ್ಮ ಇಬ್ರೂ ನನ್ನ ಮೇಲೆ ತುಂಬಾ ಕನಸು ಇಟ್ಟಿದ್ದಾರೆ. ಅವರಿಗೆ ನೋವು ಕೊಡೋಕೆ ನಂಗೆ ಇಷ್ಟ ಇಲ್ಲ ಸರ್. ಸ್ಕೂಲ್ ಸ್ಟಾರ್ಟ್ ಆದ್ರೆ ಏನ್ ಮಾಡ್ಬೇಕು ಅಂತಾನೆ ಗೊತ್ತಾಗ್ತಿಲ್ಲ.
            ನೀನು ನಂಗೆ ಕಾಲ್ ಮಾಡಿದ್ದೀಯ ಅಂದ್ರೆ ನಿನ್ನ ಸಮಸ್ಯೆಗೆ ಪರಿಹಾರ ಹುಡ್ಕೋಕೆ ಶುರು ಮಾಡಿದ್ದೀಯ ಅಂತಾನೆ ಅರ್ಥ. ಸಮಸ್ಯೆಗಳು ಎಲ್ಲರಲ್ಲೂ ಇರತ್ತೆ , ಆದ್ರೆ ಅವುಗಳಿಗೆ ಪರಿಹಾರ ಹುಡುಕುವ ಮನಸ್ಥಿತಿ ಬಹಳ ಮಕ್ಕಳಲ್ಲಿ ಇರೋದಿಲ್ಲ. ಒಂದು ಮಾತನ್ನ ತಿಳ್ಕೋ ಪ್ರತಿಯೊಂದೂ ಸಮಸ್ಯೆಗೆ ಒಂದಲ್ಲಾ ಒಂದು ಪರಿಹಾರ ಇದ್ದೇ ಇರತ್ತೆ. ನಾವೆಲ್ಲಾ ಅಂತಹ ಪರಿಹಾರವನ್ನು ಹುಡುಕುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಅಷ್ಟೇ. ನಮ್ಮಲ್ಲಿ ಎಂತಹದ್ದೇ ಸಮಸ್ಯೆಗಳಿದ್ದರೂ ಅದನ್ನು ಮೊದಲು ಸರಿಯಾದ ವ್ಯಕ್ತಿಗಳಲ್ಲಿ ಹಂಚಿಕೊಳ್ಳಬೇಕು. ಅಂತಹ ಸರಿಯಾದ ವ್ಯಕ್ತಿಗಳು ನಮ್ಮ ಸುತ್ತಲೇ ಇದ್ದರೂ ಕೆಲವೊಮ್ಮೆ ನಮ್ಮದೇ ಆದ ಸಂಕುಚಿತ ಮನೋಭಾವದಿಂದಾಗಿಯೋ ಅಥವಾ ನೋಡುವ ದೃಷ್ಠಿಕೋನದಿಂದಾಗಿಯೋ ನಾವೆಂದೂ ಅವರನ್ನು ಗುರುತಿಸುವುದೇ ಇಲ್ಲ. ಇದೇ ಇವತ್ತಿನ ಬಹುಪಾಲು ವಿದ್ಯಾರ್ಥಿಗಳು ಮಾಡುತ್ತಿರುವ ತಪ್ಪು.
           ಇಲ್ಲಿ ಹರೀಶನನ್ನೇ ಒಂದು ಉದಾಹರಣೆ ಯನ್ನಾಗಿ ತೆಗೆದುಕೊಂಡರೆ, ಅವನು ತನ್ನನ್ನು ಕಾಳಜಿ ಮಾಡುವ, ತನಗಾಗಿ ಪರಿಶ್ರಮಿಸುವ, ತನ್ನ ಉತ್ತಮ ಭವಿಷ್ಯತ್ತಿಗಾಗಿ ಕನಸು ಕಾಣುವ ಅಪ್ಪ ಅಮ್ಮನ ಸಕಾರಾತ್ಮಕ ಪ್ರಯತ್ನಗಳನ್ನು ಗಮನಿಸಿಲ್ಲ. ಬದಲಾಗಿ, ಅವನ ವಿದ್ಯಾಭ್ಯಾಸಕ್ಕೆ ಪ್ರಚೋದಿಸುವ, ತಪ್ಪು ಮಾಡಿದಾಗ ಎರಡೇಟು ಕೊಡುವ ಮತ್ತು ಸಮುದ್ರದಷ್ಟು ಪ್ರೀತಿಯನ್ನು ಬಚ್ಚಿಟ್ಟು ಅವನ ಉತ್ತಮ ಭವಿಷ್ಯತ್ತಿಗೆ ಪ್ರೇರಣೆಯಾಗಲು ತಾವೂ ಶಿಸ್ತಿನಿಂದಿದ್ದು ಅವನನ್ನೂ ಶಿಸ್ತಿನಿಂದಿರಲು ಪ್ರೇರೇಪಿಸುವ ಅಪ್ಪ ಅಮ್ಮನ ಕುರಿತು ಭಯ ಬೆಳೆಸಿಕೊಂಡಿದ್ದಾನೆ. ತೆರೆ ಮರೆಯಲ್ಲಿ ಅಪ್ಪ ಅಮ್ಮಂದಿರು ನಮಗಾಗಿ, ನಮ್ಮ ಉತ್ತಮ ನಾಳೆಗಳಿಗಾಗಿ ಪಡುವ ಪಾಡು ಅವರಿಗೇ ಗೊತ್ತು. ಕೊರೋನಾ ಸಂಕಷ್ಟದಲ್ಲೂ ಸಂಸಾರ ಸರಿದೂಗಿಸಲು ಅವರು ಅನುಭವಿಸುತ್ತಿರುವ ನೋವು ಅದು ಯಾರಿಗೂ ಹೇಳಿಕೊಳ್ಳಲಾಗದ್ದು. ಇವೆಲ್ಲವುಗಳ ನಡುವೆಯೂ ಮಕ್ಕಳ ಬದುಕಿಗೊಂದು ಅಡಿಪಾಯವಾಗಿ ನಿಲ್ಲುವ ಅವರ ಪ್ರಯತ್ನ ಅಳುಕಿಲ್ಲದೇ ಸಾಗಿದೆ. ಅದೆಷ್ಟೋ ಅಪ್ಪ ಅಮ್ಮಂದಿರು ತಾವು ಬ್ಲಾಕ್ ಎಂಡ್ ವೈಟ್ ಮೊಬೈಲ್ ಬಳಸುತ್ತಿದ್ದರೂ ಮಕ್ಕಳಿಗೆ ಮಾತ್ರ ಟಚ್ ಸ್ಕ್ರೀನ್ ಮೊಬೈಲ್ ಕೊಟ್ಟಿದ್ದಾರೆ, ಅಂತಹದ್ದೊಂದು ಕೊಡುಗೆಯ ಹಿಂದೆ ಅವರ ಬೆವರ ಹನಿಗಳ ಗುರುತುಗಳಿವೆ. ಯಾವಾಗ ನಾವು ಅಂತಹ ಪರಿಶ್ರಮ, ಪ್ರೀತಿ ಮತ್ತು ನಮ್ಮ ಭವಿಷ್ಯತ್ತನ್ನು ಬೆಳಗುವ ಅವರ ಹಂಬಲವನ್ನು ಗುರುತಿಸುವುದಿಲ್ಲವೋ ಆಗ ಹರೀಶನದ್ದೇ ಸ್ಥಿತಿ ನಮ್ಮದಾಗುತ್ತದೆ.
         ಮೂರು ಬಾರಿ ನನ್ನೊಂದಿಗೆ ಮಾತನಾಡಿದ ಹರೀಶ ಇವತ್ತು ಒಬ್ಬ ಕ್ರಿಯಾಶೀಲ ವ್ಯಕ್ತಿಯಾಗಿ ಬದಲಾಗಿದ್ದಾನೆ. ಇಂದು ಅವನಿಗೆ ನನ್ನ ಅವಶ್ಯಕತೆಯಿಲ್ಲ. ಸದಾ ಒಳಿತನ್ನು ಬಯಸುವ ಅಪ್ಪ ಅಮ್ಮನ ಪ್ರೀತಿ ಅವನಿಗೆ ಕಣ್ತೆರೆಸಿದೆ. ಮೊನ್ನೆ ಕರೆ ಮಾಡಿದ ಹರೀಶ, ನಮಸ್ತೆ ಸರ್. ಥ್ಯಾಂಕ್ಯೂ, ನಾನು ತುಂಬಾ ಖುಷಿಯಾಗಿದ್ದೇನೆ. ಈಗ ನನಗೆ ಯಾವ ಭಯವೂ ಇಲ್ಲ. ಬೆಳಿಗ್ಗೆ ಎದ್ದು ಅಮ್ಮನಿಗೆ ನೀರು ತುಂಬಲು, ಅಡುಗೆ ಮಾಡಲು ಸಹಾಯ ಮಾಡುತ್ತೇನೆ. ಅವರು ಡ್ಯೂಟಿಗೆ ಹೋದಮೇಲೆ ನನ್ನ ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡ್ತೇನೆ. ಆಮೇಲೆ ನಿಮ್ಮ ಸಲಹೆಯಂತೆ ನೆಟ್ಟ ಗಿಡಗಳಿಗೆ ನಿರುಣಿಸುತ್ತೇನೆ. ಇತ್ತೀಚೆಗೆ ಆ ಕೆಲಸ ನನಗೆ ತುಂಬಾ ಖುಷಿ ಕೊಡುತ್ತಿದೆ, ಮೂರ್ನಾಲ್ಕು ಗಿಡಗಳು ಹೂಬಿಟ್ಟಿವೆ. ಸ್ವಲ್ಪ ಹೊತ್ತು ಮನೆಯ ನಾಯಿಯೊಟ್ಟಿಗೆ ಆಟ ಆಮೇಲೆ ಊಟ. ಇನ್ನು, ಊಟದ ನಂತರ ಸ್ವಲ್ಪ ಹೊತ್ತು ಮಲಗಿ ಮತ್ತೆ ಆ ದಿನದ ಹೋಮ್ ವರ್ಕ್ ಮಾಡುತ್ತೇನೆ. ನಿಮ್ಮ ಸಲಹೆಯಂತೆ “ಸ್ಟೀಫನ್ ಹಾಕಿಂಗ್ಸ್” ಅವರ ಪುಸ್ತಕವೊಂದನ್ನು ತಂದು ಸ್ವಲ್ಪ ಓದಿದ್ದೇನೆ , ತುಂಬಾ ಪ್ರೇರಣೆ ನೀಡಿದೆ. ಪ್ರತಿದಿನ ಸಂಜೆ ಚಾಚು ತಪ್ಪದೆ ಅದನ್ನು ಓದುತ್ತೇನೆ. ಅಷ್ಟು ಹೊತ್ತಿಗೆ ಅಮ್ಮ ಕೆಲಸದಿಂದ ಬರ್ತಾರೆ, ಅವರಿಗೆ ಟೀ ಮಾಡಿಕೊಟ್ಟು ಪಕ್ಕದ ಮನೆಯಲ್ಲಿ ನನ್ನ ಗೆಳೆಯನೊಬ್ಬನಿದ್ದಾನೆ ಇಬ್ಬರೂ ಸೇರಿ ಬಾಡ್ಮಿಂಟನ್ ಆಡ್ತೇವೆ. ಒಟ್ಟಾರೆ ನಾನು ಇತ್ತೀಚೆಗೆ ಮೊಬೈಲ್ ಯೂಸ್ ಮಾಡೋದು ಆನ್-ಲೈನ್ ಕ್ಲಾಸ್ ಗೆ ಮಾತ್ರ. ನನ್ನ ಶಿಕ್ಷಕರೊಟ್ಟಿಗೂ ಮಾತಾಡಿದೆ ಅವರನ್ನೊಮ್ಮೆ ಭೇಟಿಯಾಗಬೇಕೆನಿಸುತ್ತಿದೆ. ಮತ್ತೊಮ್ಮೆ ಥ್ಯಾಂಕ್ಯೂ ಸರ್.
        ನಿನ್ನ ಮಾತು ಕೇಳಿ ನನಗೂ ಖುಷಿಯಾಯಿತು. ಇನ್ನೇನು ಶಾಲೆಗಳು ಆರಂಭವಾಗುತ್ತಿವೆ, ಪ್ರತಿನಿತ್ಯ ಶಾಲೆಗೆ ಹೊರಡುವಾಗ ಅಪ್ಪ ಅಮ್ಮನಿಗೆ ನಮಸ್ಕರಿಸುವುದನ್ನು ಮರೆಯಬೇಡ. ಕೊರೋನಾ ಸಮಸ್ಯೆ ಕಡಿಮೆಯಾಗಿದ್ದರೂ ನಮ್ಮ ಜಾಗರೂಕತೆ ಅತ್ಯಂತ ಅವಶ್ಯಕ. ಹಾಗಾಗಿ, ಪ್ರತಿದಿನ ಚಾಚೂ ತಪ್ಪದೆ ಮಾಸ್ಕ್ ಬಳಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಆಗಾಗ ಕೈಗಳಿಗೆ ಸ್ಯಾನಿಟೈಸರ್ ಹಚ್ಚಿಕೊಳ್ಳುವುದನ್ನು ಮರೆಯುವ ಹಾಗಿಲ್ಲ. ನಿನ್ನ ಗೆಳೆಯರಿಗೂ ಇವುಗಳ ಕುರಿತು ತಿಳಿಸಿಹೇಳು. ಇನ್ನು, ಶಾಲೆಗೆ ಹೋದ ಮೊದಲ ದಿನ ಪ್ರತಿಯೊಬ್ಬ ಶಿಕ್ಷಕರನ್ನೂ ತಪ್ಪದೇ ಭೇಟಿಯಾಗಿ ನಮಸ್ಕರಿಸು ಮತ್ತು ಅವರ ಆರೋಗ್ಯವನ್ನು ವಿಚಾರಿಸು. ಕೊರೋನಾ ಸಂಕಷ್ಟದಲ್ಲೂ ನಿಮಗೆ ವಿದ್ಯೆ ನೀಡಿದ ಅವರಿಗೊಂದು ಥ್ಯಾಂಕ್ಸ್ ಹೇಳೋದನ್ನೂ ಮರೆಯಬೇಡ. ನಿನ್ನ ಭವಿಷ್ಯತ್ತಿಗೆ ಒಳ್ಳೇದಾಗಲಿ. ಹರೀಶನಂತಹ ಮುದ್ದು ಮನಸ್ಸುಗಳನ್ನು ತಿದ್ದುವ ಕೆಲಸವೇ ಚೆಂದ. ಎಲ್ಲರೂ ಇಂತಹ ವಿಚಾರಗಳನ್ನು ಅಳವಡಿಸಿಕೊಳ್ಳೋಣ ನಮ್ಮ ಸುಂದರ ಭವಿಷ್ಯತ್ತನ್ನು ಕಟ್ಟೋಣ.
                       ಗುರುರಾಜ್ ಇಟಗಿ.
          ಮಕ್ಕಳ ಮನಃಶಾಸ್ತ್ರಜ್ಞರು ಮಂಗಳೂರು


Ads on article

Advertise in articles 1

advertising articles 2

Advertise under the article