-->
ಪ್ರಕೃತಿಯ ಕೂಗಿಗೆ ಕಿವಿ ಆಗೋಣ

ಪ್ರಕೃತಿಯ ಕೂಗಿಗೆ ಕಿವಿ ಆಗೋಣ

ದಿನೇಶ್ ಹೊಳ್ಳ ,ಮಂಗಳೂರು
ಖ್ಯಾತ ಸಾಹಿತಿ,ಕಲಾವಿದ,ಪರಿಸರ ಪ್ರೇಮಿ.

         ಪ್ರಕೃತಿಯ ಕೂಗಿಗೆ ಕಿವಿ ಆಗೋಣ
          ಮಕ್ಕಳಿಗೆ ಆಟ, ಪಾಠ, ಊಟ, ತಿಂಡಿಯನ್ನು ಪೋಷಕರು, ಶಿಕ್ಷಕರು ಎಷ್ಟು ಜವಾಬ್ದಾರಿಯಿಂದ ಒದಗಿಸುತ್ತಾರೋ ಅದೇ ರೀತಿ ಮಕ್ಕಳಿಗೆ ನಮ್ಮ ಸುತ್ತ ಮುತ್ತ ಇರುವ ಸೂಕ್ಷ್ಮ ಜೀವ ವೈವಿಧ್ಯತೆ ಗಳ ಅಗತ್ಯ ಮತ್ತು ಮಹತ್ವವನ್ನು ಉಳಿಸುವ ಅತ್ಯಗತ್ಯ ಮಾಹಿತಿ ತಿಳಿಸಿ ಅರಿವು ಮೂಡಿಸುವುದು ಕೂಡಾ ಅಷ್ಟೇ ಪ್ರಾಮುಖ್ಯ ಆಗಿರುತ್ತದೆ. ಇಂದು ನಗರ ಬಿಡಿ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಕೂಡಾ ಮಕ್ಕಳು ಮತ್ತು ಪ್ರಕೃತಿಯ ನಡುವೆ ಕಂದರ ನಿರ್ಮಾಣ ಆಗುತ್ತಾ ಅಂತರ ಸೃಷ್ಟಿ ಆಗುತ್ತಿದೆ. ಇದಕ್ಕೆ ಮಕ್ಕಳ ಪೋಷಕರು ನೇರ ಕಾರಣರಾಗುತ್ತಾರೆ. ನಗರದ ಮಕ್ಕಳನ್ನು ಮಾಲ್, ಮಹಲ್ ಗಳಿಗೆ ಕರೆದುಕೊಂಡು ಹೋದಾಗ ಅಲ್ಲಿ ಸಿಗುವ ಕೋಲ, ಪಿಜ್ಜಾ, ಬರ್ಗರ್, ಐಸ್ ಕ್ರೀಮ್ ತಿಂದು ಈ ಕಾಂಕ್ರೀಟ್ ಕಾಡೆ ಅವರ ಮನದ ಅಭಿಲಾಷೆಯನ್ನು ನೆರವೇರಿಸಿದ ಕಾರಣ ಅದಕ್ಕೆ ಬದುಕನ್ನು ಒಪ್ಪಿಸುತ್ತಾರೆ. ಇದಲ್ಲ.., ಈ ನಗರ ಹೀಗಿರಬೇಕಾದರೆ ಇದರ ಹಿಂದೆ ನಮ್ಮ ನಿಸರ್ಗ ನಮ್ಮ ಬದುಕಿನ ಮೂಲ ಚೇತನಾ ಶಕ್ತಿ ಎಂಬುದರ ಬಗ್ಗೆ ಮಾಹಿತಿ, ಜ್ಞಾನ ಲಭಿಸದೆ ಮಕ್ಕಳು ಕಾಡು, ಬೆಟ್ಟ, ನದಿ, ಹಳ್ಳಿಗಳಿಂದ ದೂರವಾಗುವ ಸಾಧ್ಯತೆ ಬಹಳಷ್ಟಿವೆ. 
            ನೀರು ಈ ಭೂಮಿಯ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿ...ಆದರೆ ನೀರಿನ ಬಗ್ಗೆ ಯಾಕೋ ನಿರಾಸಕ್ತಿ...ನಗರ ಎಷ್ಟೇ ಬೆಳೆದರೂ ನೀರಿಲ್ಲದೇ ಇದ್ದರೆ ಯಾವ ಗಾಢ ಅಪಾಯವನ್ನು ಎದುರಿಸಬೇಕಾದೀತು?. ನಗರಕ್ಕೆ ನೀರು, ಗಾಳಿ, ಬೆಳಕು ಲಭಿಸಬೇಕಾದರೆ ಪಶ್ಚಿಮ ಘಟ್ಟ ನೆಮ್ಮದಿಯಾಗಿ ಇರಬೇಕು. ಪಶ್ಚಿಮ ಘಟ್ಟಕ್ಕೆ ಸಮಸ್ಯೆ ಆದರೆ ಇಡೀ ದಕ್ಷಿಣ ಭಾರತಕ್ಕೆ ತೊಂದರೆ ಆಗಬಹುದು. ಇದರ ಪರಿಣಾಮವನ್ನು ನಾವು ಕಳೆದ 4 ವರ್ಷಗಳಿಂದ ಅನುಭವಿಸುತ್ತಾ ಬಂದಿದ್ದೇವೆ. ಮಹಾ ಪ್ರಳಯ, ಜಲ ಸ್ಪೋಟ, ಭೂಕುಸಿತ, ಚಂಡ ಮಾರುತ, ಸುನಾಮಿ.... ಎಂತೆಂತ ಪ್ರಾಕೃತಿಕ ದುರಂತಗಳನ್ನು ಎದುರಿಸುತ್ತಾ ಇದ್ದೇವೆ. ಪಶ್ಚಿಮ ಘಟ್ಟ ಎಂದರೆ ಕೇವಲ ಬೆಟ್ಟ, ಕಾಡು, ಕಣಿವೆಗಳ ಸಂಕೀರ್ಣ ಅಲ್ಲ, ಅದು ಈ ಭೂಮಿಯ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿ. ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಜೊತೆಗೆ ಪಶ್ಚಿಮ ಘಟ್ಟದ ಮಳೆ ಕಾಡು, ನದೀಮೂಲ, ಹುಲ್ಲುಗಾವಲು, ವನ್ಯಜೀವಿಗಳ ಬಗ್ಗೆ ಪಾಠ ಇರಬೇಕು. ಆಗ ಬಾಲ್ಯದಿಂದಲೇ ಮಕ್ಕಳಿಗೆ ಪ್ರಕೃತಿಯ ಮಹತ್ವ ಮತ್ತು ಅಗತ್ಯ ಅರ್ಥ ಆಗಿ ಪರಿಸರ ಸಂರಕ್ಷಣೆಯ ಕಾಳಜಿ ಮೂಡಿ ಬರುತ್ತದೆ. ಮಕ್ಕಳು ಮನೆ ಸುತ್ತ ಮುತ್ತ, ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು, ಮಳೆ ಕೊಯ್ಲು, ಇಂಗು ಗುಂಡಿಗಳನ್ನು ಮಾಡಿ ತಮ್ಮ ನಿಸರ್ಗ ಕಾಳಜಿಯನ್ನು ಬೆಳೆಸಬಹುದು. ಹುಟ್ಟುಹಬ್ಬದ ದಿನ ಒಂದು ಗಿಡ ನೆಟ್ಟು ಆ ಗಿಡದ ಸ್ನೇಹ, ಒಡನಾಟ ಇಟ್ಟುಕೊಂಡು ಗಿಡಗಳ ಜೊತೆ ಮಾತಾಡುವ ಮನೋಭಾವವನ್ನು ಬೆಳೆಸಿ, ಅದುವೇ ಮುಂದೊಂದು ದಿನ ನಿಮ್ಮ ಬದುಕಿಗೆ ಭದ್ರತೆ ಆಗಬಹುದು. ಮನೆಯಲ್ಲಿ ಹೆತ್ತ ತಾಯಿಯ ಪ್ರೀತಿ ಎಷ್ಟು ಮುಖ್ಯವೋ ಅದೇ ರೀತಿ ಮನೆಯಾಚೆ ಪ್ರಕೃತಿ ತಾಯಿಯ ಪ್ರೀತಿಯೂ ಅಷ್ಟೇ ಮುಖ್ಯ. ಅಳುತ್ತಿರುವ ಪ್ರಕೃತಿ ತಾಯಿಯ ರೋದನಕ್ಕೆ ಕಿವಿಯಾಗಿ ಸ್ಪಂದಿಸೋಣ..ಭವಿಷ್ಯದ ಹಸಿರು ನೆಲವನ್ನು ಸೃಷ್ಟಿಸುವಲ್ಲಿ ಪರಸ್ಪರ ಕೈ ಜೋಡಿಸೋಣ.
                             ದಿನೇಶ್ ಹೊಳ್ಳ
                              ಮಂಗಳೂರು


Ads on article

Advertise in articles 1

advertising articles 2

Advertise under the article