-->
ಪೌಷ್ಟಿಕ ಆಹಾರದಷ್ಟೇ ಓದು ಕೂಡಾ ಬದುಕಿಗೆ ಮುಖ್ಯ!

ಪೌಷ್ಟಿಕ ಆಹಾರದಷ್ಟೇ ಓದು ಕೂಡಾ ಬದುಕಿಗೆ ಮುಖ್ಯ!

     ಕೃಷ್ಣಮೋಹನ ತಲೆಂಗಳ
     ಪತ್ರಕರ್ತರು - ಮಂಗಳೂರು


ಪೌಷ್ಟಿಕ ಆಹಾರದಷ್ಟೇ ಓದು ಕೂಡಾ ಬದುಕಿಗೆ ಮುಖ್ಯ!

ಆತ್ಮೀಯ ಪುಟಾಣಿ ಮಿತ್ರರೇ...
            ದೇಶ ಸುತ್ತಿ ನೋಡು, ಕೋಶ ಓದಿ ನೋಡು ಅನ್ನುವ ಮಾತನ್ನು ನೀವು ಕೇಳಿರಬಹುದು. ಇದರ ಅರ್ಥ ನಾವು ಪ್ರವಾಸ ಮಾಡುವುದರಿಂದಲೂ, ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರಿಂದಲೂ ತುಂಬ ಜ್ಞಾನವನ್ನು ಸಂಪಾದಿಸಬಹುದು. ಜ್ಞಾನ ಅಂದರೆ ಹೆಚ್ಚಿನ ಮಾಹಿತಿ, ಹೆಚ್ಚಿನ ವಿಚಾರಗಳು, ಹೆಚ್ಚು ಹೆಚ್ಚು ಅನುಭವಗಳನ್ನು ಪಡೆಯುವುದು. ಉದಾಹರಣೆಗೆ-ಜಮ್ಮು ಕಾಶ್ಮೀರ ಎಂಬ ಜಾಗದ ಬಗ್ಗೆ ನಾವು ಪುಸ್ತಕದಲ್ಲಿ ಓದಬಹುದು, ಟಿ.ವಿ.ಯಲ್ಲಿ ಕಾಶ್ಮೀರದ ಬಗ್ಗೆ ಸಿನಿಮಾ ನೋಡಬಹುದು. ಆದರೆ ಜಮ್ಮು ಹೇಗಿರುತ್ತದೆ? ಅಲ್ಲಿನ ಚಳಿ ಹೇಗಿರುತ್ತದೆ? ಎಂದು ನಿಜವಾಗಿ ತಿಳಿಯಬೇಕಾದರೆ ನಾವು ಕಾಶ್ಮೀರಕ್ಕೇ ಹೋಗಬೇಕು. ಆ ಚಳಿಯ ಅನುಭವ ಪಡೆಯಬೇಕು. ಇದು ಪ್ರವಾಸದ ಬಗ್ಗೆಯಾದರೆ, ಇನ್ನು ಪುಸ್ತಕದ ಓದು ಕೂಡಾ ಅಷ್ಟೆ. ನಮಗೆ ತುಂಬ ತಿಳಿವಳಿಕೆಯನ್ನು ಕೊಡುತ್ತದೆ. ನಮ್ಮ ಕಲಿಯುವಿಕೆ, ಸಾಮಾನ್ಯಜ್ಞಾನ, ಚಿಂತನೆಯ ಶಕ್ತಿ, ನಿತ್ಯ ವ್ಯವಹಾರಕ್ಕೆ ಬೇಕಾದ ಬುದ್ಧಿವಂತಿಕೆ, ಚಂದದ ಬರವಣಿಗೆಯನ್ನು ಕಲಿಯುವುದು ಎಲ್ಲದಕ್ಕೂ ಓದುವುದು ತುಂಬ ಸಹಾಯ ಮಾಡುತ್ತದೆ. ನಾವು ತುಂಬ ಪುಸ್ತಕಗಳನ್ನು ಓದುವುದರಿಂದ ಏನು ಪ್ರಯೋಜನ ಎಂಬುದು ನಮಗೆ ಆ ಕ್ಷಣಕ್ಕೆ ಗೊತ್ತಾಗುವುದಿಲ್ಲ. ಆದರೆ, ಮುಂದೆ ದೊಡ್ಡವರಾಗ್ತಾ ಹೋದ ಹಾಗೆ, ನಾನು ತುಂಬ ಓದಿದ್ದರಿಂದ ಏನು ಸಿಕ್ಕಿತು ಎಂಬುದು ಗೊತ್ತಾಗುತ್ತದೆ.
              ಇದನ್ನು ಉದಾಹರಣೆ ಸಹಿತ ಹೇಳುವುದಾದರೆ, ನೀವು ನಿತ್ಯ ಆಹಾರ ತಿನ್ತೀರಲ್ವ. ವಿಟಮಿನ್, ಪ್ರೋಟೀನ್, ಕೊಬ್ಬು ಹೀಗೆ ಬೇರೆ ಬೇರೆ ಅಂಶಗಳಿರುವ ಆಹಾರ, ತಿಂಡಿ, ತರಕಾರಿ, ಹಣ್ಣುಗಳನ್ನು ತಿನ್ನುತ್ತೀರಿ. ತಿಂದ ಮರುದಿನವೇ ನೀವು ದಷ್ಟ ಪುಷ್ಟವಾಗುತ್ತೀರ... ಇಲ್ಲವಲ್ಲ... ದಿನೇ ದಿನೇ ಬೆಳೆಯುತ್ತಾ ಹೋಗುತ್ತೀರಿ. ನಾವು ತಿಂದ ಆಹಾರದಲ್ಲಿರುವ ಪೌಷ್ಟಿಕಾಂಶಗಳು ನಮ್ಮ ಶರೀರಕ್ಕೆ ಬೇಕಾದ ಪೋಶಕಾಂಶವನ್ನು ಒದಗಿಸುತ್ತದೆ. ಅದರಿಂದ ನಮಗೆ ಏನು ಪ್ರಯೋಜನ ಆಯಿತು ಎಂಬುದು ನಾವು ಬೆಳೆಯುತ್ತಾ ಹೋದಂತೆ ಆರೋಗ್ಯವಂತ ಶರೀರ ಹೊಂದಿದಾಗ ತಿಳಿಯುತ್ತದೆ. ಓದುವುದು ಕೂಡಾ ಹಾಗೆಯೇ.. ನಮ್ಮ ಮೆದುಳಿಗೆ ಚುರುಕು ಬುದ್ಧಿ ಕೊಟ್ಟು, ನಮ್ಮ ಯೋಚಿಸುವ ಶಕ್ತಿಯನ್ನು ಪ್ರಖರಗೊಳಿಸುತ್ತದೆ ಓದು...
        ಹಾಗಿದ್ದರೆ ಏನನ್ನು ಓದಬೇಕು, ಯಾವಾಗ ಓದಬೇಕು ಎಂಬ ಪ್ರಶ್ನೆ ಮೂಡುವುದು ಸಹಜ. ಆಯಾ ವಯಸ್ಸಿಗೆ ನಮಗೇನು ಇಷ್ಟವಾಗುತ್ತದೋ ಅದನ್ನೇ ಓದಬೇಕು. ತೀರಾ ಚಿಕ್ಕವರಿರುವಾಗ ಕಾಮಿಕ್ಸ್, ಚಂದಮಾಮ, ಬಾಲಮಂಗಳ, ತುಂತುರು ಇತ್ಯಾದಿಗಳು ಇಷ್ಟವಾಗುತ್ತವೆ ಅಲ್ಲವೇ. ಆ ಕತೆಗಳು, ಚಿತ್ರಗಳು ನಮ್ಮನ್ನು ಆಕರ್ಷಿಸುತ್ತದೆ. ಸ್ವಲ್ಪ ದೊಡ್ಡವರಾದ ಮೇಲೆ ಪೇಪರುಗಳು, ಮ್ಯಾಗಝೀನುಗಳು, ಅದರಲ್ಲಿ ಬರುವ ಸುದ್ದಿ, ಮಾಹಿತಿ, ವೈಜ್ಞಾನಿಕ ಲೇಖನಗಳು ಇವನ್ನೆಲ್ಲ ಓದಬಹುದು. ಮತ್ತೂ ದೊಡ್ಡವರಾದ ಮೇಲೆ ಕಥೆಗಳು, ಸಂದರ್ಶನಗಳು, ವ್ಯಕ್ತಿಚಿತ್ರಗಳನ್ನು ಓದಬಹುದು. ಓದುವ ರೂಢಿಯಾದ ಬಳಿಕ ಕಾದಂಬರಿಗಳು, ಕಾವ್ಯಗಳು, ಜೀವನಚರಿತ್ರಿಗಳು ಮತ್ತಿತರ ಗಂಭೀರ ವಿಷಯಗಳ ಪುಸ್ತಕಗಳನ್ನೂ ಓದಬಹುದು. ಅವರವರ ಅಭಿರುಚಿಗೆ ತಕ್ಕ ಹಾಗೆ ಕ್ರೀಡೆ, ಮನರಂಜನೆ, ರಾಜಕೀಯ, ಕೃಷಿ, ಮಹಿಳೆಯರು ಹೀಗೆ ಬೇರೆ ಬೇರೆ ವಿಚಾರಗಳ ಬಗ್ಗೆ ಇಷ್ಟವಾದನ್ನು ಓದಬಹುದು. ಒಂದು ನೆನಪಿಡಿ ಬದುಕಿನಲ್ಲಿ ನಾವು ಏನನ್ನೇ ಓದಲಿ, ಅದು ವ್ಯರ್ಥವಾಗುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಬೆಳೆಸುತ್ತದೆ. ಕೇವಲ ಟೀ.ವಿ. ನೋಡುವುದು, ಮೊಬೈಲ್ ವೀಕ್ಷಣೆ, ಆನ್ ಲೈನ್ ಗೇಮ್ ಗಳು, ಕಾರ್ಟೂನ್ ಗಳು ನೋಡುವುದಕ್ಕೆ ಮಾತ್ರ ನಾವು ಸೀಮಿತರಾದರೆ ನಮ್ಮ ಮೆದುಳು ತುಕ್ಕು ಹಿಡಿದ ಕಬ್ಬಿಣದ ಹಾಗಾಗುತ್ತದೆ. ಅದಕ್ಕೆ ಕೆಲಸವಿಲ್ಲದೆ ನಮ್ಮ ಕಲಿಯುವಿಕೆಯ ಆಸಕ್ತಿಯೂ ಕಡಿಮೆಯಾಗುವ ಅಪಾಯವಿದೆ. ಹಾಗಾಗಿ ಪಾಠ, ಆಟದ ಜೊತೆಗೆ ಓದುವುದಕ್ಕೂ ಪ್ರತಿದಿನ ಸಮಯ ಮೀಸಲು ಇಡಿ. ಓದುವ ಖುಷಿಯನ್ನು ಅನುಭವಿಸಿ, ಓದಿದ್ದರಲ್ಲಿ ನಿಮಗಿಷ್ಟವಾದ ಅಂಶಗಳನ್ನು ಒಂದು ಪಾಯಿಂಟ್ ಪುಸ್ತಕದಲ್ಲಿ ಬರೆದಿಡಿ ಮತ್ತು ನೀವು ಬರೆಯಲು ಪ್ರಯತ್ನಿಸಿ, ಓದದೇ ಇದ್ದರೆ ಯಾರೂ ಬರಹಗಾರರಾಗಲು ಸಾಧ್ಯವಿಲ್ಲ ಎಂಬುದು ನೆನಪಿರಲಿ... ಶುಭವಾಗಲಿ

                  .......ಕೃಷ್ಣಮೋಹನ ತಲೆಂಗಳ.



Ads on article

Advertise in articles 1

advertising articles 2

Advertise under the article