-->
ಯೋಜನೆ ತಂದ ದುರಂತ - ಕಥೆ

ಯೋಜನೆ ತಂದ ದುರಂತ - ಕಥೆ

        ಕಥೆ : ಶ್ರಾವ್ಯ 10ನೇ ತರಗತಿ
      ಸರಕಾರಿ ಪ್ರೌಢ ಶಾಲೆ ಮಂಚಿ
       ಕೊಳ್ನಾಡು ಬಂಟ್ವಾಳ

              ಯೋಜನೆ ತಂದ ದುರಂತ

          ಅದೊಂದು ಸುಂದರವಾದ ನಗರ. ಆ ನಗರದಲ್ಲಿ ಒಂದು ನದಿ ಸ್ವಚ್ಛಂದವಾಗಿ ಹರಿಯುತ್ತಿತ್ತು. ಆ ನದಿ ಆ ಊರಿನ ಒಂದು ಆಧಾರವಾಗಿತ್ತು. ಕೃಷಿ ಚಟುವಟಿಕೆಗಳನ್ನು ಒಳಗೊಂಡ ನಗರಕ್ಕೆ ಆ ನದಿಯೇ ಆಸರೆಯಾಗಿತ್ತು. ಅವರ ಪಾಲಿಗೆ ಸಂಜೀವಿನಿ ಆಗಿತ್ತು. ನದಿಯ ತೀರದಲ್ಲಿ ಕೃಷಿ, ಮಕ್ಕಳ ಆಟ ಓಟ ನೋಡಲು ಕಣ್ಣಿಗೆ ರಮಣೀಯವಾಗಿತ್ತು. ಆ ಊರಿನಲ್ಲಿ ಪ್ರಕೃತಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಮಕ್ಕಳ ಪಾಲಿಗೆ ಆ ನದಿ ಸ್ನೇಹಿತನಂತೆಯೇ ಆಗಿತ್ತು. ನೀರಲ್ಲಿ ಆಡುವುದು, ದೋಣಿ ಬಿಡುವುದು ಇಂತೆಲ್ಲ ಮಕ್ಕಳು ನೀರಿನ ಬಳಿ ಬಂದರೆ ಅವರಿಗೆ ಹಿಂತಿರುಗಿ ಹೋಗಲು ಮನಸ್ಸೇ ಇರುತ್ತಿರಲಿಲ್ಲ. ಮಕ್ಕಳ ಗುಂಪಲ್ಲಿ ಒಬ್ಬ ಸಣ್ಣ ಹುಡುಗ.ಅವನ ಹೆಸರು ತರುಣ್. ಅವನು ತುಂಟ ಮತ್ತು ಚುರುಕು ಬುದ್ಧಿಯವನು. ಅವನೇ ತನ್ನ ಸ್ನೇಹಿತರ ಗುಂಪಿಗೆ ಒಬ್ಬ ಮಾರ್ಗದರ್ಶಕನಂತಿದ್ದ. ಅವನು ವಯಸ್ಸಿನಲ್ಲಿ ಚಿಕ್ಕವನಾಗಿದ್ದರೂ ಅವನ ಆಲೋಚನೆಗಳು ಅವನ ವಯಸ್ಸಿಗಿಂತ ದೊಡ್ಡದಾಗಿರುತ್ತಿದ್ದವು. ಅವನ ಒಂದು ಸಣ್ಣ ಕುಟುಂಬ. ಅಲ್ಲಿ ಅವನ ತಂದೆ-ತಾಯಿ, ಅಕ್ಕ-ತಂಗಿ ವಾಸವಾಗಿದ್ದರು.ತಂದೆ-ತಾಯಿ ಹೊಲದ ಕೆಲಸದಲ್ಲಿ ತೊಡಗಿರುತ್ತಿದ್ದರು. ಅವರ ಜೀವನಕ್ಕೆ ಅದೇ ಆಧಾರವಾಗಿತ್ತು. ಹೀಗೆ ಸಂತೋಷದಿಂದ ದಿನಗಳು ಉರುಳುತ್ತಿದ್ದವು. 
       ಒಂದು ಬಾರಿ ಆ ನಗರಕ್ಕೆ ವಿಶೇಷ ಅಧಿಕಾರಿಯಾಗಿ ಬಂದ ಒಬ್ಬ ಆ ನಗರದ ಪರಿಸರ ಸಂಪತ್ತು ಮತ್ತು ಅಲ್ಲಿ ಹರಿಯುತ್ತಿರುವ ನದಿಯನ್ನು ಕಂಡು ಮೆಚ್ಚುಗೆಯ ಮಾತನ್ನು ವ್ಯಕ್ತಪಡಿಸಿದ. ಕಾಲಕ್ರಮೇಣ ಅವನು ಇನ್ನೂ ಕೆಲವು ವ್ಯಕ್ತಿಗಳನ್ನು ಆ ನಗರಕ್ಕೆ ಕರೆತರಲಾರಂಭಿಸಿದ. ಏನೇನೋ ಯೋಜನೆ ರೂಪಿಸಲು ಆರಂಭಿಸಿದ. ಕೊನೆಗೂ ಊರಿನ ಜೀವನ ಸಂಜೀವಿನಿಯಾಗಿದ್ದ ನದಿಯನ್ನೇ ಇನ್ನೊಂದು ಹಳ್ಳಿಗೆ ತಿರುಗಿಸುವ ಯೋಜನೆ ಮಾಡಿದ. ಯೋಜನೆ ಕಾರ್ಯರೂಪಕ್ಕೆ ಬರುತ್ತಿದ್ದಂತೆ ನಗರದ ಜನರೆಲ್ಲರೂ ಇದಕ್ಕೆ ವಿರೋಧ ವ್ಯಕ್ತಪಡಿಸತೊಡಗಿದರು. ಅವರ ಜೀವನಾಧಾರವಾಗಿದ್ದ ನದಿಯನ್ನು ತಿರುಗಿಸಲು ಹೊರಟರೆ ಅವರು ಸುಮ್ಮನೆ ಬಿಟ್ಟಾರೆ ? , ಇಲ್ಲ. ಮಕ್ಕಳು ಕೂಡ ಇದಕ್ಕೆ ಒಪ್ಪಲಿಲ್ಲ. ತಮ್ಮ ದಿನನಿತ್ಯದ ಆಟದ ಜಾಗವನ್ನು ಬಿಟ್ಟು ಹೋಗಲು ಅವರು ಒಪ್ಪಲಿಲ್ಲ. ಆದರೆ ಇಲ್ಲಿ ಅವರ ಪ್ರತಿಭಟನೆ, ಚೀರಾಟ, ಗದ್ದಲಕ್ಕೆ ಅಧಿಕಾರಿ ಮಣಿಯಲಿಲ್ಲ. ಕೊನೆಗೂ ನದಿ ತಿರುವು ಯೋಜನೆ ಜಾರಿ ಮಾಡಿಯೇ ತೀರಿದ. ಊರಿನ ಜನ ಎಷ್ಟೇ ಗೋಗರೆದರೂ, ಕಳಕಳಿಯಿಂದ ವಿನಂತಿಸಿದರು ಆತ ಕರಗಲಿಲ್ಲ. ಕೃಷಿ ಭೂಮಿಗೆ ನೀರು ಸಾಲದೆ ಬೆಳೆಗಳೆಲ್ಲಾ ಒಣಗತೊಡಗಿದವು. ನದಿಯ ಸಮೀಪದಲ್ಲಿ ನದಿಯನ್ನೇ ಅವಲಂಬಿಸಿ, ಆಧರಿಸಿ ಬೆಳೆಯುವ ಸಸಿಗಳು, ಪ್ರಾಣಿ-ಪಕ್ಷಿಗಳು ವಿನಾಶದತ್ತ ಸಾಗಿದವು. ಕೃಷಿ ಭೂಮಿ ಬರಡಾಗ ತೊಡಗಿತು. ಕೃಷಿಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಪರದಾಡತೊಡಗಿತು. ಬೆಳೆ ಬೆಳೆಯಲಾಗದೆ ಇಡೀ ವರ್ಷದ ಕೃಷಿ ಚಟುವಟಿಕೆ ಸ್ತಬ್ಧವಾಯಿತು. ತರುಣ್ ಸೇರಿದಂತೆ ಅವನ ಸ್ನೇಹಿತರು ಬಹಳ ದುಃಖಕ್ಕೊಳಗಾದರು. ತಾವು ಪ್ರತಿದಿನ ಆಟವಾಡುತ್ತಾ, ಕಾಲಕಳೆಯುತ್ತಿದ್ದ ಆ ನದಿತೀರದ ಬಳಿ ಹೋಗಲು ಅವರಿಗೆ ಅವಕಾಶವೇ ದೊರಕುತ್ತಿರಲಿಲ್ಲ. ಇದರಿಂದಾಗಿ ಮಕ್ಕಳು ಸಹ ತಮ್ಮ ಲವಲವಿಕೆಯನ್ನೇ ಕಳೆದುಕೊಂಡರು. ದೊಡ್ಡವರು ಜೀವನ, ಕೃಷಿ ವಿಚಾರಗಳನ್ನು ನೆನೆದು ದುಃಖಿತರಾದರೆ, ಮಕ್ಕಳು ತಾವು ನದಿದಡದಲ್ಲಿ ಕಳೆದ ಕ್ಷಣವನ್ನೆಲ್ಲಾ ನೆನೆದು ದುಃಖಿಸುತ್ತಿದ್ದರು.
     ಇವರದ್ದೆಲ್ಲಾ ಒಂದು ಕಥೆಯಾದರೆ, ನದಿ ಯಾವ ಊರಿಗೆ ಹರಿಯಬೇಕಿತ್ತೋ ಅಲ್ಲಿಯವರದ್ದು ಇನ್ನೊಂದು ವ್ಯಥೆ. ಈ ನೀರಿನ ಹರಿವಿಗಾಗಿಯೇ ಅನೇಕ ಚಟುವಟಿಕೆ ಆರಂಭವಾಯಿತು. ಇದರ ಸಲುವಾಗಿ ಅನೇಕ ಬೆಟ್ಟಗುಡ್ಡಗಳನ್ನು ನೆಲಸಮ ಮಾಡತೊಡಗಿದರು. ಅನೇಕ ಗಿಡಮರಗಳು, ಗಿಡಮರಗಳನ್ನೇ ಅವಲಂಬಿಸಿ ಬದುಕುತ್ತಿದ್ದ ಪ್ರಾಣಿ-ಪಕ್ಷಿ , ಕ್ರಿಮಿ - ಕೀಟಗಳು ನೆಲಕಚ್ಚಿದವು. ಒಂದು ನದಿಯ ಹರಿವಿಗಾಗಿ ಮಾಡಿದ ಯೋಜನೆ ಉಪಕಾರಿ ನಿಜ, ಆದರೆ ಇದರಿಂದಾದ ತೊಂದರೆ ಅನೇಕ. ಒಬ್ಬ ಅಧಿಕಾರಿಯ ಯೋಜನೆ ಇಡೀ ನಗರವನ್ನೇ ದುಃಖಕ್ಕೆ ತಳ್ಳಿತು. ಹರುಷದಿಂದ, ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ಜನರ ಮೇಲೆ ದೌರ್ಜನ್ಯವೆಸಗಿದಂತಾಯಿತು. ಏನೂ ತಪ್ಪು ಮಾಡದ ಪ್ರಾಣಿ-ಪಕ್ಷಿಗಳು ವಿನಾಶದತ್ತ ಸಂಚರಿಸುವಂತಾಯಿತು. ಏನೂ ಅರಿಯದ ಎಳೆವಯಸ್ಸಿನ ಮಕ್ಕಳ ಜೀವನ, ಅವರ ಆಲೋಚನೆ, ಆಸೆ-ಆಕಾಂಕ್ಷೆಗಳು ಮಣ್ಣು ಪಾಲಾದವು.                                
    ಮಾಡುವ ಪ್ರತಿ ಕೆಲಸವು ಇತಿ-ಮಿತಿಯಿಂದಿರಬೇಕು. ಸಮುದ್ರದ ಅಲೆಗಳು ಏರಿಳಿತವಾಗುವಂತೆ, ಯೋಜನೆಗಳು ರೂಪಿಸುವಾಗಲೇ ಅದರಿಂದಾಗುವ ಏರಿಳಿತವನ್ನು ನಾವು ಅರಿಯಬೇಕು. ಇಲ್ಲವಾದರೆ ಸಮುದ್ರದ ಅಲೆಗಳ ರಭಸ ಹೆಚ್ಚಾಗಿ ಪ್ರವಾಹ ಉಂಟಾಗುವಂತೆ,ಯೋಜನೆಯು ಇಡೀ ಕಾರ್ಯವನ್ನೇ ತಲೆಕೆಳಗಾಗಿಸಬಹುದು. ಕೈಗೊಳ್ಳುವ ಯೋಜನೆಗಳು ವರವಾಗಬೇಕೇ ಹೊರತು ಯಾರ ಪಾಲಿಗೂ ಶಾಪವಾಗಬಾರದು. ಇನ್ನುಮುಂದಾದರೂ ಯೋಜನೆಯನ್ನು ಕೈಗೊಳ್ಳುವ ಮೊದಲು ಯೋಚಿಸಿ, ಆಲೋಚಿಸಿ ಅದರ ಸಾಧಕ-ಬಾಧಕಗಳನ್ನರಿತು ಯೋಜನೆ ರೂಪಿಸಬೇಕು. 

            ಕಥೆ : ಶ್ರಾವ್ಯ 10 ನೇ ತರಗತಿ
ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
ಬಂಟ್ಟಾಳ

Ads on article

Advertise in articles 1

advertising articles 2

Advertise under the article