ಸುಳ್ಳು ಹೇಳಬಾರದು - ಕಥೆ
Tuesday, November 17, 2020
Edit
ಕಥೆ: ಬೀಫಾತಿಮ ಕೆ.ಎಂ. 10ನೇ ತರಗತಿ
ಸರಕಾರಿ ಪ್ರೌಢ ಶಾಲೆ ನಾರ್ಶ ಮೈದಾನ
ಬಂಟ್ಟಾಳ
ಸುಳ್ಳು ಹೇಳಬಾರದು - ಕಥೆ
ಒಂದೂರಿನ ಶಾಲೆಯಲ್ಲಿ ಗುರುಗಳು ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ " ಒಳ್ಳೆಯ ಗುಣಗಳನ್ನು ಅನುಸರಿಸಬೇಕು ಮತ್ತು ಕೆಡುಕುಗಳಿಂದ ದೂರವಿರಬೇಕು" ಎಂಬ ಮೌಲ್ಯದ ಬಗೆಗೆ ಒಳ್ಳೆಯ ಪಾಠ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ತರಗತಿಯಲ್ಲಿದ್ದ ಒಂದು ವಿದ್ಯಾರ್ಥಿ ನಾಚಿಕೆಯಿಂದ ಎದ್ದು ನಿಂತು ಗುರುಗಳಲ್ಲಿ ಹೇಳಿದನು " ಗುರುಗಳೇ ತಾನು ಹಲವಾರು ತಪ್ಪುಗಳನ್ನು ಮಾಡುವ ವಿದ್ಯಾರ್ಥಿಯಾಗಿದ್ದೇನೆ ಮತ್ತು ತಾಯಿಗೆ ಕೆಟ್ಟ ಮಗನಾಗಿದ್ದೇನೆ, ಸಮಾಜಕ್ಕೆ ಕೆಟ್ಟ ನಾಗರಿಕನಾಗಿದ್ದೇನೆ. ಮದ್ಯಪಾನ, ಕಳ್ಳತನ, ವಂಚನೆ,ಸುಳ್ಳು ಹೀಗೆ ಹಲವಾರು ತಪ್ಪುಗಳನ್ನು , ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದೇನೆ. ಆದರೆ ಗುರುಗಳೇ ಈ ತಪ್ಪುಗಳಿಂದ ನನ್ನನ್ನು ರಕ್ಷಣೆ ಮಾಡಲು ಯಾವುದಾದರೂ ಒಂದು ಉಪಾಯವನ್ನು ತಿಳಿಸಿ." ಎಂದನು.
ಆ ಸಂದರ್ಭದಲ್ಲಿ ಗುರುಗಳು ಮತ್ತು ತರಗತಿಯಲ್ಲಿದ್ದ ವಿದ್ಯಾರ್ಥಿಗಳು ಆಲೋಚಿಸುತ್ತಾರೆ. ಆಗ ಗುರುಗಳು ಒಂದು ಚಿಕ್ಕ ಉಪಾಯವನ್ನು ತಿಳಿಸುತ್ತಾರೆ. "ನೀನು ಇನ್ನು ಮುಂದೆ ಸುಳ್ಳು ಹೇಳಬಾರದು." ಗುರುಗಳು ಹೇಳಿದ ಈ ಮಾತಿಗೆ ಅವನು ಒಪ್ಪಿಕೊಳ್ಳುತ್ತಾನೆ. ಆಗ ತರಗತಿಯಲ್ಲಿ ವಿದ್ಯಾರ್ಥಿಗಳು " ಗುರುಗಳು ಯಾಕೆ ಇಷ್ಟು ಚಿಕ್ಕ ಉಪಾಯವನ್ನು ಹೇಳುತ್ತಾರೆ " ಎಂದು ಚಿಂತಿಸಿದರು. ಒಂದು ದಿನ ತಪ್ಪುಗಳನ್ನು ಮಾಡುತ್ತಿರುವ ವಿದ್ಯಾರ್ಥಿ ಮದ್ಯದಂಗಡಿಗೆ ಹೋಗುತ್ತಾ ಆಲೋಚಿಸುತ್ತಾನೆ. ಗುರುಗಳು ನಾಳೆ ಶಾಲೆಯಲ್ಲಿ ನೀನು ನಿನ್ನೆ ಮದ್ಯಪಾನ ಮಾಡಿದ್ದೀಯಾ ಎಂದು ಕೇಳಿದಾಗ ."ಹೌದು" ಎಂದು ಸತ್ಯ ಹೇಳಿದರೆ ಇತರ ವಿದ್ಯಾರ್ಥಿಗಳ ಮುಂದೆ ಅವಮಾನವಾಗಬಹುದು. "ಇಲ್ಲ" ಎಂದು ಸುಳ್ಳು ಹೇಳಿದರೆ ಗುರುಗಳಿಗೆ ನೀಡಿದ ವಚನ ತಪ್ಪಿದಂತಾಗುತ್ತದೆ. ಗುರುಗಳಿಗೆ ಮಾತು ಕೊಟ್ಟಾಗಿದೆ ಎಂದು ಮನದಲ್ಲಿ ನೆನಪಿಸಿಕೊಂಡನು. ಹೀಗೆ ವಿದ್ಯಾರ್ಥಿ ತಪ್ಪಿನಿಂದ ಹಿಂದೆಸರಿದನು.
ರಾತ್ರಿ ಕಳ್ಳತನಕ್ಕೆ ಹೊರಡುತ್ತಾನೆ ಆಗಲೂ ಗುರುಗಳ ಮಾತನ್ನು ನೆನಪಿಸಿ ಹಿಂದೆ ಸರಿಯುತ್ತಾನೆ. ಕೊನೆಗೆ ನಾಳೆಯಿಂದ ಶಾಲೆಗೆ ಹೋಗುವುದು ಬೇಡ ಎಂದು ನಿರ್ಧರಿಸುತ್ತಾನೆ . ಆಗ ಹೆತ್ತವರು ಮತ್ತು ಗುರುಗಳ ಹಿತವಚನ ನೆನಪಿಗೆ ಬರುತ್ತದೆ. ಹೀಗೆ ವಿದ್ಯಾರ್ಥಿಯು ಅರಿವಿಲ್ಲದೆ ಪ್ರತಿದಿನ ಶಾಲೆಗೆ ಹೋಗುತ್ತಿದ್ದನು. ಕೆಟ್ಟ ಯೋಚನೆಗಳು ಬರುವಾಗ ಗುರುಗಳು ಕಣ್ಣ ಮುಂದೆ ಬರುತ್ತಿದ್ದರು. ಗುರುಗಳಿಗೆ ಕೊಟ್ಟ ಮಾತಿನಿಂದ ವಿದ್ಯಾರ್ಥಿಯು ಸಜ್ಜನ ವ್ಯಕ್ತಿಯಾಗಿ ಬಾಳುತ್ತಾನೆ. ತಂದೆ-ತಾಯಿಗೆ ಒಳ್ಳೆಯ ಮಗನಾಗಿ, ಸಮಾಜಕ್ಕೆ ಒಳ್ಳೆಯ ನಾಗರಿಕನಾಗಿ ಬದುಕುತ್ತಾನೆ.
ನೀತಿ: "ಯಾವುದೇ ಸಂದರ್ಭದಲ್ಲೂ ಸುಳ್ಳು ಹೇಳಬಾರದು"
ಬೀಫಾತಿಮ ಕೆ.ಎಂ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ಟಾಳ ತಾಲೂಕು