-->
ಅರಳುವ ಪ್ರತಿಭೆ ಶ್ರೀರಕ್ಷಾ ಎಸ್.ಎಚ್.ಪೂಜಾರಿ

ಅರಳುವ ಪ್ರತಿಭೆ ಶ್ರೀರಕ್ಷಾ ಎಸ್.ಎಚ್.ಪೂಜಾರಿ


ಸಂಗೀತ ಮತ್ತು ಭರತನಾಟ್ಯ ಕ್ಷೇತ್ರದ ಅರಳುವ ಪ್ರತಿಭೆ 
            ಶ್ರೀರಕ್ಷಾ ಎಸ್. ಹೆಚ್. ಪೂಜಾರಿ

    ಮಕ್ಕಳು ತಮ್ಮ ಪರಿಸರದ ಪ್ರಭಾವಕ್ಕೆ ಒಳಗಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಇಷ್ಟಪಡುತ್ತಾರೆ. ಹೀಗೆ ಬೆಳಗುವ ಮಕ್ಕಳು ಏನಾದರೊಂದು ಸಾಧನೆ ಮಾಡುತ್ತಾ ವಿಶೇಷ ಪ್ರತಿಭೆಯಾಗಿ ಗುರುತಿಸಿಕೊಳ್ಳುತ್ತಾರೆ. ಕಲಿಯುವ ಶ್ರದ್ಧೆ ಸಾಧಿಸುವ ಛಲ ಮೈಗೂಡಿಸಿಕೊಂಡಾಗ ಯಾವುದೇ ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಲು ಕಾರಣವಾಗುತ್ತದೆ. ಹೀಗೆ ತನ್ನ ತನ್ನ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡುತ್ತಾ ಬೆಳಗುತ್ತಿರುವ ಸಂಗೀತದ ವಿಶೇಷ ಪ್ರತಿಭೆ ಮಂಗಳೂರಿನ ಕೊಣಾಜೆಯ ಶ್ರೀರಕ್ಷಾ ಎಸ್. ಹೆಚ್. ಪೂಜಾರಿ
      ಶ್ರೀ ರಕ್ಷಾ ಇವಳು ಹರೀಶ್ ಪೂಜಾರಿ ಮತ್ತು ಶ್ರೀಮತಿ ಸುರೇಖಾ ದಂಪತಿಗಳ ಪುತ್ರಿ. ಸಣ್ಣ ಪ್ರಾಯದಲ್ಲೇ ಸಂಗೀತ ಮತ್ತು ನೃತ್ಯದಲ್ಲಿ ವಿಶೇಷ ಆಸಕ್ತಿಯನ್ನು ತೋರಿಸಿದ ಶ್ರೀರಕ್ಷಾಳಿಗೆ ತಂದೆ ಮತ್ತು ತಾಯಿಯ ವಿಶೇಷ ಪ್ರೋತ್ಸಾಹ ದೊರೆಯಿತು.   
       ಶ್ರೀರಕ್ಷಾ ಪ್ರಸ್ತುತ ಕೊಣಾಜೆಯ ವಿಶ್ವಮಂಗಳ ವಿದ್ಯಾಸಂಸ್ಥೆಯ 9ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಶ್ರೀ ವೆಂಕಟಕೃಷ್ಣ ಭಟ್ ಇವರಿಂದ ಸುಮಾರು 8 ವರ್ಷಗಳಿಂದ ಅಭ್ಯಾಸ ನಡೆಸುತ್ತಿದ್ದಾಳೆ. ಸಂಗೀತದಲ್ಲಿ ವಿಶೇಷ ಛಾಪನ್ನು ಮೂಡಿಸುತ್ತಿರುವ ಈಕೆಗೆ ಅನೇಕ ವೇದಿಕೆಗಳು ಇವಳ ಸಂಗೀತ ಪ್ರತಿಭೆಗೆ ಸಾಕ್ಷಿಗಳಾಗಿವೆ.
    ಭರತನಾಟ್ಯವನ್ನು ನೃತ್ಯ ಲಹರಿ ನಾಟ್ಯಾಲಯದ
ವಿದುಷಿ ಶ್ರೀಮತಿ ರೇಶ್ಮಾ ನಿರ್ಮಲ ಭಟ್ ಇವರಿಂದ ಕಲಿಯುತ್ತಿದ್ದಾರೆ. ಎಂಟು ವರ್ಷಗಳ ನಿರಂತರ ನೃತ್ಯಾಭ್ಯಾಸದಲ್ಲಿ ತೊಡಗಿರುವ ಈಕೆ ಈಗಾಗಲೇ ಜೂನಿಯರ್ ಪರೀಕ್ಷೆಯನ್ನು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಳಿಸಿದ್ದಾಳೆ. ಸುಮಾರು 60 ಕ್ಕಿಂತಲೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾಳೆ. ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಅಬ್ಬಕ್ಕ ಉತ್ಸವ, ದೂರದರ್ಶನದ ಚಂದನವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಂದಾರ ರಾಮಾಯಣ ನೃತ್ಯ ರೂಪಕಗಳಲ್ಲಿ ಭಾಗವಹಿಸಿದ್ದಾಳೆ.
        ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿರುವ ಈಕೆ ಕ್ರೀಡಾ ಕ್ಷೇತ್ರದಲ್ಲೂ ವಿಶೇಷ ಸಾಧನೆಗೈದಿದ್ದಾಳೆ. ವಾಲಿಬಾಲ್, ತ್ರೋಬಾಲ್, ಶಟಲ್ ಬ್ಯಾಡ್ಮಿಂಟನ್ ಇವು ನೆಚ್ಚಿನ ಕ್ರೀಡೆಗಳು. 14ರ ವಯೋಮಾನದ ಹುಡುಗಿಯರ ಮೈಸೂರು ವಿಭಾಗ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿದ್ದಾಳೆ. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ರಾಜ್ಯ ಪುರಸ್ಕಾರವನ್ನು ಪಡೆದಿದ್ದಾಳೆ.
       ಬಹುಮುಖ ಪ್ರತಿಭೆಯ ಶ್ರೀರಕ್ಷಾ ಚಿತ್ರಕಲೆ ಮತ್ತು ಕ್ರಾಫ್ಟ್ ವಿಷಯದಲ್ಲೂ ಆಸಕ್ತಿಯನ್ನು ತೋರುತ್ತಿದ್ದಾಳೆ. ಬಾಟಲ್ ಆರ್ಟ್, ಕ್ರಾಫ್ಟ್ ಹೀಗೆ ಕಸದಿಂದ ರಸವನ್ನು ರಚಿಸುವಲ್ಲೂ ಎತ್ತಿದ ಕೈ.
     ಈಕೆಯ ಪ್ರತಿಭೆಯನ್ನು ಕಂಡು ಅನೇಕ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಹಲವು ಸಂಘ-ಸಂಸ್ಥೆಗಳು ಗೌರವ ಪ್ರೋತ್ಸಾಹಗಳನ್ನು ನೀಡಿವೆ. 2020ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವದ ಸಾಧಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. 
      ಸಾಹಿತಿ ಚಂದ್ರಶೇಖರ ಪಾತೂರು ಬರೆದಿರುವ ಮಕ್ಕಳ ಜಗಲಿಯ ಶೀರ್ಷಿಕೆ ಗೀತೆಯನ್ನು ಮಧುರ ಕಂಠದಿಂದ ಹಾಡಿ ಎಲ್ಲರಿಂದಲೂ ಪ್ರಶಂಸೆಯನ್ನು ಪಡೆದಿದ್ದಾಳೆ. ಈಕೆ ಇನ್ನೂ ಸಣ್ಣ ಹುಡುಗಿ. ಭವಿಷ್ಯದ ದಾರಿ ಬಹಳ ದೊಡ್ಡದಿದೆ. ದೊಡ್ಡ ಕನಸುಗಳೊಂದಿಗೆ ಸಾಗುತ್ತಿರುವ ಶ್ರೀರಕ್ಷಾನಿಗೆ ಮಕ್ಕಳ ಜಗಲಿಯ ಹಾರ್ದಿಕ ಅಭಿನಂದನೆಗಳು.

Ads on article

Advertise in articles 1

advertising articles 2

Advertise under the article