-->
ವಿಶೇಷ ಸಾಧನೆಯ ಹುಡುಗಿ - ಆದಿ ಸ್ವರೂಪ

ವಿಶೇಷ ಸಾಧನೆಯ ಹುಡುಗಿ - ಆದಿ ಸ್ವರೂಪ

ವಿಶೇಷ ಸಾಧನೆಯ ಹುಡುಗಿ - ಆದಿ ಸ್ವರೂಪ

     ಶೈಕ್ಷಣಿಕವಾಗಿ ಬಹಳಷ್ಟು ಆವಿಷ್ಕಾರಗಳು ದಿನನಿತ್ಯ ನಡೆಯುತ್ತಿರುತ್ತದೆ. ಮಕ್ಕಳ ಬೌದ್ಧಿಕ ಮಟ್ಟದ ಜೊತೆ ಸರ್ವಾಂಗೀಣ ಬೆಳವಣಿಗೆಗೆ ಒತ್ತುಕೊಟ್ಟು ನಡೆಸಿರುವ ಪ್ರಯೋಗಗಳು ಕಡಿಮೆ. ಅಂತಹ ಅಪರೂಪದ ಪ್ರಯೋಗಗಳಲ್ಲಿ ಶ್ರೇಷ್ಠ ಪರಿಕಲ್ಪನೆಯನ್ನು ಇಟ್ಟುಕೊಂಡು ಸುದ್ದಿಯಾಗುತ್ತಿರುವುದು ಮಂಗಳೂರಿನ ಸ್ವರೂಪ ಅಧ್ಯಯನ ಸಂಸ್ಥೆ. ಖ್ಯಾತ ಕಲಾವಿದ , ಮಕ್ಕಳ ಶಿಕ್ಷಣದ ಬಗೆಗಿನ ವಿಶೇಷ ಕಾಳಜಿ ಹೊಂದಿರುವ ಗೋಪಾಡ್ಕರ್ ಈ ಸಂಸ್ಥೆಯ ನಿರ್ದೇಶಕರು.
    ಕಳೆದ ಹಲವಾರು ವರ್ಷಗಳಿಂದ ಈ ಸಂಸ್ಥೆಯಿಂದ ಅನೇಕ ಮಕ್ಕಳು ವಿಶೇಷ ಸಾಧನೆ ಮಾಡಿ ಮಿಂಚುತ್ತಿದ್ದಾರೆ. ಆದರೆ ಈ ಬಾರಿ ತನ್ನ ಅದ್ಭುತ ಪ್ರತಿಭೆಯಿಂದ ಗುರುತಿಸಿಕೊಂಡಿದ್ದು ಆದಿ. ಆದಿ ಸ್ವರೂಪ ಗೋಪಾಡ್ಕರ್ ಮತ್ತು ಸುಮಾಡ್ಕರ್ ಅವರ ಪುತ್ರಿ.
     ಆದಿ ಬಾಲ್ಯದಿಂದಲೇ ಮಕ್ಕಳ ಸಂಗಡ ಬೆಳೆದವಳು. ಸ್ವರೂಪ ವಠಾರದ ಮಕ್ಕಳ ಜೊತೆ ಹಾಡುತ್ತಾ , ಕುಣಿಯುತ್ತಾ , ಕಥೆ ಕೇಳುತ್ತಾ , ಆಟವಾಡುತ್ತಾ , ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಾ ತನ್ನ ಬಾಲ್ಯವನ್ನು ಅನುಭವಿಸಿದವಳು. ಶೈಕ್ಷಣಿಕ ವ್ಯವಸ್ಥೆಯೊಳಗಿನ ಶಾಲೆಯೆಂಬ ನಾಲ್ಕು ಗೋಡೆಯನ್ನು ಕಾಣದೆ ಸ್ವರೂಪದ ಸಂತಸದ ಶೈಕ್ಷಣಿಕ ಬಯಲಿನಲ್ಲಿ ಸ್ವತಂತ್ರವಾಗಿ ಹಾರಾಡಿದವಳು. ಆದಿ ಈ ವರ್ಷ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯನ್ನು ಬರೆಯುತ್ತಾಳೆ.
    ಆದಿ ಯಾವತ್ತೂ ಪರೀಕ್ಷೆಗಾಗಿ ಓದಿದವಳಲ್ಲ. ಪರೀಕ್ಷೆಯ ಒತ್ತಡಕ್ಕೆ ಒಳಗಾಗಿ ಪಾಠಗಳ ಗುಂಗಿನಲ್ಲಿ ಕಳೆದುಹೋಗುವ ಹುಡುಗಿಯಲ್ಲ. ಆದಿಯ ಕಲಿಕಾ ಚಟುವಟಿಕೆಯೇ ಭಿನ್ನ. ತನ್ನ ಆಸಕ್ತಿಯ ವಿಷಯಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟು ಪಠ್ಯದ ವಿಷಯವನ್ನು ಕಡಿಮೆ ಅವಧಿಯಲ್ಲಿ ಮನನ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾಳೆ.ಆದಿ ದಾಖಲೆಗಾಗಿ 10 ಪ್ರತಿಭೆಗಳನ್ನು ತನ್ನದಾಗಿಸಿಕೊಳ್ಳುತ್ತಿದ್ದಾಳೆ. 
ಯಕ್ಷಗಾನವನ್ನು ಕಳೆದ ಆರು ವರ್ಷಗಳಿಂದ ಗುರುಗಳಾದ ಸುಮಂಗಳ ರತ್ನಾಕರ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದು, ಈಗಾಗಲೇ 50 ಕ್ಕಿಂತಲೂ ಹೆಚ್ಚಿನ ಯಕ್ಷಗಾನ ಪ್ರಸಂಗದಲ್ಲಿ ಪಾತ್ರವನ್ನು ನಿರ್ವಹಿಸಿದ್ದಾಳೆ . ಹಿಂದೂಸ್ತಾನಿ ಸಂಗೀತವನ್ನು ಪಂಡಿತ ರವಿಕಿರಣ್ ಇವರಿಂದ ಅಭ್ಯಸಿಸುತ್ತಿದ್ದಾಳೆ. ಸಾವಿರದ ಆರುನೂರ ಕ್ಕಿಂತಲೂ ಮಿಕ್ಕಿ ಶೈಕ್ಷಣಿಕ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತ್ರಯೋದಶ ಅವಧಾನ ಪ್ರಯೋಗದ ಮೂಲಕ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದ್ದಾಳೆ.
    ಗಿಟಾರ್ ಮತ್ತು ಕೀಬೋರ್ಡ್ ನುಡಿಸುವಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾಳೆ. ಮಿಮಿಕ್ರಿ ಬೀಟ್ಬಾಕ್ಸ್ ಅವಳ ಇಷ್ಟದ ವಿಷಯ. ಸ್ಮರಣಶಕ್ತಿ ಪ್ರಯೋಗದ ಮೂಲಕ ಫೋನ್ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವುದು ಸಾವಿರಕ್ಕಿಂತಲೂ ಮಿಕ್ಕಿ ವಸ್ತುಗಳನ್ನು ಹೆಸರಿಸುವುದು ಇವಳ ಪ್ರತಿಭೆಗೆ ಸಾಕ್ಷಿ. 
   ನಿರಂತರ ಓದು ಅವಳ ಇಷ್ಟದ ವಿಷಯ. ಆದಿ ಇಂಗ್ಲೀಷ್ ಕಾದಂಬರಿಯೊಂದನ್ನು ಬರೆಯುತ್ತಿದ್ದಾಳೆ. ಕವನ ಬರೆಯುವುದು ಕೂಡ ಹವ್ಯಾಸ.ಈಗಾಗಲೇ ಆದಿಯ ಕಥಾ ಪುಸ್ತಕ " ಆದಿಯ ಕಥೆ ಅಂತ್ಯ ನೀವೇ ಹೇಳಿ " ಪುಸ್ತಕವನ್ನು ಬಿಡುಗಡೆಗೊಳಿಸಲಾಗಿದೆ. 
      ಎರಡು ಕೈಯಲ್ಲೂ ಬರೆಯುವ ಕೌಶಲ್ಯ ಇವಳದ್ದು. ಜಾಗತಿಕ ದಾಖಲೆಯು ಕೂಡ ಇದೇ ವಿಷಯದಲ್ಲಿ ನಡೆದಿದೆ. ಎರಡು ಕೈಯನ್ನು ಬಳಸಿ ವೈವಿಧ್ಯ ಶೈಲಿಗಳಲ್ಲಿ ಅಕ್ಷರಗಳನ್ನು ಬರೆಯುವ ವಿಶೇಷ ಸಾಮರ್ಥ್ಯವನ್ನು ಹೊಂದಿರುವ ಆದಿ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಗೆ ಭಾಜನರಾಗಿರುವುದು ನಮಗೆಲ್ಲ ಹೆಮ್ಮೆ. ಮುಂದೆ ನಡೆಯಲಿರುವ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲೂ ಎರಡು ಕೈಯಲ್ಲಿ ಬರೆದು ಅಪರೂಪದ ದಾಖಲೆಯನ್ನು ನಿರ್ಮಾಣ ಮಾಡು ಯೋಜನೆಯಲ್ಲಿ ಇರುವ ನಮ್ಮ ಆದಿಗೆ ಮಕ್ಕಳ ಜಗಲಿಯ ಪರವಾಗಿ ಶುಭ ಹಾರೈಕೆಗಳು.

Ads on article

Advertise in articles 1

advertising articles 2

Advertise under the article