-->
ಕ್ರಿಕೆಟಿನಲ್ಲಿ ಒಂದು ಹೊಸ ಚಿಗುರು - ಪುಟಾಣಿ ಸಹೋಜ್

ಕ್ರಿಕೆಟಿನಲ್ಲಿ ಒಂದು ಹೊಸ ಚಿಗುರು - ಪುಟಾಣಿ ಸಹೋಜ್


ಕ್ರಿಕೆಟ್ ಪ್ರತಿಭೆ - ಸಹೋಜ್ ಎಸ್.ಜೆ.

               ಕ್ರಿಕೆಟಿನಲ್ಲಿ ಒಂದು 
   ಹೊಸ ಚಿಗುರು - ಪುಟಾಣಿ ಸಹೋಜ್

     ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಪದೋಕ್ತಿ ಯನ್ನು ನಾವು ಸಾಮಾನ್ಯವಾಗಿ ಬಳಸುತ್ತೇವೆ. ಬೆಳೆಯುವ ಮಕ್ಕಳನ್ನು ಉಲ್ಲೇಖಿಸಿ ಅವರ ಪ್ರತಿಭೆಯನ್ನು ಗುರುತಿಸಿ ಅವರನ್ನು ಸಣ್ಣ ಪ್ರಾಯದಲ್ಲೇ ನಾವು ಕಂಡುಕೊಳ್ಳುತ್ತೇವೆ. ಮಕ್ಕಳು ಬೇರೆ ಬೇರೆ ತರಹದ ಪ್ರತಿಭೆಗಳಿಂದ ಗುರುತಿಸಿಕೊಂಡು ಅಸಾಮಾನ್ಯರಾಗಿ ಬೆಳಕಿಗೆ ಬರುತ್ತಾರೆ. ಕೆಲವು ಮಕ್ಕಳು ತಮ್ಮ ಮನೆಯ ಹಿರಿಯರಿಂದ ಪ್ರೇರಿತಗೊಂಡು ತಮ್ಮ ಪ್ರತಿಭೆಯನ್ನು ರೂಡಿಸಿಕೊಂಡರೆ ಇನ್ನೂ ಕೆಲವರು ಪರಿಸರದಿಂದ ಪ್ರೇರಣೆಗೊಳಪಟ್ಟು ಬೆಳೆಯುತ್ತಾರೆ. ಕೆಲವು ಮಕ್ಕಳು ಹುಟ್ಟಿನಿಂದಲೇ ಅಸಾಧಾರಣ ಪ್ರತಿಭೆಯನ್ನು ಪ್ರಕಟಪಡಿಸುತ್ತಲೇ ಬೆಳೆಯುತ್ತಾರೆ.  
      ಇಲ್ಲೊಬ್ಬ ಬಾಲಕ ತಾನು ಹುಟ್ಟಿನಿಂದಲೇ ಕ್ರಿಕೆಟ್ ಆಟದಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾನೆ. ಅಂಬೆಗಾಲಿಕ್ಕುವ ಹರೆಯದಲ್ಲೇ ಬಾಲು - ಬ್ಯಾಟುಗಳನ್ನು ಹಿಡಿದು ಆಟವಾಡುವ ಆಸಕ್ತಿಯನ್ನು ತೋರಿದ್ದಾನೆ. ಮಾತನಾಡಿದ ಮೊದಲ ತೊದಲ ನುಡಿಗಳೇ ಬಾಲು - ಬ್ಯಾಟು ಆಗಿತ್ತು. ಕ್ರಿಕೆಟನ್ನೇ ತನ್ನ ಉಸಿರಾಗಿಸಿದ ಆ ಪುಟಾಣಿಯೇ ಸಹೋಜ್.
      
    ಸಹೋಜ್ ಇವನು ಮಂಗಳೂರಿನ ಮೆಸ್ಕಾಂ ಕಚೇರಿಯಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ಸುಬ್ರಹ್ಮಣ್ಯ ಕಾಸರಗೋಡು ಮತ್ತು ಗೃಹಿಣಿ ಜ್ಯೋತಿ ಸುಬ್ರಹ್ಮಣ್ಯ ಇವರ ಪುತ್ರ. ಸಹೋಜ್ ಗೆ ಒಂದು ವರ್ಷ ತುಂಬುವ ಮೊದಲೇ ತನ್ನ ಕ್ರಿಕೆಟ್ ಆಸಕ್ತಿಯನ್ನು ಪ್ರಕಟಪಡಿಸಿದ್ದ . ತಂದೆ-ತಾಯಿ ಇಬ್ಬರೂ ಕ್ರಿಕೆಟ್ ಆಟದ ಬಗ್ಗೆ ವಿಶೇಷ ಒಲವಿರುವವರು. ಕ್ರಿಕೆಟ್ ಆಟವನ್ನು ವೀಕ್ಷಿಸುತ್ತಿರುವಾಗ ಮಗು ಸಹೋಜ ಟಿವಿಯ ಕಡೆ ದೃಷ್ಟಿ ಹಾಯಿಸುತ್ತಿದ್ದ. ತನ್ನದೇ ವಿಶೇಷ ಹಾವಭಾವಗಳಿಂದ ಮನದ ಭಾವನೆಗಳನ್ನು ಪ್ರಕಟ ಪಡಿಸುತ್ತಿದ್ದನು. 
       ಮಕ್ಕಳಿಗೆ ವಿಮಾನ , ಕಾರು, ಗೊಂಬೆಗಳು ಇಷ್ಟವಾಗುವ ಆಟದ ವಸ್ತುಗಳು . ಆದರೆ ಸಹೋಜ್ ಮಾತ್ರ ಬಾಲು - ಬ್ಯಾಟುಗಳನ್ನು ಬಿಟ್ಟು ಉಳಿದ ಯಾವುದೇ ಆಟದ ಸಾಮಾನುಗಳನ್ನು ಗಮನಿಸುತ್ತಿರಲಿಲ್ಲ. ಯಾವುದೇ ಸಮಾರಂಭಕ್ಕೆ ಹೋಗಲಿ, ಆಟಿಕೆಗಳ ಅಂಗಡಿಗಳಿದ್ದರಂತೂ ಅಜ್ಜ-ಅಜ್ಜಿ ನೆಂಟರಿಷ್ಟರಿಂದ ಬಾಲು - ಬ್ಯಾಟುಗಳನ್ನು ಪಡೆದುಕೊಳ್ಳದೆ ಹಿಂತಿರುಗುತ್ತಿರಲಿಲ್ಲ.
    ಕ್ರಿಕೆಟಿಗಾಗಿ ಜನ್ಮತಾಳಿದ ಬಾಲಕನೆಂಬಂತೆ ಸಹೋಜ್ ಎಲ್ಲರಿಗೂ ಅಚ್ಚರಿ ಮೂಡಿಸುತ್ತಾನೆ. ತನ್ನ ಒಂದರ ಹರೆಯದಲ್ಲೇ ಮನೆಗೆ ಬರುತ್ತಿದ್ದ ದಿನಪತ್ರಿಕೆಯ ಪುಟವನ್ನು ತಿರುವಿ ಕೊನೆಯ ಪುಟಕ್ಕೆ ಕಣ್ಣಾಡಿಸುತ್ತಿದ್ದ. ಅಲ್ಲಿ ಕ್ರಿಕೆಟಿಗೆ ಸಂಬಂಧಿಸಿದ ಚಿತ್ರಗಳನ್ನು ಗಮನಿಸುತ್ತಿದ್ದ. ಒಮ್ಮೆ ಕಲಾವಿದ ಶಿಕ್ಷಣತಜ್ಞ ಗೋಪಾಡ್ಕರ್ ಸಹೋಜ್ ನನ್ನು ಕಂಡು ಅವನ ಆಸಕ್ತಿಯನ್ನು ಪ್ರೋತ್ಸಾಹಿಸುವಂತೆ ಸಲಹೆ ನೀಡಿದ್ದರು. ಕ್ರಿಕೆಟ್ ಆಟವಾಡುತ್ತಾ ಮನೆಯೊಳಗಿನ ಟಿವಿ ಬಲ್ಬುಗಳನ್ನು ಪುಡಿ ಮಾಡುತಿದ್ದ. ಹುಟ್ಟುಹಬ್ಬ ಬಂದರಂತೂ ಈತ ಹೊಸ ಬ್ಯಾಟಿಗಾಗಿ ಹಠ ಮಾಡುತ್ತಿದ್ದ. ಹೀಗೆ ಕ್ರಿಕೆಟಿನ ಅಭಿರುಚಿ ಬೆಳೆಯುತ್ತಾ ಹೋಯಿತು.
       ಸಹೋಜ್ ಗೆ ನಾಲ್ಕು ವರ್ಷ ತುಂಬಿದಾಗ ಹೊರಸಂಚಾರ ದ ಅನುಭವ ನೀಡಲಾಯಿತು. ಮೈದಾನಕ್ಕೆ ಹೋಗುವುದು, ಅಲ್ಲಿ ಆಟ ಆಡುತ್ತಿರುವ ಹುಡುಗರನ್ನು ನೋಡುವುದು, ತಾನೂ ಸೇರಿಕೊಳ್ಳುವುದು ಆರಂಭವಾಯಿತು. ಪುಟ್ಟ ಪುಟ್ಟ ಮಕ್ಕಳನ್ನು ಸೇರಿಸಿ ಮನೆಯ ಹಿತ್ತಿಲಲ್ಲಿ ಆಟವಾಡುವುದು ರೂಢಿಯಾಯಿತು. ಮೈದಾನವೆಂದರೆ ಹುಚ್ಚೆದ್ದು ಕುಣಿಯುತ್ತಿದ್ದ ಸಹೋ ಜನಿಗೆ ಮಂಗಳೂರಿನ ನೆಹರೂ ಮೈದಾನ ವನ್ನು ವಾರಕ್ಕೊಂದು ಬಾರಿ ತೋರಿಸುತ್ತಿದ್ದರು. ಅಲ್ಲಿ ತರಬೇತಿ ಪಡೆಯುತ್ತಿದ್ದ ಮಕ್ಕಳು , ಅವರು ಆಟವಾಡುವ ರೀತಿಯನ್ನು ಕಂಡು ತಾನೂ ತರಬೇತಿಗೆ ಹೋಗುತ್ತೇನೆ ಎಂದು ಹಟ ಹಿಡಿದಾಗ ಮಂಗಳೂರಿನ ಖ್ಯಾತ ಕ್ರಿಕೆಟ್ ತರಬೇತುದಾರರಾದ ಶ್ರೀ ರಾಜರತ್ನ ಅವರಲ್ಲಿ ವಿಚಾರಿಸಿದರು.
    ಸಹೋಜನ ಆಸಕ್ತಿಯನ್ನು ಕಂಡು ಶ್ರೀ ರಾಜರತ್ನ ಬೆರಗಾದರು. ಸಹೋಜನ ಆಕಾಂಕ್ಷೆಯಂತೆ ಉತ್ಕಟ ಕ್ರಿಕೆಟ್ ಕೌಶಲದಿಂದ ಏಳರ ಹರೆಯದಲ್ಲೇ ಶ್ರೀ ರಾಜರತ್ನ ಅವರ ಮಂಗಳೂರು ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡನು. ಸೇರಿದ ಮೊದಲ ವಾರದಲ್ಲಿ ತನ್ನ ವಿಶೇಷ ರೀತಿಯ ಸ್ವೀಪ್ ಶಾಟ್ ಮೂಲಕ ಎಲ್ಲರ ಗಮನ ಸೆಳೆದಿದ್ದ. ತನ್ನ ನೈಜ ತಂತ್ರಗಾರಿಕೆಯ ಬ್ಯಾಟಿಂಗ್ ಕೌಶಲ್ಯ ನೋಡಿದ ಕ್ರಿಕೆಟ್ ತರಬೇತುದಾರರಾದ ಶ್ರೀ ಐವನ್ ಡಿಸೋಜರವರು ಕಾಲಿಗೆ ಪ್ಯಾಡ್ ಕಟ್ಟಿ ಆಡಲು ಸೂಚಿಸಿದರು. ಈ ಚಿಕ್ಕ ಪೋರನ ಆಟ ನೋಡಲು ತುಂಬಾ ಖುಷಿ , ಮೈದಾನ ತುಂಬಾ ಲವಲವಿಕೆಯಿಂದ ಓಡಾಡುವ ಈತನ ಆಟ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಇವನ ಆಟ ನೋಡಲೆಂದೇ ಮೈದಾನ ತುಂಬೆಲ್ಲಾ ಜನ ಸೇರುತ್ತಿದ್ದರು.
       ಮಂಗಳೂರಿನ ಕ್ರಿಕೆಟ್ ಅಕಾಡೆಮಿಯಲ್ಲಿ ಕಳೆದ ಎರಡು ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾನೆ. ಇಷ್ಟು ಕಡಿಮೆ ಅವಧಿಯಲ್ಲಿ ಬ್ಯಾಟಿಂಗ್, ಬೌಲಿಂಗ್ , ಫೀಲ್ಡಿಂಗ್ ಹಾಗೂ ಕ್ರೀಡಾ ನಿಯಮಗಳ ಬಗ್ಗೆ ತುಂಬಾ ತಿಳಿದುಕೊಂಡಿದ್ದಾನೆ. ಜಗತ್ತಿನ ಎಲ್ಲಾ ಕ್ರಿಕೆಟ್ ಆಟಗಾರರನ್ನು ಗುರುತಿಸುವ ಈತನಿಗೆ ಎಂ.ಎಸ್. ಧೋನಿ ಎಂದರೆ ವಿಶೇಷ ಅಭಿಮಾನ. ಈಗಷ್ಟೆ 9 ವರ್ಷ ತುಂಬಿರುವ ಸಹೋಜ್ ಈಗಾಗಲೇ ಎರಡು ಅಂತರ್ ಜಿಲ್ಲಾ ತಂಡದೊಂದಿಗೆ ಅಮೋಘವಾಗಿ ಆಟವಾಡಿ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ.
      ಸಹೋಜನು ಪೂರ್ವ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಗಳೂರಿನ ಸ್ವರೂಪ ಕಲಿಕಾ ಕೇಂದ್ರದಲ್ಲಿ ಪೂರೈಸಿದ್ದಾನೆ. ಪ್ರಾಥಮಿಕ ಶಾಲಾ ವಿದ್ಯಾಭ್ಯಾಸವನ್ನು ಮಂಗಳೂರಿನ ಮಧುಸೂದನ ಕುಶೆ ಶಾಲೆಯಲ್ಲಿ ಕಲಿಯುತ್ತಿದ್ದು ಪ್ರಸ್ತುತ ಮೂರನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಕಲಿಕೆಯಲ್ಲಿ ಮುಂದಿರುವ ಸಹೋಜ್ ಗೆ ಚಿತ್ರಕಲೆ ಎಂದರೆ ತುಂಬಾ ಆಸಕ್ತಿ, ಈತ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಚಿತ್ರ ರಚಿಸುತ್ತಾನೆ. ತನ್ನ ಪುಟ್ಟ ತಂಗಿ ಸುಕೃತಿಯೊಂದಿಗೆ ಕಾಲಕಳೆಯುತ್ತಾ ಅವಳಿಗೂ ಪ್ರೇರಣೆ ನೀಡುತ್ತಾನೆ.
     ಕ್ರಿಕೆಟ್ ಕುರಿತಾಗಿ ಹಿರಿಯರು ಮಾತನಾಡುವಾಗ ಆಸಕ್ತಿಯಿಂದ ಕೇಳಿಸಿಕೊಳ್ಳುವ ಸಹೋಜನಿಗೆ ಕ್ರಿಕೆಟೇ ಜೀವಾಳ. ಟಿವಿ ಅಥವಾ ಮೊಬೈಲ್ ಸಿಕ್ಕಾಗ ಅದರಲ್ಲಿ ಕ್ರಿಕೆಟಿನ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಾನೆ. ಈತನ ಬೆಳವಣಿಗೆ ಹಂತಗಳನ್ನು ಗಮನಿಸುವಾಗ ಈತನಿಗೆ ಕ್ರಿಕೆಟ್ ಲೋಕದಲ್ಲಿ ದೊಡ್ಡ ಅವಕಾಶಗಳು ತೆರೆಯಲಿದೆ. ಇನ್ನೂ ಪುಟಾಣಿ ಮಗು ಸಹೋಜ್ ಕ್ರಿಕೆಟ್ ಲೋಕವನ್ನೇ ಸುತ್ತಿ ಬರಲಿ. ಕ್ರಿಕೆಟ್ ದಿಗ್ಗಜ ರ ಸಾಲಿನಲ್ಲಿ ಒಬ್ಬನಾಗಿ ಮೆರೆಯಲಿ ಎಂಬುದೇ ಮಕ್ಕಳ ಜಗಲಿಯ ಶುಭಹಾರೈಕೆಗಳು.
         


Ads on article

Advertise in articles 1

advertising articles 2

Advertise under the article