ಹೀಗೊಂದು ತಿರುಗಾಟ - ಕಥೆ
Friday, November 13, 2020
Edit
ಹೀಗೊಂದು ತಿರುಗಾಟ
ಕಾಡಿನೊಳಗೊಂದು ಪುಟ್ಟ ಊರು. ಆ ಊರಿನೊಳಗೆ ಒಂದು ಸುಂದರವಾದ ಶಾಲೆ. ಶಾಲೆಯ ವಿದ್ಯಾರ್ಥಿಗಳಾದ ತನುಶ್ರೀ, ಗಣೇಶ, ಜೋಸೆಫ್, ಅಬ್ದುಲ್, ಮೇರಿ, ಗಂಗಾ ಮತ್ತು ನೆಸಿಫಾ ಅವರು ಶಾಲಾ ದೈಹಿಕ ಶಿಕ್ಷಕರಾದ ಗುರುದೇವ ಅವರೊಂದಿಗೆ ಶಾಲಾ ಪಕ್ಕದ ಕಾಡಿನೊಳಗೆ ತಾವು ತಂದ ಬುತ್ತಿಯೊಂದಿಗೆ ತಿರುಗಾಟಕ್ಕೆ ಹೊರಟರು.
ಶಿಕ್ಷಕರ ಮಾರ್ಗದರ್ಶನದಂತೆ ಅಲ್ಲಿ ನಾನಾ ಜಾತಿಯ ಗಿಡ ಮರಗಳು, ಪಕ್ಷಿಗಳ ಕಲರವ, ಚಿಟ್ಟೆಗಳ ತಿರುಗಾಟ ನೋಡುತ್ತಾ , ಅಲ್ಲಿ ಸಿಗುವ ವಿವಿಧ ಹಣ್ಣುಗಳನ್ನು ತಿನ್ನುತ್ತಾ ಮುಂದೆ ಮುಂದೆ ಸಾಗಿದರು.ಮರದಿಂದ ಮರಕ್ಕೆ ಜಿಗಿಯುತ್ತಿರುವ ಕೋತಿಗಳು, ಅಲ್ಲಿ - ಇಲ್ಲಿ ಸರಿಯುತ್ತಿರುವ ಹಾವುಗಳು, ಮೊಲ - ಮುಂಗುಸಿ ನೋಡಿದರು.
ಅಲ್ಲೇ ಇರುವ ಕೆರೆಯ ನೀರಿನ ಮೇಲೆ ಕಣ್ಣು ಮಿಟುಕಿಸುತ್ತಿರುವುದನ್ನು ವಿದ್ಯಾರ್ಥಿಗಳು ಕಂಡರು. ಆಶ್ಚರ್ಯದಿಂದ ವಿದ್ಯಾರ್ಥಿಗಳು, "ಅದೇನು? ಗುರುಗಳೇ '' ಎಂದು ಪ್ರಶ್ನಿಸಿದರು. ಅದು ಮೊಸಳೆಗಳು! ಎಂದಾಗ, ಕುತೂಹಲದಿಂದ ವೀಕ್ಷಿಸುತ್ತಾ ಮುಂದೆ ಸಾಗಿದರು.
ವಿದ್ಯಾರ್ಥಿಗಳಿಗೆ ಹಲವು ಪ್ರಾಣಿಗಳ ಧ್ವನಿಗಳು ಭಯ ಮತ್ತು ಕುತೂಹಲವನ್ನು ಉಂಟುಮಾಡಿತು. ಆಗ ಗಂಗಾ ಮತ್ತು ಮೇರಿ ಗುರುಗಳ ಹತ್ತಿರ ಬಂದು ' ಊರಲ್ಲಿ ಅಷ್ಟೊಂದು ಜನರಿರುವ ಹಾಗೆಯೇ ಕಾಡಿನಲ್ಲಿಯೂ ಇಷ್ಟೊಂದು ವಿವಿಧ ಜಾತಿಯ ಪ್ರಾಣಿ-ಪಕ್ಷಿಗಳು ಇವೆಯಲ್ಲ ಸರ್! ' ಎಂದರು. ಆಗ ಗುರುಗಳು ' ಹೌದು, ವಿದ್ಯಾರ್ಥಿಗಳೇ ಈ ಇಡೀ ಪರಿಸರವೇ ಅವುಗಳಿಗೆ ಆಶ್ರಯ, ಆದ್ದರಿಂದಲೇ ಪರಿಸರವನ್ನು ಉಳಿಸುವ - ಬೆಳೆಸುವುದರ ಮೂಲಕ ಇವುಗಳ ಬದುಕಿಗೆ ನೆಮ್ಮದಿಯ ತಾಣವನ್ನು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ ' ಎಂದರು.
ಆಗ ಉಳಿದ ವಿದ್ಯಾರ್ಥಿಗಳು ಹೌದು ಸರ್, ಹೌದು ಸರ್ ಎಂದರು. ತಾವು ತಂದ ಬುತ್ತಿಯನ್ನು ಎಲ್ಲರೊಂದಿಗೆ ಹಂಚಿಕೊಂಡು ಪರಿಸರದ ಮಡಿಲಿನಲ್ಲಿ ತಿನ್ನುತ್ತಾ ಖುಷಿಪಟ್ಟರು. ಅಲ್ಲಿಂದ ಶಾಲೆಗೆ ಹಿಂದಿರುಗುತ್ತಿರುವಾಗ ವಿದ್ಯಾರ್ಥಿಗಳು ದೂರದಲ್ಲಿ ಜಿಂಕೆಗಳ ಗುಂಪನ್ನು ನೋಡುತ್ತಾ ಇದ್ದರು.
ಅದರಲ್ಲಿ ಒಂದು ಜಿಂಕೆಯು ಕುಂಟುತ್ತಾ ಜಿಗಿಯುತ್ತಿತ್ತು. ಆಗ ಅಬ್ದುಲ್ ' ಪಾಪ ಅದಕ್ಕೆಷ್ಟು ನೋವಾಗಿದೆ 'ಎಂದನು. ಆಗ ಜೋಸೆಫ್ ' ನನಗೆ ಈ ರೀತಿ ನೋವಾಗಿದ್ದರೆ ಅಬ್ಬಾ! ನಡೆಯಲು ಸಾಧ್ಯವಿಲ್ಲ ಎಂದನು. ವಿದ್ಯಾರ್ಥಿಗಳ ಹಲವು ಕುತೂಹಲಕಾರಿ ಪ್ರಶ್ನೆಗಳಿಗೆ ಗುರುಗಳು ಉತ್ತರಿಸುತ್ತಾ ಸಾಗಿದರು. ಸಮಯ ಕಳೆಯುತ್ತಾ ಬಂತು. ಸರಿಯಾದ ಸಮಯಕ್ಕೆ ಶಾಲೆಗೆ ಬಂದು ಸೇರಿದರು.
ಮಕ್ಕಳೇ ಇವತ್ತಿನ ತಿರುಗಾಟದಲ್ಲಿ ಏನೇನು ಅರ್ಥವಾಯಿತು? ಎಂದು ಗುರುದೇವ ಸರ್ ಕೇಳಿದಾಗ, ಗಣೇಶ ನು 'ನಮ್ಮ ಮನೆಗಿಂತ ಪ್ರಾಣಿ ಪಕ್ಷಿಗಳ ಮನೆಯೇ ಬಹಳ ವಿಶಾಲ ಮತ್ತು ವೈವಿಧ್ಯತೆ ಯಿಂದ ಕೂಡಿದೆ ' ಎಂದನು. ಆಗ ತನುಶ್ರೀ ಅದಕ್ಕೆ ನಾವು ' ಪರಿಸರ ಉಳಿಸಿ ಬೆಳೆಸಬೇಕು ' ಎಂದಳು. ನೆಸಿಫಾ ' ನಾವು ಒಟ್ಟಿಗೆ ಸೇರಿ ಪರಿಸರದ ಮಡಿಲಲ್ಲಿ ಊಟ ಮಾಡಿದ್ದು ನನಗೆ ತುಂಬಾ ಸಂತೋಷವನ್ನುಂಟುಮಾಡಿತ್ತು 'ಎಂದಳು. ಹೌದು !ಗುರುಗಳೇ ಮತ್ತೆ ' ಪ್ರಾಣಿಗಳಿಗೂ ನೋವಾಗುತ್ತದೆ ' ಗಂಗಾ ಎಂದಳು. ಅದಕ್ಕೆ ಗುರುಗಳು, ಹೌದು ಮಕ್ಕಳೇ ' ಪ್ರಾಣಿ - ಪಕ್ಷಿಗಳಿಗೂ ನಮ್ಮಂತೆಯೇ ಸಂತಸ - ನೋವು- ಹಸಿವು ಎಲ್ಲವೂ ಇದೆ. ಎಲ್ಲರ ಸಂತೋಷಕ್ಕೆ ನಾವು ಕಾರಣರಾಗುವ ' ಎಂದು ಹೇಳಿದರು. ವಿದ್ಯಾರ್ಥಿಗಳೆಲ್ಲರೂ ಗುರುಗಳಿಗೆ ಧನ್ಯವಾದ ಹೇಳಿ ತಮ್ಮ ತಮ್ಮ ಮನೆಗಳಿಗೆ ಸಂತಸದಿಂದ ತೆರಳಿದರು.
ಎಲ್ಲರ ಸಂತಸ ನಮ್ಮೆಲ್ಲರ ಹೊಣೆಯಾಗಬೇಕು
ರಚನೆ : ದೀಕ್ಷಿತ್ ಆರ್.ಜೆ ೮ನೇ ತರಗತಿ
ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ ಮಿತ್ತಬರೆ, ಮುಡಿಪು.