ಜೀವನ ಸಂಭ್ರಮ : ಸಂಚಿಕೆ - 269
Thursday, November 19, 2026
Edit
ಜೀವನ ಸಂಭ್ರಮ : ಸಂಚಿಕೆ - 269
ಲೇಖಕರು : ಎಂ. ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಾಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮೊ : +91 94485 72723
ಮಕ್ಕಳೇ, ಸೆಪ್ಟಂಬರ್ 8 ಅಂತರಾಷ್ಟ್ರೀಯ ಸಾಕ್ಷರತಾ ದಿನ. ಈ ಬಾರಿಯ ಧ್ಯೇಯ ವಾಕ್ಯ "ಜನತೆ, ಭೂಮಿ ಮತ್ತು ಸಮೃದ್ಧಿ." ಈ ಕಾರ್ಯಕ್ರಮ ಅಂಬೇಡ್ಕರ್ ಭವನ ಮಂಗಳೂರಿನಲ್ಲಿ ಉತ್ತಮವಾಗಿ ಆಯೋಜಿಸಲಾಗಿತ್ತು. ಪ್ರೇರಕರಿಗೆ ಸನ್ಮಾನ, ಶಿಕ್ಷಕರಿಂದ ನೃತ್ಯ, ಒಳ್ಳೆಯದಾಗಿ ಮೂಡಿ ಬಂದಿತ್ತು. ಈ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶೀನ ಶೆಟ್ಟಿಯವರ ಉತ್ಸಾಹದ ಮಾತು, ಒಬ್ಬ ವಯಸ್ಸಾದ ಮಹಿಳೆಯ ಸಾಕ್ಷರ ಗೀತೆ, ಈಗಿನ ತರುಣರಿಗೆ ನಾಚಿಕೆ ಬರಿಸುವಂತಿತ್ತು. ದೇಹಕ್ಕೆ ವಯಸ್ಸಾಗುತ್ತದೆ ಆದರೆ ಮನಸ್ಸಿಗೆ ವಯಸ್ಸಾಗುವುದಿಲ್ಲ ಅನ್ನುತ್ತಾರೆ.
ಯಾವಾಗ ವಯಸ್ಸಾಗುವುದಿಲ್ಲ?. ಮನಸ್ಸಿನಲ್ಲಿ ಪ್ರೇಮ ತುಂಬಿದಾಗ, ಮಾಡುವ ಕೆಲಸ ಪ್ರೀತಿಸಿದಾಗ, ಉತ್ಸಾಹ ಹೆಚ್ಚಾಗುತ್ತದೆ. ಈ ಉತ್ಸಾಹ ವಯಸ್ಸನ್ನು ಮರೆಸುತ್ತದೆ. ಉತ್ಸಾಹಕ್ಕೆ ಪ್ರೇರಕವೇ ಪ್ರೀತಿ. ಒಮ್ಮೆ ಪತ್ರಕರ್ತರು ವಿನೋಭಾ ಭಾವೆಯವರಿಗೆ ಪ್ರಶ್ನಿಸುತ್ತಾರೆ. ಅಷ್ಟೊತ್ತಿಗಾಗಲೇ ವಿನೋಬಾ ಭಾವೆಯವರು ಭಾರತದಾದ್ಯಂತ ಸಂಚರಿಸಿ ಭೂದಾನ ಚಳುವಳಿ ಪ್ರಾರಂಭಿಸಿದ್ದರು. ಪತ್ರಕರ್ತರ ಪ್ರಶ್ನೆ ಏನು ಅಂದರೆ ನೀವು ಭಾರತದಾದ್ಯಂತ ಸಂಚರಿಸಿದ್ದೀರಿ, ಭಾರತದ ತರುಣರ ಬಗ್ಗೆ ನಿಮ್ಮ ಅಭಿಪ್ರಾಯವೇನು?. ಆಗ ವಿನೋಬಾ ಬಾವೆ ಯವರು ಹೇಳಿದರು, "ಭಾರತದ ತರುಣರಲ್ಲಿ ಬುದ್ಧಿ ಬೆಳೆಯುತ್ತಿದೆ, ಆದರೆ ಎದೆ ಬತ್ತುತ್ತಿದೆ" ಎಂದರು. ಇದನ್ನು ಕುರಿತು ನಾವೆಲ್ಲ ಚಿಂತಿಸಬೇಕು. ಎಲ್ಲರೂ ತಿಳಿದಿರುವುದು ಬುದ್ಧಿವಂತರಿಂದ ದೇಶ ಬೆಳೆಯುತ್ತದೆ. ಬುದ್ಧಿವಂತರಿಂದ ಸಮೃದ್ಧ ನಾಡು ಕಟ್ಟಬಹುದು ಎಂದು. ಅದಕ್ಕಾಗಿ ಸಾಕ್ಷರತೆಯ ಕಾರ್ಯಕ್ರಮ ಅನುಷ್ಠಾನಕ್ಕೆ ಬಂದಿತ್ತು.
ಸಾಕ್ಷರಸ್ಥರಿಗೂ ಅಕ್ಷರಸ್ಥರಿಗೂ ವ್ಯತ್ಯಾಸವಿದೆ. ಅಕ್ಷರಸ್ಥ ಓದಿ ನೆನಪಿಟ್ಟು ಚೆನ್ನಾಗಿ ಹೇಳಬಲ್ಲ. ಸಾಕ್ಷರಸ್ಥ ವಿವೇಕಿತನಾಗಿ ಸ್ವಯಂ ಚಿಂತಿಸುತ್ತಾನೆ. ಹಾಗಾಗಿ ಎಲ್ಲಾ ಅಕ್ಷರಸ್ಥರು ಸಾಕ್ಷರರಲ್ಲ. ಎಲ್ಲಾ ಸಾಕ್ಷರರು ಅಕ್ಷರಸ್ಥರಲ್ಲ. ಕೆಲವು ಮಂದಿ ಅಕ್ಷರ ಗೊತ್ತಿಲ್ಲದಿದ್ದರೂ ದೇಶ ಕಟ್ಟುವಲ್ಲಿ ಶ್ರಮಿಸಿರುವುದನ್ನು ನಾವು ನೋಡಿದ್ದೀವಿ. ಇಂದು ಬುದ್ದಿ ಬೆಳೆಸಲು ಅನೇಕ ಶಿಕ್ಷಣ ಸಂಸ್ಥೆಗಳಿವೆ. ಭಾವ ಬೆಳೆಸಲು ಯಾವುದೇ ಸಂಸ್ಥೆಗಳು ಇಲ್ಲದಂತಾಗಿದೆ.
ಎ ಐ ತಂತ್ರಜ್ಞಾನದಿಂದ ಜ್ಞಾನದ ಅರಿವು ಹೆಚ್ಚಾಗಿದೆ. ಆ ಜ್ಞಾನ ಹೇಗಿದೆ ಎಂದರೆ ನಮ್ಮ ಕಂಪ್ಯೂಟರ್ ಚೆನ್ನಾಗಿ ಕೆಲಸ ಮಾಡುತ್ತದೆ. ಕ್ಯಾಮೆರಾ ಚೆನ್ನಾಗಿ ಫೋಟೋ ತೆಗೆಯುತ್ತದೆ. ಆದರೆ ಅವು ಸಂತೋಷ ಪಡುವುದಿಲ್ಲ. ಸಂತೋಷಪಡಲು ಮನಸ್ಸು ಬೇಕು. ಕಂಪ್ಯೂಟರ್ ಮತ್ತು ಏಐ ತಂತ್ರಜ್ಞಾನಕ್ಕೆ ಮನಸ್ಸಿಲ್ಲ ಹಾಗಾಗಿ ಅದು ಅನುಭವಿಸುವುದಿಲ್ಲ ಸಂತೋಷ ಪಡುವುದಿಲ್ಲ. ಇಂದು ಶಿಕ್ಷಣ ಗಳಿಸುವುದನ್ನು ಹೇಳಿಕೊಡುತ್ತದೆ. ದೇಶ ಕಟ್ಟಲು, ಸಮಾಜ ಕಟ್ಟಲು, ಪ್ರಕೃತಿ ಉಳಿಸಲು ಬುದ್ಧಿವಂತರಿಗಿಂತ ಹೃದಯವಂತರು ಬೇಕಾಗಿದ್ದಾರೆ. ಶಿಕ್ಷಿತರಲ್ಲಿ ಕೆಲವರು ದೊಡ್ಡ ದೊಡ್ಡ ಭಯೋತ್ಪಾದಕರು, ದಂಗೆಕೋರರಾಗಿದ್ದಾರೆ. ಆ ಶಿಕ್ಷಿತರ ಭಾವದಲ್ಲಿ ಪ್ರೇಮ ಇಲ್ಲದಿರುವುದೇ ಆಗಿದೆ. ಈ ಸದ್ಭಾವ ಇಲ್ಲದ ಶಿಕ್ಷಣ ಅನಾಹುತಕ್ಕೆ ಕಾರಣವಾಗುತ್ತದೆ. ಅಂದಾಗ ಭಾವಕ್ಕೆ ಎಷ್ಟು ಬೆಲೆ ಅನ್ನೋದನ್ನ ಯೋಚಿಸಬೇಕಾಗಿದೆ. ಶಿಕ್ಷಿತರಲ್ಲೇ ವಿಚ್ಛೇದನ ಹೆಚ್ಚು. ಹಾಗಾದರೆ ಜ್ಞಾನ ಎಂದರೇನು?. ಲೌಕಿಕ ಜ್ಞಾನ ಎಂದರೆ ಈ ವಿಶ್ವದಲ್ಲಿರುವ ವಸ್ತುಗಳ ಜ್ಞಾನ, ವ್ಯಕ್ತಿಗಳ, ಪ್ರಾಣಿ-ಪಕ್ಷಿಗಳ, ಸೂಕ್ಷ್ಮ ಜೀವಿಗಳ, ಭೂಮಿ, ವಾತಾವರಣ, ಜನರ ನಡುವಳಿಕೆ ಇನ್ನು ಮುಂತಾದವುಗಳನ್ನು ತಿಳಿದುಕೊಳ್ಳುವುದು. ಹೀಗೆ ತಿಳಿದುಕೊಂಡ ಜ್ಞಾನ ಪ್ರತಿಯೊಂದನ್ನು ಹೋಲಿಸಿ ಇದು ಶ್ರೇಷ್ಠ, ಇದು ಕನಿಷ್ಠ, ಇದು ಉತ್ತಮ, ಇದು ಅದಮ, ಇದು ಒಳ್ಳೆಯದು, ಇದು ಕೆಟ್ಟದ್ದು, ಅಂತ ವರ್ಗೀಕರಿಸಿ ತಾರತಮ್ಯ ಮಾಡುತ್ತದೆ. ಹಾಗಾಗಿ ಶಿಕ್ಷಿತರಲ್ಲೇ ತಾರತಮ್ಯ ಭೇದಭಾವ ಹೆಚ್ಚು.
ದೇಶ ಕಟ್ಟಲು ಸಮಾಜ ಕಟ್ಟಲು ಹೃದಯವಂತರಿಂದ ಸಾಧ್ಯ. ಪ್ರೇಮದ ಮನಸ್ಸಿನವರಿಂದ ದೇಶ ಕಟ್ಟಲು, ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಹಾಗಾಗಿ ಇಂದು ನಾವು ಜ್ಞಾನದ ಜೊತೆಗೆ ಹೆಚ್ಚು ಭಾವನೆ ಬೆಳೆಸಲು ಗಮನ ಹರಿಸಬೇಕಾಗಿದೆ. ಭಾವ ಬೆಳೆಸಲು ಕಂಪ್ಯೂಟರ್, ಏ ಐ ಸಾಧನದಿಂದ ಸಾಧ್ಯವಿಲ್ಲ. ಭಾವ ಬೆಳೆಸಲು ಭಾವಯುಕ್ತ ಶಿಕ್ಷಕರು ಬೇಕಾಗಿದೆ. ಪ್ರೇಮ ಯುಕ್ತ ಜ್ಞಾನ ಎಂದೂ ಅನಾಹುತಕ್ಕೆ ಪ್ರೇರಣೆ ನೀಡುವುದಿಲ್ಲ. ಪ್ರೇಮ ಯುಕ್ತ ಜ್ಞಾನ ಇದ್ದಲ್ಲಿ ದಂಗೆ ಕೋರರು ಭಯೋತ್ಪಾದಕರು ಇರಲು ಸಾಧ್ಯವಿಲ್ಲ. ಬರಿ ಜ್ಞಾನ ಯಾವುದಕ್ಕೂ ಬೇಕಾದರೂ ಬಳಕೆ ಆಗಬಹುದು. ಅದು ಒಳ್ಳೆಯದಕ್ಕೂ ಬಳಕೆಯಾಗಬಹುದು, ಕೆಟ್ಟದ್ದಕ್ಕೂ ಬಳಕೆ ಆಗಬಹುದು. ಪ್ರೇಮ ಹೊಂದಿರುವ ಜ್ಞಾನ ಅದು ಒಳ್ಳೆಯದಕ್ಕೆ ಪ್ರೇರಣೆ ನೀಡುತ್ತದೆ ವಿನಃ ಕೆಟ್ಟದ್ದಕ್ಕೆ ಯಾವುದೇ ಕಾರಣಕ್ಕೂ ಪ್ರೇರಣೆ ಇರುವುದಿಲ್ಲ.
ಇಂದು ಸಂಪತ್ತು ಎಂದರೇನು?. ಎನ್ನುವುದಕ್ಕೆ ಸ್ಪಷ್ಟ ಜ್ಞಾನವಿಲ್ಲದೆ ಇರುವುದರಿಂದ ಅನಾಹುತ ಹೆಚ್ಚಾಗಿದೆ. ಯಾವುದು ನಮ್ಮನ್ನು ರಕ್ಷಿಸುತ್ತೋ, ಯಾವುದು ನಮ್ಮನ್ನು ಪೋಷಿಸುತ್ತೋ ಅದು ಸಂಪತ್ತು. ಆದರೆ ನಾವು ಈಗ ಹಣ ಸಂಪತ್ತು, ಚಿನ್ನ, ಮುತ್ತು, ರತ್ನ ಸಂಪತ್ತು ಎಂದು ಭಾವಿಸಿರುವುದರಿಂದ ಎಲ್ಲಾ ಅನ್ಯಾಯಕ್ಕೆ ಕಾರಣವಾಗಿದೆ. ಇವು ನಮ್ಮನ್ನು ರಕ್ಷಿಸುವುದಿಲ್ಲ ಮತ್ತು ಪೋಷಿಸುವುದಿಲ್ಲ ಅದರ ಬದಲಿಗೆ ನಾವೇ ಇವುಗಳನ್ನು ರಕ್ಷಿಸಬೇಕು ಮತ್ತು ಪೋಷಿಸಬೇಕು. ಭೂಮಿ ಮಲಿನವಾಗಲು, ವಾಯು ಮಲಿನವಾಗಲು, ಅರಣ್ಯ ನಾಶವಾಗಲು, ಪ್ರಾಣಿ ಪಕ್ಷಿ ನಾಶ ಮಾಡಲು ಕಾರಣವಾಗಿದೆ. ಸಂಪತ್ತಿನ ಸರಿಯಾದ ತಿಳುವಳಿಕೆ ಇಲ್ಲದಿರುವುದು. ಹಣ್ಣು ಸಂಪತ್ತು, ಇದು ನಮ್ಮನ್ನು ರಕ್ಷಿಸುತ್ತದೆ. ಆದರೆ ಇಂದು ಶಿಕ್ಷಿತರು ತಿಳಿದಿರುವುದು ಹಣ್ಣಿನಿಂದ ಗಳಿಸುವ ಹಣ ಸಂಪತ್ತು ಎಂದು ಭಾವಿಸಿರುವುದರಿಂದ ಹಣ್ಣಿಗೆ ರಾಸಾಯನಿಕ ಸಿಂಪಡಿಸುತ್ತಿದ್ದಾನೆ ಮನುಷ್ಯ. ಗಾಳಿ ಸಂಪತ್ತು ಇದು ನಮ್ಮನ್ನು ಕಾಪಾಡುತ್ತದೆ ಅಂತ ತಿಳಿದಿದ್ದರೆ ಮನುಷ್ಯ ಸಾರ್ವಜನಿಕ ವಾಹನ ಬಳಸುತ್ತಿದ್ದ. ಹಾಗೆ ತಿಳಿಯದಿರುವುದರಿಂದ ಬೈಕು, ಕಾರುಗಳು ಸಂಖ್ಯೆ ಅತಿ ಹೆಚ್ಚಾಗಿ ವಾಯುಮಾಲಿನ್ಯವಾಗುತ್ತಿದೆ. ಭೂಮಿ ಸಂಪತ್ತು ಎಲ್ಲರಿಗೂ ಅಂದರೆ ಪ್ರಾಣಿ, ಪಕ್ಷಿ, ಸೂಕ್ಷ್ಮಜೀವಿಗಳು ಸೇರಿದಂತೆ ಎಲ್ಲರಿಗೂ ಆಹಾರ ನೀಡಿ ಪೋಷಿಸುತ್ತದೆ. ಭೂಮಿ ಸಂಪತ್ತು ಅಂತ ತಿಳಿದಿದ್ದರೆ ಅಷ್ಟು ರಾಸಾಯನಿಕ ಬಳಸುತ್ತಿರಲಿಲ್ಲ. ಇದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿರಲಿಲ್ಲ.
ಸಾಕ್ಷರತೆಯ ದ್ಯೇಯ ಜನ ಭೂಮಿ ಮತ್ತು ಸಮೃದ್ಧಿ. ಇದು ಯಶಸ್ವಿಯಾಗಲು ಹೃದಯವಂತ ಶಿಕ್ಷಣ ಮತ್ತು ಸಂಪತ್ತಿನ ಸರಿಯಾದ ಜ್ಞಾನ ಆದಾಗ ಮಾತ್ರ ಸಾಕ್ಷರಸ್ಥರು ಇದ್ದಾರೆ ಅನ್ನಬಹುದು. ಇಲ್ಲದಿದ್ದರೆ ಅಕ್ಷರಸ್ಥರು ಇದ್ದಾರೆ ಅನ್ನೋಣವೇ ಮಕ್ಕಳೇ.
ಶಿಕ್ಷಣಾಧಿಕಾರಿ
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಾಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮೊ : +91 94485 72723
****************************************