-->
ಸ್ಪೂರ್ತಿಯ ಮಾತುಗಳು : ಸಂಚಿಕೆ - 241

ಸ್ಪೂರ್ತಿಯ ಮಾತುಗಳು : ಸಂಚಿಕೆ - 241

ಸ್ಪೂರ್ತಿಯ ಮಾತುಗಳು : ಸಂಚಿಕೆ - 241
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 94486 26093

                   
ಸಣ್ಣ ತರಗತಿಗಳಲ್ಲಿ ಕಾಪಿ ನೋಡಿದ ನಂತರ ಅಧ್ಯಾಪಕರು ಮಾರ್ಜಿನ್ ಬದಿಗೆ “ಚಂದ ಮಅಡಿ ಬರೆ” ಎಂದು ಷರಾ ಬರೆಯುತ್ತಾರೆ. ಶೇಕಡಾ ತೊಂಬತ್ತ ಒಂಭತ್ತು ಮಂದಿಗೂ ಈ ಷರಾ ಇದ್ದೇ ಇರುತ್ತದೆ. ಅದೂ ಕೆಂಪು ಶಾಯಿಯಲ್ಲಿ ! ಇಲ್ಲಿ ಎಲ್ಲರಿಗೂ ಗೊಂದಲ, ಅಕ್ಷರವನ್ನು ಚಂದ ಮಾಡುವುದು ಹೇಗೆ, ಬಣ್ಣ ಕೊಡಬೇಕೇ? ಹೂವಿನಿಂದ ಅಲಂಕರಿಸ ಬೇಕೇ, ಉಡುಪು ತೊಡಿಸಬೇಕೇ ಎಂದು ಕೇಳಿದರೆ ಆ ಅಧ್ಯಾಪಕರು “ಕುಚೇಷ್ಟೆ ಬೇಡ” ಎಂದು ಕಣ್ಣರಳಿಸಿ ನೋಡಬಹುದೇ ವಿನಹ ಉತ್ತರಿಸಲಾರರು. ಅವರಿಗೆ ಗೊತ್ತಾಗದೇ ಇದ್ದರೆ ಉತ್ತರಿಸುವುದಾದರೂ ಹೇಗೆ ಅಲ್ಲವೇ?

ಆ ಹುಡುಗ ಬಹಳ ಚಂದ ಇದ್ದಾನೆ. ನಿನ್ನ ಮಗಳು ಭಾರೀ ಚಂದ, ಅದೆಷ್ಟು ಚಂದದ ಮಗು! ನಮ್ಮ ಮನೆಯ ನಾಯಿ ಬಹಳ ಚಂದ ಹೀಗೆ ಹೇಳುವುದಿದೆ. ಅದೆಂತಹ ಚಂದ? ಬರಹಕ್ಕೂ ಮನುಜನ ಸೌಂದರ್ಯಕ್ಕೂ ತುಲನೆಯಿದೆಯೇ? ಮಗು ಅಥವಾ ಮಗಳು ಚಂದ ಯಾಕೆ? ಅವರಿಗೆ ಒಂದೇ ರೀತಿಯ ಎರಡು ಕಣ್ಣುಗಳು ಇವೆ ಅವು ಇರಬೇಕಾದಲ್ಲಿವೆ. ಅವು ಒಂದೇ ಬಿಂದುವನ್ನು ದಿಟ್ಟಿಸುತ್ತವೆ. ಅದರ ಬಣ್ಣ ಸಂರಚನೆ ಎಲ್ಲವೂ ಸಮಾನ. ಕಾರ್ಯವೂ ತುಲ್ಯ . ಇದು ಚಂದ. ಹೀಗೆ ದೇಹದ ಎಲ್ಲ ಅವಯವಗಳೂ ಸಮರ್ಪಕವಾಗಿದ್ದರೆ ಅದುವೇ ಚಂದ. ಬರವಣಿಗೆಯ ಚಂದ ಮತ್ತು ದೇಹದ ಚಂದ ಇವುಗಳ ನಡುವೆ ಹೋಲಿಕೆ ಯಾಕೆಂದು ನಿಮಗೆ ಸಂದೇಹವೇ?

ಬರವಣಿಗೆಯ ಪ್ರತಿಯೊಂದು ಅಕ್ಷರಕ್ಕೂ ಅದರದೇ ಆದ ಅವಯವಗಳಿವೆ. ಅವುಗಳಿಗೆ ಹೆಸರುಗಳೂ ಇವೆ. ಆ ಅಂಗಗಳು ಎಲ್ಲಿರಬೇಕೋ ಅಲ್ಲೇ ಇರಬೇಕು. ಅವುಗಳ ಗಾತ್ರ ಆಕಾರಗಳಲ್ಲಿ ವ್ಯತ್ಯಾಸವಾದರೆ ಅದು ಚಂದ ಬರಹವಾಗದು. ಅಕ್ಷರಗಳಿಗೆ ಕೊಂಬುಗಳಿವೆ, ಕೊಂಬುಗಳಿರದವುಗಳೂ ಇವೆ, ಹೊಟ್ಟೆ ಹೊಕ್ಕಳೂ ಇವೆ. ಬಾಲ ಇರುವ ಮತ್ತು ಇಲ್ಲದ ಅಕ್ಷರಗಳಿವೆ. ಉದಾಹರಣೆಗೆ “ರ” ಇದಕ್ಕೆ ಹೊಟ್ಟೆಯಿದೆ. ಕೊಂಬು ಇದೆ. “ಲ “ ಅಕ್ಷರದಲ್ಲಿ ಕೊಂಬಿಲ್ಲ. ಭ - ಬಾಲ ಹೊಕ್ಕಳು ಹೊಟ್ಟೆ ಕೊಂಬುಗಳಿವೆ. ಗುರು ಇದರಲ್ಲಿ ಉ ಕೊಂಬು ಇದೆ. ಹೀಗೆ ಅಕ್ಷರದ ಸ್ವರೂಪ ಇರಲೇ ಬೇಕು. ಅಕ್ಷರಗಳು ಯಾವತ್ತಿಗೂ ಆಕಾರ ಮೂಲ ಮತ್ತು ಧ್ವನಿಮೂಲ ಎಂಬುದನ್ನು ಮರೆಯಬಾರದು. ನಂದ ಮತ್ತು ಚಂಪ ಒಂದೇ ರೀತಿ ನಾವು ಓದುವುದಿಲ್ಲ. ʼನಂದʼದ ಅನುಸ್ವಾರವು “ನ” ಅನುನಾಸಿಕ ಧ್ವನಿಯನ್ನು ಹೊಂದಿದೆ. ಇದು “ದ” ವರ್ಗ. ಚಂಪ ದಲ್ಲಿ ಅನುಸ್ವಾರಕ್ಕೆ “ಮ” ಧ್ವನಿ. ಪವರ್ಗದ ಕೊನೆಯ ಅಕ್ಷರ ಮ. ಶಂಕರ ದ “ಂ “ ಙ ಧ್ವನಿ ಪಡೆದಿದೆ. ಕವರ್ಗದ ಕೊನೆಗೆ ಙ ಇದೆ. ಘಂಟೆಯ “ಂ” ಣ ಧ್ವನಿ. ಟವರ್ಗದ ಕೊನೆಯ ಅಕ್ಷೃ ಣ. ಹೀಗೆ ಅನುಸ್ವರಾಕ್ಕೂ ವ್ಯಂಜನ ವರ್ಗಗಳ ಅಂತಿಮದಲ್ಲಿರುವ ಅನುಸ್ವಾರಕ್ಕೂ ಧ್ವನಿ ಸಂಭಂಧವಿದೆ.

ನಾವು ಹೇಳುವ ಕೈ ಬರಹ ನಿಜವಾಗಿಯೂ ಕೈಬರಹವೇ? ಕೈ ಬರೆದಿದೆ ಎಂದ ಮಾತ್ರದಲ್ಲಿ ಅದರ ರೂಪಕ್ಕೆ ಕಾರಣವಾಗುವ ಮಿದುಳನ್ನು ಮರೆಯಬಹುದೇ? Good writing is the symbol of Good mind ಎನ್ನುವರು. Handwriting ನ್ನು Mind reading ಗೆ ಬಳಸಬಹುದಾದರೆ ಅದು Mindwriting ಅಲ್ಲವೇ?

ಜೆನ್ ಝೀ, ಜೆನ್ ಆಲ್ಫಾದ ಈ ಕಾಲದಲ್ಲಿ ಕೈಬರಹವು ಅಸ್ತಿತ್ವವನ್ನು ಕಳೆದುಕೊಳ್ಳಲಾರಂಭಿಸಿದೆ. ಮಾತನಾಡಿದರೆ ಸಾಕು, ಮುದ್ರಣವಾಗುವ ಕೃತಕ ಬುದ್ಧಿಮತ್ತೆಯ ಕಾಲವಿದು. ಇದರಿಂದ ಸಹಜ ಬುದ್ಧಿಮತ್ತೆಗೂ ಕೊಡಲಿಯೇಟು ಖಂಡಿತ. ಬರವಣಿಗೆಯ ಕೈ ಮಿದುಳಿನ ಚಿಂನತನಾ ಶಕ್ತಿ ಏಕಾಗ್ರತೆಗಳಿಗೆ ಪುಷ್ಟಿ ನೀಡುತ್ತದೆ ಎಂಬ ವೈಜ್ಞಾನಿಕ ಸಂಶೋಧನಾ ವರದಿಯಿದೆ. ಆದುದರಿಂದ ಪ್ರತಿಯಬ್ಬರೂ ಬರೆಯಬೇಕು, ಅಂದವಾಗಿ ಬರೆಯಬೇಕು. ಕೃತಕ ಬುದ್ಧಿಮತ್ತೆಯ ದಾಸರಾಗಿ ಸಹಜ ಬುದ್ಧಿಮತ್ತೆಯನ್ನು ಕಳೆದುಕೊಂಡು ಭ್ರಾಂತರಾಗಬಾರದಲ್ಲ!
.............................. ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
'ಸ್ಕಂದ' ಕುಳ ಗ್ರಾಮ, ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 94486 26093
***************************************


Ads on article

Advertise in articles 1

advertising articles 2

Advertise under the article