-->
ಜೀವನ ಸಂಭ್ರಮ : ಸಂಚಿಕೆ - 267

ಜೀವನ ಸಂಭ್ರಮ : ಸಂಚಿಕೆ - 267

ಜೀವನ ಸಂಭ್ರಮ : ಸಂಚಿಕೆ - 267
ಲೇಖಕರು : ಎಂ. ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಾಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮೊ : +91 94485 72723

                                 
 
         
ಮಕ್ಕಳೇ, ಈ ಕಥೆಯನ್ನು ಪೂಜ್ಯ ಸಿದ್ದೇಶ್ವರ ಸ್ವಾಮಿಗಳು ಒಂದು ಪ್ರವಚನದಲ್ಲಿ ಹೇಳಿದರು. ಒಂದು ಊರಿನಲ್ಲಿ ಒಬ್ಬ ಬಿಕ್ಷುಕನಿದ್ದನು. ಆತ ಆಗಿನ ಕಾಲದ ದೇವಸ್ಥಾನದಲ್ಲಿ ವಾಸ ಮಾಡುತ್ತಿದ್ದನು. ಆ ದೇವಸ್ಥಾನ ಊರ ಹೊರಗಿತ್ತು. ಅಲ್ಲದೆ ಹೆಚ್ಚಾಗಿ ಯಾರೂ ಹೋಗುತ್ತಿರಲಿಲ್ಲ. ಆತನಲ್ಲಿ ಒಂದು ಭಿಕ್ಷೆಯ ಪಾತ್ರ, ಒಂದು ತಟ್ಟೆ ಮತ್ತು ಒಂದು ಚಾಪೆ ಇಷ್ಟಿತ್ತು. ಅವುಗಳನ್ನು ದೇವಸ್ಥಾನದಲ್ಲಿ ಇಡುತ್ತಿದ್ದನು. ಹೀಗೆ ವರುಷಗಳು ಕಳೆದವು. ಈ ದೇವಸ್ಥಾನ ಅರಣ್ಯಕ್ಕೆ ಹೋಗುವ ದಾರಿಯಲ್ಲಿತ್ತು. 

ಒಂದು ದಿನ ರಾಜ ನೆರೆ ರಾಜ್ಯದ ಮೇಲೆ ಆಕ್ರಮಣ ಮಾಡಲು ಅದೇ ದಾರಿಯಲ್ಲಿ ಹೊರಟಿದ್ದನು. ಆ ದಾರಿಯಲ್ಲಿ ಹೋಗಬೇಕಾದರೆ ಈ ದೇವಸ್ಥಾನ ಕಂಡಿತು. ಆಗ ರಾಜ ಈ ಪುರಾತನ ದೇವಸ್ಥಾನಕ್ಕೆ ಹೋಗಿ ದೇವರಲ್ಲಿ ಪ್ರಾರ್ಥಿಸಬೇಕು ಎಂದು ತೀರ್ಮಾನಿಸಿದ. ನಾನು ಈ ಯುದ್ಧದಲ್ಲಿ ಜಯಶಾಲಿ ಆಗಬೇಕೆಂದು ಬಯಸಿ ದೇವಸ್ಥಾನಕ್ಕೆ ಹೋದನು. ಸೇನಾಪತಿ ಹೊರಗೆ ಇದ್ದನು. ಮಹಾಮಂತ್ರಿಗಳು ಹೊರಗೆ ಇದ್ದನು. ರಾಜ ಮಾತ್ರ ದೇವಸ್ಥಾನದ ಒಳಕ್ಕೆ ಹೋದನು. ಹೊರಗೆ ಭಿಕ್ಷುಕ ಕುಳಿತಿದ್ದನು. ಒಳಗೆ ರಾಜ ಪ್ರಾರ್ಥಿಸುತ್ತಿದ್ದನು. ಭಗವಂತನೇ ನನ್ನ ಇಚ್ಛೆ ಪೂರ್ಣವಾಗಬೇಕು. ನೆರೆ ರಾಜ್ಯ ನನ್ನದಾಗಬೇಕು ಅಂತ ಪ್ರಾರ್ಥನೆ ಮಾಡಿದ. 

ನಂತರ ದೇವಸ್ಥಾನದ ಹೊರಗೆ ಬಂದನು. ಆ ಸಮಯಕ್ಕೆ ಭಿಕ್ಷುಕ ಮೇಲೆದ್ದನು. ಆಗ ರಾಜ ಭಿಕ್ಷುಕನಿಗೆ ಭಿಕ್ಷೆ ಕೊಡಲು ಹೋದನು. ಏನು ಬೇಕು?ಕೇಳು ಕೊಡುತ್ತೇನೆ, ಆರಾಮವಾಗಿ ಇರು ಅಂತ ರಾಜ ಹೇಳಿದನು. ಬಿಕ್ಷುಕ ಹೇಳಿದ "ನಿನಗೆ ಆನಂದ ಇಲ್ಲ, ನನಗೇನು ಆನಂದ ಕೊಡುತ್ತಿ" ಅಂದನು. ಮಹಾರಾಜನೇ ನಾನು ಮೊದಲು ತಿಳಿದುಕೊಂಡಿದ್ದೆ ನಾನೇ ಬಡವ ಅಂತ. ಈಗ ಕಾಣುತ್ತಿದೆ ನನಗಿಂತ ದೊಡ್ಡ ಬಡವ ಇದ್ದಾನೆ ಅಂತ. ಅದು ಹೇಗೆ ಅಂದ ಮಹಾರಾಜ. ನನ್ನಲ್ಲಿ ಏನಿಲ್ಲ ನಾನು ಆರಾಮವಾಗಿದ್ದೀನಿ. ನನಗೇನು ಬೇಕು ಅನಿಸುವುದಿಲ್ಲ. ಒಂದು ಪಾತ್ರೆ, ಒಂದು ಚಾಪೆ ಬಿಟ್ಟರೆ ನನ್ನಲ್ಲಿ ಏನಿಲ್ಲ. ಮಜಾವಾಗಿದ್ದೇನೆ. ನನಗೆ ಇನ್ನೊಬ್ಬರದು ಬೇಕು ಅನಿಸುವುದಿಲ್ಲ. ಬಯಸಿಲ್ಲ. ಒಂದು ದಿನವೂ ಈ ದೇವಸ್ಥಾನದೊಳಗೆ ಹೋಗಿ ನಾನು ದೇವರಲ್ಲಿ ಭಿಕ್ಷೆ ಬೇಡಿಲ್ಲ. ನೀನು ಬಂದಿದ್ದೀ. ಇಷ್ಟೆಲ್ಲ ದೊಡ್ಡ ಸೇನೆ ಇದೆ. ದೊಡ್ಡ ರಾಜ್ಯ ಇದೆ. ಬೇಕಾದಷ್ಟು ಸಂಪತ್ತು ಇದೆ. ಮತ್ತೆ ಬೇಡಿಕೊಂಡೆಯಲ್ಲ ಅದಕ್ಕೆ ನನಗನಿಸಿತು ನನಗಿಂತ ದೊಡ್ಡ ಭಿಕ್ಷುಕ ಇಲ್ಲಿದ್ದಾನೆ ಅಂತ. ಆದ್ದರಿಂದ ನಾನೇ ನಿನಗೆ ದಾನ ಕೊಡುತ್ತೇನೆ ತಗೋ, ಈ ಬಿಕ್ಷಾ ಪಾತ್ರೆ ಎಂದನು. ನೀನು ನನ್ನ ಉತ್ತರಾಧಿಕಾರಿಯಾಗಲು ಯೋಗ್ಯ. ಇದನ್ನು ಯಾರಿಗಾದರೂ ಕೊಡಬೇಕು ಅಂತ ಮಾಡಿದ್ದೆ. ಈಗ ಯೋಗ್ಯ ವ್ಯಕ್ತಿ ಬಂದಿದ್ದಾನಲ್ಲ ಅಂದನು. 

ನಾನು ಮಹಾರಾಜ, ಸಿರಿವಂತ ಅಂತ ಹೇಳುವ ರಾಜ ದೇವಸ್ಥಾನದಲ್ಲಿ ಭಿಕ್ಷೆ ಬೇಡುತ್ತಿದ್ದನು. ನನ್ನ ಸಂಪತ್ತು ಹೆಚ್ಚಾಗಬೇಕು. ನನ್ನ ರಾಜ್ಯ ದೊಡ್ಡದಾಗಬೇಕು ಅಂತ ಭಿಕ್ಷೆ ಬೇಡಿದ್ಧನು. ಭಿಕ್ಷುಕ ಹೇಳಿದ ನಾನು ಎರಡು ತುತ್ತು ಅನ್ನ ಬೇಡುತ್ತೇನೆ. ಈ ರಾಜ ರಾಜ್ಯಕ್ಕೆ ರಾಜ್ಯ ಬೇಡುತ್ತಾನೆ. ನನ್ನ ಭಿಕ್ಷಾ ಪಾತ್ರೆಗೆ ಯೋಗ್ಯ ವ್ಯಕ್ತಿ ಸಿಕ್ಕಿದ ಅಂದನು. ಆಗ ಮಹಾರಾಜನಿಗೆ ಹೊಳೆಯಿತು ಜ್ಞಾನೋದಯವಾಯಿತು. ರಾಜ ಹೇಳಿದ ಭಿಕ್ಷುವಿಗೆ, ನೀನು ಭಿಕ್ಷುವಲ್ಲ ನನ್ನ ಗುರು ಅಂದನು. ಎಲ್ಲರೂ ನನ್ನನ್ನು ಹೊಗಳುವರೆ. ಯುದ್ಧ ಮಾಡು, ದೊಡ್ಡ ರಾಜ್ಯ ಆಗಲಿ, ಭಾರಿ ಸಂಪತ್ತಾಗಲಿ, ಅಂತ ಹೇಳುವವರು ಇದ್ದಾರೆ ವಿನಹ ಕಣ್ಣು ತೆರೆಸುವವರು ಯಾರು ಇರಲಿಲ್ಲ. ಹೌದು ನೀನು ನಿನ್ನ ಭಿಕ್ಷಾ ಪಾತ್ರೆ ತುಂಬಿದ ಬಳಿಕ ನೀನು ಸಿರಿವಂತ. ನನ್ನ ಭಿಕ್ಷಾ ಪಾತ್ರೆ ಇನ್ನೂ ತುಂಬಿಲ್ಲ. ಯಾಕೆ ಆ ಭಿಕ್ಷಾ ಪಾತ್ರೆಗೆ ತಳಾನೆ ಇಲ್ಲ. ಬಿಕ್ಷಾ ಪಾತ್ರೆಗೆ ತಳಾನೆ ಇಲ್ಲ ಅಂದರೆ ಹಾಕಿದ್ದೆಲ್ಲ ಕೆಳಗೆ ಹೋಗುತ್ತದೆ. ತುಂಬುವುದೇ ಇಲ್ಲ. ಯಾವಾಗಲೂ ಖಾಲಿನೇ ಇರುತ್ತದೆ. ಹಾಗೆ ಏನೇ ಕೊಟ್ಟರೂ ಮನಸ್ಸು ಖಾಲಿ ಇರುತ್ತಿತ್ತು ಅಂದರೆ ನಾವೇ ಭಿಕ್ಷುಕರು. ಸಣ್ಣ ಕುರ್ಚಿ ಇದ್ದು ದೊಡ್ಡದಿದ್ದರೆ ಚಂದಾಗಿತ್ತು, ಬಂಗಾರದಿದ್ದರೆ ಎಷ್ಟು ಚಂದ ಇತ್ತು ಅಂದರೆ ಬಡವರೇ. ಮನದಲ್ಲಿ ಸಂತೃಪ್ತ ಭಾವ ಇರುವವರೇ ಸಿರಿವಂತರು. ಅಲ್ಲವೇ ಮಕ್ಕಳೇ
........................................ ಎಂ. ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಾಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮೊ : +91 94485 72723
****************************************



Ads on article

Advertise in articles 1

advertising articles 2

Advertise under the article