-->
ಬಿಜಾಪುರದಲ್ಲಿನ ಸುಮಧುರ ಕ್ಷಣಗಳು - ಬರಹ : ಅಭಿನವ್ ಪಿ ಎನ್, 8ನೇ ತರಗತಿ

ಬಿಜಾಪುರದಲ್ಲಿನ ಸುಮಧುರ ಕ್ಷಣಗಳು - ಬರಹ : ಅಭಿನವ್ ಪಿ ಎನ್, 8ನೇ ತರಗತಿ

ಬಿಜಾಪುರದಲ್ಲಿನ ಸುಮಧುರ ಕ್ಷಣಗಳು
ಬರಹ : ಅಭಿನವ್ ಪಿ ಎನ್
8ನೇ ತರಗತಿ
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
 

ಅಕ್ಟೋಬರ್ ರಜೆ ಸಿಗುವ 10 ದಿನದ ಮೊದಲು ನನಗೆ ತಿಳಿಯಿತು ನನ್ನ ಅಮ್ಮ ಕೆಯ್ಯೂರಿನ ಶಾಲೆಯಲ್ಲಿದ್ದ ಡ್ರಾಯಿಂಗ್ ಸರ್ ಗೌಂಡಿ ಸರ್ ನ ಮಗಳ ಮದುವೆಗೆ ಬಿಜಾಪುರಕ್ಕೆ ಹೋಗಲಿದ್ದಾರೆಂದು. ಅಮ್ಮನ ಜೊತೆ ನಾನು ಹೋಗಲು ಸಿದ್ದನಾಗಿದ್ದೆ. ಅಕ್ಟೋಬರ್ ಮೂರರಂದು ಸಂಜೆ 6 ಗಂಟೆಗೆ ಹೊರಟೆವು. ನಾವು ಹೋಗುವ ಸ್ಥಳ ಬಿಜಾಪುರದ ಇಂಡಿ. ಪುತ್ತೂರಿನಿಂದ ಸುಮಾರು 700 ಕಿಲೋಮೀಟರ್ ನಷ್ಟು ದೂರವಿತ್ತು. ನಾನಂತೂ ಬಹಳ ಕುತೂಹಲದಿಂದ ಇದ್ದೆ. ನನಗೆ ಜ್ವರ ಬಂದಿದ್ದರೂ ನನಗೂ ಹೋಗಬೇಕೆನ್ನುವಂತಹ ಆಸೆ ಇದ್ದ ಕಾರಣ ಅಮ್ಮ ನನ್ನನ್ನು ಕರೆದುಕೊಂಡು ಹೋದರು. 

ಬೆಳಗ್ಗೆ 8.30 ಗೆ ಬಿಜಾಪುರ ತಲುಪಿದೆವು. ಮಹಾದೇವಿ ಮೇಡಂ ಪ್ರೀತಿಯಿಂದ ಅವರ ಮನೆಗೆ ಸ್ವಾಗತಿಸಿದರು. ಅಲ್ಲಿ ಫ್ರೆಶ್ ಅಪ್ ಆಗಿ ಅಲ್ಲಿಂದ ಹೊರಟೆವು.

ನಮ್ಮ ಮೊದಲ ಭೇಟಿ ಇಬ್ರಾಹಿಂ ರೋಜಾ ಇದು ಬಹಳ ಶಾಂತವಾದ ಪ್ರದೇಶ. ಬಯಲು ತುಂಬಾ ಹಸಿರಾಗಿತ್ತು. ಇದರ ಮಧ್ಯಭಾಗದಲ್ಲಿ ಒಂದು ದೊಡ್ಡ ಕೆರೆ ಇತ್ತು. ಕೆರೆಯ ಒಂದು ಬದಿಯಲ್ಲಿ ಮಸೀದಿ ಇನ್ನೊಂದು ಬದಿಯಲ್ಲಿ ಅದಿಲ್ ಶಾಹಿಯ ಗೋರಿ ಇತ್ತು. ಇದರ ಸುತ್ತ ಒಂದು ಕೋಟೆ ಇತ್ತು. ಇದರ ಮೇಲಿನ ಭಾಗ ಬಹು ಅಲಂಕಾರದಿಂದ ಕೂಡಿತ್ತು. ಇದನ್ನೆಲ್ಲ ನೋಡಿಕೊಂಡು ನಂತರ ಮಲಿಕ್ ಏ ಮೈದಾನ ದ ಹತ್ತಿರ ಹೊರಟೆವು.

ಮಲಿಕ್ ಏ ಮೈದಾನ ಇದು ಬಹಳ ಉದ್ದವಾದ ಕೋಟೆಯಾಗಿತ್ತು. ಇಲ್ಲಿ 50 ಟನ್ ನ ಒಂದು ದೊಡ್ಡ ತೋಪು ಇತ್ತು ಅಲ್ಲಿ ಎಲ್ಲ ನಿಂತುಕೊಂಡು ನಾವು ನಮ್ಮ ಫೋಟೋವನ್ನು ಕ್ಲಿಕ್ಕಿಸಿಕೊಂಡೆವು.

ತದನಂತರ ಅಲಿಬುರ್ಚಾ ತೋಪಿನ ಹತ್ತಿರ ಹೊರಟೆವು. ಇದು ಬಹಳ ಎತ್ತರವಾದ ಕೋಟೆಯಾಗಿದ್ದು ಸಮಾರು 70 ಮೆಟ್ಟಿಲುಗಳನ್ನು ಒಳಗೊಂಡಿತ್ತು. ಬಹಳ ಉತ್ಸಾಹದಿಂದ ಮೆಟ್ಟಿಲುಗಳನ್ನು ಲೆಕ್ಕಮಾಡಿಕೊಂಡು ಮೇಲೆ ಹತ್ತಿದೆವು. ಅದು ಎಷ್ಟು ಎತ್ತರ ಇತ್ತೆಂದರೆ ಮೇಲೆ ಹತ್ತಿದಾಗ ಅಲ್ಲಿಗೆ ಇಬ್ರಾಹಿಂ ರೋಜಾ, ಗೋಳಗುಮ್ಮಟ ಎಲ್ಲಾ ಕಾಣಿಸುತ್ತಿತ್ತು. ಇಲ್ಲಿಯೂ 2 ತೋಪುಗಳಿದ್ದವು. ಇವನ್ನೆಲ್ಲ ನೋಡಿಕೊಂಡು ಮೆಟ್ಟಿಲು ಇಳಿದುಕೊಂಡು ಬಂದೆವು.

ಮುಂದೆ ಬಾರಹ್ ಕಮಾನ್ ನ ಕಡೆ ಪ್ರಯಾಣ ಬೆಳೆಸಿದೆವು. ಇದಕ್ಕೆ ಯಾಕೆ ಈ ರೀತಿಯ ಹೆಸರಿದೆ ಎಂಬುದೇ ನನಗೆ ಕುತೂಹಲ. ಅಲ್ಲಿಯವರೊಬ್ಬರನ್ನು ಕೇಳಿದೆ. ಆಗ ಅವರು ಇದು 12 ಕಮಾನುಗಳಿಂದ ಕೂಡಿರಬೇಕಾದ ಕಟ್ಟಡ ಹಾಗಾಗಿ ಈ ಹೆಸರು ಬಂದಿದೆ. ಆದರೆ ಇದು ಪೂರ್ಣ ಗೊಂಡಿಲ್ಲ.. ಹಾಗಾಗಿ ಈ ರೀತಿ ಕಾಣಿಸುತ್ತಿದೆ ಅಂದ್ರು ಇದು ಅಪೂರ್ಣವಾಗಿದ್ದರೂ ಅತ್ಯಂತ ಸುಂದರವಾಗಿತ್ತು. ನಂತರ ಅಲ್ಲೇ ಹತ್ತಿರದ ಹೋಟೆಲೊಂದಕ್ಕೆ ಊಟಕ್ಕೆ ಹೋದೆವು. ಅಲ್ಲಿನ ಪ್ರಸಿದ್ಧ ಆಹಾರವಾದ ಜೋಳದ ರೊಟ್ಟಿಯನ್ನು ಎಲ್ಲರೂ ಸವಿದರು. 

ನಂತರ ಎಲ್ಲರ ಕುತೂಹಲದ ಪ್ರದೇಶವಾಗಿರುವ ಗೋಳಗುಮ್ಮಟಕ್ಕೆ ಹೊರಟೆವು. ಇಲ್ಲಿಗೆ ಹೋಗಲು ನಾನು ನ ಬಹಳ ಆತುರದಿಂದ ಕಾಯುತ್ತಿದ್ದೆ. ವರ್ಣಿಸಲು ಅಸಾಧ್ಯವಾದಂತಹ ಕಟ್ಟಡ. ಇದು ಗೋಲಾಕಾರವಾಗಿ ಇರುವ ಕಾರಣ ಗೋಳಗುಮ್ಮಟ ಎಂಬುದಾಗಿ ಕರೆಯಲಾಗಿದೆ. ಮೇಲಂತಸ್ತಿನಲ್ಲಿ ವಿಸ್ಪರಿಂಗ್ ಗ್ಯಾಲರಿ (ಪಿಸುಗುಟ್ಟುವ ಮೊಗಸಾಲೆ) ಇದೆ. ಈ ಅಂತಸ್ತಿಗೆ ಹೋಗಲು ಗುಮ್ಮಟದ ನಾಲ್ಕೂ ಮೂಲೆಯಲ್ಲೂ ಮೆಟ್ಟಿಲುಗಳಿವೆ. ಇದನ್ನು ಹತ್ತಿಕೊಂಡು ವಿಸ್ಪರಿಂಗ್ ಗ್ಯಾಲರಿಗೆ ತಲುಪಬಹುದು. ಇಲ್ಲಿ ನಮ್ಮ ಪಿಸುಗುಟ್ಟಿದ ಮಾತಿನ ಪ್ರತಿಧ್ವನಿ ಯನ್ನು ಕೇಳಬಹುದು. ಎಲ್ಲರೂ ಅಲ್ಲಿ ಕಿರುಚುತ್ತಿದ್ದ ಕಾರಣ ಯಾರ ಸ್ವರ ಎಂದೇ ಗೊತ್ತಾಗುತ್ತಿರಲಿಲ್ಲ‌. ಅತ್ಯದ್ಭುತವಾದಂತಹ ಸ್ಥಳ. ಎಲ್ಲವನ್ನೂ ನೋಡಿದ ನಂತರ ಕೆಳಗೆ ಇಳಿದು ಬಂದೆವು. ಸುತ್ತಮುತ್ತ ಬಹಳ ಸುಂದರವಾದ ಪ್ರದೇಶ. ಸಾಕಷ್ಟು ಗಿಳಿ ಅಳಿಲುಗಳು ಸುತ್ತ ಮುತ್ತ ಓಡಾಡುತ್ತಿದ್ದವು. ಅದನ್ನೆಲ್ಲ ಕಣ್ಣು ತುಂಬಿಕೊಂಡು ಮುಂದೆ ಹೊರಟೆವು.

ಮುಂದಿನ ಪ್ರಯಾಣ ನಮ್ಮ ಚಡಚಣಕ್ಕೆ ಆಗಿತ್ತು. ಅಲ್ಲಿ ನಾವು ನಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಮುಂದೆ ಮೆಹೆಂದಿ ಕಾರ್ಯಕ್ರಮಕ್ಕೆ ಹೊರಟೆವು. ನಂತರ ಆ ದಿನ ವಿಶ್ರಾಂತಿಯನ್ನು ಪಡೆದೆವು.

ಮರುದಿನದ ಮದುವೆ ಕಾರ್ಯಕ್ರಮಕ್ಕೆ ಸಿದ್ಧತೆಯನ್ನು ಮಾಡಿಕೊಂಡು ಮದುವೆಯನ್ನು ಮುಗಿಸಿಕೊಂಡು ಆಲಮಟ್ಟಿಯತ್ತ ಪ್ರಯಾಣ ಬೆಳೆಸಿದೆವು. ದಾರಿಯಲ್ಲಿ ಹೋಗುವಾಗ ಸಿಕ್ಕಿದಂತಹ ದ್ರಾಕ್ಷಿ ತೋಟಕ್ಕೆ ಭೇಟಿ ಕೊಟ್ಟು ಅದರ ಬಗ್ಗೆಯೂ ತಿಳಿದುಕೊಂಡೆವು. ಹಾಗೆಯೇ ಭಾಗ್ಯವತಿ ವಿದ್ಯಾವರ್ಧಕ ಸಂಘದ ಶಾಲೆಗೂ ಭೇಟಿಯನ್ನು ನೀಡಿದೆವು. ಅಲ್ಲಿನ ಮಕ್ಕಳ ಶೈಕ್ಷಣಿಕ ಸಾಧನೆ, ಶಾಲೆ ಬೆಳೆದು ಬಂದ ರೀತಿಯನ್ನು ತಿಳಿದುಕೊಂಡೆವು.

ನಂತರ ಬಾಗೇವಾಡಿ ಸರ್ ರವರು ಅವರ ಮನೆಗೆ ಆಹ್ವಾನಿಸಿದರು. ಅವರ ಮನೆಗೂ ಭೇಟಿ ಇತ್ತೆವು. ಅವರಿಗೆ ನನ್ನ ಪರಿಚಯ ಇಲ್ಲದಿದ್ದರೂ ನನ್ನನ್ನು ಬಹಳ ಪ್ರೀತಿಯಿಂದ ಮಾತಾಡಿಸಿದ್ದು ನನಗೆ ಬಹಳ ಖುಷಿಕೊಟ್ಟಿತು. 

ನಂತರ ಆಲಮಟ್ಟಿಯ ಕಡೆ ಸಾಗಿದೆವು. ಆಲಮಟ್ಟಿಯ ಸೌಂದರ್ಯ ನಮ್ಮನೆಲ್ಲರನ್ನು ಆಕರ್ಷಿಸಿತು. ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟು ಹಾಗೆ ಸಂಗೀತ ಕಾರಂಜಿ ಬೃಂದಾವನಗಳು ನಮ್ಮ ಮನಸೆಳೆಯಿತು. ಇವನ್ನೆಲ್ಲ ಕಣ್ಣು ತುಂಬಿಕೊಂಡು ಅಲ್ಲಿಂದ ವಿಶ್ರಾಂತಿಗಾಗಿ ಹೊರಟೆವು .

ಮರುದಿನ ಬೇಗನೆ ಎದ್ದು ಕೂಡಲಸಂಗಮದತ್ತ ಪ್ರಯಾಣ ಬೆಳೆಸಿದವು. ಬಸವಣ್ಣನವರು ಲಿಂಗೈಕ್ಯವಾದಂತ ಸ್ಥಳ. ಬಹಳ ಶಾಂತವಾದಂತಹ ಪ್ರದೇಶ. ಅಲ್ಲಿ ನಿಂತುಕೊಂಡು ಧ್ಯಾನ ಮಾಡಿ ಅಲ್ಲಿಂದ ಹೊರಟೆವು.

ಐಹೊಳೆಗೆ ಬಂದೆವು. ಬಹಳ ಸುಂದರ ಪ್ರವಾಸಿ ತಾಣ. ಕಲ್ಲಿನಲ್ಲೇ ಮೂಡಿ ಬಂದ ವಿಗ್ರಹಗಳು, ಕೆತ್ತನೆಗಳು, ನೀರಿನ ಕೊಳಗಳು ನಮ್ಮನ್ನು ಬಹಳಷ್ಟು ಆಕರ್ಷಿಸಿದವು. 

ಮುಂದೆ ಪಟ್ಟದಕಲ್ಲಿನತ್ತ ಪ್ರಯಾಣ ಬೆಳೆಸಿದೆವು. ನೋಡಲು ತುಂಬಾ ಇದ್ದುದರಿಂದ ಅಲ್ಲಿಂದ ಬರಲು ಮನಸ್ಸೇ ಬರುತ್ತಿರಲಿಲ್ಲ. ಅಲ್ಲಲ್ಲಿ ಇರುವಂತಹ ಕೊಳ, ಕಲ್ಲಿನ ಕೆತ್ತನೆಗಳು ನನ್ನ ಮನ ಸೆಳೆಯುತ್ತಿತ್ತು.

ನಂತರ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವಂತಹ ಮಹಾಕೂಟಕ್ಕೆ ಬಂದೆವು. ಇಲ್ಲಿ ಭಕ್ತಾದಿಗಳು ಕೊಳದಲ್ಲಿ ಭಕ್ತಿಯಿಂದ ಸ್ನಾನ ಮಾಡಿ ಧನ್ಯರಾಗುತ್ತಿದ್ದರು. ದೇವರ ದರ್ಶನ ಆದ ನಂತರ ಬನಶಂಕರಿಗೆ ಬಂದು ಬಹಳ ಹತ್ತಿರದಿಂದ ದೇವಿಯನ್ನು ನೋಡುವ ಭಾಗ್ಯ ನಮಗಲ್ಲಿ ದೊರೆಯಿತು.

ನಮ್ಮ ಕೊನೆಯ ಸ್ಥಳ ಬಾದಾಮಿಯಾಗಿತ್ತು. ಇದಂತೂ ವರ್ಣಿಸಲು ಅಸಾಧ್ಯವಾದಂತಹ ಸ್ಥಳವಾಗಿದೆ. ನನಗಂತೂ ನೋಡಿದಷ್ಟು ನೋಡಬೇಕೆನ್ನುವ ಅಂತಹ ಪ್ರೇಕ್ಷಣೀಯ ಸ್ಥಳವಾಗಿದೆ. ನಾಲ್ಕು ಗುಹಾಂತರ ದೇವಾಲಯವನ್ನು ಹೊಂದಿದೆ. ನಮ್ಮ ಜೊತೆಗೆ ನಮಗೆ ದಾರಿ ತೋರಿಸಲಿರುವಂತಹ ಕೋತಿಗಳು ನಮ್ಮ ಜೊತೆ ಹಿಂದೆ ಬರುತ್ತಿದ್ದವು. ನಮ್ಮ ಕೈಯಲ್ಲಿರುವ ವಸ್ತುಗಳನೆಲ್ಲ ಕಿತ್ತುಕೊಂಡು ಓಡುತ್ತಿದ್ದವು. ಹಾಗಾಗಿ ಜಾಗೃತೆ ಮಾಡಿ ಎಂಬುದಾಗಿ ನಮಗೆ ಎಚ್ಚರಿಕೆ ನೀಡುತ್ತಿದ್ದರು. ಈ ಗುಹಾಲಯವನ್ನು ಹೇಗೆ ಕೆತ್ತಿದ್ದಾರೆ ಎಂಬುದೇ ನಮಗೆ ಬಹಳ ಆಶ್ಚರ್ಯ..!! ಅದರ ಸುತ್ತಮುತ್ತ ಜಾಗ ಕೋಟೆ ಹೇಗೆ ವರ್ಣಿಸಲು ಪದಗಳೇ ಸಿಗುತ್ತಿಲ್ಲ. ಈ ಎಲ್ಲಾ ಅನುಭವಗಳ ಮೂಟೆಯೊಂದಿಗೆ 7 ನೇ ತಾರೀಖು ಬೆಳಗ್ಗೆ 8.30 ಕ್ಕೆ ಮನೆ ತಲುಪಿದೆನು.

ಒಂದು ವೇಳೆ ನಾನು ಹೋಗದೇ ಇರುತ್ತಿದ್ದರೆ ತುಂಬಾ ಕಳೆದುಕೊಳ್ಳುತ್ತಿದ್ದೆ ಅನ್ನುವಂತಹ ಭಾವನೆ ನನ್ನಲ್ಲಿ ಮೂಡುತ್ತಿದೆ. ಇದನ್ನೆಲ್ಲ ವ್ಯವಸ್ಥೆ ಮಾಡಿದಂತಹ ಮತ್ತು ನನಗೂ ಬರಲು ಅವಕಾಶ ಮಾಡಿಕೊಟ್ಟಂತಹ ಕೆಯ್ಯೂರಿನ ವಿನೋದ್ ಸರ್ ಮತ್ತು ಅಲ್ಲಿನ ಎಲ್ಲಾ ಶಿಕ್ಷಕ ತಂಡ ಹಾಗೂ ನನ್ನ ಅಮ್ಮನಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತಾ ನನ್ನ ಪ್ರವಾಸ ಅನುಭವದ ಅಕ್ಷರ ರೂಪಕ್ಕೆ ಪೂರ್ಣ ವಿರಾಮವನ್ನು ಹಾಕುತ್ತಿದ್ದೇನೆ.
....................................... ಅಭಿನವ್ ಪಿ ಎನ್
8ನೇ ತರಗತಿ
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
****************************************





Ads on article

Advertise in articles 1

advertising articles 2

Advertise under the article