ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 144
Wednesday, October 14, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 144
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಕೆಲವು ದಿನಗಳಿಂದ ಹಸಿರುಮನೆ ಪರಿಣಾಮದ ಬಗ್ಗೆ ಮಾತನಾಡುತ್ತಿದ್ದೆವು. ಈ ವಾರವೂ ಲೇಖನ ಸಿದ್ಧಪಡಿಸುತ್ತಿರುವಾಗ ಓಹ್ ಇದು ನವರಾತ್ರಿ ದುರ್ಗೆಯ ಆರಾಧನಾ ದಿನಗಳು ಆ ಸಂಭ್ರಮವನ್ನು ಹಂಚಿಕೊಳ್ಳಬೇಕು ಅನ್ನಿಸಿತು.
ನಮ್ಮ ಅವಿಭಜಿತ ದಕ್ಷಿಣ ಕನ್ನಡದಲ್ಲಿ ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ನಡೆಯುವ ಉತ್ಸವ, ಜಾತ್ರೆ, ಕೋಲಗಳನ್ನು ಹೊರತುಪಡಿಸಿದರೆ ಎಲ್ಲ ಹಬ್ಬಗಳೂ ಒಂದು ಕುಟುಂಬಕ್ಕೆ ಸೀಮಿತ. ಅವು ಸಾರ್ವಜನಿಕವಲ್ಲ. ಆದರೆ ಈಗ ಗಣೇಶ ಚೌತಿ ಮತ್ತು ಶಾರದೋತ್ಸವಗಳು ಸಾರ್ವಜನಿಕ ರೂಪ ತಳೆದಿವೆ. ನಾನು ಬೆಳಗಾವಿಯಲ್ಲಿದ್ದಾಗ ಈ ನವರಾತ್ರಿಯ ಸಂಭ್ರಮವನ್ನು ಮನೆ ಮನೆಗೆ ಮುಟ್ಟಿಸುವ ದುರ್ಗಾ ದೌಡ್ ಹಾಗೂ ನವರಾತ್ರಿಯ ಸಂಭ್ರಮವನ್ನು ನೂರ್ಮಡಿಗೊಳಿಸುವ ದಾಂಡಿಯಗಳನ್ನು ಸಂಭ್ರಮಿಸುತ್ತಿದ್ದೆ. ನಮ್ಮ ನೆಲದಲ್ಲಿ ಶಕ್ತಿ ದೇವತೆ ಹೆಣ್ಣು ಹೊರತೂ ಗಂಡಲ್ಲ. ಯಾವ ವ್ಯಾಕರಣ ಪಂಡಿತರೂ ಇಲ್ಲಿಯವರೆಗೆ ಶ್ರೀ ದುರ್ಗಾಪರಮೇಶ್ವರಿ ಅಥವಾ ಶ್ರೀ ಮೂಕಾಂಬಿಕೆ ಎಂದಿರುವುದನ್ನು ಶ್ರೀಮತಿ ಎಂದು ತಿದ್ದುವುದಾಗಲೀ ಈ ಬಗ್ಗೆ ಚರ್ಚಿಸುವುದಾಗಲೀ ಮಾಡಿಲ್ಲ. ಏಕೆ ಎಂಬುದೇ ನನ್ನ ಬೆರಗು. ಇದಕ್ಕೆ ಉತ್ತರ ನನಗೆ ಸಿಗಲೇ ಇಲ್ಲ. ನಾನು ಇತ್ತೀಚಿಗೆ ಜೀವಕೋಶಗಳ ಬಗ್ಗೆ ಪಾಠ ಮಾಡುತ್ತಿರುವಾಗ ನನಗೆ ಇದರ ಉತ್ತರ ಸಿಕ್ಕಿತು.
ಅನುವಂಶಿಕವಾಗಿ ಬರುವ ಗುಣಗಳು ತಂದೆ ಮತ್ತು ತಾಯಿ ಇಬ್ಬರಿಂದಲೂ ಬರುತ್ತವೆ. ತಂದೆಯ ಗುಂಗುರು ಕೂದಲು, ತಾಯಿಯ ತಂದೆಯ ಪಿಂಗಾಣಿ (ಕಾಜು) ಕಣ್ಣು, ತಂದೆಯ ಉಬ್ಬಿದ ಗಂಟಲು (Adam's Pole) ಹೀಗೆ. ಲಿಂಗಾಣುಗಳು ಉತ್ರತ್ತಿಯಾಗುವಾಗುವಾಗ ಕಂಡು ಬರುವ ಮಿಯೋಸಿಸ್ (meiosis) ಕೋಶ ವಿಭಜನೆ ಇದಕ್ಕೆ ಕಾರಣ. ಇದಕ್ಕೆ ಕಾರಣವಾದ DNA ತಂದೆ ಮತ್ತು ತಾಯಿ ಇಬ್ಬರ ಕಡೆಯಿಂದಲೂ ಬಂದಿರುವುದರಿಂದ ಇಬ್ಬರ ಗುಣಗಳೂ ಅನುವಂಶೀಯ ಬಳುವಳಿಯಾಗಿರುತ್ತವೆ.
ಈ ಜೀವಕೋಶಗಳು ನಡೆಸುವ ಜೀವ ರಾಸಾಯನಿಕ ಕ್ರಿಯೆಗಳಿಗೆ ಮತ್ತು ಜೀವಿಗಳ ಚಲನೆ ಇತ್ಯಾದಿಗಳಿಗೆ ಶಕ್ತಿ ಬೇಕು. ಜೀವಕೋಶಗಳ ಒಳಗಿರುವ ಮೈಟೊಕಾಂಡ್ರಿಯಾ (mitochondria) ಎಂಬ ರಚನೆಗಳು ಬೇಕಾದ ಶಕ್ತಿಯನ್ನು ಉತ್ಪತ್ತಿ ಮಾಡುತ್ತವೆ. ಆದ್ದರಿಂದ ಮೈಟೋಕಾಂಡ್ರಿಯಾಗಳು ಕೋಶದ ಶಕ್ತಿ ಉತ್ಪಾದನಾ ಕೇಂದ್ರಗಳು (powerhouses of a cell). ಇವುಗಳು ರಾಸಾಯನಿಕ ಕ್ರಿಯೆ ನಡೆಸುವಾಗ ಅಡಿನೋಸಿನ್ ಡೈ ಪಾಸ್ಫೇಟ್ ಗಳನ್ನು (ADP) ಅಡಿನೋಸಿನ್ ಟ್ರೈಫಾಸ್ಫೇಟ್ ಗಳನ್ನಾಗಿ (ATP) ಪರಿವರ್ತಿಸುತ್ತವೆ. ಈ ATP ಗಳನ್ನು ತನಗೆ ಬೇಕಾದಾಗ ADP ಗಳನ್ನಾಗಿ ಪರಿವರ್ತಿಸಿಕೊಂಡು ತಮಗೆ ಬೇಕಾದಾಗ ಶಕ್ತಿಯನ್ನು ಕೋಶಗಳು ಪಡೆಯುತ್ತವೆ. ನಾವು ಅಡಿಕೆಯನ್ನು ಮಾರಾಟ ಮಾಡಿ ಅದನ್ನು ಹಣವಾಗಿ ಪರಿವರ್ತಿಸುತ್ತೇವೆ ಮತ್ತು ಆ ಹಣದಿಂದ ಬೇಕಾದಾಗ ಅಗತ್ಯ ವಸ್ತುಗಳನ್ನು ಖರೀದಿಸುತ್ತೇವಲ್ಲ ಹಾಗೆ. ಅಂದರೆ ಈ ATP ಗಳು ಕೋಶದ ಶಕ್ತಿಯ ಚಲಾವಣೆಗಳು (energy currencies of a cell).
ಈ ಮೈಟೊಕಾಂಡ್ರಿಯಗಳಿದ್ದಾವಲ್ಲ ಅವುಗಳು ನೇರವಾಗಿ ಜೀವಕೋಶಗಳಿಂದ ನಿಯಂತ್ರಿಸಲ್ಪಡುವುದಿಲ್ಲ. ಬದಲಾಗಿ ಅವುಗಳು ಅರೆ ಸ್ವತಂತ್ರ ಸಂಸ್ಥೆಗಳ ಹಾಗೆ. ಅವುಗಳು ಸಂಖ್ಯೆಯಲ್ಲಿ ಹೆಚ್ಚಳವಾಗುವುದು ಮತ್ತು ಕೆಲವೊಂದು ರಾಸಾಯನಿಕ ಕ್ರಿಯೆಗಳನ್ನು ತಾವೇ ಸ್ವತಂತ್ರವಾಗಿ ನಿರ್ಧರಿಸಬಲ್ಲವು. ಶಕ್ತಿಯ ಬೇಡಿಕೆ ಮಾತ್ರ ಜೀವಕೋಶದಿಂದ ನೀಡಲ್ಪಡುತ್ತದೆ ಅಷ್ಟೇ. ಇದಕ್ಕೆ ಕಾರಣ ಮೈಟೋಕಾಂಡ್ರಿಯಾಗಳು ತಮ್ಮದೇ ಆದ DNA ಗಳನ್ನು ಹೊಂದಿವೆ. ಈ ಮೈಟೊಕಾಂಡ್ರಿಯಾದ DNA ತಂದೆಯ ಬಳುವಳಿ ಅಲ್ಲ ಬದಲಾಗಿ ತಾಯಿಯ ಬಳುವಳಿ (matriarchal DNA). ಅಂದರೆ ನಿಮ್ಮ ಕೋಶದ ಶಕ್ತಿ ಉತ್ಪಾದನೆಯನ್ನು ನಿಯಂತ್ರಿಸುವುದು ನಿಮ್ಮ ತಾಯಿಯೇ ಹೊರತು ತಂದೆ ಅಲ್ಲ. ಆದ್ದರಿಂದ ಶಕ್ತಿಯ ಅಧಿದೇವತೆ ಚಾಮುಂಡೇಶ್ವರಿಯೇ ಹೊರತು ಮಲೆ ಮಹದೇಶ್ವರನಲ್ಲ.
ನಮ್ಮ ಪೂರ್ವಜರಿಗೆ ಜೀವ ಕೋಶ ಶಾಸ್ತ್ರದ (cytology) ಬಗೆಗೆ ಇಷ್ಟೊಂದು ಆಳವಾದ ಪರಿಜ್ಞಾನ ಇತ್ತೇ ಎಂದರೆ ನನಗೆ ಗೊತ್ತಿಲ್ಲ. ಆದರೆ ಅಷ್ಟೊಂದು ಖಚಿತವಾಗಿ ಹೇಳುತ್ತಿದ್ದಾರೆಂದರೆ ಪರಿಜ್ಞಾನವಿಲ್ಲದೇ ಇರಲು ಸಾಧ್ಯವಿಲ್ಲ. ಜೀವ ರಸಾಯನಶಾಸ್ತ್ರದ (biochemistry) ಆಧಾರದ ಮೇಲೆ ಮಾಡುವ ಜೀವಿ ವರ್ಗೀಕರಣ ಪುರಾತನ ಜ್ಞಾನದ ಸಹಮತಿ ಹೊಂದಿದೆ. ಕ್ವಾಂಟಮ್ ಸಿದ್ಧಾಂತವನ್ನು ಪ್ರತಿಪಾದಿಸುವ ಪಾಶ್ಚಾತ್ಯ ವಿಜ್ಞಾನಿಗಳು ನಮ್ಮ ಉಪನಿಷತ್ತುಗಳನ್ನು ಉದ್ಧರಿಸುತ್ತಾರೆ. ಆದ್ದರಿಂದ ಇದನ್ನೂ ಅಲ್ಲಗೆಳೆಯಲು ಸಾಧ್ಯವಿಲ್ಲ ಎಂಬುದು ನನ್ನ ಅನಿಸಿಕೆ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************