ಸ್ಪೂರ್ತಿಯ ಮಾತುಗಳು : ಸಂಚಿಕೆ - 235
Monday, October 5, 2026
Edit
ಸ್ಪೂರ್ತಿಯ ಮಾತುಗಳು : ಸಂಚಿಕೆ - 235
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 94486 26093
ಬಹಳ ಹಳೆಯ ನೆನಪು. ನಮ್ಮ ಮನೆ ಮುಳಿ ಹುಲ್ಲಿನ ಚಿಕ್ಕ ಮನೆ. ಅಕ್ಕ ಪಕ್ಕದವರ ಮನೆಗಳಲ್ಲಿ ಕೆಲವು ಹಂಚಿನದು. ಅಪರೂಪಕ್ಕೆ ಹಂಚಿನ ಛಾವಣಿಯಿರುವ ಮಾಳಿಗೆ ಮನೆಗಳು. ಮಧ್ಯಮವರ್ಗದವರು ಸೋಗೆ ಅಥವಾ ಮುಳಿಹುಲ್ಲಿನ ಛಾವಣಿಯ ಮನೆಗಳಲ್ಲೇ ವಾಸವಾಗಿದ್ದರು. ಆದರೆ ಮನೆ ತುಂಬಾ ಮಂದಿ. ಹಸುಗೂಸಿನಿಂದ ಮುದಿಹರೆಯದ ತನಕ ವಿವಿಧ ವಯೋಮಾನದ ಹತ್ತಾರು ಮಂದಿ. ಗಂಡು ಹೆಣ್ಣು ಬೇಧವಿಲ್ಲದೆ ಹಿರಿಯರ ಮಾರ್ಗದರ್ಶನದಡಿಯಲ್ಲಿ ಮಹಳ ಸಂತಸ ನೆಮ್ಮದಿ ಆರೋಗ್ಯದ ಜೀವನ ನಡೆಸುತ್ತಿದ್ದರು.
ಮನೆಗೊಂದು ಪೂಜಾ ಮಂದಿರ ಅದರೊಳಗೆ ನಿತ್ಯ ಪೂಜೆ, ಭಜನೆ, ಪಾರಾಯಣಗಳು ಸಾಂಘಿಕವಾಗಿ ನಡೆಯುತ್ತಿದ್ದುವು. ಮನೆಗೊಂದು ಪಾಕಶಾಲೆ, ಗೋಶಾಲೆ ಇಲ್ಲದ ಮನೆಗಳೇ ಇಲ್ಲ. ಪಾಕಶಾಲೆಯೆಂದರೆ ಅದೊಂದು ಆರೋಗ್ಯಶಾಲೆ. ಮನೆ ಹಿತ್ತಿಲಿನಲ್ಲಿ, ತೋಟ ಮತ್ತು ಗದ್ದೆಗಳಲ್ಲಿ ಬೆಳೆದವುಗಳೇ ಆಹಾರ. ಆ ಹಿರಿಯ ತಾಯಂದಿರು ಮಾಡುತ್ತಿದ್ದ ಅಡುಗೆಯ ರುಚಿಯನ್ನು ಇಂದಿಗೂ ನಾಲಿಗೆ ಜ್ಞಾಪಿಸುತ್ತದೆ. ಅದರ ಪರಿಮಳವನ್ನು ಮೂಗು ಹುಡುಕುತ್ತದೆ. ಆದರೆ ಅಂದಿನ ವೈಭವಗಳ ಸ್ಥಿತಿ ಇಂದು ಸಂಪೂರ್ಣವಾಗಿ ಭಿನ್ನವಾಗಿದೆ.
ಮನಗಳು ಮನೆಯೊಳಗೆ,
ಮುಖಗಳು ಮೂಡು ಪಡುವಣದೆಡೆಗೆ.
ಮನಸ್ಸು ಧಗಧಗ ಕುದಿಯುತ್ತಿದೆ,
ನಿರಾಳತೆಯ ಉಸಿರು ಬತ್ತಿದೆ.
ಅನ್ನ ಪಲ್ಯ ಸಂಬಾರ ಬೇಯುತ್ತಿಲ್ಲ,
ಅಡುಗೆ ಮನೆ ಖಾಲಿ ಖಾಲಿ
ಪೋನಾಯಿಸಿದರೆ ಬರುತ್ತದೆ
ವಿಧ ವಿಧ ಖಾದ್ಯಗಳ ಭಾರೀ ಥಾಲಿ
ರಂಗು ರಂಗಿನ ಮನೆ ಎತ್ತರೆತ್ತರ,
ಮನಸ್ಸುಗಳಿಲ್ಲ ಹತ್ತಿರ ಹತ್ತಿರ
ಮನೆಯೊಳಗೆ ಮನೆ ತುಂಬಾ ಮಂದಿಯಿಲ್ಲದ ಇಂದಿನ ಮನೆಯನ್ನು ನಮ್ಮ ಅನುಭವದ ಚಿತ್ರಣದೊಂದಿಗೆ ತುಲನೆ ಮಾಡಿದಾಗ ಬೇಗುದಿಯಾಗುತ್ತದೆ. ಪಕ್ಕದ ಕೋಣೆಯಲ್ಲಿರುವ ಮುಖದ ಜೊತೆ ಮೊಬೈಲಿನಲ್ಲಿಯೇ ಮಾತುಕತೆ. ಮನೆ ತುಂಬಾ ನಗು ಕೇಳಿಸುತ್ತದೆ. ಇಣುಕಿ ನೋಡಿದರೆ ಗೊತ್ತಾಗುತ್ತದೆ, “ಆ ನಗುವಿನ ಅಲೆ ಮೊಬೈಲಿನ ರೀಲ್ ನೋಡುತ್ತಿರುವ ಆ ಒಂಟಿಯದೆಂದು.
ವಾಸ್ತು ನೋಡಿ ಅಡುಗೆ ಕೋಣೆ, ದೇವರ ಕೋಣೆ, ಯಜಮಾನರ ಕೋಣೆ, ದಾಸ್ತಾನು ಕೋಣೆ, ಚಾವಡಿ, ಉಡುಪು ಒಣಗಿಸುವ ಮತ್ತು ಶೇಖರಿಸುವ ಕೋಣೆಗಳು, ಓದುವ ಕೋಣೆ, ಬರೆಯುವ ಕೋಣೆ ಹೀಗೆ ಕೋಣೆಗಳನ್ನು ರಚಿಸುತ್ತಿದ್ದರು. ಇಂದು ಓದುವ ಕೋಣೆ ಬೇಡ, ಓದುವವರೇ ಇಲ್ಲ. ಬರೆಯುವ ಕೋಣೆ ಕಂಪ್ಯೂಟರ್ ಕೋಣೆಯಾಗಿದೆ. ದೇವರ ಕೋಣೆ ಮಾಯವಾಗುತ್ತಿದೆ. ಡೈನಿಂಗ್ ರೂಂ ಹೊಸದಾಗಿ ಸೇರಿದೆ. ಶ್ರದ್ಧೆಯಿರುವ ಕೆಲವು ಆಸ್ತಿಕರು ಗೋಡೆಯಲ್ಲಿಯೇ ದೇವರನ್ನು ಕುಳಿತುಕೊಳ್ಳಿಸಿರುತ್ತಾರೆ. ಮುಂದಿನ ದಿನಗಳಲ್ಲಿ ಅಡುಗೆ ಕೋಣೆ ಮಾಯವಾಗಲಿದೆ. ಹಿಂದಿನ ರುಬ್ಬುವ ಕಲ್ಲು ಅಡುಗೆ ಕೋಣೆಯಿಂದ ಮಾಯವಾದಂತೆ. ಒಲೆ (ಗ್ಯಾಸ್/ ವಿದ್ಯುತ್), ಪಾತ್ರೆ ಪರಿಕರಗಳು ಮಾಯವಾಗಲಿವೆ. “ಆರ್ಡರ್“ ಮಾಡಿದರೆ ಬರುತ್ತದಲ್ಲ ಥಾಲಿ! ಅಡುಗೆ ಕೋಣೆಯೇಕೆ? ಪಾತ್ರೆ ಪರಡಿಗಳೇಕೆ? ಕುಡಿಯುವ ನೀರು ಬಾಟ್ಲಿಯಲ್ಲಿ ಸಿಗುತ್ತದೆ. ಛೇ! ಇದು ಬದಲಾವಣೆಯೋ?, ಸುಧಾರಣೆಯೋ? ಅಥವಾ ಅನಾಹುತವೋ ಒಂದೂ ತಿಳಿಯದಾಗಿದೆ.
ಅಂದಹಾಗೆ ವಾಸ್ತು ತಜ್ಞರು ಅಡುಗೆ ಕೋಣೆಯ ಜಾಗದಲ್ಲಿ ಯಾವ ಕೋಣೆ ಮಾಡಬಹುದೆಂದು ಶೋಧನೆಯಲ್ಲಿ ತೊಡಗಿರುವರಂತೆ…! ಭದ್ರ ಮನೆಯಿದ್ದರೂ ಛಿದ್ರ ಮನಸ್ಸುಗಳು ಮನೆಯೊಳಗೆ ತುಂಬಿದರೆ ಶಾಂತಿ ನೆಮ್ಮದಿ ಎಳ್ಳಷ್ಟೂ ಸಿಗದು. ನಮ್ಮ ದುಡ್ಡು, ಐಷಾರಾಮಿ ಜೀವನದ ಬಯಕೆ, ನಾಗರೀಕತೆಯ ಹೆಸರಿನಿಂದ ನಡೆಯುವ ಅವಾಂತರಗಳಿಗೆ ಕೊನೆಗಾಲ ಎಂದು ಬರುವುದೋ! ಚಾತಕ ಪಕ್ಷಿಗಳಂತೆ ಕನಸ್ಸು ಕಾಣೋಣ...
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
'ಸ್ಕಂದ' ಕುಳ ಗ್ರಾಮ, ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 94486 26093
****************************************