-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 165

ನಿಷ್ಪಾಪಿ ಸಸ್ಯಗಳು : ಸಂಚಿಕೆ - 165

ನಿಷ್ಪಾಪಿ ಸಸ್ಯಗಳು : ಸಂಚಿಕೆ - 165
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ


      
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ?
ದಸರಾ ರಜೆಯ ಆನಂದದ ಕ್ಷಣಗಳು !... ಒಂದೊಂದೇ ಸಂಭ್ರಮದ ತುಣುಕುಗಳ ದಾಖಲೆಗಳು/ನಡೆಯುತ್ತಿವೆಯಲ್ಲವೇ?

ನಾನೂ ನಿಮ್ಮಂತೆಯೇ ಸಮಯವನ್ನು ಆಸ್ವಾದಿಸುತ್ತಾ ಸಸ್ಯಗಳ ಬಗ್ಗೆಯೇ ಪುಸ್ತಕಗಳನ್ನು ತಂದು ಓದುತ್ತಿರುವಾಗ ಒಂದು ಆಸಕ್ತಿದಾಯಕ ವಿಚಾರವನ್ನು ಗಮನಿಸಿದೆ. ಅದನ್ನು ನಿಮ್ಮ ಜೊತೆ ಹಂಚಿಕೊಳ್ಳುವ ತವಕವಾಗಿದೆ. ಅದೊಂದು ನಿಷ್ಪಾಪಿ ಸಸ್ಯ! ಬಲು ರೋಚಕ ಬದುಕು ಇದರ ಹಿಂದೆ ಇದೆ. ನಾವು ಗಮನಿಸಬೇಕು ಅಷ್ಟೆ!.

ಜೋಳದ ಗದ್ದೆಗಳಲ್ಲಿ ಅತ್ಯಂತ ವಿನಾಶಕಾರಿಯಾದ ಸ್ಟ್ರಿಗಾ ಎನ್ನುವ ಪರಾವಲಂಬಿ ಕಳೆಸಸ್ಯವೊಂದು ಕಾಡುವುದಿದೆ. ಈ ಸ್ಟ್ರಿಗಾ ಪರಾವಲಂಬಿ ಸಸ್ಯದ ಬೀಜಗಳು 10_15 ವರ್ಷಗಳ ವರೆಗೂ ಸುಪ್ತಾವಸ್ಥೆಯಲ್ಲಿದ್ದು ಸೂಕ್ತ ಕಾಲ ಬಂದಾಗ ಮೊಳಕೆಯೊಡೆಯಬಲ್ಲ ಶಕ್ತಿ ಪಡೆದಿದೆ!. ಜೋಳದ ಬಿತ್ತನೆ ನಡೆದಿದೆ ಎಂದು ತಿಳಿದರೆ ಸಾಕು.. ಸ್ಟ್ರಿಗಾ ಕೂಡ ಎಚ್ಚರಗೊಂಡು ಮೊಳಕೆಯೊಡೆದು ಜೋಳದ ಬೇರಿನ ಜೊತೆ ಬೆಸೆದು ಪೋಷಕಾಂಶ, ನೀರು ಪಡೆದು ಜೋಳದ ಬೆಳೆಯ ನಾಶಕ್ಕೆ ಕಾರಣವಾಗುತ್ತದೆ. ಬುದ್ದಿವಂತ ರೈತರು ಈ ಜೋಳದ ಸಾಲುಗಳ ನಡುವೆ ಜೋಳದ ಬಿತ್ತನೆಯ ಮೊದಲೇ ಇನ್ನೊಂದು ಸಸ್ಯದ ಬೀಜವನ್ನು ಬಿತ್ತನೆ ಮಾಡುತ್ತಾರೆ. ಈ ಜೈವಿಕ ಅಸ್ತ್ರವಾಗಿ ಪ್ರಯೋಗಿಸಲ್ಪಟ್ಟ ಬೀಜಗಳು ಮೊಳಕೆಯೊಡೆಯುತ್ತಾ ಅದರ ಬೇರುಗಳಲ್ಲಿರುವ ಕೆಲವು ವಿಶೇಷ ರಾಸಾಯನಿಕ ಸಂಯುಕ್ತವು ಗಾಳಿ ಹಾಗೂ ಮಣ್ಣಿನಲ್ಲಿ ಬಿಡುಗಡೆಗೊಂಡು ಸ್ಟ್ರಿಗಾ ಬೀಜಗಳಿಗೆ "ಜೋಳದ ಗಿಡ ಸಿದ್ಧವಾಗಿದೆ" ಎಂಬ ಸುಳ್ಳು ಸಂದೇಶ ರವಾನಿಸುತ್ತದೆ !. ಇದನ್ನು ಗಮನಿಸಿ ಸ್ಟ್ರಿಗಾ ಪರಾವಲಂಬಿ ಸಸ್ಯದ ಬೀಜಗಳು ಅಕಾಲಿಕವಾಗಿ ಮೊಳಕೆಯೊಡೆದು ಜೋಳದ ಬೇರು ಸಿಗದೆ ಹಸಿವಿನಿಂದ ಮಣ್ಣೊಳಗೇ ಸಾಯುತ್ತವೆ!. ಒಂದೊಮ್ಮೆ ಯಾವುದಾದರೂ ಕಳೆಸಸ್ಯ ಬೆಳೆದರೆ ಜೋಳದ ಬೇರಿನತ್ತ ಹೋಗಲು ಯತ್ನಿಸಿದರೆ ಇನ್ನೊಂದು ರೀತಿಯ ರಾಸಾಯನಿಕ ಬಿಡುಗಡೆಗೊಂಡು ಪರಾವಲಂಬಿಯ ಬೇರು ಜೋಳದ ಬೇರನ್ನು ಅಂಟದಂತೆ ಮಾಡುತ್ತದೆ! ಇದನ್ನು ವೈಜ್ಞಾನಿಕವಾಗಿ Push_pull Technology ಎನ್ನುವರಂತೆ.

ಜೋಳದ ಬೆಳೆ ನಾಶಕ್ಕೆ ಕಾಂಡ ಕೊರಕ ಹುಳುಗಳೂ ಪ್ರಮುಖ ಕಾರಣವಾಗುವುದುಂಟು. ಬೆಳೆ ಇಳುವರಿ ನಾಶ 20% ದಿಂದ 100% ರ ವರೆಗೂ ಏರಬಹುದು!. 
ಬುದ್ಧಿವಂತ ರೈತರು ಜೋಳದ ಜೊತೆ ಅದೇ ಆ.. ಇನ್ನೊಂದು ವಿಶೇಷ ಸಸ್ಯದ ಬೀಜ ಬಿತ್ತನೆ ನಡೆಸುತ್ತಾರೆ. ಈ ವಿಶೇಷ ಸಸ್ಯದ ಗಾಳಿ ಕಾಂಡ ಕೊರೆಯುವ ಪತಂಗಗಳಿಗೆ ಇಷ್ಟವಾಗದು. ಈಗಾಗಲೇ ಬೇರೆ ಕೀಟಗಳು ಆಕ್ರಮಿಸಿವೆ ಎಂಬ ಸುಳ್ಳು ಸಂದೇಶಗಳ ಸಂಕೇತವೂ ಹರಡುವುದುಂಟು. ಮೊಟ್ಟೆ ಇಡಲು ಕಾಯುತ್ತಿದ್ದ ಕಾಯಿಕೊರಕದ ಪತಂಗಗಳು ಜೋಳದ ಗದ್ದೆಯಿಂದ ಹೊರಬಂದು ಗದ್ದೆಯ ಸುತ್ತಲೂ ಮೂರು ನಾಲ್ಕು ಸಾಲುಗಳಲ್ಲಿ ನೆಟ್ಟಿರುವ ನೇಪಿಯರ್ ಎಂಬ ಹುಲ್ಲಿನ ಆಕರ್ಷಣೆಗೆ ಒಳಗಾಗುತ್ತವೆ. ಜೋಳದ ಮೇಲಿನ ಜಿಗುಪ್ಸೆಯಿಂದ ಹೊರ ಬಂದ ಪತಂಗಗಳು ನೇಪಿಯರ್ ಹುಲ್ಲಿನ ಮೇಲೆ ಮೊಟ್ಟೆ ಇಡುತ್ತವೆ. ಮೊಟ್ಟೆಯೊಡೆದ ಲಾರ್ವಾಗಳು ಎಲೆಗಳನ್ನು ತಿಂದು ಬಳಿಕ ಹುಲ್ಲಿನ ಬುಡವನ್ನೇ ಕೊರೆಯಲಾರಂಭಿಸುತ್ತವೆ. ಈ ನೇಪಿಯರ್ ಹುಲ್ಲಿನ ಕಾಂಡ ತನ್ನ ರಕ್ಷಣೆಗಾಗಿ ಹುಳು ಕಾಂಡ ಕೊರೆಯುತ್ತಿದೆ ಎಂದೆನಿಸಿದಾಗ ಮೇಣದಂತಹ ದ್ರವವನ್ನು ಒಸರಿಸಿ ಕೊರೆಯುತ್ತಿದ್ದ ಹುಳ ಒದ್ದಾಡುತ್ತಾ ಸತ್ತು ಬೀಳುವಂತೆ ಮಾಡುತ್ತದೆ! ಇದನ್ನು Push_ pull Technology ಎನ್ನುವರಂತೆ!. ಹೇಗಿದೆ ನೋಡಿ ಪ್ರಕೃತಿಯ ಅದ್ಭುತ ವೈದ್ಯ ಪದ್ಧತಿ?

ಈಗ ನಿಮಗನಿಸಿರಬಹುದು... ಜೋಳದ ಜೊತೆಗಿನ ಆ 'ಇನ್ನೊಂದು' ಬುದ್ದಿವಂತ ಸಸ್ಯ ಯಾವುದು.. ಎಂದು. ನಾನು ಬುದ್ಧಿವಂತ ಎಂದು ಏಕೆ ಹೇಳಿದೆನೆಂದರೆ ಅದು ಇತರ ಸಸ್ಯಗಳ ಜೊತೆ ಸ್ಪರ್ಧಾತ್ಮಕ ವಾಗಿ ಬದುಕುವ ರೀತಿಗೆ ! ಇದೊಂದು ಅಪರೂಪದ ಔಷಧೀಯ ಸಸ್ಯವೂ ಹೌದು. ನಿಮ್ಮ ಮನೆಯವರೂ ಕೂಡ ಈ ಸಸ್ಯದ ಪ್ರಯೋಜನವನ್ನು ಪಡೆದವರಾಗಿರಬಹುದು.. ಹೇಗೆನ್ನುವಿರಾ? ಬಾಣಂತಿಯರ ಆರೋಗ್ಯ ಚೇತರಿಕೆ, ವಾತ ದೋಷ ನಿವಾರಕವಾಗಿ ಸೇವಿಸುವ ದಶಮೂಲಾರಿಷ್ಟ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶ್ವಾಸಕೋಶದ ಆರೋಗ್ಯಕ್ಕೆ ಉಪಯುಕ್ತವಾಗಿರುವ ಚ್ಯವನಪ್ರಾಶ , ವಾತರೋಗಕ್ಕೆ ಮಸಾಜ್ ಮಾಡಲು ಬಳಸುವ ಧನ್ವಂತರಿ ತೈಲ, ಜ್ವರ ಕೆಮ್ಮು, ಅಸ್ತಮಾ, ಜೀರ್ಣಕ್ರಿಯಾ ಸಮಸ್ಯೆಗಳಲ್ಲಿ ಚೂರ್ಣ, ಮಾತ್ರೆಗಳ ರೂಪದ ನೂರಾರು ಆಯುರ್ವೇದ ಔಷಧಿಯಲ್ಲಿ ಈ ಇನ್ನೊಂದು ಸಸ್ಯ ಸಾರವಿದೆ! 

ಮಕ್ಕಳೇ, ಆ ಇನ್ನೊಂದು ನಿಷ್ಪಾಪಿ ಸಸ್ಯವೇ 'ಕಾಡು ಮೂವಿಲೆ'. ಆಂಗ್ಲ ಭಾಷೆಯ ಏಷ್ಯನ್ ಟಿಕ್ ಟ್ರೆಫಾಯಿಲ್ (Asian Tick trefoil). ತುಳು ಭಾಷೆಯಲ್ಲಿ ಕಟ್ಟು ಮೂಜಿರೆ ಯಾದರೆ ಸಂಸ್ಕೃತ ದಲ್ಲಿ ಶಾಲಪರ್ಣಿ.

ಡಾಬರ್, ಪತಂಜಲಿ, ಕೋಟಕ್ಕಲ್, ಹಿಮಾಲಯ ಇತ್ಯಾದಿ ಪ್ರಮುಖ ಆಯುರ್ವೇದ ಔಷಧಿ ಪದ್ಧತಿಗಳಲ್ಲಿ ಈ ಸಸ್ಯದ ಬಳಕೆಯಿದೆ. ವೈಜ್ಞಾನಿಕವಾಗಿ ಈ ಸಸ್ಯವು ಫ್ಯಾಬೇಸಿ (Fabaceae) ಕುಟುಂಬಕ್ಕೆ ಸೇರಿದ್ದು ಡೆಸ್ಮೋಡಿಯಮ್ ಹೆಟೆರೋಕಾರ್ಪನ್ ( Desmodium heterocarpan) ಎಂದು ಹೆಸರಿಸಿಕೊಂಡಿದೆ. ಒಂದೂವರೆ ಮೀಟರ್ ನಷ್ಟೆತ್ತರ ಬೆಳೆಯುವ ಈ ಸಸ್ಯ ನೇರವಾಗಿ ಅಥವಾ ನೆಲದ ಮೇಲೆ ಹರಡಿಕೊಂಡು ಸಣ್ಣ ಪೊದೆಯಂತೆ ಬೆಳೆಯುತ್ತದೆ. ಮೂರ್ನಾಲ್ಕು ವರ್ಷಕಾಲ ಬದುಕಬಲ್ಲ ಕಾಡುಮೂವಿಲೆ ಬಹುವಾರ್ಷಿಕ ದ್ವಿದಳ ಧಾನ್ಯದ ಸಸ್ಯ. ಮೂರು ಎಲೆಗಳ ಮಧ್ಯಭಾಗ ತಿಳಿ ಹಸಿರು ಅಥವಾ ಬೂದು ಬಣ್ಣದ ವಿನ್ಯಾಸದ ಗೆರೆ ಹೊಂದಿರುತ್ತದೆ. ಕಡ್ಡಿಯಂತಹ ಪುಷ್ಪಮಂಜರಿಯಲ್ಲಿ ಒತ್ತೊತ್ತಾಗಿ ಪುಟ್ಟ ಪುಟ್ಟ ನೇರಳೆ ಬಣ್ಣದ ಹೂವುಗಳಾಗುತ್ತವೆ. ಕಾಯಿಗಳಂತೂ ಒಂದು ಹೂವಿಗೊಂದರಂತೆ ಸರಣಿ ಕಾಯಿ. ಬೀನ್ಸಿನಂತೆ ರಚನೆಯ ಪುಟಾಣಿ ಕೋಡುಗಳು. ಒಂದು ಕೋಡಿನೊಳಗೆ ನಾಲ್ಕು ಪ್ರತ್ಯೇಕವಾದ ಬೀಜಗಳು!ಬಹುಶ: ಒಂದು ಗಿಡದಲ್ಲೇ ಸಾವಿರಾರು ಬೀಜಗಳು! ಇದರ ಹೆಸರಿನ ಅರ್ಥವೇ ಅಂದರೆ ಡೆಸ್ಮೋಡಿಯಂ ಅಂದರೇನೆ ಸರಪಳಿ ಕಾಯಿಗಳೆಂದರ್ಥವಂತೆ. ಈ ಕಾಯಿಗಳ ಮೇಲೆ ತೆಳುವಾದ ರೋಮವಿದ್ದು ಬಟ್ಟೆ, ಪ್ರಾಣಿಗಳ ಮೇಲೆಲ್ಲ ದೂರ ಸವಾರಿ ಮಾಡಬಲ್ಲದು. ಇದು ಗಟ್ಟಿಯಾದ ರಕ್ಷಣಾ ಕವಚ ಹೊಂದಿರುವುದರಿಂದ ಮೊಳಕೆ ಪ್ರಮಾಣ ಕಡಿಮೆ. 80' C ತಾಪಮಾನದ ಬಿಸಿನೀರಲ್ಲಿ ಐದು ನಿಮಿಷ ನೆನೆಸಿ ತೆಗೆದು ತಣ್ಣೀರಲ್ಲಿ ರಾತ್ರಿಯಿಡೀ ನೆನೆಸಿ ನೆರಳಲ್ಲಿ ಒಣಗಿಸಿ ಬಿತ್ತನೆ ನಡೆಸಿದರೂ 50% ದಿಂದ 70% ಮಾತ್ರವೇ ಮೊಳಕೆಯೊಡೆಯಬಲ್ಲದು. ಒಂದು ಎಕರೆಗೆ ಏಳೆಂಟು ಕಿಲೋ ಬೀಜ ಬಿತ್ತನೆಗೆ ಬೇಕು. ರೈತರು ಇದನ್ನು ಏಕೆ ಬೆಳೆಸುತ್ತಾರೆಂದರೆ ಜಾನುವಾರುಗಳಿಗೆ ಇದು ಉತ್ತಮ ಮೇವು. ಹಾಲಿನ ಇಳುವರಿಯಲ್ಲಿ ಹೆಚ್ಚಳವಷ್ಟೇ ಅಲ್ಲದೆ ಜಾನುವಾರುಗಳ ತೂಕವೂ ಹೆಚ್ಚಾಗುವುದು. 60 ರಿಂದ 90 ದಿನಗಳಲ್ಲಿ ಮೊದಲ ಕಟಾವು ನಡೆದರೆ ಪ್ರತೀ 40 ದಿನಗಳಿಗೊಮ್ಮೆ ಮೂರ್ನಾಲ್ಕು ವರ್ಷ ಕಟಾವು ಮಾಡುತ್ತಿರಬಹುದು!. ವಾತಾವರಣದ ಸಾರಜನಕ ಹೀರಿಕೊಂಡು ಮಣ್ಣಿನಲ್ಲಿ ಸ್ಥಿರೀಕರಿಸುವುದರಿಂದ ಮಣ್ಣಿನ ಫಲವತ್ತತೆಗೂ ಕಾರಣವಾಗುತ್ತದೆ. 

ಕಾಡು ಮೂವಿಲೆ ಸಸ್ಯದ ಬಗ್ಗೆ ತಿಳಿಯುತ್ತಾ ಹೋದಂತೆ ನಿಮಗೀಗ 'ಅದು ನಮ್ಮೂರಲ್ಲಿ ಇದೆಯೆ?' ಎಂಬ ಪ್ರಶ್ನೆ ಕಾಡಬಹುದು. ಕಾಡು ಮೂವಿಲೆ ನಮ್ಮೂರಲ್ಲೂ ಇದೆ ಗೊತ್ತಾ? ಏಷ್ಯಾ, ಆಸ್ಟ್ರೇಲಿಯಾ, ಫೆಸಿಫಿಕ್ ದ್ವೀಪಗಳು, ಆಫ್ರಿಕಾದ ತಾಂಜಾನಿಯಾದ್ಯಂತ ಹರಡಿರುವ ಕಾಡು ಮೂವಿಲೆ ನಮ್ಮೂರಲ್ಲೂ ಮಾರ್ಗದ ಬದಿ, ಗುಡ್ಡಗಳ ಇಳಿಜಾರು, ತೋಟ, ಬೇಲಿಗಳ ಸನಿಹವೆಲ್ಲಾ ಹಬ್ಬಿಕೊಂಡಿದೆ. ಕಾಡುಪ್ರಾಣಿಗಳು ಇಷ್ಟಪಟ್ಟು ಮೇಯುತ್ತವೆ. ಹಲವಾರು ರೋಗಗಳ ನಿವಾರಣೆಗೆ ಎಲ್ಲೆಡೆ ಬಳಸುವ ಈ ಸಸ್ಯವನ್ನು ಖಂಡಿತ ನೀವೂ ಹುಡುಕಿ ಗುರುತಿಸುವಿರಲ್ಲವೇ..?

ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?

ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************



Ads on article

Advertise in articles 1

advertising articles 2

Advertise under the article