ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 146
Wednesday, October 28, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 146
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಅಭಿವೃದ್ಧಿಯ ಸೂಚಕವಾದ ಸಿಮೆಂಟ್ ಉತ್ಪಾದನೆ ಹೇಗೆ ಜಗತ್ತಿನ ತಳ ಕಾಯಿಸುತ್ತದೆ ಎಂದು ನೋಡಿದೆವು. ಕೆಲವು ಸಮಯದ ಹಿಂದೆ ನಮ್ಮ ಜನರಿಗೆ ಎರಡು ಕರೆ ನೀಡಿದರು.
1. ಸಿರಿಧಾನ್ಯಗಳನ್ನು ಬಳಸಿ.
2. ಖಾದ್ಯ ತೈಲಗಳ ಬಳಕೆ ಕಡಿಮೆ ಮಾಡಿ.
ಮೇಲ್ನೋಟಕ್ಕೆ ಇದರಲ್ಲಿ ಜನರ ಆರೋಗ್ಯದ ಬಗ್ಗೆ ಕಳಕಳಿ ಇದೆ ಅಂತ ಅನ್ನಿಸುತ್ತದೆ. ಆದರೆ ನನ್ನ ಲೇಖನ ಮಾಲೆಯನ್ನು ಓದಿದ ಮೇಲೆ ನಿಮಗೆ ತಾಪಮಾನ ಏರಿಕೆಯ ಸಂದೇಶಗಳೇನಾದರೂ ಕಂಡವೇ? ಅನೇಕ ಸಂದರ್ಭಗಳಲ್ಲಿ ಒಂದು ಕ್ರಿಯೆ ಬೇರೆ ಬೇರೆ ಪರಿಣಾಮಗಳನ್ನು ಹೊಂದಿರಬಹುದು. ನೀವು ಮುಖ ತೊಳೆಯುತ್ತೀರಿ ಅಂದುಕೊಳ್ಳಿ ಆಗ ನೀವು ಅಯಾಚಿತವಾಗಿ ಅಂಗೈಯನ್ನು ತೊಳೆಯುತ್ತಿದ್ದೀರಿ ತಾನೇ. ನೀವು ನೀರು ಕುಡಿಯುತ್ತೀರಿ. ಅದು ನಿಮ್ಮ ಬಾಯಾರಿಕೆ ಇಂಗಿಸಿಕೊಳ್ಳಲು ಮಾತ್ರವಲ್ಲ ನಿಮ್ಮ ಬಾಯಿಯಲ್ಲಿರುವ ಆಹಾರದ ಕಣಗಳ ಕೊಳೆಯುವಿಕೆಯಿಂದ ಉತ್ಪತ್ತಿಯಾದ ಆಮ್ಲಗಳನ್ನು ದುರ್ಬಲಗೊಳಿಸುವ ಮೂಲಕ ಹಲ್ಲುಗಳನ್ನು ಕುಳಿಗಳಿಂದ ರಕ್ಷಿಸುವ ಕೆಲಸವೂ ಹೌದು. ಹಾಗಾದರೆ ಆಹಾರದ ಕ್ರಮದ ಇಂಗಾಲದ ಹೆಜ್ಜೆ ಗುರುತುಗಳ ಬಗ್ಗೆ ಈ ದಿನ ತಿಳಿಯೋಣ.
ನೀವು ಅಂದುಕೊಳ್ಳಬಹುದು ನಾವು ಸಸ್ಯಾಹಾರಿಗಳು. ಸಸ್ಯಗಳು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸುವಾಗ ವಾತಾವರಣದ ಇಂಗಾಲದ ಡೈಆಕ್ಸೈಡ್ ಅನ್ನು ಜೀವಜಾಲದ ಒಳಗೆ (food web) ಬಂಧಿಸುವುದರಿಂದ ಸಸ್ಯಾಹಾರಕ್ಕೆ ಇಂಗಾಲದ ಹೆಜ್ಜೆ ಗುರುತುಗಳಿಲ್ಲ ಎಂದು ನೀವು ಭಾವಿಸಬಹುದು. ಆದರೆ ಹಾಗೆ ಆಗುವುದಿಲ್ಲ. ಬಿತ್ತನೆಗೆ ನೀವು ಉಳುಮೆ ಮಾಡಬೇಕು, ನೀರು ಹಾಯಿಸಬೇಕು, ಕಟಾವು ಮಾಡಬೇಕು, ಒಕ್ಕಣೆ ಮಾಡಬೇಕು, ಸಾಗಿಸಬೇಕು, ಅಕ್ಕಿ, ನುಚ್ಚು, ಹಿಟ್ಟು ಮಾಡಬೇಕು. ಇದಕ್ಕಾಗಿ ಯಂತ್ರಗಳನ್ನು ಬಳಸಬೇಕು. ಈ ಯಂತ್ರಕ್ಕೆ ಡೀಸೆಲ್ ಸುಡಬೇಕು. ಪಳೆಯುಳಿಕೆ ಇಂಧನಗಳು ಹಸಿರುಮನೆ ಅನಿಲಗಳನ್ನು ಬಿಡುಗಡೆ ಮಾಡುತ್ತದೆ. ನಿಮ್ಮ ಭೂಮಿ ಕಾಯುತ್ತದೆ. ಅಂದರೆ ಶಾಖಾಹಾರಿಗಳ ದೇಣಿಗೆಯೂ ಇದಕ್ಕಿದೆ ಎಂದಾಯಿತು. ಉತ್ತಮ ಬೆಳೆಗಾಗಿ ರಸಗೊಬ್ಬರಗಳ ಬಳಕೆ. ಈ ರಸಗೊಬ್ಬರಗಳ ವಿಘಟನೆಯಿಂದ ಹೊರಬರುವ ನೈಟ್ರಸ್ ಆಕ್ಸೈಡ್ ಒಂದು ಉತ್ತಮ ಹೊದಿಕೆ ಎಂಬುದು ನಮಗೆ ಗೊತ್ತಿದೆ. ಈಗ ಯಾರು ಹಿತವರು ಎಂದು ನೋಡೋಣ ಬನ್ನಿ.
ಜಗತ್ತಿನ ಸರಿ ಸುಮಾರು 50% ಜನರ ಪ್ರಧಾನ ಆಹಾರ ಅಕ್ಕಿ. ಏಕೆಂದರೆ ಅಕ್ಕಿ ಬೇಗನೆ ಜೀರ್ಣವಾಗಿ ರಕ್ತಕ್ಕೆ ಸೇರಿ ಹೋಗುತ್ತದೆ. ಆದ್ದರಿಂದ ಅಕ್ಕಿಯ ಸಕ್ಕರೆಯ ಸೂಚ್ಯಂಕ (glycemic index) ಅಧಿಕ. ಒಂದು ಎಕರೆ ಬತ್ತ ಬೆಳೆಯಲು 13ft acre ನೀರು ಬೇಕು. ಅಂದರೆ ನೀವು ಬಳಸಿದ ನೀರು ಸ್ವಲ್ಪವೂ ಇಂಗದೇ ಆವಿಯಾಗದೇ ಹಾಗೇ ನಿಂತರೆ ಬತ್ತ ಕಟಾವಿಗೆ ಬರುವಾಗ ಬಳಸಿದ ನೀರು 13 ಅಡಿ ಎತ್ತರಕ್ಕೆ ನೀರು ನಿಲ್ಲುತ್ತದೆ. ಇಷ್ಟು ನೀರು ಹಾಯಿಸಲು ಎಷ್ಡು ಡೀಸೆಲ್ ಸುಡಬೇಕು ಊಹಿಸಿ. ಇನ್ನು ಸಿರಿ ಧಾನ್ಯಗಳಿಗೆ ಬೇಕಾಗುವುದು 3 ರಿಂದ 4 ಅಡಿ ನೀರು. ಎಷ್ಟು ಪಳೆಯುಳಿಕೆ ಇಂಧನ ಉಳಿಯಿತು ಲೆಕ್ಕ ಹಾಕಿ. ಬತ್ತದಲ್ಲಿ ಕಳೆ ನಿಯಂತ್ರಣದ ಉದ್ಧೇಶಕ್ಕಾಗಿ ನೀರನ್ನು ನಿಲ್ಲಿಸಿ ಭೂಮಿಯೊಳಗೆ ಆಮ್ಲಜನಕ ಇಳಿಯದ ಹಾಗೆ ಮಾಡುತ್ತಾರೆ. ಇದರಿಂದ ನಿರ್ವಾಯು (anaerobic) ವಾತಾವರಣದಲ್ಲಿ ಮಿಥೇನ್ ಬ್ಯಾಕ್ಟೀರಿಯಾಗಳು ಉತ್ಪತ್ತಿ ಮಾಡುವ ಮಿಥೇನ್ ಮತ್ತಷ್ಟು ವಾತಾವರಣ ಬಿಸಿ ಏರಿಕೆಗೆ ಕಾರಣವಾಗುತ್ತವೆ. ಆದರೆ ಸಿರಿ ಧಾನ್ಯಗಳು ಒಣ ಭೂಮಿಯಲ್ಲಿ ಬೆಳೆಯುವುದರಿಂದ ಮಿಥೇನ್ ಬಿಡುಗಡೆ ಕಡಿಮೆ. ಇನ್ನು ಬಳಸುವ ರಸಗೊಬ್ಬರಗಳು ಸಿರಿ ಧಾನ್ಯಗಳಿಗೆ ಕಡಿಮೆ. ಬತ್ತಕ್ಕೆ ಜಾಸ್ತಿ ರಸಗೊಬ್ಬರ ಕಡಿಮೆ ಬಳಸಿದಷ್ಟೂ ನೈಟ್ರಸ್ ಆಕ್ಸೈಡ್ ಬಿಡುಗಡೆ ಕಡಿಮೆ. ಅಂದರೆ ಬಿಸಿ ಕಡಿಮೆ. ಸಿರಿ ಧಾನ್ಯಗಳನ್ನು ಬಳಸಿದರೆ ಸಕ್ಕರೆಯ ಸೂಚ್ಯಂಕ ಕಡಿಮೆಯಾಗಿ ಮಧುಮೇಹ (diabetes) ಕಡಿಮೆ ಮಾತ್ರವಲ್ಲ ಜಾಗತಿಕ ತಾಪಮಾನ ಏರಿಕೆಯೂ ಕಡಿಮೆ.
ಇನ್ನೊಂದು ಖಾದ್ಯ ತೈಲ. ಉಳುಮೆ, ಬಿತ್ತನೆ, ರಸಗೊಬ್ಬರ, ಕೀಟನಾಶಕಗಳ ಸಿಂಪಡಣೆ, ಕಟಾವು, ಒಕ್ಕಣೆ, ಸಾಣೆ, ತೈಲ ಸಂಸ್ಕರಣೆ, ಖಂಡಾಂತರ ಸಾಗಣೆ ಎಲ್ಲದಕ್ಕೂ ಡೀಸೆಲ್ ಸುಡಬೇಕು. ಅಂದರೆ ಮತ್ತೆ ತಾಪಮಾನ ಏರಿಕೆ. ಎಣ್ಣೆ ತಾಳೆ ಇದೆಯಲ್ಲ ಅದು ಒಂದು ಅತ್ಯಧಿಕ ಎಣ್ಣೆ ಇಳುವರಿಯ ಬೆಳೆ. ಅಂದರೆ ಸೂರ್ಯಕಾಂತಿಯ 4 ಪಟ್ಟು. ಆದರೆ ಎಣ್ಣೆ ತಾಳೆಯನ್ನು ಬೆಳೆಯಲು ಇಂಡೋನೇಷ್ಯಾ ಮಲೇಷ್ಯಾಗಳಲ್ಲಿ ನಿತ್ಯ ಹರಿದ್ವರ್ಣದ ಕಾಡುಗಳನ್ನು ಕಡಿಯಲಾಗುತ್ತದೆ. ಇದನ್ನು ಭೂ ಬಳಕೆ ಪರಿವರ್ತನೆ (Land use change) ಎನ್ನುತ್ತೇವೆ. ಇದು ಕಾಡು ನಾಶದಿಂದ ಜಾಗತಿಕ ತಾಪಮಾನ ಹೆಚ್ಚುವಂತೆ ಮಾಡುತ್ತದೆ. ಆದ್ದರಿಂದ ಅಧಿಕ ಇಳುವರಿ ನೀಡಿದರೂ ತಾಳೆ ಎಣ್ಣೆಯ ಇಂಗಾಲದ ಹೆಜ್ಜೆ ಗುರುತು ದೊಡ್ಡವು. ಭೂ ಬಳಕೆ ಪರಿವರ್ತನೆಯಲ್ಲಿ ಕನಿಷ್ಠ ಎಂದರೆ ಸಾಸಿವೆ. ಒಂದು ಕಾಲದಲ್ಲಿ ಬ್ರೆಜಿಲ್ ನಲ್ಲಿ ನಿತ್ಯ ಹರಿದ್ವರ್ಣದ ಕಾಡುಗಳನ್ನು ಕಡಿದು ಸೋಯಾಬೀನ್ ಬೆಳೆದರು. ಇದರ ಎದುರು ಅಮೇರಿಕಾದ ಸೋಯಾ ಸೋತಿತು. ಆಗ ಜಾಗತಿಕ ತಾಪಮಾನ ಏರಿಕೆಯ ಬೊಬ್ಬೆಯ ಬಗ್ಗೆ ಓದಿರಬಹುದು. ನಿಜವಾಗಿಯೂ ಅದು ಅಮೇರಿಕಾದ ರೈತರ ಹಿತಾಸಕ್ತಿ ಕಾಪಾಡಲು ಮಾಧ್ಯಮಗಳು ಎಬ್ಬಿಸಿದ ಹುಯಿಲು. ಹೀಗೆ ಮಿತವಾದ ಖಾದ್ಯ ತೈಲಗಳ ಬಳಕೆ ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸುವ ತಂತ್ರವೂ ಹೌದು.
ಇನ್ನು ಮಾಂಸಾಹಾರಕ್ಕೆ ಬರೋಣ. ಇವು ಉಸಿರಾಡಿದರೂ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತವೆ. ಇವುಗಳಲ್ಲಿ ಹೆಚ್ಚಿನವು ಬಿಸಿ ರಕ್ತ ಪ್ರಾಣಿಗಳು (Homoiothermus). ತಮ್ಮ ದೇಹ ಬೆಚ್ಚಗಿಡಲು ಅಪಾರ ಪ್ರಮಾಣದ ಶಕ್ತಿ ವ್ಯಯಿಸುತ್ತವೆ. ಆದ್ದರಿಂದ ಮಾಂಸಾಹಾರಿಗಳ ಇಂಗಾಲದ ಹೆಜ್ಜೆ ಗುರುತು ಭಾರ. ಇಲ್ಲಿ ಯಾರು ಹಿತವರು ನಿನಗೆ ಎಂದು ಕೇಳುತ್ತೀರಾ? ನಾನು ಪ್ರತಿ ಕಿಲೋಗ್ರಾಂಗೆ ಸರಿ ಸುಮಾರು ಎಷ್ಟು ಕಿಲೋಗ್ರಾಂ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ ಎಂದು ಹೇಳುತ್ತೇನೆ. ಅತಿ ಕನಿಷ್ಟ ಎಂದರೆ ಮೀನು ಇದು ಪ್ರತಿ ಕಿಲೋಗ್ರಾಂ ಗೆ ಸುಮಾರು 3.6 kg. ಇನ್ನು ಸಾಕಿದ ಮೀನು ಅದಕ್ಕೆ ನೀರು ಗಾಳಿ ಹಾಯಿಸಬೇಕಲ್ಲ ಆದ್ದರಿಂದ 6.7 kg. ಕೋಳಿ 6 ರಿಂದ 9.87. ಹಂದಿ 9 ರಿಂದ 12. ಅದೇ ನೀವು ದನದ ಮಾಂಸ ಸೇವಿಸುತ್ತೀರಾದರೆ 60 ರಿಂದ 90 kg. ಇದಕ್ಕೆ ಪ್ರಮುಖ ಕಾರಣವೆಂದರೆ ಹಸುಗಳು ಮೆಲುಕಾಡುವ ಜೀವಿಗಳು. ಅವುಗಳ ಕರುಳಿನಲ್ಲಿರುವ ಬ್ಯಾಕ್ಟೀರಿಯಾದಿಂದ ಬಿಡುಗಡೆಯಾಗುವ ಮಿಥೇನ್ ಇಂಗಾಲದ ಡೈಆಕ್ಸೈಡ್ ಗಿಂತ ದಪ್ಪನೆಯ ಹೊದಿಕೆ.
ಇನ್ನು ನೀವು ಕುಡಿಯುವ ಕೋಕ್ ಬಿಯರ್ ಇತ್ಯಾದಿ ಇಂಗಾಲದ ಡೈಆಕ್ಸೈಡ್ ಹೊಂದಿರುವ ಪಾನೀಯಗಳು (carbonated drinks) ಮುಚ್ಚಳ ತೆಗೆದ ತಕ್ಷಣ ನೇರವಾಗಿ ವಾತಾವರಣವನ್ನು ಬಿಸಿಮಾಡುತ್ತವೆ. Chilled drinks ನಿಮ್ಮನ್ನು chill ಆಗಿಸಬಹುದು ಆದರೆ ಜಗತ್ತನ್ನಲ್ಲ.
ಆದ್ದರಿಂದ ನಿಮ್ಮ ಹೊಟ್ಟೆ ಸೇರುವ ಪ್ರತಿಯೊಂದು ಆಹಾರದ ತುಣುಕೂ ತನ್ನದೇ ಹೆಜ್ಜೆ ಗುರುತನ್ನೂ ಮೂಡಿಸುತ್ತಾ ಸಾಗುತ್ತದೆ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************