ಸ್ಪೂರ್ತಿಯ ಮಾತುಗಳು : ಸಂಚಿಕೆ - 238
Tuesday, October 27, 2026
Edit
ಸ್ಪೂರ್ತಿಯ ಮಾತುಗಳು : ಸಂಚಿಕೆ - 238
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 94486 26093
“ಮಕ್ಕಳೇ ರಾಷ್ಟ್ರದ ಭಾವಿ ಸಂಪನ್ಮೂಲ” ಎಂಬ ಮಾತಿಗೆ ಬಲವಾದ ಸಮರ್ಥನೆ ನೀಡಿದ ಅದ್ಭುತವಾದ ಕಾರ್ಯಕ್ರಮ ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೇಳನ. ಈ ಸಮ್ಮೇಳನದ ಒಂದು ಭಾಗವಾಗಲು ದೊರೆತ ಅವಕಾಶದಿಂದಾಗಿ ಮಕ್ಕಳ ಅಪ್ರತಿಮ ಪ್ರತಿಭೆಯನ್ನು ಬಹಳ ಹತ್ತಿರದಿಂದ ಗಮನಿಸುವ ಸೌಭಾಗ್ಯವನ್ನು ಭಗವಂತನೇ ನನಗೆ ಕರುಣಿಸಿದನು.
ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೇಳದ ನಾಲ್ಕು ಬಲವಾದ ಸ್ತಂಭಗಳೆಂದರೆ ಪ್ರಮುಖವಾಗಿ ಒಡಿಯೂರು ಸಂಸ್ತಾನದ ಪೀಠಾಧಿಪತಿ ಪರಮಪೂಜ್ಯ ಶ್ರೀ ಶ್ರೀ ಗುರು ದೇವಾನಂದ ಸ್ವಾಮೀಜಿಗಳವರು, ಪೂಜ್ಯ ಸಾದ್ವಿ ಶ್ರೀ ಶ್ರೀ ಮಾತಾನಂದಮಯಿಯವರು, ಶ್ರೀ ಗುರುದೇವ ವಿದ್ಯಾ ಪೀಠದ ಸಂಚಾಲಕರಾದ ಮಾನ್ಯ ಸೇರಾಜೆ ಗಣಪತಿ ಭಟ್ ಮತ್ತು ಶಾಲಾ ಮುಖ್ಯ ಶಿಕ್ಷಕಿ ಮಾತೃಹೃದಯಿ ರೇಣುಕಾ ಎಸ್ ರೈ. ಇವರೊಂದಿಗೆ ವಿದ್ಯಾ ಪೀಠದ ಶಿಕ್ಷಕ ಸಮೂಹ ಮತ್ತು ಬಾಲಕೇಂದ್ರಗಳ ಮಾತಾಜಿಗಳ ಕೊಡುಗೆಗಳನ್ನು ಮರೆಯಲು ಸಾಧ್ಯವಿಲ್ಲ. ಶ್ರೀಯುತ ತಾರಾನಾಥ ಕೈರಂಗಳ , ಸಹ ಶಿಕ್ಷಕರಾದ ಶೇಖರ ಶೆಟ್ಟಿ ಬಾಯಾರು, ಶಿಕ್ಷಕರಾದ ಶಶಿಕಾಂತ ಚೆಂಬರ್ಪು ನಮ್ಮೊಂದಿಗೆ ಬೇರುಗಳಾಗಿ ಯಶಸ್ಸಿಗೆ ಭೂಮಿಕೆಯಾದರು. ಒಡಿಯೂರು ಶಾಲಾ ಮಕ್ಕಳು ಯಶಸ್ಸಿನ ಹೃದಯ ಭಾಗವಾದರು.
ಒಡಿಯೂರು ಸಾಹಿತ್ಯ ಸಮ್ಮೇಳನ ಜರಗಿದ್ದು ದಿನಾಂಕ 11.10.2026ರ ರಂದು, ಎಂದರೆ ಶರನ್ನವರಾತ್ರಿಯ ಪ್ರತಿಪದೆಯ ಶುಭದಿನ. ಏಳು ದಿನ ಪೂರ್ವದಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಕಥೆ, ಕವನ, ಚಿತ್ರ, ಪ್ರಬಂಧ ಬರವಣಿಗೆ, ಭಾವಗೀತಗಾಯನ, ಭಾಷಣ ಸ್ಪರ್ಧೆಗಳು ನಡೆದುವು. ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳ ದೊಡ್ಡ ಸಂಖ್ಯೆಯೇ ಸಮ್ಮೇಳನದ ಯಶಸ್ಸಿನ ಮೊದಲ ಮೆಟ್ಟಿಲು.. ಅದರ ನಂತರವೇ ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೇಳನದ ಗಾಡಿ ತನ್ನ ನಡಿಗೆಗೆ ಓಟದ ವೇಗ ನೀಡಿತೆಂದರೆ ಅಸಮಂಜಸವಾಗದು. ಸಮ್ಮೇಳನದಲ್ಲಿ ಹಮ್ಮಿಕೊಳ್ಳಬೇಕಾದ ವಿವಿಧ ಸಾಹಿತ್ಯ ಚಟುವಟಿಕೆಗಳನ್ನು ಅಂತಿಮಗೊಳಿಸಲಾಯಿತು. ಸಾಹಿತ್ಯ ಸಮ್ಮೇಳನವೂ ಯಶಸ್ವಿಯಾಗಿ ವೈಭವದಿಂದ ಮುಗಿದೇ ಹೋಯಿತು.
ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೇಳನ - ಆಯ್ದ ಅನಿಸಿಕೆಗಳು :
◾ಕುಮಾರಿ ವೈಷ್ಣವಿ ಕಡ್ಯ 10ನೇ ಶ್ರೀರಾಮ ಆಂ. ಮಾ ಶಾಲೆ ಕಲ್ಲಡ್ಕ : ಮಕ್ಕಳ ಸಾಹಿತ್ಯ ಸಮ್ಮೇಳನವು ಅತ್ಯಂತ ಅಚ್ಚುಕಟ್ಟಾಗಿ ನಡೆಯಿತು. ಸಮ್ಮೇಳನದಲ್ಲಿ ಕವನ ಗೋಷ್ಠಿ, ಕಥಾಗೋಷ್ಠಿ ಗಮಕ ವಾಚನದೊಂದಿಗೆ ಸಂವಾದ ಕಾರ್ಯಕ್ರಮ, ಗಾನ-ನೃತ್ಯ-ಚಿತ್ರದಂತಹ ವಿನೂತನ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿಸಲು ಉತ್ತಮ ವೇದಿಕೆ ನೀಡಲಾಯಿತು. ಬೆಳಗ್ಗಿನಿಂದ ಸಂಜೆಯವರೆಗೂ ಸಮ್ಮೇಳನ ಅದ್ಧೂರಿಯಾಗಿ ನಡೆಯಿತು. ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಹಲವಾರು ಹೊಸ ಸ್ನೇಹಿತರನ್ನು ಪಡೆಯಲು ಸಾಧ್ಯವಾಯಿತು. ಇಂತಹದ್ದೊಂದು ಸ್ಮರಣೀಯ ನೆನಪುಗಳಿಗೆ ಕಾರಣೀಭೂತರಾದ ಎಲ್ಲರಿಗೂ ನನ್ನ ಮನದಾಳದ ವಂದನೆಗಳು.
◾ಕು. ಚಿರಸ್ವಿ 8ನೇ ತರಗತಿ ಶ್ರೀ ಗುರುದೇವ ವಿದ್ಯಾಪೀಠ : ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ರಜತ ಸಂಭ್ರಮದ ಸಲುವಾಗಿ ದಿನಾಂಕ 11.10.2026ರಂದು ಒಡಿಯೂರಿನಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ನನ್ನ ಮನದಾಳದ ಮಾತುಗಳು - ಮಕ್ಕಳಲ್ಲಿ ಅಡಗಿರುವ ವಿವಿಧ ಪ್ರತಿಭೆಗಳನ್ನು ವ್ಯಕ್ತಪಡಿಸಲು ಉತ್ತಮ ವೇದಿಕೆಯಾಗಿತ್ತು. ನಮ್ಮ ಶಾಲೆಯ 9ನೇ ತರಗತಿಯ ಪ್ರತಿಭಾನ್ವಿತೆ, ನನ್ನ ಪ್ರೀತಿಯ ಸಾನ್ವಿ ಅಕ್ಕ ಈ ಸಮ್ಮೇಳನದ ಅಧ್ಯಕ್ಷರಾಗಿದ್ದದ್ದು ನನಗೆ ಸಂತಸದ ವಿಷಯ. ವಿವಿಧ ಶಾಲೆಗಳಿಂದ ಆಗಮಿಸಿದ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಂಡು ತುಂಬಾ ಸಂತೋಷವಾಯಿತು. ಅದೇ ರೀತಿ ನಮ್ಮ ಶ್ರೀ ಗುರುದೇವ ವಿದ್ಯಾಪೀಠದ ಎಲ್ಲಾ ವಿದ್ಯಾರ್ಥಿಗಳು ಸಂಪೂರ್ಣ ಸಮರ್ಪಣಾ ಭಾವದಿಂದ ಭಾಗವಹಿಸಿದ್ದರು. ಕವಿತಾ ಗೋಷ್ಠಿ, ಸಂವಾದ, ಗಾನ ನೃತ್ಯ ಚಿತ್ರ, ಕಥಾ ಗೋಷ್ಠಿ, ಗಮಕವಾಚನ ವ್ಯಾಖ್ಯಾನ ಕಾರ್ಯಕ್ರಮಗಳು ಚೆನ್ನಾಗಿ ಮೂಡಿ ಬಂದವು. ಸಂವಾದ ಕಾರ್ಯಕ್ರಮದಲ್ಲಿ ನನಗೆ ಭಾಗವಹಿಸಲು ಅವಕಾಶ ದೊರೆಯಿತು. ಇದಕ್ಕಾಗಿ ಅವಕಾಶ ಮಾಡಿಕೊಟ್ಟ ನನ್ನ ಎಲ್ಲಾ ಶಿಕ್ಷಕ ವೃಂದದವರಿಗೆ ನಾನು ಶಿರಬಾಗುತ್ತೇನೆ. ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ನನ್ನನ್ನು ಪ್ರೇರೇಪಿಸಿ ಉತ್ತಮ ಸಂವಾದ ಕಾರಳು ಎನ್ನುವ ಹೆಗ್ಗಳಿಕೆಗೆ ಪಾತ್ರಳಾಗುವಂತೆ ಮಾಡಿದ ಶ್ರೀ ರಮೇಶ ಎಂ. ಬಾಯಾರು ಸರ್ ಇವರಿಗೆ ನಾನು ಎಂದೆಂದಿಗೂ ಚಿರಋಣಿಯಾಗಿರುತ್ತೇನೆ. ಬಾಯಾರರದು ಮೇರು ವ್ಯಕ್ತಿತ್ವ. ತುಂಬಾ ಶಿಸ್ತಿನಿಂದ ತಾಳ್ಮೆಯಿಂದ, ಪ್ರೀತಿಯಿಂದ ಮಕ್ಕಳನ್ನು ಸಂವಾದಕ್ಕೆ ಸಜ್ಜುಗೊಳಿಸಿದ ರೀತಿ ನಿಜಕ್ಕೂ ಶ್ಲಾಘನೀಯ.
ಕರ್ನಾಟಕ ರಾಜ್ಯ ಸರಕಾರವು ರಮೇಶ ಎಂ. ಬಾಯಾರರಿಗೆ ನೀಡಿದ ರಾಜ್ಯ ವಿಶೇಷ ಶಿಕ್ಷಕ ಮತ್ತು ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗಳು ಅರ್ಥಪೂರ್ಣವಾಗಿವೆ ಎಂಬುದನ್ನು ನಾನು ಗಮನಿಸಿದೆ. ಇನ್ನುಳಿದಂತೆ ಇತರ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲು ಕಾರಣಕರ್ತರಾದ ನಮ್ಮ ಶಾಲಾ ಶಿಕ್ಷಕರಾದ ಶ್ರೀ ಶೇಖರ ಶೆಟ್ಟಿ ಬಾಯಾರು ಹಾಗೂ ಎಲ್ಲಾ ಶಿಕ್ಷಕ ವೃಂದದವರಿಗೂ ನನ್ನ ನಮನಗಳು. ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮತ್ತು ಮಾತೆ ಶ್ರೀ ಶ್ರೀ ಮಾತಾನಂದಮಯಿಯವರ ಆಶೀರ್ವಾದದಿಂದ, ನಮ್ಮ ಶಾಲಾ ಸಂಚಾಲಕರಾದ ಸೇರಾಜೆ ಗಣಪತಿ ಭಟ್ ಅವರ ಮಾರ್ಗದರ್ಶನ, ನಮ್ಮ ಶಾಲಾ ಮುಖ್ಯೋಪಾಧ್ಯಾಯಿನಿ ರೇಣುಕಾ ಎಸ್ ರೈ ಹಾಗೂ ಎಲ್ಲಾ ಶಿಕ್ಷಕ ಶಿಕ್ಷಕಿಯರ ಸಂಪೂರ್ಣ ಪರಿಶ್ರಮ ಮತ್ತು ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ಶ್ರೀ ರಮೇಶ ಎಂ ಬಾಯಾರು ಹಾಗೂ ಮಕ್ಕಳ ಜಗಲಿಯ ಸ್ಥಾಪಕ ಶ್ರೀ ತಾರಾನಾಥ ಕೈರಂಗಳ, ಶಿಕ್ಷಕರಾದ ಶ್ರೀ ಶಶಿಕಾಂತ ಚೆಂಬರ್ಪು ಇವರ ಸಹಕಾರದಿಂದ ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿದೆ.
◾ಶ್ರೀಮತಿ ರೇಣುಕಾ ಎಸ್ ರೈ ಮುಖ್ಯೋಪಾಧ್ಯಾಯಿನಿ ಶ್ರೀ ಗುರುದೇವ ವಿದ್ಯಾ ಪೀಠ ಒಡಿಯೂರು : ಮಕ್ಕಳ ತಾಲೂಕು ಮಟ್ಟದ ಸ್ಪರ್ಧೆ ಹಾಗೂ ಸಾಹಿತ್ಯ ಸಮ್ಮೇಳನ ಎಲ್ಲರ ಮಾರ್ಗದರ್ಶನ ಮತ್ತು ಆಶೀರ್ವಾದದಿಂದ ಬಹಳ ಯಶಸ್ವಿಯಾಗಿ ನೆರವೇರಿದೆ. ಸಭಾ ಕಾರ್ಯಕ್ರಮದಲ್ಲಿ ಅನೇಕರ ಉಪಸ್ಥಿತಿ ಕಾರ್ಯಕ್ರಮಕ್ಕೆ ಇನ್ನಷ್ಟು ಶೋಭೆ ತಂದಿದೆ. ಕಾರ್ಯಕ್ರಮದಲ್ಲಿ ಹಿರಿಯರ ಕಿರಿಯರ ಸಜ್ಜನಿಕೆ ಹೃದಯವಂತಿಕೆ ನಿಷ್ಕಲ್ಮಶ ಭಾವವನ್ನು ಕಂಡು 'ಎಂತರೋ ಮಹಾನುಭಾವುಲು' ಎಂಬ ತ್ಯಾಗರಾಜರ ಕೀರ್ತನೆಯ ಸಾಲುಗಳು ನೆನಪಾದವು. ಶಾಲೆಯಲ್ಲಿ, ಸಮಾಜದಲ್ಲಿ ಇಂತಹ ಸಜ್ಜನರೇ ಇರಬೇಕು. ಮಕ್ಕಳಿಗೆ ಅನುಭವಿಗಳ ಒಡನಾಟ ಬೇಕು. ಇನ್ನು ಮುಂದೆ ನಡೆಯಲಿರುವ ನಮ್ಮ ಶಾಲೆಯ ರಜತ ಸಂಭ್ರಮ ಕಾರ್ಯಕ್ರಮದಲ್ಲಿಯೂ ಎಲ್ಲರೂ ಬಂದು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡಬೇಕೆಂದು ವಿನಮ್ರವಾಗಿ ವಿನಂತಿಸುತ್ತಿದ್ದೇನೆ.
◾ಶ್ರೀ ಮಂದರ ಜೈನ್ ಅಳಕೆಮಜಲು : ಶ್ರೀ ಗುರುದೇವ ವಿದ್ಯಾಪೀಠದ ರಜತ ಸಂಭ್ರಮದ ಸಲುವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಸಿ ತಾಲೂಕು ಸಾಹಿತ್ಯ ಸಮ್ಮೇಳನದಂದು ಬಹಳ ಉತ್ತಮ ಬಹುಮಾನ, ಗಾಜು ಅಳವಡಿಸಿದ ಸ್ಪರ್ಧಾಳುವಿನ ಹೆಸರಿರುವ ಪ್ರಮಾಣ ಪತ್ರ, ಶಾಲು ಹೊದೆಸಿ ಪ್ರಸಾದ ನೀಡಿದ ಒಡಿಯೂರು ಶ್ರೀಗಳಿಗೆ ಸಾಷ್ಟಾಂಗ ವಂದನೆಗಳು. ಅನೇಕ ಮಕ್ಕಳನ್ನು ಸ್ವಂತ ಖರ್ಚು ಮಾಡಿ ಒಡಿಯೂರು ಕಾರ್ಯಮದಲ್ಲಿ ತೊಡಗಿಸಿಕೊಂಡ ಹಿರಿಯರಾದ ಶ್ರೀ ರಮೇಶ ಎಂ. ಬಾಯಾರರಿಗೆ ಧನ್ಯವಾದಗಳು. ಒಡಿಯೂರು ಶಾಲಾ ಮಕ್ಕಳಿಗೆ ಶಾಲಾ ಶಿಕ್ಷಕರಿಗೆ, ಸಿಬ್ಬಂದಿಗಳಿಗೆ ಕಾರ್ಯಕ್ರಮ ಸಂಘಟಕರಿಗೆ ಆಡಳಿತ ಮಂಡಳಿಗೆ ಹೃತ್ಪೂರ್ವಕ ಧನ್ಯವಾದಗಳು.
◾ಧನ್ವಿ ಸಿ.ಎಚ್. ಜೇಸೀ ಆಂ ಮಾ, ಶಾಲೆ ವಿಟ್ಲ : ಒಡಿಯೂರು ಶ್ರೀ ಗುರುದೇವ ವಿದ್ಯಾ ಪೀಠದ ರಜತ ಸಂಭ್ರಮದ ಸಲುವಾಗಿ ನಡೆದ ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೇಳನದ ಅದ್ಭುತ ಅನುಭವವನ್ನು ಹಂಚಿಕೊಳ್ಳುವುದೇ ಆನಂದ. ಮರೆಯಲಾಗದ ಸವಿ ನೆನಪುಗಳು. ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ, ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಬೆಳೆಸುವ ಒಂದು ಸುಂದರ ವೇದಿಕೆಯೇ ಈ ಸಮ್ಮೇಳನದ ಮುಖ್ಯ ಪ್ರತಿಫಲ. ಸಮ್ಮೇಳನದ ದಿನ ಒಡಿಯೂರಿನ ಪರಿಸರದಲ್ಲಿ ಹಬ್ಬದ ಸಂಭ್ರಮ. ಎಲ್ಲೆಡೆ ಮಕ್ಕಳ ಉತ್ಸಾಹ, ಅಭಿಮಾನಿಗಳ ಪ್ರೋತ್ಸಾಹ ಹಾಗೂ ಸಾಹಿತ್ಯದ ಕಂಪು ತುಂಬಿ ತುಳುಕುತ್ತಿತ್ತು. ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳ ಒಡನಾಟ ಮನಸ್ಸಿಗೆ ತುಂಬಾ ಸಂತೋಷ ನೀಡಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಸಾಹಿತ್ಯದ ಮಹತ್ವವನ್ನು ಸಾರುವ ವಾತಾವರಣದಲ್ಲಿ ನಾವು ವಿಹರಿಸಿದೆವು.
ಸಹಪಾಠಿಗಳ ಪ್ರತಿಭೆ, ಅವರ ಮಾತಿನ ಚಾತುರ್ಯ, ಲವಲವಿಕೆ ಮತ್ತು ಕಲ್ಪನಾಶಕ್ತಿಯನ್ನು ಕಂಡು ನನಗೆ ಬಹಳ ಹೆಮ್ಮೆಯಾಯಿತು. ಇಂತಹ ವೇದಿಕೆಗಳು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತಂದು, ಅವರಲ್ಲಿ ಹೊಸ ಕನಸುಗಳನ್ನು ಮೂಡಿಸುತ್ತವೆ ಎಂಬುದನ್ನು ನಾನು ಅರಿತುಕೊಂಡೆ. ಈ ಸಮ್ಮೇಳನದಲ್ಲಿ ಭಾಗವಹಿಸಿದುದರಿಂದ ಅನೇಕ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶ ದೊರೆಯಿತು. ಹಿರಿಯರ ಮಾರ್ಗದರ್ಶನ, ಶಿಕ್ಷಕರ ಪ್ರೋತ್ಸಾಹ ಮತ್ತು ಸ್ನೇಹಿತರ ಒಡನಾಟ ನನ್ನ ಸಂತೋಷವನ್ನು ಇನ್ನಷ್ಟು ಹೆಚ್ಚಿಸಿತು. ಕನ್ನಡ ಸಾಹಿತ್ಯದ ಶ್ರೀಮಂತಿಕೆ ಹಾಗೂ ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯ ಅರಿವು ನನ್ನಲ್ಲಿ ಮೂಡಿತು. ಒಡಿಯೂರಿನಲ್ಲಿ ಕಳೆದ ಆ ಸುಂದರ ಕ್ಷಣಗಳು ನನ್ನ ಮನಸ್ಸಿನಲ್ಲಿ ಸದಾ ಹಸಿರಾಗಿರುತ್ತವೆ. ಈ ಸಮ್ಮೇಳನವು ಕೇವಲ ಒಂದು ಕಾರ್ಯಕ್ರಮವಾಗಿರದೆ, ನನ್ನ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ನೀಡಿದ ಜ್ಞಾನದ ಹಬ್ಬವಾಗಿತ್ತು. ಒಡಿಯೂರಿನಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನವು ನನ್ನ ಪಾಲಿಗೆ ಜ್ಞಾನ, ಸಂತೋಷ, ಸ್ನೇಹ ಮತ್ತು ಸ್ಫೂರ್ತಿಯ ಸಂಗಮವಾಗಿತ್ತು. ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೇಳನದ ಸವಿ ನೆನಪುಗಳು ಸರ್ವರ ಹೃದಯದಲ್ಲಿ ಸದಾ ಉಳಿಯಲಿ; ಕನ್ನಡ ಸಾಹಿತ್ಯದ ಮೇಲಿನ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚಾಗಲಿ. ಈ ಅಮೂಲ್ಯ ಅವಕಾಶವನ್ನು ಕಲ್ಪಿಸಿದ ಆಯೋಜಕರಿಗೆ, ಮಾರ್ಗದರ್ಶನ ನೀಡಿದ ಗುರುಹಿರಿಯರಿಗೆ ಹಾಗೂ ಪ್ರೋತ್ಸಾಹಿಸಿದ ಶಿಕ್ಷಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
◾ಕವಿತಾ ಚಿಪ್ಪಾರು, ಶಿಕ್ಷಕಿ ಶ್ರೀ ಗುರುದೇವ ವಿದ್ಯಾಪೀಠ : ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಹಾಗೂ ಶ್ರೀ ಶ್ರೀ ಸಾದ್ವಿ ಮಾತಾನಂದಮಯಿಯವರ ಕೃಪಾಶೀರ್ವಾದೊಂದಿಗೆ ನಮ್ಮ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ರಜತ ಸಂಭ್ರಮದ ಪ್ರಯುಕ್ತ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನವು ಮಕ್ಕಳಲ್ಲಿ ಅಡಗಿರುವ ಸಾಹಿತ್ಯಾಸಕ್ತಿಗೆ ಹೊಸ ಬೆಳಕು ನೀಡಿದ ಹಾಗೂ ಮಕ್ಕಳ ಪ್ರತಿಭೆ ಅನಾವರಣಗೊಳಿಸಿದ ಸುಂದರ ವೇದಿಕೆಯಾಯಿತು. ಹೊಸ ಆಲೋಚನೆ, ಸೃಜನಶೀಲತೆ, ಬರವಣಿಗೆಯ ಆಸಕ್ತಿಗೆ ಪೇರಣೆ ನೀಡಿದ ಈ ಸಾರ್ಥಕ ಕಾರ್ಯಕ್ರಮ ಎಲ್ಲರ ನೆನಪಲ್ಲಿ ಅವಿಸ್ಮರಣೀಯ ಸಿಹಿ ನೆನಪಾಗಿ ಸದಾ ಹಸಿರಾಗಿರಲಿ ಎಂಬುದು ನನ್ನ ಮನದ ಮಾತು. ಒಂದು ಯಶಸ್ವಿ ಮಕ್ಕಳ ಸಾಹಿತ್ಯ ಸಮ್ಮೇಳನ ಭಾಗವಹಿಸಿದವರ ಕಣ್ಮನಗಳನ್ನು ಭಾವಲೋಕದಲ್ಲಿ ತೇಲಿಸಿತು. ಇಂತಹ ಸಮ್ಮೇಳನಗಳು ಅಲ್ಲಲ್ಲಿ ಆಗಾಗ ಜರಗುತ್ತಿರಲಿ ಎಂಬುದೇ ನಮ್ಮ ಹಾರೈಕೆ
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
'ಸ್ಕಂದ' ಕುಳ ಗ್ರಾಮ, ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 94486 26093
****************************************