-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 92, ಲೇಖಕರು : ಚಿನ್ನಪ್ಪ ಕೆ ಜಾಲ್ಸೂರು, ದೈಹಿಕ ಶಿಕ್ಷಣ ಶಿಕ್ಷಕರು

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 92, ಲೇಖಕರು : ಚಿನ್ನಪ್ಪ ಕೆ ಜಾಲ್ಸೂರು, ದೈಹಿಕ ಶಿಕ್ಷಣ ಶಿಕ್ಷಕರು

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 92
ಲೇಖಕರು : ಚಿನ್ನಪ್ಪ ಕೆ ಜಾಲ್ಸೂರು
ದೈಹಿಕ ಶಿಕ್ಷಣ ಶಿಕ್ಷಕರು
ಸರಕಾರಿ ಪ್ರೌಢಶಾಲೆ ವಗ್ಗ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

           

ಸುಮಾರು ಹತ್ತು ವರುಷಗಳ ಹಿಂದಿನ ಘಟನೆ. ನಾನಿದ್ದ ಶಾಲೆಯಲ್ಲಿ ವಿಜ್ಞಾನ ನಾಟಕವೊಂದನ್ನು ಸಿದ್ದಪಡಿಸಬೇಕಾಗಿತ್ತು. ನಿರ್ದೇಶನ ಮಾಡಿ ರಂಗದ ಮೇಲೆ ತರಬೇಕಾದರೆ ತುಂಬಾ ಸುಲಭವಾಗಿರಲಿಲ್ಲ. ಪಾತ್ರಕ್ಕೆ ಒಪ್ಪುವ ವಿದ್ಯಾರ್ಥಿ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಆಡಿಶನ್ ಎಂದು ಕರೆಯುತ್ತೇವೆ. ನನ್ನ ನಾಟಕದ ಈ ಆಡಿಶನ್ ಗೆ ಹೆಚ್ಚಾಗಿ ಒಂಬತ್ತನೆಯ ತರಗತಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಾಟಕಕ್ಕೆ ಬೇಕಾಗಿರುವುದು ಕೇವಲ ಎಂಟು ಜನ. ಇಲಾಖೆಯಿಂದ ನಡೆಸಲ್ಪಡುವ ವಿಜ್ಞಾನ ನಾಟಕ ಸ್ಪರ್ಧೆಗೆ ಅವರದೇ ಆದ ನಿಯಮಗಳು ಇದೆ. ಹಾಗಾಗಿ ಶಾಲೆಯ ಆಯ್ಕೆ ಸಮಿತಿಯು ಒಟ್ಟು ಎಂಟು ಜನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ನಾಟಕ ಮಾಡಿಸಿ ಅಂತ ಆದೇಶ ಕೊಟ್ಟರು. 

ಅಭಿನಯದ ಬಗ್ಗೆ ಏನೂ ಗೊತ್ತಿಲ್ಲದ ಆ ಪುಟ್ಟ ಕಲಾವಿದರಿಗೆ ನಾಟಕ ಕಲಿಸುವುದು, ನಾಟಕ ಗೆಲ್ಲುವುದು ಅಸಾಧ್ಯವಾದ ಮಾತು ಎಂದು ನನಗನಿಸಿತು. ಆದರೆ ನಾಟಕ ಮಾಡದೆ ಇರುವ ಹಾಗೂ ಇರಲಿಲ್ಲ. ಏನಾದರೂ ಆಗಲಿ ಈ ಹೊಸ ಕಲಾವಿದರನ್ನು ಪಳಗಿಸಿ ನಾಟಕ ಮಾಡುವುದು ಸುಲಭದ ಮಾತಲ್ಲ ಎಂದು ಮುಖ್ಯ ಶಿಕ್ಷಕರ ಗಮನಕ್ಕೆ ತಂದೆ. ಅವರು "ಏನೇ ಇರಲಿ ನಾಟಕ ಮಾಡಿ" ಎಂದು ಧೈರ್ಯ ತುಂಬಿದರು.

ಒಟ್ಟಿನಲ್ಲಿ ಹೊಸ ನಟರಿಗೆ ಹೊಸ ನಾಟಕವೊಂದನ್ನು ಸಿದ್ದಪಡಿಸಿದೆ. ನಾಟಕ ಪ್ರಾಕ್ಟೀಸ್ ಶುರು ಮಾಡಿದಾಗ ಅನೇಕ ಸಲ ಪಾತ್ರಗಳ ಬದಲಾವಣೆ ಮಾಡಿದರೂ ನನ್ನ ನಿರೀಕ್ಷೆಗೆ ತಕ್ಕಂತೆ ನಾಟಕ ಸಿದ್ಧವಾಗಲಿಲ್ಲ. ಆದರೆ ಪ್ರತಿ ರಿಹರ್ಸಲ್ ನಲ್ಲಿ ನನ್ನ ನಿರ್ದೇಶನವನ್ನು ನೋಡುತ್ತಾ ನಾನು ಕೊಟ್ಟ ಡೈಲಾಗ್‌ನ್ನು ಡೆಲಿವರಿ ಮಾಡುತ್ತಾ ಪ್ರತಿ ದಿನ ಉತ್ತಮ ಪ್ರದರ್ಶನ ನೀಡುತ್ತಾ ಇದ್ದ ಒಬ್ಬ ಬಾಲಕಿಯ ಆಸಕ್ತಿ ನನ್ನನ್ನು ಸೆಳೆಯಿತು. ಈಕೆಯಲ್ಲಿ ಅದ್ಭುತ ಪ್ರತಿಭೆ ಇದೆ ಎಂದು ಅನಿಸಿತು. ಆ ನಾಟಕದ ಸುಂದರ ಪಾತ್ರಗಳಲ್ಲಿ ಒಂದಾದ ಸಾವಿತ್ರಿ ಎಂಬ ನೊಂದ ಮಹಿಳೆಯ ಪಾತ್ರವನ್ನು ಅವಳಿಗೆ ನೀಡಿದೆ. ಪರಿಣಾಮವಾಗಿ ನಮ್ಮ ನಾಟಕ ಉತ್ತಮವಾಗಿ ಸಿದ್ದವಾಯಿತು.

ಒಂದು ಸಣ್ಣ ಹಳ್ಳಿಯ ಜನರ ಬದುಕುನ್ನು ಪ್ರಸ್ತುತ ಪಡಿಸುವ ಶಾಂತಿನಗರ 3rd ಕ್ರಾಸ್ ಎಂಬ ನಾಟಕವನ್ನು ಎಂಟು ಜನ ವಿದ್ಯಾರ್ಥಿ ಕಲಾವಿದರು ಅದ್ಭುತವಾಗಿ ಅಭ್ಯಾಸ ಮಾಡಿ ನಾಟಕ ಪ್ರದರ್ಶನಕ್ಕೆ ಹೊರಟು ನಿಂತರು. ನಾಟಕ ಪ್ರದರ್ಶನಗೊಂಡು "ಶಾಂತಿ ನಗರ 3rd ಕ್ರಾಸ್" ಪ್ರಥಮ ಬಹುಮಾನ ಎಂದು ಘೋಷಣೆಯಾಯಿತು. ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕರಿಗೆ ಹಾಗೂ ಶಿಕ್ಷಕರಿಗೆಲ್ಲರಿಗೂ ತುಂಬಾ ಖುಷಿ. ನನಗೆ ಉತ್ತಮ ನಿರ್ದೇಶಕ ಪ್ರಶಸ್ತಿಯೂ ಲಭಿಸಿತು. ಆದರೆ ನಾನು ತುಂಬಾ ಸಂತೋಷ ಪಟ್ಟಿದ್ದು ನಾಟಕದ ಉತ್ತಮ ನಟಿ ಪ್ರಶಸ್ತಿ... "ಸಾವಿತ್ರಿ" ಪಾತ್ರ ಎಂದು ಕರೆದಾಗ. ಒಂಬತ್ತನೆಯ ತರಗತಿಯ ಮುಗ್ಧ ಬಾಲಕಿ‌ಯೊಬ್ಬಳು ಸಾವಿತ್ರಿ ಎಂಬ ನೊಂದ ಮಹಿಳೆಯ ಪಾತ್ರಕ್ಕೆ ಜೀವ ತುಂಬಿದ ಪರಿ ಇವತ್ತಿಗೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. 

ನಂತರ ಆ ಮಗುವನ್ನು ಶಾಲೆಯಲ್ಲಿ ಸಾವಿತ್ರಿ ಎಂದೇ ಪ್ರೀತಿಯಿಂದ ಕರೆಯುತ್ತಿದ್ದೆ. ಪ್ರೌಢ ಶಾಲಾ ಶಿಕ್ಷಣ ಮುಗಿದ ಬಳಿಕ‌ ಮಗು ಎಲ್ಲಿ ಇದೆ... ಏನು ಮಾಡುತ್ತಿದ್ದಾಳೆ ಎಂದು ಗೊತ್ತೇ ಇರಲಿಲ್ಲ. ಉನ್ನತ ವಿದ್ಯಾಭ್ಯಾಸಕ್ಕೆ ಬೇರೆ ಕಾಲೇಜು ಸೇರಿ ವೃತ್ತಿ ಬದುಕನ್ನು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಮಕ್ಕಳು ಅವರದೇ ಆದ ಬದುಕಿನ ದಾರಿ ಕಂಡುಕೊಳ್ಳಲು ಇರುವಂತಹ ಕಷ್ಟ ಎಲ್ಲರಿಗೂ ಗೊತ್ತೇ ಇದೆ. ಈ ನಡುವೆ ತನ್ನ ಬದುಕಿಗೆ ದಾರಿದೀಪವಾದ ಶಿಕ್ಷಕರನ್ನು ನೆನೆಸಿಕೊಳ್ಳುವ ವಿದ್ಯಾರ್ಥಿಗಳಿದ್ದಾರೆ ಎನ್ನುವ ನಂಬಿಕೆ ಶಿಕ್ಷಕರಾದ ನಮ್ಮದು ಎನ್ನುವುದು ತಪ್ಪಲ್ಲ. ಆದರೆ ಇದು ಬರಿ ನಂಬಿಕೆಯಲ್ಲ, ಇದು ಸಾರ್ವಕಾಲಿಕ ಸತ್ಯ ಎಂದು ಅರಿವಾದಾಗ ನಾನು ನನ್ನನ್ನೇ ಮರೆತು ಬಿಟ್ಟೆ.

ನಾನು ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿರುವುದರಿಂದ ಇತ್ತೀಚೆಗೆ ಒಂದು ವಲಯದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟಕ್ಕೆ ತೀರ್ಪುಗಾರನಾಗಿ ಭಾಗವಹಿಸಿದ್ದೆ. ಸ್ವಲ್ಪ ಹೊತ್ತಿನಲ್ಲಿ ಒಬ್ಬರು ಶಿಕ್ಷಕಿ ಬಂದು ನನ್ನ ಪಾದಕ್ಕೆ ನಮಸ್ಕಾರ ಮಾಡಿದರು. ತಲೆ ಎತ್ತಿ ನೋಡಿದಾಗ ಆ ಮುಗ್ದತೆಯ ಮುಖ, ಎಲ್ಲೋ ನೋಡಿದ ನೆನಪು ಅನ್ನುವಷ್ಟರಲ್ಲಿ ನಾನು ಪ್ರಜ್ಞಾ ಸರ್ ಅಂದ್ರು. ನನ್ನ ಕಣ್ಣಲ್ಲಿ ಆನಂದ ಭಾಷ್ಪ. ನಮಸ್ಕರಿಸಿ ಹೇಳಿದೆ ಹಾ
ಶಾಂತಿ ನಗರ 3rd ಕ್ರಾಸಿ ನ ಸಾವಿತ್ರಿ.... ಎಂದಾಗ ನಗುತ್ತಾ ಹೌದು ಸರ್ ಅಂದಳು. ಜೊತೆಗೆ ನಿಂತು ಒಂದು ಸೆಲ್ಪಿ ತೆಗೆದುಕೊಂಡರು. 

ಆ ದಿನ ಪಂದ್ಯಾಟ ನಡೆಯುವಾಗ ಪದೇ ಪದೇ ಮಳೆ ಬೀಳುತ್ತಿತ್ತು. ನಾನು ತೀರ್ಪುಗಾರರ ಪೀಠದಲ್ಲಿದಾಗ ಇದೇ ಸಾವಿತ್ರಿ ಈಗ ಪ್ರಜ್ಞಾ‌ ಟೀಚರ್ ಆ ಶಾಲೆಯ ಶಿಕ್ಷಕಿ ತಮ್ಮ ಛತ್ರಿಯನ್ನು ತಂದು ಸಹಾಯ ಮಾಡಿದರು. ಊಟ, ತಿಂಡಿ ಎಲ್ಲವನ್ನು ಸರಿಯಾದ ಸಮಯಕ್ಕೆ ಮಾಡುವಂತೆ ನೋಡಿಕೊಂಡರು. ಆ ದಿನ ನನ್ನಲ್ಲಿ ಧನ್ಯತಾ ಭಾವನೆ. ನಮ್ಮ ವಿದ್ಯಾರ್ಥಿ ಬಳಗ ನಮ್ಮನ್ನು ಮರೆತಿರುತ್ತಾರೆ ಎಂದೆನಿಸಿಕೊಂಡಾಗ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಎದರು ಸಿಕ್ಕಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದಾಗ ಮನಸ್ಸಿಗೆ ಬಹಳ ಆನಂದವಾಗುತ್ತದೆ. 

ಆ ದಿನದ ಆಕೆಯ ಮೊಬೈಲ್ ಸ್ಟೇಟಸ್ ನೋಡಿದವರು ಎಲ್ಲರೂ ನನಗೆ ಪೋನ್ ಮಾಡಿ ನಿಮ್ಮ ವಿದ್ಯಾರ್ಥಿನಿ ನಿಮ್ಮನ್ನು ಬಹಳ ಎತ್ತರದ ಸ್ಥಾನದಲ್ಲಿ ಬಿಂಬಿಸಿದ್ದಾರೆ.... ಎಂದಾಗ ನನಗೆ ಆಗ, ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಷ್ಟೇ ಸಂತೋವಾಯಿತು. 

"ಶಾಂತಿ ನಗರ 3rd ಕ್ರಾಸ್" ನಾಟಕದ ಸಾವಿತ್ರಿಯ ಭೇಟಿ ಈ ಬರಹಕ್ಕೆ ಒಂದು ರೂಪ ನೀಡಿತು. ಇಂತಹ ವಿದ್ಯಾರ್ಥಿಗಳಿಂದಾಗಿ ನಾವಿನ್ನೂ ಶಿಕ್ಷಕರಾಗಿ ಗೌರವದ ಸ್ಥಾನ ಪಡೆದಿದ್ದೇವೆ.. ನಮ್ಮ ವಿದ್ಯಾರ್ಥಿಗಳು ನಮಗೆ ಹೆಮ್ಮೆ. ಏನಂತೀರಿ...?
...................................... ಚಿನ್ನಪ್ಪ ಕೆ ಜಾಲ್ಸೂರು
ದೈಹಿಕ ಶಿಕ್ಷಣ ಶಿಕ್ಷಕರು
ಸರಕಾರಿ ಪ್ರೌಢಶಾಲೆ ವಗ್ಗ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 63604 91682
******************************************






Ads on article

Advertise in articles 1

advertising articles 2

Advertise under the article