ಜೀವನ ಸಂಭ್ರಮ : ಸಂಚಿಕೆ - 262
Sunday, September 27, 2026
Edit
ಜೀವನ ಸಂಭ್ರಮ : ಸಂಚಿಕೆ - 262
ಲೇಖಕರು : ಎಂ. ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಾಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮೊ : +91 94485 72723
ಮಕ್ಕಳೇ, ಇಂದು ನಾವು ಇರುವುದು ಹೇಗೆ..? ಅದ್ಭುತ ನೋಡೋಣ.... ಒಂದೂರಿನಲ್ಲಿ ಒಂದು ಕಾಗೆ ಇತ್ತು. ಎಲ್ಲರೂ ಕಾಗೆಯನ್ನು ಬೈಯುತ್ತಾರೆ. ಆದರೆ ಕಾಗೆ ಹೇಳುತ್ತದೆ, "ನಾನು ಬಹಳ ಸ್ವಾತಂತ್ರ್ಯ, ಇದುವರೆಗೆ ಬಲೆ ಹಾಕಿ ಯಾರೂ ನನ್ನನ್ನು ಹಿಡಿದಿಲ್ಲ. ಹಾಗೆ ಪಂಜರದಲ್ಲಿ ಕೂಡಿಟ್ಟಿಲ್ಲ. ಗಿಳಿಯನ್ನು ಹಿಡಿದಿಟ್ಟಿದ್ದಾರೆ. ಯಾಕೆಂದರೆ ಸುಂದರ ಅಂತ ಹಿಡಿದಿಟ್ಟಿದ್ದಾರೆ. ನಾನು ಕುರೂಪ ಇದ್ದಿನಲ್ಲ ಅದಕ್ಕೆ ಆರಾಮ ಇದ್ದೇನೆ. ನನ್ನ ಕಪ್ಪು ಬಣ್ಣ ನನ್ನನ್ನು ಉಳಿಸಿದೆ. ಅವರ ಬಣ್ಣ ಅವರನ್ನು ಪಂಜರದಲ್ಲಿ ಹಿಡಿಸಿದೆ. ನಾನು ಹಾಡಿದರೆ ಎಲ್ಲರೂ ಕಿವಿ ಮುಚ್ಚಿಕೊಳ್ಳುತ್ತಾರೆ. ಅದಕ್ಕೆ ಯಾರದ್ದೂ ನನ್ನ ಕಡೆ ಲಕ್ಷ್ಯವಿಲ್ಲ. ನಾನು ಆರಾಮ, ಸ್ವಾತಂತ್ರ್ಯ ಇದೆ. ನನ್ನಷ್ಟು ಆರಾಮ ಯಾರಿಲ್ಲ" ಅಂತ ಉಳಿದ ಹಕ್ಕಿಗಳಿಗೆ ಹೇಳಿತು.
ನೀವು ತೋರಿಸೋಕೆ ಹೋಗಿ ಸಿಕ್ಕಿಬೀಳುತ್ತೀರಿ. ಒಬ್ಬ ನನ್ನ ಧ್ವನಿ ಚಂದ ಅಂತ ಹಾಡಿ ಸಿಕ್ಕಿಹಾಕಿಕೊಂಡ. ನನ್ನ ರೂಪ ಚಂದ ಅಂತ ಹೇಳಿ ಮತ್ತೊಬ್ಬ ಸಿಕ್ಕಿಹಾಕಿಕೊಂಡ. ನಾನು ಚಂದ ಕೆಲಸ ಮಾಡುತ್ತೇನೆ ಅಂತ ಇನ್ನೊಬ್ಬ ಸಿಕ್ಕಿಬಿದ್ದ. ನಾನು ಹಾಗೆ ಮಾಡಲಿಲ್ಲ. ನಾನು ಸರಿ ಇಲ್ಲ ಅಂತ ಕಪ್ಪು ಬಣ್ಣ ಹಚ್ಚಿಕೊಂಡೆ". ದೇವರು ನನಗೆ ಹೇಳಿದ, "ನಿನಗೆ ಚಂದದ ಧ್ವನಿ ಕೊಡುತ್ತೇನೆ ತೆಗೆದುಕೋ" ಅಂದನು. ನಾನು ಬೇಡ ಅಂತ ಬಿಟ್ಟು ಬಂದೆ. ಆ ಬಳಿಕ ಸಾಮರ್ಥ್ಯ ಕೊಡುತ್ತೀನಿ ಅಂದ. ಸಾಕು ಇರೋ ಸಾಮರ್ಥ್ಯ ಅಂದೆ. ಮತ್ತೆ ಜಗತ್ತಿನಾಗ ಏನು ಮಾಡುತ್ತೀಯಾ? ಅಂದ ಭಗವಂತ. ಜನ ಏನೇನೋ ಬೇಡದ್ದು ಚೆಲ್ತಾರೆ ಅದನ್ನು ತೆಗೆದು ಸ್ವಚ್ಛ ಮಾಡುತ್ತೇನೆ. ಸಾಕಷ್ಟು ನನಗೆ ಅಂದೆ. ಇದು ನನ್ನ ಧರ್ಮಕಾರ್ಯ. ದೇವನೇ, ಅದಕ್ಕೆ ನಾನು ಸ್ವತಂತ್ರ. ಪಕ್ಷಿ ಹಿಡಿದರೆ ಅದನ್ನು ಅಡುಗೆ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ನನ್ನನ್ನು ಒಬ್ಬನೂ ಅಡುಗೆ ಮನೆಗೆ ಒಯ್ಯಲ್ಲ. ನಾನೇನಾದರೂ ಮನೆ ಹೊಕ್ಕಿದರೆ ಮನೆ ಯಜಮಾನ ಮನೆ ಬಿಡುತ್ತಾನೆ. ನಾನು ಹಾಗೆ ಇದ್ದೇನೆ. ದೋಷ ಕಾಣದೆ ಒಳ್ಳೆಯದನ್ನು ಕಾಣಲು ಶುರು ಮಾಡಿದರೆ ಕಾಗೆಯಲ್ಲೂ ಸೌಂದರ್ಯ ಕಾಣಬಹುದು. ಕಾಗೆ ಸಹಿತ ಎಷ್ಟು ಒಳ್ಳೆಯದಾಗಿ ಕಾಣಲು ಶುರುವಾಗುತ್ತದೆ. ಹಾಗೆ ನೀವು ಮನೆಗೆ ಹೋಗಿ. ನಿಮ್ಮ ಮನೆ ನೋಡಿ ಏನು ಚಂದ? ಅನ್ನಿ. ಅದು ಸಣ್ಣದಿದ್ದರೇನು?, ದುರಸ್ತಿಗೆ ಬಂದಿದ್ದರೇನು? ಏನು ಮನೆ?. ಎಷ್ಟು ಚಂದ! ಇದೆ. ಒಂದು ಹನಿ ನೀರು ಒಳಗೆ ಬೀಳುವುದಿಲ್ಲ. ಎಷ್ಟು ಗಟ್ಟಿಯಾಗಿದೆ ನಮ್ಮ ಮನೆ.
ನಮ್ಮ ಮನೆಗೆ ಯಾರೋ ಬಂದು ಹೇಳಿದರು, "ಈ ಭಾಗ ಬಣ್ಣ ಕೆಟ್ಟಿದೆ ಅಂತ. ಅದೇನು ಬಣ್ಣ ಹಾಕಿದರೆ ಸರಿಯಾಗುತ್ತದೆ. ಮನೆ ಎಷ್ಟು ಚೆಂದಾಗಿದೆ! ಅಂತ ಅನ್ನಿ. ಅದೇ ರೀತಿ. ಮುರುಕು ಕುರ್ಚಿ ಇತ್ತು ಅನ್ನಿ. ದುರಸ್ತಿ ಮಾಡಿದರೆ ಮತ್ತೆ ಕುಳಿತುಕೊಳ್ಳಬಹುದಲ್ಲ ಅನ್ನುವ ಭಾವ ಇದ್ದರೆ ಜಗತ್ತಿನಲ್ಲಿ ಸುಖವಾಗಿ ಬದುಕುತ್ತೇವೆ. ಒಮ್ಮೆ ಸಾಕ್ರೆಟಿಸ್ ನ ಬಳಿ ಒಬ್ಬ ಶಿಷ್ಯ ಬಂದನು. ಬಹಳ ಖಿನ್ನನಾಗಿದ್ದನು. ಅವಾಗ ಸಾಕ್ರೆಟಿಸ್ ಕೇಳಿದ, "ಯಾಕೆ ಖಿನ್ನವಾಗಿದ್ದೀಯಾ?. ಈಗ 25 ರ ವಯಸ್ಸು ಆನಂದವಾಗಿರಬೇಕು ಈ ವಯಸ್ಸಿನಲ್ಲಿ. ಆನಂದವಾಗಿರದಿದ್ದರೆ, ಮತ್ತ್ಯಾವಾಗ ಆನಂದರವಾಗಿರುತ್ತೀಯ" ಅಂತ ಕೇಳಿದರು. ಆಗ ಹುಡುಗ ಹೇಳಿದ, "ನನಗೆ ಒಂದು ಸಮಸ್ಯೆ ಆಗಿದೆ" ಎಂದನು. ಏನು ಸಮಸ್ಯೆ..? ಅಂತ ಸಾಕ್ರೆಟಿಸ್ ಕೇಳಿದ. ಆಗ ತರುಣ ಹೇಳಿದ ಮೊನ್ನೆ ಲಗ್ನ ಆಯ್ತು ಅಂದ. ಒಳ್ಳೆಯದಾಯಿತಲ್ಲ ಎಂದರು ಸಾಕ್ರೆಟಿಸ್. ಆಗ ತರುಣ ಹೇಳಿದ. ಕಪ್ಪಿನ ಹುಡುಗಿಯ ಜೊತೆ 80 ವರ್ಷ ಬದುಕುವುದು ಹೇಗೆ?. ನನ್ನ ಜೀವನ ಹಾಳಾಯಿತು ಅಂದನು. ಅದಕ್ಕಾಗಿ ಖಿನ್ನನಾಗಿದ್ದನು. ಸಾಕ್ರೆಟಿಸ್ ಹೇಳಿದ ಈ ಕಪ್ಪು ಮೊದಲು ಲಗ್ನ ಆಗುವಾಗ ಕಾಣಲಿಲ್ಲವೇನು?. ಆಗ ತರುಣ ಹೇಳಿದ, ಇಲ್ಲ ಕಾಣಲಿಲ್ಲ. ಆಗ ಸಾಕ್ರೆಟಿಸ್ ಹೇಳಿದ ಯಾಕೆ ಕಾಣಲಿಲ್ಲ? ವಿಚಾರ ಮಾಡು. ಕಾಣದಂತೆ ನೋಡಿದ್ಯಲ್ಲ ಮತ್ತೆ ಹಾಗೆ ನೋಡು. ಮತ್ತೆ 80 ವರ್ಷ ಚೆನ್ನಾಗಿರ್ತೀಯ. ಅಂದನು. ದೃಷ್ಟಿಯಂತೆ ಸೃಷ್ಟಿ. ನಾವು ಚೆನ್ನಾಗಿ ಬಾಳೋದು ಕಲಿತು ಬಿಟ್ರೆ ಜಗತ್ತು ಏನು ಮಾಡಲ್ಲ. ಜೀವನ ಅಂದ್ರೆ ಸಾಮಾನ್ಯವಲ್ಲ. ಜೀವನ ನಿಸರ್ಗದ ಅದ್ಭುತ ಕೊಡುಗೆ. ಇದನ್ನು ಕೆಡಿಸಬಾರದು. ಆದ್ದರಿಂದ ಜೀವನ ಪ್ರೀತಿಸಬೇಕು. ಬರಿ ದೋಷ ಗುರುತಿಸುವುದಲ್ಲ. ದೋಷ ಗುರುತಿಸಿ ಜೀವನ ಹಾಳು ಮಾಡಿಕೊಳ್ಳಬಾರದು.
ಇದೇ ಜಗತ್ತಿನಲ್ಲಿ ರಾತ್ರಿಯಿದೆ. ರಾತ್ರಿ ಅಂದರೆ ಕತ್ತಲು. ಆ ಕತ್ತಲಿನ ಕಡೆ ನೋಡದೆ ಆಕಾಶದ ಕಡೆ ನೋಡಿದರೆ, ಎಷ್ಟು ನಕ್ಷತ್ರಗಳು, ತಾರಪುಂಜ, ಆಗೊಮ್ಮೆ ಈಗೊಮ್ಮೆ ಚಂದ್ರ. ಹೀಗೆ ಚೆಂದಗಿರೋದ ನೋಡುವುದಕ್ಕೆ ಕಲಿಯಬೇಕು. ಅದೇ ನೀತಿ. ಆ ಬಳಿಕ ಆನಂದ ಪಡುವುದು. ಈಗ ನಮ್ಮ ತಲೆ ಕೂದಲು ಕಪ್ಪು. ಅದರಲ್ಲಿ ಒಂದೆರಡು ಬಿಳಿಯಾಗಿರುತ್ತದೆ. ನಮಗೆ ಬಿಳಿ ಕೂದಲು ಇಷ್ಟವಿಲ್ಲದಿದ್ದರೆ ಕಪ್ಪು ಕೂದಲನ್ನು ನೋಡಿಕೊಳ್ಳುತ್ತಾ ಹೋಗೋದು. ಎಷ್ಟು ಕಪ್ಪು ಕೂದಲಿದೆ! ಅನ್ನುವುದು. ಎಲ್ಲಾ ಬೆಳ್ಳಗಾದರೆ, ಹೋಗಲಿ ಬಿಡು. ಎಷ್ಟು ಆರಾಮ ! ಅನ್ನೋದು. ಹೀಗೆ ಆರಾಮ ಮಾಡಿಕೊಳ್ಳುತ್ತಾ ಹೋದೆವು ಅಂದರೆ ಜೀವನ ತುಂಬಾ ಸಂತೋಷ ಪಡುತ್ತೀವಿ. ದೋಷ ಹುಡುಕುತ್ತಾ ಹೋದರೆ ಜೀವನ ಹಾಳಾಗಿ ಹೋಗುತ್ತದೆ. ದುಃಖದಿಂದ ತುಂಬುತ್ತದೆ. ಬದುಕನ್ನ ಸಿಂಗರಿಸುವುದು ಕೆಡಿಸುವುದು ನಮ್ಮ ಕೈಯೊಳಗಿದೆ.
ನಾವನ್ನುತ್ತೇವೆ ಯಾರೋ ಮಂತ್ರ ಮಾಟ ಮಾಡಿಸಿದ್ದಾರೆ ಅಂತ. ಯಾವ ಮಂತ್ರ - ಮಾಟ ಬಲ್ಲ ನೋಡುವ ದೃಷ್ಟಿಕೋನ ಅಷ್ಟೇ. ದೃಷ್ಟಿಕೋನ ಕೆಡಿಸಿದೆ. ನೋಡುವ ದೃಷ್ಟಿಕೋನ ಸ್ವಚ್ಛವಿದ್ದರೆ ಇದೇ ಜಗತ್ತು ಸ್ವರ್ಗವಾಗುತ್ತದೆ. ನಾವು ಯಾವುದಾದರೂ ಸಮುದಾಯದ ಕಾರ್ಯಕ್ರಮಕ್ಕೆ ಹೋದಾಗ ಹಳೆ ಚಪ್ಪಲಿ ಹಾಕಿಕೊಂಡು ಹೋಗುತ್ತೇವೆ. ಹಳೆ ಚಪ್ಪಲಿ ನಮ್ಮನ್ನು ನಿಶ್ಚಿಂತೆ ಮಾಡಿದ್ದಾವೆ. ಹೊಸ ಚಪ್ಪಲಿ ಹಾಕಿಕೊಂಡು ಬಂದರೆ ಅವು ಚಿಂತೆ ಮಾಡಿಸುತ್ತವೆ. ಹೊರಗಡೆ ಬಿಚ್ಚಿಟ್ಟರೆ ಯಾರಾದರೂ ಕೊಂಡೊಯ್ದರೆ ಅನ್ನುವ ಚಿಂತೆ. ಹಳೇ ಚಪ್ಪಲಿ ನಮ್ಮನ್ನು ನಿಶ್ಚಿಂತೆ ಮಾಡಿಸುತ್ತವೆ. ಯಾರಿಗೂ ಚಿಂತೆ ಹಚ್ಚುವುದಿಲ್ಲ. ನಮ್ಮ ಕಡೆ ನೋಡಿದ್ರೆ ನಿಮಗೆ ವೈರಾಗ್ಯ ಬರ್ತದೆ ಅನ್ನುತ್ತವೆ. ಕಲಿಯೋದು ಇದೆ. ಎಲ್ಲದರಲ್ಲೂ ಒಂದು ಒಳ್ಳೆಯ ಗುಣ ಇರುತ್ತದೆ. ಹೊಸ ಚಪ್ಪಲಿ ಚುಚ್ಚುತ್ತದೆ. ಹಳೆಯದು ನಿಶ್ಚಿಂತ. ಹಳಬರು ಅನುಭವ ಮಾಡಿಕೊಂಡು ಮೆತ್ತಗಿರ್ತಾರೆ. ಹೊಸಬರು ಹೇಗೇಗೊ ಇರ್ತಾರೆ. ಹಳಬರು ಹೇಳಿದ್ರೆ ಸ್ವಲ್ಪ ಕಾಲ ಹೋಗಲಿ ಗೊತ್ತಾಗುತ್ತದೆ. ಹೊಸ ಹುರುಪಿನಲ್ಲಿ ಅಲ್ಲಿ ಜಿಗಿತೀನಿ, ಇಲ್ಲಿ ಜಿಗಿತೀನಿ ಅನ್ನುತ್ತಾನೆ. ಅಷ್ಟು ಗಳಿಸ್ತೀನಿ ಇಷ್ಟು ಗಳಿಸುತ್ತೀನಿ ಅನ್ನುತ್ತಾನೆ. ಮೈಯೆಲ್ಲಾ ಶಕ್ತಿ ಇರುತ್ತದೆ. ಅದೇನು ಇದೇನು ಅನ್ನುತ್ತಾರೆ. ಮುದುಕರು ಹೇಳುತ್ತಾರೆ ಹೀಗೆ ನಾವು ಅಂದುಕೊಂಡು ಹಿಂಗಾಗಿದ್ದೇವೆ ಅಂತ. ನಮ್ಮ ಪರಿಸ್ಥಿತಿ ಹೀಗಾಗಿದೆ. ನೀನು ಸ್ವಲ್ಪ ದಿವಸವನ್ನು ನಿನಗೆ ಗೊತ್ತಿರಲಿ ನೀ ಅಂದ ಹಾಗೆ ಇಲ್ಲ ಅಂತ. ಜಗತ್ತು ಹೇಗಿದೆ ಹಾಗೆ ಇರೋದೆ. ಆಪ್ರಿಕಾದಲ್ಲಿ ಹುಟ್ಟಿದವರು ಕಪ್ಪಗೆ ಇರೋದು. ಭಾರತದಲ್ಲಿ ಹುಟ್ಟಿದವರು ಗೋದಿ ಬಣ್ಣನೆ ಇರೋದು. ಜಪಾನ್ ನವರು ಹಳದಿ. ಚೀನದವರ ಕಣ್ಣು ಸಣ್ಣದು. ಯೂರೋಪಿಯನ್ನರು ಬೆಳ್ಳಗೆ ಇದ್ದಾರೆ. ಎಲ್ಲರನ್ನು ಒಂದೇ ಬಣ್ಣ ಮಾಡೋದಿಕ್ಕೆ ಆಗೋದಿಲ್ಲ. ಎಲ್ಲರನ್ನು ಒಂದೆ ಬಣ್ಣ ಮಾಡಲು ಹೋದರೆ ನಮ್ಮ ಬಣ್ಣ ಬದಲಾಗುತ್ತದೆ. ದೇವರು ಏನಾದರೂ ಮಾಡು ಅಂತ ಕಳಿಸಿಲ್ಲ. ಆನಂದವಾಗಿ ಇದ್ದು ಬಾ ಅಂತ ಕಳುಹಿಸಿದ್ದು. ನಿಸರ್ಗ ಹೇಳುತ್ತೆ ನನ್ನ ನೋಡಿ ಸಂತೋಷ ಪಡು ಅಂತ. ಸಂತೋಷ ಪಡಲು ಸಾವಿರ ಕಾರಣವಿದೆ. ದುಖ ಪಡಲು ಒಂದೇ ಕಾರಣ. ಅದೇ ನಮ್ಮ ಮನಸ್ಸು.
ಶರಣರು ಹೇಳಿದ್ದು ಈ ಜಗತ್ತು ದೇವನದು ಅಂತ ತಿಳಿದು ಇದನ್ನು ಪ್ರಸಾದ ಎಂದು ಅನುಭವಿಸಬೇಕು. ನೋಡುವ ರೂಪ ಪ್ರಸಾದ, ಕೇಳುವ ಶಬ್ದ ಪ್ರಸಾದ. ಈ ಜಗತ್ತಿನ ಸುವಾಸನೆ ಪ್ರಸಾದ. ರುಚಿಸುವ ರಸ ಪ್ರಸಾದ. ಎಲ್ಲಾ ಪ್ರಸಾದ ಅಂತ ಭಾವಿಸು. ನಿನ್ನ ಜೀವನ ಅದ್ಭುತವಾಗುತ್ತದೆ. ಚೆಂದ ಚೆಂದವಾಗಿರುವುದನ್ನು ಗುರ್ತಿಸಿ ಹೇಳಬೇಕು. ಮೆಚ್ಚುಗೆ ವ್ಯಕ್ತ ಮಾಡಬೇಕು. ಆಗ ನಮ್ಮ ಜೀವನ ಅದ್ಭುತವಾಗುತ್ತದೆ. ಚೆಂದ ಚೆಂದವಾಗಿರುವುದನ್ನು ಗುರುತಿಸಿದರೆ ಇರುವುದೆಲ್ಲವೂ ಅದ್ಭುತ ಅಲ್ಲವೆ ಮಕ್ಕಳೆ...
ಶಿಕ್ಷಣಾಧಿಕಾರಿ
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಾಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮೊ : +91 94485 72723
****************************************