ಜೀವನ ಸಂಭ್ರಮ : ಸಂಚಿಕೆ - 261
Monday, September 21, 2026
Edit
ಜೀವನ ಸಂಭ್ರಮ : ಸಂಚಿಕೆ - 261
ಲೇಖಕರು : ಎಂ. ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಾಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮೊ : +91 94485 72723
ಮಕ್ಕಳೇ, ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಶರಣಪಥ ಪ್ರವಚನದಲ್ಲಿ ಹೇಳಿದ ಪ್ರಸಂಗ. ದೇವ ಇದ್ದಾನೆ. ಹೇಗಿದ್ದಾನೆ?. ಅಂದರೆ ಕಾಣದಂತೆ ಇದ್ದಾನೆ. ಇದ್ದಾನೆ ಅನ್ನುವ ಭಾವವೇ ಶ್ರದ್ಧೆ. ಇದೆ ಅಂದಾಗ ನಮ್ಮಲ್ಲಿ ಬದಲಾವಣೆ ಕಂಡುಬರುತ್ತದೆ. ದೈಹಿಕ, ಮಾನಸಿಕ ಮತ್ತು ಬೌದ್ಧಿಕವಾಗಿ ಬದಲಾಗುತ್ತದೆ. ಕಂಡದ್ದರ ಹಿಂದೆ ಹೋಗುವುದಿಲ್ಲ. ಈ ಜಗತ್ತು ಸತ್ಯದ ಅಭಿವ್ಯಕ್ತಿ ರೂಪ. ಈ ಜಗತ್ತಿಗೆ ಸತ್ಯದ ಸ್ಪರ್ಶವಿರುವುದರಿಂದ ಈ ಜಗತ್ತು ಪವಿತ್ರ. ಸತ್ಯವನ್ನು ದೇವರೆಂದು ಭಾವಿಸಿದರೆ, ಈ ಜಗತ್ತು ದೇವಸ್ಪರ್ಶಿತ ವಸ್ತು, ಆದುದರಿಂದ ಪ್ರಸಾದ ಎಂದು ಅನುಭವಿಸಬೇಕು.
ರೂಪ, ರಸ, ಗಂಧ, ಸ್ಪರ್ಶ ಮತ್ತು ಶಬ್ದ ಎಲ್ಲದಕ್ಕೂ ಸತ್ಯದ ಸ್ಪರ್ಶ ಇದೆ ಎಂದು ಭಾವಿಸಬೇಕು. ಎಲ್ಲಾ ಜಡ ಜೀವದ ವಸ್ತುಗಳಿಗೂ ಸತ್ಯದ ಸ್ಪರ್ಶವಿದೆ. ಹಾಗಾಗಿ ಪವಿತ್ರ ದೃಷ್ಟಿಯಿಂದ ನೋಡಬೇಕು. ಆಗ ಪ್ರಸಾದ. ಆಸೆಯಾಗುವುದಿಲ್ಲ, ಮೋಹವಾಗುವುದಿಲ್ಲ, ಸಂತೋಷ ಇರುತ್ತದೆ. ಸಂತೋಷ ಅನುಭವಿಸುತ್ತೇವೆ, ಆಸೆ ಇರದೆ. ಆಗ ಉಂಟಾಗುವುದೇ ಅನುಸಂಧಾನ. ಹೊರವಸ್ತು, ಜೀವಿ ಮತ್ತು ನಮ್ಮೊಳಗೆ ಏಕರೂಪತೆ ಗುರುತಿಸುವುದು. ಅದೇ ಸತ್ಯ ಒಳಗೆ ಹೊರಗೆ ಎಲ್ಲಾ ಕಡೆ ಇದೆ. ಹಾಗಿದ್ದಾಗ ನನ್ನೊಳಗೂ ಇದೆ. ಬೇರೆಯದರಲ್ಲೂ ನನ್ನಲ್ಲಿ ಭೇದ ಗುರುತಿಸದೆ ಬೇರೆಯದರಲ್ಲಿರುವ ಸತ್ಯ ನನ್ನಲ್ಲಿರುವ ಸತ್ಯ ಒಂದೇ ಎಂದು ಗುರುತಿಸುವುದು ಹಾಗೂ ಗುರುತಿಸಿ ಅದರಲ್ಲಿ ತನ್ಮಯವಾಗುವುದೇ ಅನುಸಂಧಾನ.
ಒಬ್ಬ ರಾಜ ಇದ್ದನು. ಆತನಿಗೆ ಒಬ್ಬಳು ಮಗಳಿದ್ದಳು. ರಾಜಕುಮಾರಿಯ ಸೇವಕಿ ಒಬ್ಬಳಿದ್ದಳು. ಆಕೆಗೆ ಒಬ್ಬ ಮಗ ಇದ್ದನು. ಸದೃಢ ದೇಹ, ಸುಂದರ ಮೈಕಟ್ಟು, ವಯಸ್ಸಿಗೆ ಬಂದಿದ್ದನು. ಒಮ್ಮೆ ತಾಯಿಯ ಜೊತೆ ಅರಮನೆಗೆ ಬಂದಿದ್ದನು. ಆಗ ರಾಜನ ಮಗಳನ್ನು ನೋಡಿದನು. ಆಕೆ ಸುಂದರವಾಗಿದ್ದಳು ಮತ್ತು ಆಕರ್ಷಕವಾಗಿದ್ದಳು. ಆಕೆಯನ್ನು ನೋಡಿದ್ದೇ ತಡ ಮದುವೆಯಾದರೆ ರಾಜಕುಮಾರಿಯನ್ನೇ ಆಗಬೇಕೆಂದು ತೀರ್ಮಾನಿಸಿದ. ಈ ವಿಚಾರವನ್ನು ತಾಯಿಗೆ ಹೇಳಿದ. ತಾಯಿ ಮಗನಿಗೆ ಈ ಸಂಬಂಧ ಆಗುವುದಿಲ್ಲ. ಅವರು ರಾಜರು. ನಾವು ಸೇವಕರು. ಅವರೆಲ್ಲಿ?. ನಾವೆಲ್ಲಿ?. ಅದು ಸಾಧ್ಯತೆಯೂ ಇರಲಿಲ್ಲ. ಹೀಗೆ ನಾನಾ ವಿಧವಾಗಿ ತಿಳುವಳಿಕೆ ಹೇಳಿ ನೋಡಿದಳು. ಆತ ಅದಕ್ಕೆ ಒಪ್ಪಲಿಲ್ಲ. ಆಗ ತಾಯಿಗೆ ದಿಕ್ಕೇ ತೋಚದೆ ಏನಾದರೂ ಅನಾಹುತ ಮಾಡಿಕೊಂಡನೆಂದು ಭಯ ಭೀತಳಾಗಿ ಅರಮನೆಗೆ ಬಂದಳು. ಈ ವಿಚಾರವನ್ನು ರಾಜನಿಗಾಗಲಿ ಅಥವಾ ರಾಣಿಗಾಗಲಿ ಹೇಳುವುದು ಹೇಗೆ..?. ಆಕೆಗೆ ಒಂದು ಉಪಾಯ ಹೊಳೆಯಿತು. ರಾಜಕುಮಾರಿಗೆ ಮಗನ ಇಚ್ಛೆಯನ್ನು ಹೇಳಿ, ನೀನೇ ಹೇಗಾದರೂ ಉಪಾಯ ಮಾಡಿ ಈ ಸಮಸ್ಯೆ ಬಗೆಹರಿಸಿ ಎಂದು ಕೈ ಮುಗಿದು ಕೇಳಿಕೊಂಡಳು. ಈ ವಿಚಾರವನ್ನು ರಾಜಕುಮಾರಿ ತಂದೆಗೆ ಹೇಳಿ ಇದಕ್ಕೆ ಉಪಾಯ ಮಾಡಿ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಳು. ರಾಜ ಮಾರನೆಯ ದಿನ ಹುಡುಗನನ್ನು ಅರಮನೆಗೆ ಕರೆಸಿಕೊಂಡು, ಹುಡುಗನಿಗೆ ಹೇಳಿದನು. ನೋಡಪ್ಪ ನಿನಗೆ ನನ್ನ ಮಗಳನ್ನು ಕೊಡಲು ಒಪ್ಪಿಗೆ ಇದೆ. ಆದರೆ ಒಂದು ಷರತ್ತು. ನನ್ನ ಮಗಳ ಹೆಸರು ಸರಸ್ವತಿ. ಆಕೆ ಸರಸ್ವತಿ ಉಪಾಸಕಳು. ಹಾಗಾಗಿ ನೀನು ಸರಸ್ವತಿ ಸಾಕ್ಷೀಕರಿಸಿಕೊಂಡ ದಿನ ನಿನಗೆ ವಿವಾಹ ಮಾಡಿಕೊಡುವುದಾಗಿ ಹೇಳಿ, ಸರಸ್ವತಿ ವಿಗ್ರಹ ನೀಡಿದನು. ಇದೇನು ಮಹಾ ಸರಸ್ವತಿ ಸಾಕ್ಷೀಕರಿಸಿಕೊಂಡೆ ತೀರುತ್ತೇನೆಂದು ಹೇಳಿದ.
ಆಗ ಹುಚ್ಚು ಹುಚ್ಚಾಗಿದ್ದ. ಹಾಗೆ ಹುಚ್ಚಾದಾಗಲೇ ಸರಸ್ವತಿ ದರ್ಶನವಾಗೋದು. ರಾಜನ ತೋಟದಲ್ಲಿ ವಿಗ್ರಹ ಎದುರಿಗೆ ಇಟ್ಟುಕೊಂಡು ಆ ವಿಗ್ರಹದಲ್ಲಿ ತನ್ಮಯನಾದನು. ಆಸೆ ಧ್ಯಾನಕ್ಕೆ ಆಸರೆ ಕೊಟ್ಟಿತು. ಬರಿ ಧ್ಯಾನ ಮಾಡು ಅಂದರೆ ಆಗುವುದಿಲ್ಲ. ಒಳಗೆ ಬಲಿಷ್ಠ ಆಸೆ ಇತ್ತು. ಹಾಗಾಗಿ ಮನಸ್ಸು ಸೀಮಿತವಾಗಿತ್ತು ಏಕಾಗ್ರವಾಗುತ್ತಿತ್ತು. ಆ ಕಡೆ ಈ ಕಡೆ ಹರಿಯುತ್ತಿರಲಿಲ್ಲ. ಮನಸ್ಸಿನ ಇಚ್ಛೆ ಪೂರೈಸಬೇಕಾಗಿತ್ತು. ವಿಗ್ರಹದಲ್ಲಿ ಮಗ್ನನಾದ. ಸರಸ್ವತಿ ಮೂರ್ತಿ ಕಣ್ಣು ತುಂಬಿತು. ತಾನು ಎಲ್ಲಿ ಕುಳಿತಿದ್ದೇನೆ? ಎನ್ನುವುದನ್ನು ಮರೆತ. ಏನು ಮಾಡುತ್ತಾ ಇದ್ದೇನೆ? ಗೊತ್ತಿಲ್ಲ. ಹಗಲು ರಾತ್ರಿ ಮರೆತ. ತಾನು ಯಾರು ಅನ್ನೋದನ್ನು? ಮರೆತ. ಆಹಾರ ಇಲ್ಲ. ನಿದ್ರೆ ಇಲ್ಲ. ಯಾರೋ ಬಂದು ಉಪಚಾರ ಮಾಡುತ್ತಿದ್ದರು. ಈತ ಧ್ಯಾನದಲ್ಲಿ ಮಗ್ನನಾಗಿದ್ದನು. ಕುಳಿತರೆ ಕಣ್ತುಂಬ ಸರಸ್ವತಿ. ಮಲಗಿದರೆ ಮನಸ್ಸಿನ ತುಂಬ ಸರಸ್ವತಿ. ಎಷ್ಟು ಭಾವ ತುಂಬಿತ್ತು ಸರಸ್ವತಿಗೆ. ಒಂದು ವರ್ಷದ ನಂತರ ರಾಜ ಮತ್ತು ಮಗಳು ಬಂದು ನೋಡಿದರು, ಮೂರ್ತಿ ಮುಂದೆ ಮಗ್ನನಾಗಿ ಕುಳಿತಿದ್ದಾನೆ. ಕಣ್ಣೀರು ಸುರಿಯುತ್ತಿತ್ತು. ಆತನ ದೃಷ್ಟಿ ರಾಜನ ಕಡೆ ಹರಿಯಲಿಲ್ಲ. ರಾಜಕುಮಾರಿ ಕಡೆ ದೃಷ್ಟಿ ಹರಿಯಲಿಲ್ಲ. ಈ ದೃಷ್ಟಿ ಕಂಡು ರಾಜ ಭಾವಿಸಿದ ಈತನಿಗೆ ಸರಸ್ವತಿ ಒಲಿದಿದ್ದಾಳೆ ಎಂದು ಭಾವಿಸಿ, ಏಳು, ಏಳು ನಿನಗೆ ಸರಸ್ವತಿ ದರ್ಶನವಾಗಿದೆ. ಹೌದು ಅಂದ ಯುವಕ. ಆಗ ರಾಜ ಹೇಳಿದ ನಿನ್ನಂತಹ ಸರಸ್ವತಿ ದರ್ಶನ ಮಾಡಿಕೊಂಡ ವ್ಯಕ್ತಿ ನನ್ನ ಅಳಿಯನಾಗುವುದು ನನ್ನ ಪುಣ್ಯ. ನನ್ನ ಮಗಳು ಸಿದ್ದಳಾಗಿದ್ದಾಳೆ. ಏಳು ಸಿದ್ದನಾಗು ಎಂದನು. ಆಗ ತರುಣ ಹೇಳಿದ "ಮಹಾರಾಜರೇ ಯಾವ ಸರಸ್ವತಿ ತಿಳಿಯುತ್ತಿಲ್ಲ. ಈಗ ಸರಸ್ವತಿ ಹೊರಗಿಲ್ಲ ಒಳಗಿಲ್ಲ. ನಾನು ಅನ್ನೋದೇ ಇಲ್ಲ. ಎಲ್ಲಾ ಸರಸ್ವತಿ. ನನ್ನಿಂದ ಹೊರಗೆ ಇದ್ರೆ ಲಗ್ನ ಆಗಬಹುದು. ಸರಸ್ವತಿ ಜೊತೆ ಒಂದಾದ ಬಳಿಕ ಲಗ್ನ ಎಲ್ಲಿ". ಕಾಮದ ಭಾವ ಹೋಗಿತ್ತು. ಆಸೆ ಮರೆಯಾಗಿತ್ತು. ಅನುಸಂಧಾನ ಘನಗೊಂಡಿತ್ತು. ಮೋಹದಿಂದ ಶುರುವಾದ ಅನುಸಂಧಾನ ಅನುಭಾವದೊಳಗೆ ಪರ್ಯಾವಸನಗೊಂಡಿತ್ತು. ನೀವು ಯಾವ ಸರಸ್ವತಿ ಕೊಡಬೇಕೆಂದಿರುವಿರೊ ಆ ಸರಸ್ವತಿ ಈಗಾಗಲೇ ನನ್ನೊಳಗೆ ತುಂಬಿದ್ದಾಳೆ. ಯಾವ ಸರಸ್ವತಿ ಧ್ಯಾನಕ್ಕಾಗಿ ನಾನು ಕುಳಿತುಕೊಂಡಿದ್ದೇನೋ, ಆ ಸರಸ್ವತಿ ನನ್ನೊಳಗಿದ್ದಾಳೆ. ಯಾರನ್ನು ಲಗ್ನ ಆಗಬೇಕೆಂದು ಇಷ್ಟೆಲ್ಲ ಕಷ್ಟಪಟ್ಟೆ ಆಕೆ ಸರಸ್ವತಿಯ ಪರಾವತಾರ. ನನ್ನ ಅಸ್ತಿತ್ವದೊಳಗೆ ಬೆರೆತು ಹೋಗಿದ್ದಾಳೆ. ಬೇರೆ ಇದ್ರೆ ಲಗ್ನ. ಒಂದಾದ ಮೇಲೆ ಲಗ್ನ ಎಲ್ಲಿ. ಎಂದನು. ಇದಕ್ಕೆ ಅನುಸಂಧಾನ ಎನ್ನುವರು.
ಶಿಕ್ಷಣಾಧಿಕಾರಿ
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಾಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮೊ : +91 94485 72723
****************************************