-->
ಸ್ಪೂರ್ತಿಯ ಮಾತುಗಳು : ಸಂಚಿಕೆ - 232

ಸ್ಪೂರ್ತಿಯ ಮಾತುಗಳು : ಸಂಚಿಕೆ - 232

ಸ್ಪೂರ್ತಿಯ ಮಾತುಗಳು : ಸಂಚಿಕೆ - 232
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 94486 26093

             
ಒಬ್ಬ ಯುವಕ ಬಹಳ ದೂರದ ಊರಿಗೆ ನಡೆದುಕೊಂಡು ಹೋಗುತ್ತಿದ್ದನು. ಬೇಸಗೆಯ ದಿನಗಳು. ಮಟ ಮಟ ಮಧ್ಯಾಹ್ನದ ಸಮಯ. ದೇಹದಿಂದ ಬೆವರಿಳಿಯುತ್ತಿತ್ತು. ನಿಗದಿತ ಸಮಯಕ್ಕೇ ಊರು ಸೇರಬೇಕು. ವಿಶ್ರಾಂತಿಗೆಂದು ಮರದಡಿ ಕುಳಿತುಕೊಳ್ಳುವಂತಿಲ್ಲ, ನಡೆದ ಆಯಾಸ ಜೊತೆಗೆ ಬಾಯಾರಿಕೆ , ಸಹಿಸಲು ಕಷ್ಟ ಪಡುತ್ತಿದ್ದನು. ಅಷ್ಟರಲ್ಲಿ ದೂರದಲ್ಲೊಂದು ಮನೆ ಕಾಣಿಸಿತು. ಆ ಮನೆಯತ್ತ ನಡೆದನು. 

ಮನೆಯ ಅಂಗಳ ತಲುಪಿದೊಡನೆ ಮನೆಯವರನ್ನು ಕರೆದನು. ಆಗ ಕಾಲಿಂಗ್ ಬೆಲ್, ವಿದ್ಯುತ್ ಯಾವುದೂ ಇಲ್ಲದ ಕಾಲ. ಮನೆಯೊಡತಿ ಮನೆಯ ಹೊಸ್ತಿಲ ಬಳಿ ಬಂದಳು. "ಏನಾಗಬೇಕಿತ್ತು? ಯಾರು ಬೇಕಿತ್ತು. ನೀವು ಯಾರು" ಮುಂತಾಗಿ ಮಾತನಾಡಿಸಿದಳು. "ತಾನು ದೂರದೂರಿಗೆ ನಡೆದು ಬರುತ್ತಿದ್ದೇನೆ. ಬಿಸಿಲಿನ ತಾಪ ಸಹಿಸಲಾಗುತ್ತಿಲ್ಲ. ಬಹಳ ಬಾಯಾರಿಕೆಯಾಗಿದೆ. ನೀರು ಬೇಕಿತ್ತು" ಎಂದು ಹೇಳಿದನು ಮನೆಯ ಒಡತಿ, “ನೀರು ತರುತ್ತೇನೆ. “ ಎಂದು ಹೇಳಿ ಒಳ ನಡೆದಳು. 
ದಾರಿಹೋಕ ಅಂಗಳದಲ್ಲೇ ಬಾಗಿಲ ಪಕ್ಕ ನೆರಳಿನಲ್ಲಿ ನಿಂತುಕೊಂಡು ನೀರಿಗಾಗಿ ಕಾಯುತ್ತಾ ಇದ್ದನು. ಒಳ ನಡೆದ ಹೆಂಗಸು ನೀರಿನೊಂದಿಗೆ ಹೊರಗೆ ಬರುವುದು ಕಾಣಿಸಲಿಲ್ಲ. ಪಥಿಕ ಯೋಚಿಸ ತೊಡಗಿದ. “ಛೇ!, ಒಳಗೆ ಹೋಗಿ ಬಹಳ ಸಮಯವಾಯಿತು. ನೀರು ಕೊಡುವುದರಲ್ಲೂ ಜಿಪುಣೆ ಈ ಮನೆಯೊಡತಿ” ಎಂದು ಹೊರಡಲನುವಾದನು. ಅಷ್ಟರಲ್ಲಿ ಮನೆಯಾಕೆ ಹೊರ ಬಂದು. “ ತಡವಾಯಿತೇ? ಬರೇ ನೀರು ಕೊಡ ಬಾರದು. ಬಹಳ ದೂರದಿಂದ ಬಂದಿದ್ದೀರಿ. ಬಹಳ ತ್ರಾಸ ಹೊಂದಿರುವಿರಿ. ಅದಕ್ಕಾಗಿ ನಾನು ನಿಂಬೆ ಪಾನೀಯ ಮಾಡಿ ತರುವಾಗ ತಡವಾಯಿತು. ಕ್ಷಮಿಸಿ.” ಎಂದಳು.
ಈಗ ಆ ಯುವಕನ ಭಾವನೆ ಬದಲಾಯಿತು. ಬಹಳ ಉತ್ತಮ ಹೆಂಗಸು. ಪಾಪ! ಆತಿಥ್ಯವೆಂದರೆ ಹೀಗಿರಬೇಕು. ಅಪರಿಚಿತ ನಾನು. ಆದರೂ ನಿಂಬೆ ಜ್ಯೂಸ್ ಮಾಡಿ ತಂದಿದ್ದಾರೆ. ಸಂತಸದಿಂದ ಕುಡಿಯಲಾರಂಭಿಸಿದನು. ಬಾಯಿಯೊಳಗೆ ಮೊದಲ ಹನಿ ಬೀಳುತ್ತಿದ್ದಂತೆ ಅವನ ಮುಖದ ಭಾವ ಬದಲಿತು ಪಾನೀಯವನ್ನು ಬಾಯಿಗಿಡಲು ಆರಂಭಿಸಿದಾಗ ಇದ್ದ ಆ ಸಂತಸದ ಭಾವ ಈಗ ಮಾಯವಾಗಿದೆ. ಮನಸ್ಸಿನಲ್ಲಿಯೇ ಯೋಚಿಸಿದನು. “ಈ ದರಿದ್ರ ಹೆಂಗಸು, ನಿಂಬೆ ಜ್ಯೂಸ್ ಮಾಡಿದ್ದಾಳೆ. ನಾನು ಕೇಳಿದ್ದು ಬರೇ ನೀರು. ಹೇಗೂ ಜ್ಯೂಸ್ ಮಾಡಿದ್ದಾಳೆ, ಅದಕ್ಕೆ ಸ್ವಲ್ಪ ಸಕ್ಕರೆಯೋ ಉಪ್ಪೋ ಸೇರಿಸಿ ಸರಿಕಟ್ಟಾಗಿ ಮಾಡ ಬಾರದಿತ್ತೇ?" ಎಂದು ಹಲ್ಲು ಗಿಂಜುತ್ತಾ ಕುಡಿಯಲು ಆರಂಭಿಸಿದನು. ಅಷ್ಟರಲ್ಲಿ ಮನೆಯೊಡತಿ ಬಹಳ ಪ್ರೀತಿಯಿಂದ, “ಅಣ್ಣ, ಸಕ್ಕರೆ ತಂದಿದ್ದೇನೆ. ಈಗ ಕೆಲವರಿಗೆ ಸಕ್ರೆ ಕಾಯಿಲೆಯಿರುತ್ತೆ. ಜ್ಯೂಸಿಗೆ ಬೇಕಿದ್ದರೆ ಮಾತ್ರ ಹಾಕೋಣ ಎಂದು ಈ ಪಾತ್ರೆಯಲ್ಲಿ ಸಕ್ಕರೆ ಹಾಕಿ ತಂದಿರುವೆ. ಚಮಚವಿದೆ. ಬೇಕಾದರೆ ಸಕ್ಕರೆ ಹಾಕಿ ಕುಡಿಯಿರಿ.” ಎಂದಳು. ಈಗ ಮತ್ತೆ ಯುವಕನ ಭಾವ ಬದಲಾಯಿತು. ಛೇ! ಅತಿಥಿಗಳ ಬಗ್ಗೆ ಏನು ಕಾಳಜಿ ಹೊಂದಿದ್ದಾಳೆ. ನಿಜವಾಗಿಯೂ ಮಹಾ ತಾಯಿ ಈಕೆ ಎಂದು ಭಾವಿಸಿದನು. ಸಕ್ಕರೆ ಪಡೆದು ಜ್ಯೂಸಿಗೆ ಹಾಕಿದನು. ಹೊಟ್ಟೆ ತುಂಬಾ ಜ್ಯೂಸ್ ಕುಡಿದು ಬಾಯಾರಿಕೆ ಇಂಗಿಸಿ ಧನ್ಯವಾದ ಸಲ್ಲಿಸಿ ಊರಿನತ್ತ ಹೊರಟನು. ಅಲ್ಲಿ ಅವನು ಮಾಡಬೇಕಿದ್ದ ಕೆಲಸಗಳನ್ನು ಮಾಡಿಸಿ ಮನೆಗೆ ಮರಳಿದನು,

ನಾನಾ ಕಾರಣಗಳಿಗಾಗಿ ನಾವು ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಕಾಣುವುದಿರುತ್ತದೆ. ಅದು ಕಚೇರಿಯ ಕೆಲಸಕ್ಕೆ ಸಂಬಂಧಿತವಿರಬಹುದು. ಸೇವಾ ವಿಭಾಗಕ್ಕೆ ಸಂಬಂಧಿಸಿದ್ದಿರಬಹುದು ಯಾ ವ್ಯವಹಾರ ವಿಭಾಗವೇ ಆಗಿರಬಹುದು. ನಾವು ಅವರನ್ನು ನೋಡಿದೊಡನೆ ಒಂದು ಭಾವನೆಗೊಳಗಾಗುತ್ತೇವೆ. ಆ ಭಾವನೆ ಧನಾತ್ಮಕವೂ ಆಗಿರಬಹುದು, ಋಣಾತ್ಮಕವೂ ಆಗಿರಬಹುದು. ಆದರೆ ಅದೇ ಭಾವನೆ ನಮ್ಮಲ್ಲಿ ದೀರ್ಘಕಾಲ ಉಳಿಯುವುದಿಲ್ಲ. ಮೊದಲು ತಾಳಿದ ಭಾವನೆ ಬದಲಾಗಿ ಅದರ ವಿರುಧ್ಧವಾದುದೇ ಆದ ಭಾವನೆಯಾಗಿ ಬದಲಾಗಲೂ ಬಹುದು. ಈ ಭಾವನೆ ಬದಲಾವಣೆಗೆ ಪ್ರೇರಕ ಅಥವಾ ಚಾಲಕ ಶಕ್ತಿ ನಮ್ಮ ವಿವೇಕ. ನಮ್ಮ ವಿವೇಕದ ಬಲ ಅಥವಾ ಗುಣಾಂಶಗಳು ಭಾವನೆಯ ಮೇಲೆ ಪ್ರಭಾವಿತವಾಗುತ್ತವೆ. ಭಾವ ಬದಲಾಗುತ್ತಾ ಇರುತ್ತದೆಯೇ ಹೊರತು ಆ ವ್ಯಕ್ತಿ ಬದಲಾಗಿದ್ದಾನೆ ಎಂದು ಹೇಳುವಂತಿಲ್ಲ. ಅವನ ಅಥವಾ ಅವಳ ಗುಣ ಸ್ವಭಾಗಳು ಕ್ಷಣ ಕ್ಷಣಕ್ಕೆ ಬದಲಾಗದು. ಬದಲಾವಣೆಯಾಗುವುದಿದ್ದರೂ ಅದು ದೀರ್ಘ ಕಾಲೀನ ಪ್ರಕ್ರಿಯೆ. 

ವ್ಯಾಪಾರಿಯಾಗಿ ಶ್ರೀಮಂತಿಕೆಯ ಶಿಖರವೇರುತ್ತಲಿದ್ದ ಶ್ರೀನವಾಸ ನಾಯಕ ದಾಸನಾಗಿ ಬದಲಾಗಿದ್ದಾನೆ. ಅಂತಹ ಉದಾಹರಣೆಗಳು ಸಾಕಷ್ಟಿವೆ, ಬದಲಾಗದ ರಾವಣ, ಕಂಸ ಇಂತಹವರೂ ನಮಗೆ ಸಿಗುತ್ತಾರೆ. ಭಾವನೆಗಳ ಬದಲಾವಣೆಗೂ ವ್ಯಕ್ತಿತ್ವಕ್ಕೂ ಭಿನ್ನತೆಯಿದೆ. ಭಾವನೆಗಳು ತಕ್ಷಣಕ್ಕೆ ಬದಲಾದರೆ ವ್ಯಕ್ತಿತ್ವವು ನಿಧಾನವಾಗಿ ಬದಲಾಗುತ್ತದೆ ಅಥವಾ ಬದಲಾಗದಿರಲೂ ಬಹುದು. ನಮ್ಮ ಭಾವನೆಯ ಅಳತೆಗೋಲಿನಿಂದ ಯಾವುದೇ ವ್ಯಕ್ತಿಯನ್ನು ಅವನ ವ್ಯಕ್ತಿತ್ವವನ್ನು ಅಳೆಯುವಂತಿಲ್ಲ. ಯಾಕೆಂದರೆ ನಮ್ಮ ಭಾವನೆ ಅಥವಾ ಯೋಚನೆಗಳು ನಿಖರವೂ ಅಲ್ಲ ಅಲ್ಲ ಶಾಶ್ವತವೂ ಅಲ್ಲ. ಆದುದರಿಂದ ವ್ಯಕ್ತಿಯನ್ನು ಅಳೆಯುವ ನಮ್ಮ ಮಾನದಂಡ ಸಮರ್ಪಕವಾಗಬೇಕು. 

ಬಟ್ಟೆ ಬರೆ ನೋಡಿ ಶ್ರೀಮಂತನೋ ಬಡವನೋ ಎಂದು ಹೇಳಲಾಗದು. ದೊಡ್ಡ ಮನೆಯಿರಬಹುದು. ಸಾಲವು ಅದರ ಇಮ್ಮಡಿಯಿದ್ದರೆ! ಜೇಬಿನಲ್ಲಿ ಪೆನ್ನಿದೆಯೆಂದ ಮಾತ್ರಕ್ಕೆ ಆತ ವಿದ್ಯಾವಂತನಾಗಿರಬೇಕೆಂದಿಲ್ಲ. ತಲೆಗೆ ರುಮಾಲು ಸುತ್ತಿ ಕಚ್ಚೆ ಹಾಕಿ ತೋಟದಲ್ಲಿ ಕೆಲಸಮಾಡುತ್ತಿದ್ದಾನೆಂಬ ಮಾತ್ರಕ್ಕೆ ಆತ ಓದು ಬರಹ ಬಾರದ ಅನಾಗರಿಕನಾಗಿರಬೇಕಾಗಿಲ್ಲ. ನಾವು ನೋಡುವ ಮತ್ತು ಪಡುವ ದೃಷ್ಟಿಕೋನ ಹಾಗೂ ಭಾವನೆಗಳು ನಿಖರವಾಗಬೇಕು . ಸರಿಯಾಗಿ ಶ್ರದ್ಧಿಸದೆ ತೆಗೆದುಕೊಳ್ಳುವ ನಿರ್ಧಾರಗಳು ಅಥವಾ ಅವಸರದ ನಿರ್ಧಾರಗಳು ಮಿಥ್ಯವಾಗುವ ಸಾಧ್ಯತೆಯೇ ಹೆಚ್ಚು. ಭಾವನೆಗಳ ಹೊಯ್ದಾಟ ಅವಸರದ ನಿರ್ಧಾರದ ಕಾರಣವೇ ಹೊರತು ಬೇರೇನೂ ಅಲ್ಲ.
..................................... ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
'ಸ್ಕಂದ' ಕುಳ ಗ್ರಾಮ, ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : 94486 26093
**********************************************



Ads on article

Advertise in articles 1

advertising articles 2

Advertise under the article