-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 140

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 140

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 140
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203



ಪ್ರೀತಿಯ ಮಕ್ಕಳೇ.. ಹಸಿರು ಮನೆಯ ಅನಿಲಗಳು ಯಾವುವು ಎಂಬುದು ನಮಗೆ ಗೊತ್ತು. ಇವುಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನಾವು ತಿಳಿಯೋಣ.

ಹಸಿರುಮನೆ ಅನಿಲಗಳ ಪೈಕಿ ಅತಿ ಹೆಚ್ಚು ಇರುವುದು ಇಂಗಾಲದ ಡೈಆಕ್ಸೈಡ್. ಇದು ಒಟ್ಟು ಅನಿಲಗಳ ಪೈಕಿ 82% ದಷ್ಟಿದೆ. ಇದು ಜೀವ ಜಾಲದ ಉಸಿರಾಟದ ವೇಳೆ ಬಿಡುಗಡೆಯಾಗುತ್ತದೆ. ಸಸ್ಯ ಮತ್ತು ಪ್ರಾಣಿಗಳು ಉಸಿರಾಟದ (respiration) ವೇಳೆ ಬಿಡುಗಡೆ ಮಾಡುವ ಈ ಅನಿಲಗಳನ್ನು ಸಸ್ಯಗಳು ತಮ್ಮ ದ್ಯುತಿಸಂಶ್ಲೇಷಣೆಯ (photosynthesis) ವೇಳೆ ರಾಸಾಯನಿಕವಾಗಿ ಬಂಧಿಸಿ ಗ್ಲುಕೋಸ್ ಎಂಬ ಆಹಾರ ಪದಾರ್ಥವನ್ನು ನಿರ್ಮಿಸುತ್ತವೆ. ಇದೇ ಗ್ಲುಕೋಸ್‌ ಉಸಿರಾಟದ ವೇಳೆ ಉರಿಸಲ್ಪಟ್ಟು ಇಂಗಾಲದ ಡೈಆಕ್ಸೈಡ್ Crown ಬಿಡುಗಡೆಯಾಗುತ್ತದೆ. ಅಂದರೆ ಪುನರಪಿ ಜನನಂ ಪುನರಪಿ ಮರಣಂ ಎಂಬ ಶಂಕರಾಚಾರ್ಯರ ಮಾತಿನ ಹಾಗೆ. ಮರಳಿ ಮರಳಿ ಹುಟ್ಟಿ ಬರುತ್ತದೆಯೇ ಹೊರತು ಸಾಯುವುದೇ ಇಲ್ಲ. ಇದಲ್ಲದೇ ಸಾಂಪ್ರದಾಯಿಕ ಇಂಧನಗಳನ್ನು ಮತ್ತು ಪಳೆಯುಳಿಕೆ ಇಂಧನಗಳನ್ನು ಉರಿಸುವ ಕಾರ್ಖಾನೆಗಳು ದೊಡ್ಡ ಪ್ರಮಾಣದ ಇಂಗಾಲದ ಡೈಆಕ್ಸೈಡ್ ಹೊರ ಹಾಕುತ್ತವೆ.
ಹಸಿರುಮನೆಯ ಇನ್ನೊಂದು ಅನಿಲ ಎಂದರೆ ಅದು ಮಿಥೇನ್. ಇದು ಸತ್ತ ಜೀವಿಗಳು ಕೊಳೆಯುವಾಗ, ಪೆಟ್ರೋಲಿಯಂ ಶುದ್ಧೀಕರಣದ ವೇಳೆ, ಜೌಗು ಪ್ರದೇಶಗಳಲ್ಲಿ ಸಸ್ಯಗಳು ಕೊಳೆಯುವಾಗ, ಜಾನುವಾರುಗಳ ಜೀರ್ಣಕ್ರಿಯೆಯ ವೇಳೆ, ಸಗಣಿ ಕೊಳೆಯುವಾಗ, ಬತ್ತದ ಗದ್ದೆಗಳಲ್ಲಿ ಇದು ಬಿಡುಗಡೆಯಾಗುತ್ತದೆ. ನೀವು ಬಳಸುವ ಗೋಬರ್ ಗ್ಯಾಸ್ ಮಿಥೇನ್. ಯಾರು ಗೋಬರ್ ಗ್ಯಾಸ್ ಬಳಸುತ್ತಾರೋ ಅವರು ಜಾಗತಿಕ ತಾಪಮಾನವನ್ನು ತಗ್ಗಿಸುತ್ತಾರೆ ಎಂದೇ ಅರ್ಥ. ನೀವು ಕೊಳ್ಳಿ ದೆವ್ವ ಅನ್ನುತ್ತೀರಲ್ಲ ಅದು ಮಿಥೇನ್ ಉರಿಯುವಿಕೆಯೇ. ಇದು ಹಸಿರು ಮನೆಯ ಅನಿಲಗಳ ಪೈಕಿ ಕೇವಲ 10% ದಷ್ಟಿದ್ದರೂ ಇದು ಒದಗಿಸುವ ಹೊದಿಕೆ ಜಾಸ್ತಿ. ಇಂಗಾಲದ ಡೈಆಕ್ಸೈಡ್ ಒಂದು ತೆಳು ಹೊದಿಕೆಯಾದರೆ ಮಿಥೇನ್ ದೆಹಲಿಯಲ್ಲಿ ಬಳಸುವ ದಪ್ಪ ಬ್ಲ್ಯಾಂಕೆಟ್ ಇದ್ದ ಹಾಗೆ. 

ಇನ್ನೊಂದು ಸಾರಜನಕದ ಆಕ್ಸೈಡ್ ಅದರಲ್ಲೂ ನೈಟ್ರಸ್ ಆಕ್ಸೈಡ್. ಇದು ಕೃಷಿ ಚಟುವಟಿಕೆಗಳಲ್ಲಿ ಪಳೆಯುಳಿಕೆ ಇಂಧನ ಸುಡುವಿಕೆಯ ವೇಳೆ ಬಿಡುಗಡೆಯಾಗುತ್ತದೆ. ಮಣ್ಣಿನ ನಡುವೆ ಸರಾಗವಾಗಿ ಗಾಳಿಯಾಡುವಂತಿದ್ದರೆ ಇದರ ಬಿಡುಗಡೆ ಕಡಿಮೆ. ಏಕೆಂದರೆ ಡಿ ನೈಟ್ರಿಫೈಯಿಂಗ್ ಬ್ಯಾಕ್ಟೀರಿಯಾಗಳಿಗೆ ಗಾಳಿ ಎಂದರಾಗದು. ಅದ್ದರಿಂದಲೇ ನಿಮ್ಮ ಅಜ್ಜ ಬೆಳೆ ಮುಗಿದ ಮೇಲೆ ಗದ್ದೆಯನ್ನು ಚೆನ್ನಾಗಿ ಉಳುಮೆ ಮಾಡುತ್ತಿದ್ದರು. 

ನಿಮ್ಮ ಮನೆಯ ಪ್ರಿಜ್ ಮತ್ತು ಏರ್ ಕಂಡೀಷನರ್ ಗಳಲ್ಲಿ ಬಳಸುವ ಹೈಡ್ರೋ ಫ್ಲೋರೋ ಕಾರ್ಬನ್ (hydro fluorocarbons HFCs) ಮತ್ತು ಪರ್ ಫ್ಲೋರೋಕಾರ್ಬನ್ ಗಳು(per fluorocarbons PFCs). HFC ಗಳಲ್ಲಿ ಜಲಜನಕ, ಫ್ಲೋರಿನ್ ಮತ್ತು ಇಂಗಾಲದ ಪರಮಾಣುಗಳಿದ್ದರೆ PFC ಗಳಲ್ಲಿ ಎಲ್ಲಾ ಜಲಜನಕದ ಪರಮಾಣುಗಳು ಫ್ಲೋರಿನ್ ಪರಮಾಣುಗಳಿಂದ ಪಲ್ಲಟಗೊಂಡಿರುತ್ತವೆ. ಇವು ಅಲ್ಪ ಪ್ರಮಾಣದಲ್ಲಿರುವ ಪ್ರಬಲ ಹಸಿರುಮನೆಯ ಅನಿಲಗಳು. ನಿಮ್ಮ ತಂದೆ ಕಾರಿನ ಎಸಿ ರಿಪೇರಿಗೆ ಹೋದಾಗ ರಿಪೇರಿಯವರು ಗ್ಯಾಸ್ ಇದೆಯಾ ನೋಡೋಣ ಎಂದು ಪರೀಕ್ಷಿಸಲು ಒಂದು ಅನಿಲವನ್ನು ಠುಸ್ ಎಂದು ಹೊರ ಬಿಡುತ್ತಾರಲ್ಲ ಅದೇ HFC. ನಿಮ್ಮ ಕಾರ್ ಎಸಿ ಪರೀಕ್ಷಿಸುವಾಗಲೂ ನೀವು ಜಾಗತಿಕ ತಾಪಮಾನ ಏರಿಸುತ್ತಿದ್ದೀರಿ ಎಂದು ನಿಮಗೆ ಖಂಡಿತ ಗೊತ್ತಿಲ್ಲ.

ಅತ್ಯಂತ ಸಾಮಾನ್ಯವಾದ ಹಸಿರುಮನೆ ಅನಿಲವೆಂದರೆ ಅದು ನೀರಾವಿ. ಪ್ರತಿ ಮೋಡವಾದಾಗಲೂ ನಾವು ಅನುಭವಿಸುವ ವಿಪರೀತ ಸೆಖೆ ಹಸಿರುಮನೆ ಪರಿಣಾಮವೇ. ಈ ನೀರಾವಿಯ ಪ್ರಮಾಣ ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುತ್ತದೆ. ಅಟಕಾಮ ಮರುಭೂಮಿಯಲ್ಲಿ ಮತ್ತು ಅಂಟಾರ್ಕ್ಟಿಕದಲ್ಲಿ ಸಾಪೇಕ್ಷ ಆರ್ದ್ರತೆ ಹೆಚ್ಚು ಕಡಿಮೆ ಶೂನ್ಯ. ಅದೇ ಕ್ಯಾಸ್ಪಿಯನ್ ಸಮುದ್ರದ ದಂಡೆಗಳಲ್ಲಿ ಇದು ಅಧಿಕ. ಅಂದರೆ ಸೌದಿ ಅರೇಬಿಯಾದ ಕೆಲಭಾಗಗಳಲ್ಲಿ ಇದು 52% ದಷ್ಟಿರುತ್ತದೆ. ಅಂದರೆ ವಿಪರೀತ ಸೆಖೆ. ಅದು ಮರುಭೂಮಿಯ ಸೆಖೆಯಲ್ಲ. ಹಸಿರುಮನೆಯ ಪರಿಣಾಮ. ಆದರೆ ಇದು ತಾತ್ಕಾಲಿಕ. ಏಕೆಂದರೆ ಮಳೆ, ಹಿಮಪಾತ, ಇಬ್ಬನಿಯ ರೂಪದಲ್ಲಿ ಗಾಳಿಯಿಂದ ನೀರಾವಿ ಹೊರ ಬರುತ್ತದೆ. ಆದ್ದರಿಂದ ತೇವಾಂಶದಿಂದಾಗುವ ಹಸಿರುಮನೆಯ ಪರಿಣಾಮದ ಜೀವಿತಾವಧಿ ಬಹಳ ಕಡಿಮೆ.

ಹಾಗಾದರೆ ಹಸಿರುಮನೆಯ ಅನಿಲಗಳಿಗೂ ಜೀವಿತಾವಧಿ ಇದೆ ಎಂದಾಯಿತು.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************



Ads on article

Advertise in articles 1

advertising articles 2

Advertise under the article