-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 160

ನಿಷ್ಪಾಪಿ ಸಸ್ಯಗಳು : ಸಂಚಿಕೆ - 160

ನಿಷ್ಪಾಪಿ ಸಸ್ಯಗಳು : ಸಂಚಿಕೆ - 160
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
    

ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ? ಕಳೆದ ವಾರ ನಾವು ಬೆಟ್ಟದಾವರೆ ಅಥವಾ ಆಡುಮಾತಿನ ಸೂರ್ಯಕಾಂತಿ ಗಿಡದ ಬಗ್ಗೆ ತಿಳಿದುಕೊಂಡೆವು. ನೀವದನ್ನು ಗುರುತಿಸಿರಬಹುದು ಅಲ್ಲವೇ..?

ಈ ವಾರ ಇನ್ನೊಂದು ನಿಷ್ಪಾಪಿ ಸಸ್ಯವನ್ನು ತಮಗೆ ಪರಿಚಯಿಸುತ್ತಿದ್ದೇನೆ. ನಮ್ಮ ಬಾಲ್ಯದಲ್ಲಿದು ಕೈಗೆಟುಕುವಷ್ಟು ಹತ್ತಿರದಲ್ಲಿ ಎಲ್ಲೆಡೆಯು ಇತ್ತು. ಇತ್ತೀಚೆಗೆ ಆವಾಸಸ್ಥಾನ ನಾಶ, ಅರಣ್ಯ ನಾಶದ ಬೆದರಿಕೆ ಎದುರಿಸುತ್ತಾ ವಿನಾಶದ ಅಂಚಿನಲ್ಲಿದು ತತ್ತರಿಸುತ್ತಿದೆ.

ನಮ್ಮ ತುಳುನಾಡಿನಲ್ಲಿ ಜೀವನಾವರ್ತ ಹಾಗೂ ಋತುಮಾನದ ಆಚರಣೆಗಳಾಗಿ ಹಲವಾರು ವಿಶಿಷ್ಟ ಕಾರ್ಯಗಳಿದ್ದವು. ಅವುಗಳಲ್ಲಿ ಆಟಿ ತಿಂಗಳಲ್ಲಿ ನಡೆಯುತ್ತಿದ್ದ ಹಲವಾರು ಕ್ರಮಗಳಲ್ಲಿ "ಆಟಿ ಪಿದಯಿ ಪಾಡುನಿ" ಅಥವಾ "ಆಟಿ ಹೊರಗೆ ಹಾಕುವುದು". ಮಳೆಗಾಲದಲ್ಲಿ ಆಟಿ ತಿಂಗಳು ಅಂದರೆ ಬಹಳ ಮಳೆ ಸುರಿಯಲ್ಪಡುವ ತಿಂಗಳು. ಈ ಒಂದು ತಿಂಗಳು ಕಳೆದರೆ ಮತ್ತೆ ಭಯ ಪಡುವ ಅಗತ್ಯವಿಲ್ಲ ಎಂಬ ಭಾವವಿತ್ತು. ಬಡತನ ಮಡುಗಟ್ಟಿದ ಕಾಲ ಆಟಿ. ಕೆಲಸ ಮಾಡಲು ಸಾಧ್ಯವೇ ಆಗದ, ಹೊಟ್ಟೆ ತುಂಬಿಸಲು ನಿಸರ್ಗದ ಸಹಕಾರ ಪಡೆಯುವ ಕಷ್ಟದ ದಿನಗಳಾಗಿದ್ದರೂ ತಿಂಗಳ ಕೊನೆಯ ದಿನಗಳಲ್ಲಿ ಆಟಿ ಹೊರಗೆ ಹಾಕುವ ಕೆಲಸ ನಡೆಯುತ್ತಿತ್ತು. ಅಂದು ಮುಂಜಾನೆಯೇ ಮನೆಯಲ್ಲಿರುವ ಮರದ ಮೇಜು, ಕುರ್ಚಿ, ಬೆಂಚುಗಳನ್ನು ಕಂಚು ಹಿತ್ತಾಳೆಯ ಪಾತ್ರೆಗಳನ್ನು ಅಂಗಳಕ್ಕೆ ಮಳೆಯ ನೀರಿಗೆ ಹಾಕುತ್ತಿದ್ದರು. ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ನೀರಲ್ಲಿ ಇವುಗಳನ್ನು ತೊಳೆಯಲು ಮನೆಯವರೆಲ್ಲರು ಸಿದ್ಧರಾಗುತ್ತಿದ್ದರು. ವರ್ಷದಲ್ಲೊಮ್ಮೆ ಮನೆಯ ಅಟ್ಟ ಗುಡಿಸುವುದು, ಅಪರೂಪಕ್ಕೆ ಬಳಸುತ್ತಿದ್ದ ವಸ್ತುಗಳನ್ನು ತೊಳೆಯುವುದು, ಮನೆಯನ್ನು ಮತ್ತೆ ಹೊಸ ಕಾಲಕ್ಕೆ ಸಿದ್ಧಗೊಳಿಸುವುದು ಪ್ರತಿ ಮನೆಯ ಕಾಯಕವಾಗಿತ್ತು. 

ನೀರಲ್ಲಿ ಮಿಂದು ಮಿದುವಾದ ಈ ಬೆಂಚು, ಕುರ್ಚಿ, ಮಣೆ , ಸೇರು, ಕಳಸೆ ಇತ್ಯಾದಿ ಮರದ ವಸ್ತುಗಳನ್ನು ತಿಕ್ಕಿ ತೊಳೆದು ಮತ್ತೆ ಹೊಳಪು ತರುವುದು ಸುಲಭದ ಕೆಲಸವಲ್ಲ. ತಾಮ್ರದ ಹಿತ್ತಾಳೆಯ ಪಾತ್ರೆ ತೊಳೆಯಲು ಈಗಿನಂತೆ ಯಾವುದೇ ಸಾಧನಗಳಿರಲಿಲ್ಲ. ಆಗ ಸಹಾಯಕ್ಕೆ ಇರುತ್ತಿದ್ದುದೇ 'ಪಾಜೇವು ಸೊಪ್ಪು!'.

ದೊರಗಾದ ಒರಟು ಮೇಲ್ಮೈ ಹೊಂದಿದ ಪಾಜೇವು ಗಿಡದ ಎಲೆಗಳು ನೈಸರ್ಗಿಕ ಸ್ಕ್ರಬ್ಬರ್, ಸ್ಯಾಂಡ್ ಪೇಪರ್ ಆಗಿತ್ತು. ಉಜ್ಜು ಕಾಗದದಂತಹ ಈ ಎಲೆಗಳು ಜಿಡ್ಡು, ಧೂಳು, ಹಠಮಾರಿ ಕಲೆಗಳನ್ನು ಮರಕ್ಕೆ ಒಂದಿಷ್ಟೂ ಹಾನಿ ಮಾಡದೆ, ಹಂಡೆ ಪಾತ್ರೆಗಳ ಕಲೆಗಳನ್ನೂ ನಿವಾರಿಸುತ್ತಿದ್ದುವು. ಕೈಗಳಿಗೆ ತೀವ್ರ ಒರಟುತನದ ಭಾವ ನೀಡಿದರೂ ಸ್ವಚ್ಚತಾ ಕಾರ್ಯಕ್ಕೆ ಪರ್ಯಾಯವಿರಲಿಲ್ಲ. ಅಜ್ಜ ಅಜ್ಜಿ ಕಾಲದ ಪರಿಸರ ಸ್ನೇಹಿ ಅತ್ಯತ್ತಮ ಕ್ಲೀನರ್. ಪೂರ್ವಜರ ಸುಸ್ಥಿರ ಜೀವನ ಶೈಲಿಗೆ ಅತ್ಯುತ್ತಮ ಸಾಕ್ಷಿಯಾಗಿ ನಮ್ಮ ಮನದಲ್ಲಿ ಹಸಿರಾಗಿದೆ.

ಪರ್ಯಾಯವಾದ, ಹಲಸಿನ ಎಲೆಯಷ್ಟು ಅಗಲದ, ದಪ್ಪಗೆ ಒರಟಾದ ಪಾಜೇವು ಗಿಡದ ಎಲೆಗಳು ಮೂರು ಸೀಳುಗಳಾಗಿ ಕವಲೊಡೆದಿರುತ್ತವೆ. ತುದಿ ಚೂಪಾಗಿರುವ ತಿಳಿ ಹಸಿರು ಬಣ್ಣದಲ್ಲಿ ಲಾಲಿತ್ಯವಿರದ ಎಲೆಗಳು ಮರಳಿನಂತೆ ಒರಟಾಗಿರುತ್ತವೆ. ಕಂದು ಬಣ್ಣದ ಬೊಡ್ಡೆಯಿರುವ ಪಾಜೇವು ಪೊದೆಯಂತೆ ಅಥವಾ ಸಣ್ಣ ಪ್ರಮಾಣದ ಮರದಂತೆ ಕವಲೊಡೆದು ದಟ್ಟವಾಗಿ ಹರಡಿ ನೆರಳು ನೀಡುವಂತಿರುತ್ತದೆ. ತೋಡು, ನೀರ ಹರಿವು, ಬೇಲಿ, ತೋಟದ ಬದಿ, ಕಾಡಿನ ಅಂಚುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಸಸ್ಯವನ್ನು ತುಳು ಭಾಷೆಯಲ್ಲಿ ಪಾಜೇವು , ನೀರ ಪಾಜೇವು ಎಂದು ಕನ್ನಡದಲ್ಲಿ ಕರುಹಾಲೆ, ಗರಗಸ ಸೊಪ್ಪಿನ ಗಿಡವನ್ನುತ್ತಾರೆ. ಫಿಕಸ್ ಮೊಂಟಾನಾ ( Ficus Montana) ಎಂಬ ವೈಜ್ಞಾನಿಕ ಹೆಸರಿನ ಈ ಸಸ್ಯ ಮೊರೇಸಿಯೆ ಕುಟುಂಬಕ್ಕೆ ಸೇರಿದೆ. 

ಸಸ್ಯ ಜಗತ್ತಿನಲ್ಲಿ ಎಲೆಗಳ ಮೂಲಕ ವಿಶಿಷ್ಠವಾದ ಈ ಪಾಜೇವು ಸೊಪ್ಪನ್ನು ಜಾನುವಾರುಗಳಿಗೆ ದೃಷ್ಠಿಯಾಗದಿರಲೆಂದು ಹಟ್ಟಿಯ ಬಾಗಿಲಿಗೆ ಕಟ್ಟುವ ಪದ್ಧತಿಯಿದೆ. ಇದಕ್ಕೆ ಧನಾತ್ಮಕ ಶಕ್ತಿ ಇದೆ ಎಂದು ನಂಬುವ ಜನಪದರು ಹಿಂದಿನ ಕಾಲದಲ್ಲಿ ನಡೆದು ಹೋಗುವ ದಾರಿಯಲ್ಲಿ ಸಿಕ್ಕಾಗಲೆಲ್ಲ ಗೌರವಭಾವದಿಂದ ಕಾಣುತ್ತಿದ್ದರು. ಇದರ ಎಲೆಗಳ ಕಂಕುಳಲ್ಲಿ ಹಸಿರು ಹಳದಿಯ ಸೂಕ್ಷ್ಮ ಹೂವುಗಳು ಕಾಣಿಸುತ್ತವೆ. ಹಸಿರಾದ ಕಾಯಿಗಳು ಪಕ್ವಗೊಂಡಂತೆ ಕಪ್ಪು ಗಾಢ ನೇರಳೆ ಬಣ್ಣಕ್ಕೆ ತಿರುಗುತ್ತದೆ. ವನ್ಯ ಜೀವಿಗಳಾದ ಪಕ್ಷಿಗಳು , ಬಾವಲಿ, ಅಳಿಲುಗಳಿಗೆ ಇಷ್ಟದ ಆಹಾರವಾಗಿದೆ. ಬೀಜ ಪ್ರಸಾರವೂ ಪ್ರಾಣಿಗಳ ಮೂಲಕವೇ ನಡೆಯುವುದು ಹೆಚ್ಚು. ಚರ್ಮ ರೋಗಗಳಿಗೆ ಹಾಗೂ ಉರಿಯೂತಗಳಿಗೆ ಔಷಧಿಯಾಗಿಯೂ ಪಾಜೇವು ಬಳಕೆಯಲ್ಲಿದೆ.

ಪಶ್ಚಿಮ ಘಟ್ಟಗಳ ತಪ್ಪಲು, ಕರಾವಳಿ ತೀರ, ತುಳುನಾಡಿನ ಉದ್ದಗಲ ಅಸಂಖ್ಯಾತ ತರುಲತೆಗಳ ತಾಣವಾಗಿದೆ. ಪಾಜೇವು ಸಸ್ಯವು ಅರಣ್ಯ ನಾಶ ಹಾಗೂ ಕೃಷಿಯ ಪರಿಣಾಮವಾಗಿ ಮರೆಯಾಗುವ ಮೊದಲು ಉಳಿಸುವ ಯತ್ನ ನಮ್ಮಿಂದಲೇ ನಡೆಯಬೇಕಿದೆ. ತಾವೂ ಈ ಬಗ್ಗೆ ಪ್ರಯತ್ನಿಸುವಿರಲ್ಲವೇ? ನೆಟ್ಟು ಬೆಳೆಸುವುದು ಕಠಿಣ. ಇದ್ದುದನ್ನು ಉಳಿಸಿಕೊಳ್ಳಲು ಸಾಧ್ಯ.

ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?

ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************


Ads on article

Advertise in articles 1

advertising articles 2

Advertise under the article