-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 138

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 138

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 138
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ... ಹಾಗೆ ಬಿಸಿಲೇರುತ್ತಿದೆ. ಬಿಸಿಲಲ್ಲಿಟ್ಟ ಕಾರುಗಳು ಬಿಸಿಯಾಗುತ್ತಿವೆ. ಇದಕ್ಕೆ ಕಾರಣ ಮುಚ್ಚಿಟ್ಟ ಕಾರಿನ ಗಾಜುಗಳು ಎಂಬುದು ಎಲ್ಲರಿಗೂ ಗೊತ್ತು. ಕಾಸರಗೋಡಿನಿಂದ ಮಂಗಳೂರು ಪ್ರಯಾಣದ ವೇಳೆ ಅಂತರ್ ರಾಜ್ಯ ಬಸ್ಸುಗಳನ್ನು ನಾವು ಬಳಸುತ್ತೇವೆ. ಅಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯ ಬಸ್ ಗಳು ಎರಡೂ ಇರುತ್ತವೆ. ಒಂದೇ ಟಿಕೆಟ್‌ ದರ, ಬೆನ್ನು ಮೂಳೆಯ ತಿರುಪು (sigmoid bend) ಹೊಂದಿ ಬೆನ್ನು ನೋವು ಉಂಟುಮಾಡದ ಕರ್ನಾಟಕ ಸಾರಿಗೆ ಬಸ್ಸುಗಳಿದ್ದರೂ ನೀವು ಆಯ್ಕೆ ಮಾಡಿಕೊಳ್ಳುವುದು ಕೇರಳ ರಾಜ್ಯ ಸಾರಿಗೆಯನ್ನೇ ಅಲ್ಲವೇ?. ಇದಕ್ಕೆ ಕಾರಣ ಕರ್ನಾಟಕ ರಾಜ್ಯ ಸಾರಿಗೆ ಬಸ್ಸಿನ ಕಿಟಕಿಗಳಿಗೆ ಹಾಕಿದ ಗಾಜು. ಗಾಜು ಒಳಗಿನ ಉಷ್ಣತೆಯನ್ನು ಹೆಚ್ಚಿಸುತ್ತದೆ. ಆದರೆ ಕೇರಳ ಸಾರಿಗೆಯ ಕಿಟಕಿಗೆ ಹಾಕಿದ ತಡ್ಪೆ ಕಿಟಕಿಗಳನ್ನು ತೆರೆದೇ ಇರಿಸುತ್ತದೆ. ಹೆಚ್ಚು ಖರ್ಚು ಮಾಡಿ ಆರಾಮದಾಯಕ ಪ್ರಯಾಣ ನೀಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೋಲಲು ಕಾರಣ ಹಸಿರುಮನೆಯ ಪರಿಣಾಮ. 

ಕಾರಿನ ಒಳಗಡೆಯಾದರೆ ಉಷ್ಣತೆ 25 ರಿಂದ 30°F ಅಂದರೆ 14 ರಿಂದ 17°C ನಷ್ಟು ಹೆಚ್ಚಾಗಬಹುದು. ಅದರಲ್ಲಿಯೂ ಕಾರಿನ ಗಾಜಿಗೆ ನೀವು ಕಪ್ಪು ಪೇಪರ್ ಅಂಟಿಸಿದರೆ ಉಷ್ಣತೆ ಮತ್ತಷ್ಟು ಹೆಚ್ಚಬಹುದು. ಈ ಕಪ್ಪು ಪೇಪರ್ ಕಾರಿನ ಒಳ ಪ್ರವೇಶಿಸುವ ಬೆಳಕನ್ನು ಕಡಿಮೆ ಮಾಡುತ್ತದಲ್ಲ ಎನ್ನಬಹುದು. ಆದರೆ ವಿಷಯ ಬೇರೆಯೇ ಇದೆ. ಕಪ್ಪು ವಸ್ತುಗಳು ಶಾಖವನ್ನು ಬೇಗ ಹೀರಿಕೊಳ್ಳುತ್ತದೆ. ಇವುಗಳು ಸೌರ ಪ್ರತಿಫಲಕ ಗಾಜುಗಳಲ್ಲ (solar reflection glass). ಸೌರ ಪ್ರತಿಫಲಕ ಗಾಜುಗಳು ವಿಶೇಷವಾದ ವಿನ್ಯಾಸಾತ್ಮಕ (architectural) ಗಾಜುಗಳು. ಇವುಗಳಲ್ಲಿ ಸೂಕ್ಷ್ಮವಾದ ಲೋಹದ ಅಥವಾ ಲೋಹದ ಆಕ್ಸೈಡ್ ಗಳ ತುಣುಕುಗಳಿಂದಾದ ಲೇಪನವನ್ನು ಹೊಂದಿರುತ್ತವೆ (microscopic metallic or metallic oxide coating). ಇವು ಬಹುಪಾಲು ಬೆಳಕಿನ ಪ್ರವೇಶವನ್ನು ನಿರ್ಬಂಧಿಸುತ್ತವೆ. ಆದರೆ ಇದು ತಂಪು ಕಾಗದವಲ್ಲ. ಹಾಗೆಯೇ ಬಿಸಿಲಿಗೆ ಹಿಡಿಯುವ ಕಪ್ಪು ಕೊಡೆ ಬಿಸಿಲನ್ನು ತಡೆಯುತ್ತದೆಯೇ ಹೊರತು ನಿಮ್ಮ ಬುರುಡೆ ಕಾಯುತ್ತದೆ. ಆದರೆ ಇದು ಗಾಜಿನ ಮನೆಯ ಪರಿಣಾಮವಲ್ಲ. 

ಇದಕ್ಕೆ ವ್ಯತಿರಿಕ್ತವಾಗಿ ಬಿಳಿಯ ವಸ್ತುಗಳು ಬೆಳಕನ್ನು ಪ್ರತಿಫಲಿಸುವುದರಿಂದ ಬಿಸಿ ಕಡಿಮೆ. ಬಿಜಾಪುರದವರ ಬಿಳಿ ಪಂಚೆ, ಬಿಳಿ ಅಂಗಿ ಮತ್ತು ತಲೆಯ ಮೇಲಿನ ಬಿಳಿಯ ಟೋಪಿ ಹಾಗೂ ಕೇರಳದವರ ಬಿಳಿಯ ಸೀರೆ ಮತ್ತು ಬಿಳಿಯ ಪಂಚೆಗಳ ಹಿಂದಿನ ರಹಸ್ಯ ಅರ್ಥವಾಯಿತೇ? ಆದರೆ ಮಂಗಳೂರಿನಲ್ಲಿ ಕರಿಯ ಕೋಟನ್ನು ಶಾಲಾ ಯೂನಿಫಾರ್ಮ್ ಎನ್ನುವವರಿಗೆ ವಿಜ್ಞಾನದ ತಿಳುವಳಿಕೆ ಇಲ್ಲ ಎನ್ನಬಹುದು.

ನೀವು ಕಾರಿನ ಎಲ್ಲ ಗಾಜುಗಳನ್ನು ಗಾಳಿಯಾಡದಂತೆ ಮುಚ್ಚಿ ಬಿಸಿಲಲ್ಲಿ ನಿಲ್ಲಿಸಿದ್ದರೆ ಮಧ್ಯಾಹ್ನ ಗಾಜಿನ ಮೇಲೆ ಬೀಳುವ ಪುಟ್ಟ ಕಲ್ಲು ಕೂಡಾ ನಿಮ್ಮ ಗಾಜನ್ನು ಒಡೆಯಬಲ್ಲುದು. ಇದಕ್ಕೆ ಕಾರಣ ಕಾಯಿಸಲ್ಪಟ್ಟ ಗಾಳಿ ಹಿಗ್ಗಿ ಒಳಗಡೆ ಉಂಟುಮಾಡುವ ಒತ್ತಡವೇ ಇದಕ್ಕೆ ಕಾರಣ. ಆದ್ದರಿಂದ ಬಿಸಿಲಲ್ಲಿ ಗಾಡಿ ನಿಲ್ಲಿಸುವಾಗ ಯಾವುದಾದರೂ ಒಂದು ಗಾಜು ಪೂರ್ತಿಯಾಗಿ ಮುಚ್ಚದೇ ಇರುವಂತೆ ನೋಡಿಕೊಳ್ಳಿ.

ಕಾರಿನೊಳಗಿನ‌ ಹಸಿರುಮನೆಯ ಪರಿಣಾಮ ಹೇಗಿರುತ್ತದೆ ಎಂದರೆ ಅದು ಡ್ಯಾಶ್ ಬೋರ್ಡ್ ನಲ್ಲಿ ಬಿರುಕುಗಳನ್ನುಂಟು ಮಾಡಬಹುದು.‌ ಡ್ಯಾಶ್ ಬೋರ್ಡ್ ಮೇಲಿಟ್ಟಿರುವ ಬಿಡಿ ಹಾಳೆ ಹೊತ್ತಿಕೊಳ್ಳಬಹುದು. ಕಾರಿನ ಒಳಗೆ ಇರುವ ಜ್ವಲನಶೀಲ ವಸ್ತುಗಳು ಬೆಂಕಿಯನ್ನುಂಟು ಮಾಡಬಹುದು. ಅಂದರೆ ಬೇಸಿಗೆ ಸಮಯದಲ್ಲಿ ಕಾರಿನ ಒಳಗಡೆ ಪೆಟ್ರೋಲ್, ಲೈಟರ್, ಪರ್ಫ್ಯೂಮ್ ಬಾಟಲಿಗಳನ್ನು ತೆರೆದ ಜಾಗದಲ್ಲಿರಿಸಬೇಡಿ. ಲೈಟರ್ ಗಳ ಬದಲು ಬೆಂಕಿಪೊಟ್ಟಣಗಳನ್ನು ಬಳಸಿ. ಪರ್ಫ್ಯೂಮ್ ಗಳನ್ನು ಬಟ್ಟೆಯಲ್ಲಿ ಸುತ್ತಿ ಬ್ಯಾಗಿನ ಒಳಗಿಡಿ. ಏಕೆಂದರೆ ಹಸಿರುಮನೆಯ ಪರಿಣಾಮದ ಬಗ್ಗೆ ನಿಮಗೆ ಮತ್ತು ನನಗೆ ಗೊತ್ತೇ ಹೊರತು ಕಾರಿಗೆ ಗೊತ್ತಿಲ್ಲ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************




Ads on article

Advertise in articles 1

advertising articles 2

Advertise under the article