-->
ಮಳೆಯ ವಿಶೇಷ ಅನುಭವ : ಸಂಚಿಕೆ - 06 rainy season experience Jagali students

ಮಳೆಯ ವಿಶೇಷ ಅನುಭವ : ಸಂಚಿಕೆ - 06 rainy season experience Jagali students

ಮಳೆಯ ವಿಶೇಷ ಅನುಭವ : ಸಂಚಿಕೆ - 06
ಈ ಬಾರಿಯ ಮಳೆಯ ಕುರಿತು ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಮಕ್ಕಳ ಜಗಲಿಯಲ್ಲಿ ಹಂಚಿಕೊಂಡಿದ್ದಾರೆ.. 

ಜಗಲಿಯ ಮಕ್ಕಳ ಅನುಭವ ಬರಹಗಳು

◾ ಸನಾ, 10ನೇ ತರಗತಿ
◾ ಸಮನ್ಯು. ಕೆ , 5ನೇ ತರಗತಿ
◾ ಹಿಮಾನಿ ಎಂ. ಗೌಡ, 5ನೇ ತರಗತಿ
◾ ಚಿರಾಗ್ ಎಸ್, 6ನೇ ತರಗತಿ
◾ ಪ್ರಣಿತ್ ಆಚಾರ್ಯ, 4ನೇ ತರಗತಿ


                   ‌‌              
ಮಳೆ ಎಂದರೇ ನನಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಮಳೆಯ ಸೊಬಗೇ ಬೇರೆ. ಕಳೆದ ಬಾರಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲಿ ಶಾಲೆಗೆ ತೆರಳುವಾಗ ನಡೆದ ಒಂದು ಘಟನೆ ನನ್ನ ನೆನಪಿನಲ್ಲಿ ಸದಾ ಹಚ್ಚಹಸಿರಾಗಿದೆ.

ಅದು ಒಂದು ಸೋಮವಾರದ ಬೆಳಿಗ್ಗೆ. ಎಂದಿನಂತೆ ಶಾಲಾ ಸಮಯಕ್ಕೆ ಸರಿಯಾಗಿ ಹೊರಡಲು ಸಿದ್ಧಳಾಗಿದ್ದೆ. ಹೊರಗೆ ನೋಡಿದರೆ ದೊಡ್ಡ ಮಟ್ಟದಲ್ಲಿ ಮಳೆ ಸುರಿಯುತ್ತಿತ್ತು. ಕೊಡೆ ಹಿಡಿದು, ಬ್ಯಾಗ್ ಭದ್ರಪಡಿಸಿಕೊಂಡು ಮನೆಯಿಂದ ಹೊರಟೆ. ಸ್ವಲ್ಪ ದೂರ ಸಾಗುತ್ತಿದ್ದಂತೆ ಜೋರಾದ ಗಾಳಿಗೆ ನನ್ನ ಕೊಡೆ ತಿರುಗಿಬಿಟ್ಟಿತು! ಮಳೆಯಲ್ಲಿ ತಕ್ಕಮಟ್ಟಿಗೆ ನೆನೆದುಹೋಗಿದ್ದ ನನಗೆ ಏನು ಮಾಡಬೇಕೆಂದು ತಿಳಿಯದೆ ನಗು ಬಂತು. ಅಷ್ಟರಲ್ಲಿ ದಾರಿಯಲ್ಲಿ ಬರುತ್ತಿದ್ದ ನನ್ನ ಸ್ನೇಹಿತೆಯೂ ಕೂಡ ತನ್ನ ಕೊಡೆಯನ್ನು ನನ್ನೊಂದಿಗೆ ಹಂಚಿಕೊಂಡಳು. ನಾವು ಇಬ್ಬರೂ ಒಟ್ಟಾಗಿ ನಗುತ್ತಾ, ಹರಟೆ ಹೊಡೆಯುತ್ತಾ ಒದ್ದೆಯಾದ ರಸ್ತೆಯಲ್ಲಿ ಶಾಲೆ ತಲುಪಿದೆವು. ಆರಂಭದಲ್ಲಿ ಕೊಡೆ ಮುರಿದು ಸಣ್ಣದೊಂದು ಅಸಮಾಧಾನವಾದರೂ, ಆಮೇಲೆ ಸ್ನೇಹಿತೆಯೊಂದಿಗೆ ಸಾಗಿದ ಆ ದಾರಿ ಮತ್ತು ಅನುಭವ ನನಗೆ ತುಂಬಾ ಖುಷಿ ನೀಡಿತು. ಮಳೆಯು ಕೇವಲ ನೀರಲ್ಲ, ಅದು ನಮ್ಮ ಬಾಲ್ಯದ ಅತಿ ಸುಂದರ ನೆನಪುಗಳನ್ನು ಸೃಷ್ಟಿಸುವ ಒಂದು ಅದ್ಭುತ ಜಗತ್ತು.
......................................................... ಸನಾ 
10ನೇ ತರಗತಿ 
ಹೈಸ್ಕೂಲ್ ಕಲ್ಪನೆ ಸರ್ವೆ 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
 


ಈ ಬಾರಿ ಮಳೆ ಬಂಧಾಗ ನನಗೆ ತುಂಬಾ ಖುಷಿ ಆಯಿತು. ಮಳೆ ಬಂದ ತಕ್ಷಣ ನಾನು ಮತ್ತು ನನ್ನ ಸ್ನೇಹಿತರು ಹೊರಗೆ ಹೋಗಿ ಕಾಗದದ ದೋಣಿ ಮಾಡಿ ನೀರಿನಲ್ಲಿ ಬಿಟ್ಟೆವು. ಮಳೆಯಲ್ಲಿ ನೆನೆದು ಆಟ ಆಡುವುದು ತುಂಬಾ ಮಜಾವಾಗಿತ್ತು. 
................................................ ಸಮನ್ಯು. ಕೆ 
5ನೇ ತರಗತಿ 
ಪಿ. ಎಂ. ಶ್ರೀ ಸರಕಾರಿ ಪ್ರೌಢ ಶಾಲೆ RMSA, ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
 
 
     

ಮಳೆಗಾಲ ಎಂದರೆ ನನಗೆ ತುಂಬಾ ಇಷ್ಟ. 
ಈ ಸಲದ ಮಳೆಗಾಲದಲ್ಲಿ ನಮಗೆ ನಮ್ಮ ಡಿಸಿ ಅವರು ತುಂಬಾ ರಜೆ ಕೊಟ್ಟ ಕಾರಣದಿಂದ ನಾವು ತುಂಬಾ ಮಜಾ ಮಾಡಿದೆವು. ಒಂದು ದಿನ ನಾವು ನಮ್ಮ ಮನೆಯ ಎದುರುಗಡೆ ಇರುವ ಸಣ್ಣ ತೊರೆಯಲ್ಲಿ ನಾನು, ನನ್ನ ತಂಗಿ ಮತ್ತು ನನ್ನ ಅಣ್ಣನೊಂದಿಗೆ ಮೀನು ಹಾಗೂ ಏಡಿಗಳನ್ನು ಹಿಡಿದೆವು. ಆಗ ನಮ್ಮ ಅಜ್ಜಿ ನಮ್ಮ ಜೊತೆಯಲ್ಲೇ ಬಂದು ನಮ್ಮನ್ನು ಕಾಯುತ್ತಿದ್ದರು. ಇದು ನಮಗೆ ತುಂಬಾ ಖುಷಿ ಕೊಟ್ಟಿತು. ಮತ್ತೊಂದು ದಿನ ನನ್ನ ದೊಡ್ಡಪ್ಪನ ಜೊತೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋದೆವು. ಆದರೆ ಒಂದು ದಿನ ತುಂಬಾ ಮಳೆ ಬರುತ್ತಿದ್ದರೂ ನಮಗೆ ಶಾಲೆಗೆ ರಜೆ ಕೊಡದ ಕಾರಣ ನಾವು ಶಾಲೆಗೆ ಹೋಗಿದ್ದೆವು. ಆದರೆ ಅಂದು ಸಂಜೆ ಜೋರಾಗಿ ಮಳೆ ಬಂದ ಕಾರಣ ಶಾಲಾ ವಾಹನದ ಮೇಲೆ ದೊಡ್ಡ ಮರ ಬಿದ್ದು, ಪುಟ್ಟ ಬಾಲಕಿಯೊಬ್ಬಳು ದುರ್ಮರಣ ಹೊಂದಿದ ಘಟನೆ ನಡೆಯಿತು. ಈ ಘಟನೆ ನಮಗೆ ತುಂಬಾ ದುಃಖ ತಂದಿತು. ಇದು ನನ್ನ ಈ ಸಲದ ಮಳೆಯ ಅನುಭವವಾಗಿತ್ತು.
......................................... ಹಿಮಾನಿ ಎಂ. ಗೌಡ 
5ನೇ ತರಗತಿ 
ಪಿ. ಎಂ. ಶ್ರೀ ಸರಕಾರಿ ಪ್ರೌಢ ಶಾಲೆ RMSA, ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
 
 


ಈ ಸಲ ಮಳೆಯ ರಜೆಯೇ ಇಲ್ಲವಲ್ಲಾ ಎಂಬ ಬೇಸರದ ಮಕ್ಕಳ ಮೋರೆಯನ್ನು ಕೇಳಿ ವರುಣರಾಯ ಕೃಪೆದೋರಿ ಸಾಲು ಸಾಲು ರಜೆಯ ಆನಂದವನ್ನೇ ಕೊಟ್ಟ. ರಜೆಯ ಮಜಾ ಅಂದ್ರೆ ಆಟ : ಕುಣಿದಾಟ : ತುಂತುರು ಮಳೆ : ಮೋಡ ಬಿಸಿಲಿನ ಚೆಲ್ಲಾಟ. ನಾನು ಜಾರಿ ಬಿದ್ದು ಒದ್ದೆಯಾದದ್ದಕ್ಕೆ ಅಮ್ಮನ ಬೈಗುಳು ಬೇರೆ. ಅಣ್ಣನೊಂದಿಗೆ ನೀರಾಟ ಕಬಡ್ಡಿ, ಕ್ರಿಕೆಟ್, ಬ್ಯಾಟುಮಿಂಟನ್, ಕರಾಟೆ, ಕುಸ್ತಿ ಆಡಿದೆವು. ಆಟಿ ಯ ತಿನಿಸು ಸವಿದದ್ದು ಬೇರೆ. ಪರೀಕ್ಷೆಗೆ ಓದಲು ಒತ್ತಡ ಬೇರೆ. ಈ ಸಮಯದಲ್ಲಿ ನವಿಲುಗಳ ನೃತ್ಯವನ್ನು ಕಣ್ಣಾರೆ ಕಂಡು ಆನಂದಿಸಿದೆ. ಮನೆಯ ಅಂಗಳದಲ್ಲಿ ಚಿಕ್ಕು ಮರದಲ್ಲಿ ಬಾವಲಿಗಳು ಕೂಗುತ್ತ ನೇತಾಡುತಿದ್ದವು. ಮಳೆ ಬಿಟ್ಟ ಕೂಡಲೇ ತರಗೆಲೆ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಾ ಅಂಗಳಕ್ಕೆ ಬರುವುದನ್ನು ನೋಡುವುದೇ ಬಲು ಚಂದ.

ಆದ್ರೆ ಮನೆಯ ಮೂರು ಬೆಕ್ಕುಗಳಿಗೆ ಮಾತ್ರ ಮಳೆಯ ಅರಿವೇ ಇಲ್ಲದಂತೆ ಗಟ್ಟಿ ನಿದ್ರೆ. ರಜೆಯಲ್ಲಿ ಅಸೌಖ್ಯದಿಂದ ಇದ್ದ ಅಜ್ಜಿಯ ಆರೈಕೆ ಮಾಡುವ ಮಹಾ ಭಾಗ್ಯ ನನ್ನದಾಯಿತು. ಅವರ ಪ್ರೀತಿ - ವಾತ್ಸಲ್ಯದ ಮಾತುಗಳಿಗೆ ಮಾರುಹೋದೆ. ಬೇರೆ ಊರಿನಲ್ಲಿರುವ ನನ್ನ ಪ್ರೀತಿಯ (ಚಿಕ್ಕಪ್ಪನ ಮಕ್ಕಳು ) ಅಕ್ಕ - ತಂಗಿ ಯಲ್ಲಿ ಮೊಬೈಲಿನಲ್ಲಿ ಹರಟೆ ಮಾಡಿ ಮಾತನಾಡಿದೆವು. ಜೋರು ಮಳೆಯೊಂದಿಗೆ ಗಾಳಿಯ ರಭಸ ಕ್ಕೆ ಮರಗಳು ಓಲಾಡಿ ಗೆಲ್ಲುಗಳು ತುಂಡಾಗಿ ನೇತಾಡುತಿದ್ದವು. ಕರೆಂಟ್ ಇಲ್ಲದೆ ಕಗ್ಗತ್ತಲೆ ಬೇರೆ. ಚಿಕ್ಕಪ್ಪನ ಮನೆಯಲ್ಲಿ ಮರ ಬಿದ್ದು ಕರೆಂಟ್ ಹೋಗಿತ್ತು. ನಮಗೇನೋ ತುಂಬಾ ಖುಷಿ. ಆದ್ರೆ ಅಪ್ಪ -ಅಮ್ಮನ ಮುಖದಲ್ಲಿ ಖುಷಿಯಿರಲಿಲ್ಲ. ಮಳೆಯ ಅನಾಹುತದ ಬಗ್ಗೆ ಮಾತಾಡುತ್ತಿದ್ದರು. ಇನ್ನು ನಿಮಗೆ ಶನಿವಾರ ಎನ್ನುತಿದ್ದರು : ಪಾಠ ವಿಲ್ಲ ಕಲಿಯಿರಿ ಎನ್ನುತಿದ್ದರು.

ಆದ್ರೆ ಬಲು ಬೇಸರದ ಸಂಗತಿ ಎಂದರೆ ನಮ್ಮ ಹತ್ತಿರ ದ ಶಾಲಾ ಪುಟಾಣಿ ಯೊಬ್ಬಳು ಸ್ಕೂಲ್ ಬಸ್ ನ ಮೇಲೆ ಮರ ಬಿದ್ದು ಮರಣ ಹೊಂದಿರುವುದು. ತುಂಬಾ ಬೇಜಾರದ ಸಂಗತಿ. ಅವಳು ಇನ್ನೊಮ್ಮೆ ಹುಟ್ಟಿ ಬರಲೆಂದು ಆಶೀಸೋಣ. ನಾವೆಲ್ಲ ಮಕ್ಕಳು ಮಳೆಗಾಲದಲ್ಲಿ ಜಾಗರೂಕಾರಾಗೋಣ. ಮಳೆಯು ಬೆಳೆಯನ್ನು ತರಲಿ. ಸುಖ ನೆಮ್ಮದಿಯನ್ನು ತರಲಿ. ಸಕಲ ಜೀವರಾಶಿಗಳಲ್ಲಿ ಮಂದಹಾಸ ಮೂಡಲಿ.....
............................................. ಚಿರಾಗ್ ಎಸ್
6ನೇ ತರಗತಿ, 
ಪಿ. ಯಂ. ಶ್ರೀ ಕರ್ನಾಟಕ ಪಬ್ಲಿಕ್ 
ಸ್ಕೂಲ್ (RMSA) ವಿಟ್ಲ, 
ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ.
******************************************




ನನಗೆ ಮಳೆ ಎಂದರೆ ಇಷ್ಟ. ನನಗೆ ಮಳೆಯಲ್ಲಿ ಆಟ ಆಡುವುದೆಂದರೆ ಬಲು ಇಷ್ಟ. ಮಳೆಯ ಕಾರಣದಿಂದಾಗಿ ರಜೆಯು ಸಿಗುತ್ತಿತ್ತು. ನಾನು ಪ್ರತಿದಿನವು ಅಕ್ಕನ ಮನೆಗೆ ಹೋಗಿ ನಂತರ ಅವರ ಜೊತೆ ಶಾಲೆಗೆ ಹೋಗುತ್ತಿದ್ದೆ. ಆ ಸಮಯದಲ್ಲಿ ಮಳೆ ಬಂದರೆ ಬಹಳ ಕಷ್ಟವಾಗುತ್ತಿತ್ತು. ಕೆಲವೊಂದು ಸಲ ರಜೆ ನೀಡುವಾಗ ಬಹಳ ಖುಷಿಯಾಗುತ್ತಿತ್ತು. ಮಳೆಗೆ ಒದ್ದೆಯಾಗಿ ಹೋಗುವುದೆಂದರೆ ಬಲು ಬೇಸರ. ಆದರೂ ನನಗೆ ಮಳೆಯಲ್ಲಿ ಆಟವಾಡುವುದೆಂದರೆ ತುಂಬಾ ಇಷ್ಟ.
......................................... ಪ್ರಣಿತ್ ಆಚಾರ್ಯ 
4ನೇ ತರಗತಿ 
ಪಿ. ಎಂ. ಶ್ರೀ ಕೆ. ಪಿ. ಎಸ್ ಬಜಿರೆ ಶಾಲೆ 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

Ads on article

Advertise in articles 1

advertising articles 2

Advertise under the article