ನಾನು ಓದಿದ ಪುಸ್ತಕ : ಸಂಚಿಕೆ - 10 , ಪುಸ್ತಕ : ಮಾತಾಡ್ ಮಾತಾಡು ಮೆಲ್ಲಗೆ, ಓದು ಮತ್ತು ಬರಹ : ಶ್ರೀಮತಿ ಸುಪ್ರಿಯಾ ಸಹಶಿಕ್ಷಕಿ
Friday, September 18, 2026
Edit
ನಾನು ಓದಿದ ಪುಸ್ತಕ : ಸಂಚಿಕೆ - 10
ಪುಸ್ತಕ : ಮಾತಾಡ್ ಮಾತಾಡು ಮೆಲ್ಲಗೆ
ಓದು ಮತ್ತು ಬರಹ : ಶ್ರೀಮತಿ ಸುಪ್ರಿಯಾ
ಸಹಶಿಕ್ಷಕಿ
ದಿಗಂಬರ ಜೈನ ಆಂಗ್ಲ ಮಾದ್ಯಮ ಶಾಲೆ
ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
Mob : +91 94806 02950
ಲೇಖಕರು: ಡಾ.ವಿರೂಪಾಕ್ಷ ದೇವರಮನೆ
ಡಾ. ವಿರೂಪಾಕ್ಷ ರವರ ಪುಸ್ತಕಗಳ ಓದುಗ ಅಭಿಮಾನಿಗಳಲ್ಲಿ ನಾನೂ ಒಬ್ಬಳು. ಹಾಗಾಗಿ ಅವರ ಪುಸ್ತಕ, ಬಿಡುಗಡೆಗೆ ಸಿದ್ದವಾದಾಗಲೇ ಪುಸ್ತಕ ಖರೀದಿಗೆ ನಾನೂ ಸಿದ್ಧ!. ಹಾಗೆ ಈ ತಿಂಗಳು ಬಿಡುಗಡೆಯಾದ ಅವರ ಪುಸ್ತಕವನ್ನು ಆನ್ಲೈನ್ ನಿಂದ ತರಿಸಿಕೊಂಡು ಓದಲು ಆರಂಭಿಸಿದೆ. ಪುಸ್ತಕದ ಆರಂಭದಲ್ಲಿ ಲೇಖಕರ ಮಾತನ್ನು ಓದುವಾಗಲೇ ಪುಸ್ತಕದಲ್ಲಿ ಏನೇನಿದೆ ಎಂಬುದರ ಪಕ್ಷಿ ನೋಟ ನನಗೆ ಲಭಿಸಿತು.
ಮನುಷ್ಯ ಸಂಘ ಜೀವಿ, ಹಾಗಾಗಿ ಆತ ತನ್ನ ದಿನನಿತ್ಯದ ಚಟುವಟಿಕೆಗಳಲ್ಲಿ ತನ್ನ ಸುತ್ತಲಿರುವ ಜನರೊಂದಿಗೆ ವ್ಯವಹರಿಸಲು ಅತ್ಯಂತ ಪ್ರಮುಖವಾಗಿ ಸಹಾಯ ಮಾಡುವುದು ಆತನ ಮಾತುಗಳು. ಎಲ್ಲಿ, ಯಾರೊಂದಿಗೆ, ಹೇಗೆ ಮಾತನಾಡಬೇಕು ಎಂದು ನನಗೆ ಗೊತ್ತು ಎಂದು ಸಾಮಾನ್ಯವಾಗಿ ನಾವು ಅಂದುಕೊಳ್ಳುತ್ತೇವೆ. ಆದರೆ ಎಲ್ಲಿ, ಹೇಗೆ ಮಾತನಾಡಬಾರದು ಎಂಬುದರ ಅರಿವು ನಮಗೆ ಹೆಚ್ಚಾದಾಗ ನಮ್ಮ ಹಾಗೂ ಇತರರ ನಡುವಿನ ಸಂಬಂಧವು ಉತ್ತಮವಾಗಲು ಸಾಧ್ಯ ಎಂಬುದರ ಬಗ್ಗೆ ಈ ಪುಸ್ತಕವು ಬೆಳಕು ಚೆಲ್ಲುತ್ತದೆ.
ಮಾತಿನಿಂದ ಆಗುವ ಪ್ರಯೋಜನಗಳು, ಮಾತಿನಿಂದಾಗುವ ಅವಾಂತರಗಳು, ವಿವಿಧ ಸಂದರ್ಭಗಳಲ್ಲಿ ನಮ್ಮ ಮಾತು ಹೇಗಿರಬೇಕು? ಪತಿ-ಪತ್ನಿ ನಡುವಿನ ಸಂಬಂಧ ಉತ್ತಮಗೊಳಿಸಲು ಮಾತು ಯಾವ ರೀತಿ ಸಹಕರಿಸುತ್ತದೆ? ನಮ್ಮ ಮನೆಯ ಹಿರಿಯರೊಂದಿಗೆ, ನಮ್ಮ ಮನೆಯ ಮಕ್ಕಳೊಂದಿಗೆ, ಸಹೋದ್ಯೋಗಿಗಳೊಂದಿಗೆ, ಮೇಲಾಧಿಕಾರಿಗಳೊಂದಿಗೆ, ಅಪರಿಚಿತರೊಂದಿಗೆ, ಸಂಬಂಧಿಕರೊಂದಿಗೆ, ಸಭೆ ಸಮಾರಂಭಗಳಲ್ಲಿ ನಮ್ಮ ಮಾತು ಯಾವ ರೀತಿ ಇದ್ದರೆ ಚೆನ್ನ? ಇವೆಲ್ಲದರ ಬಗ್ಗೆ ಸಣ್ಣಪುಟ್ಟ ಕಥೆಗಳ ಮೂಲಕ, ಉದಾಹರಣೆ ಸಮೇತವಾಗಿ ಅತ್ಯಂತ ಮನೋಜ್ಞವಾಗಿ ಲೇಖಕರು ವಿವರಿಸಿದ್ದಾರೆ.
ಈ ಪುಸ್ತಕದಲ್ಲಿ ನನಗೆ ತುಂಬಾ ಇಷ್ಟವಾದದ್ದು, ವಿಶೇಷವಾಗಿ ಒಂದೇ ಸಂದರ್ಭವನ್ನು ಎರಡು ರೀತಿಯ ಮಾತುಕತೆಗಳ ಮೂಲಕ ಯಾವ ರೀತಿ ಧನಾತ್ಮಕ ಹಾಗೂ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ಉದಾಹರಣೆಯ ಮೂಲಕ ಲೇಖಕರು ವಿವರಿಸಿದ್ದಾರೆ.
ಇಲ್ಲಿ ನೀಡಿರುವ ಕೆಲವೊಂದು ಉದಾಹರಣೆಗಳು ನನ್ನದೇ ಬದುಕಿನಲ್ಲಿ ನಡೆದಂತದ್ದು ಎಂದೆನಿಸುವಷ್ಟು ನನಗೆ ಆಪ್ತವಾಯಿತು. ಶಿಕ್ಷಕಿ ಆಗಿರುವ ನನಗೆ ಸಭೆ ಸಮಾರಂಭಗಳಲ್ಲಿ ವೇದಿಕೆಯಲ್ಲಿ ನಿಂತು ಮಾತನಾಡುವ, ಪೋಷಕರೊಂದಿಗೆ ವ್ಯವಹರಿಸುವ ಹಾಗೂ ನನ್ನ ವಿದ್ಯಾರ್ಥಿಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ನನ್ನ ಮಾತು, ನನ್ನ ಮಾತಿನ ಶೈಲಿ ತುಂಬಾ ಮುಖ್ಯವಾಗುತ್ತದೆ. ಈ ಪುಸ್ತಕವು ನನ್ನ ಮಾತು ಹಾಗೂ ಅದರಿಂದಾಗುವ ಪ್ರಭಾವ ಇವೆರಡನ್ನು ಉತ್ತಮಗೊಳಿಸಲು ತುಂಬಾ ಸಹಕಾರಿ ಅನಿಸಿತು.
ವಿಶೇಷವಾಗಿ ಈ ಪುಸ್ತಕವು ಅನೇಕ ಸುಭಾಷಿತಗಳನ್ನು ಹಾಗೂ ಅದರ ಒಳಾರ್ಥವನ್ನು ಕೂಡ ವಿವರಿಸಿರುವುದರಿಂದಾಗಿ ಇದು ಮಾತಿನ ಕುರಿತಾಗಿ ಅನಾದಿಕಾಲದ ಹಾಗೂ ಆಧುನಿಕ ಯುಗದ ಸಂಭಾಷಣೆಗಳಿಗೆ ಕೊಂಡಿಯಾಗಿ ಕೆಲಸ ಮಾಡಿದೆ.
ಹೇಗೆ ಮಾತನಾಡಬೇಕು ಎಂಬುದಕ್ಕೂ ಒಂದು ಪುಸ್ತಕ ಬೇಕೆ? ವಿಷಯ ಜ್ಞಾನ ಮತ್ತು ಭಾಷಾಜ್ಞಾನವಿದ್ದರೆ ನಾವು ಉತ್ತಮ ಮಾತುಗಾರರಾಗಬಹುದಲ್ಲವೇ? ಎಂಬಂತಹ ಕೆಲವು ಸಂಶಯಗಳು ನನಗಿದ್ದವು. ಆದರೆ ಈ ಪುಸ್ತಕವನ್ನು ಓದಿದ ಮೇಲೆ ಮಾತಿನ ಕುರಿತಾಗಿ ನನ್ನ ತಿಳುವಳಿಕೆಗಿಂತಲೂ, ನಾನು ಅರ್ಥೈಸಿಕೊಳ್ಳಬೇಕಾದ ವಿಚಾರಗಳು ತುಂಬಾ ಹೆಚ್ಚಿನದು ಎಂಬುದು ಅರಿವಾಯಿತು.
ಮನೋವೈದ್ಯರಾಗಿರುವ ಡಾ. ವಿರೂಪಾಕ್ಷರವರು ಮಾತಿನ ಕುರಿತಾಗಿ ಈ ಪುಸ್ತಕದಲ್ಲಿ ನೀಡಿದಂತಹ ವಿವರಗಳು, ಮಾಹಿತಿಗಳು, ಕಥೆಗಳು, ಉದಾಹರಣೆಗಳು, ಸುಭಾಷಿತಗಳು ಇವೆಲ್ಲವುಗಳು ಕೂಡ ನಮಗೆ ಮಾತಿನ ಕುರಿತಾದ ಒಂದು ಹೊಸ ಅರ್ಥವನ್ನು ನೀಡುತ್ತದೆ. ಈ ಕೃತಿ ನಮ್ಮ ಮಾತಿನ ಬಗ್ಗೆ ನಾವು ಸ್ವ-ಅವಲೋಕನ ಮಾಡಿಕೊಳ್ಳಲು ಅನುವು ಮಾಡಿಕೊಡುವ ಕನ್ನಡಿಯಿದ್ದ ಹಾಗಿದೆ.
ನಿಮ್ಮ ಮಾತು, ನಿಮ್ಮ ಅಭಿವ್ಯಕ್ತಿ, ನಿಮ್ಮ ವ್ಯಕ್ತಿತ್ವ ಇವೆಲ್ಲವುಗಳನ್ನು ವೃದ್ಧಿಸಿಕೊಳ್ಳಲು ಇಚ್ಚಿಸುವವರು ನೀವಾಗಿದ್ದರೆ ನೀವು ಖಂಡಿತವಾಗಲೂ ಓದಬೇಕಾದ ಪುಸ್ತಕ ವಿರೂಪಾಕ್ಷ ದೇವರಮನೆಯವರ "ಮಾತಾಡ್ ಮಾತಾಡು ಮೆಲ್ಲಗೆ".
ಸಹಶಿಕ್ಷಕಿ
ದಿಗಂಬರ ಜೈನ ಆಂಗ್ಲ ಮಾದ್ಯಮ ಶಾಲೆ
ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
Mob : +91 94820 45181
******************************************